ದಾವಣಗೆರೆ:
ಪಾಕಿಸ್ತಾನ ಹಾಗೆಯೇ ತಲಹರಟೆ ಮಾಡಿದರೆ, ಪಾಕ್ ಆಕ್ರಮಿತ ಕಾಶ್ಮೀರ(ಪಿಓಕೆ)ವನ್ನು ಸಹ ಭಾರತಕ್ಕೆ ಸೇರಿಸಿಕೊಳ್ಳಬೇಕಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ, ಜಿಲ್ಲಾ ಉಸ್ತುವಾರಿ ಮಂತ್ರಿ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.ನಗರದ ಶ್ರೀಮದ್ ಅಭಿನವ ರೇಣುಕಾ ಮಂದಿರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ‘ಒಂದು ದೇಶ ಒಂದು ಸಂವಿಧಾನ’ ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದಿಂದ ಪ್ರತ್ಯೇಕಿಸಲ್ಪಟ್ಟಿದ್ದ ಕಾಶ್ಮೀರಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದ ಆರ್ಟಿಕಲ್ 370 ಅನ್ನು ತೆಗೆದು ಹಾಕಿದ್ದೇವೆ. ನಾವು ಇಷ್ಟಕ್ಕೆ ಸುಮ್ಮನಿರುವುದರಿಲ್ಲ, ಪಾಕಿಸ್ತಾನ ಹಾಗೆಯೇ ತಲೆ ಹರಟೆ ಮಾಡಿದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಸಹ ಭಾರತಕ್ಕೆ ಸೇರಿಸಿಕೊಳ್ಳುತ್ತೇವೆ. ಅಷ್ಟಕ್ಕೆ ಸುಮ್ಮನಿರುವುದಿಲ್ಲ ಪಾಕಿಸ್ಥಾನವನ್ನು ಸಹ ಸೇರಿಸಿಕೊಂಡು ಅಖಂಡ ಭಾರತವನ್ನು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ನ್ನು ಜಾರಿಗೆ ತಂದು ಕಾಶ್ಮೀರ ಮತ್ತು ಭಾರತಗಳನ್ನು ಬೇರೆ, ಬೇರೆಯನ್ನಾಗಿ ಮಾಡಿದ್ದರ ಪರಿಣಾಮ, ಕಾಶ್ಮೀರ ಭಾರತದಲ್ಲಿ ವಿಲೀನಗೊಂಡಿದ್ದರು ಸಹ ಅಲ್ಲಿಯೇ ಮತ್ತೊಬ್ಬ ಪ್ರಧಾನಿ, ಅಲ್ಲಿಗೆ ಬೇರೆ ಧ್ವಜ ಹಾರಿಸಲಾಗುತ್ತಿತ್ತು. ಈ 370ನೇ ಆರ್ಟಿಕಲ್ ಕಾಶ್ಮೀರದಲ್ಲಿ ಜಾರಿ ಇದುದ್ದರ ಪರಿಣಾಮ ಭಾರತೀಯರ್ಯಾರೂ ಅಲ್ಲಿ ಜಮೀನು ಖರೀದಿಸುವಂತಿರಲಿಲ್ಲ. ಅಲ್ಲಿಯ ಹೆಣ್ಣು ಮಕ್ಕಳನ್ನು ಭಾರತದ ಇತರೆ ರಾಜ್ಯದ ಯುವಕರು ಮದುವೆ ಆಗುವಂತಿರಲಿಲ್ಲ. ಅಲ್ಲಿ ವಾಸಿಸುವಂತಿರಲಿಲ್ಲ.
ಆಗ ಜನ ಸಂಘದ ಡಾ.ಶ್ಯಾಮಪ್ರಸಾದ್ ಮುಖರ್ಜಿ ಕಾಶ್ಮೀರದ ಇಂಚಿಂಚು ಭೂಮಿಯು ಭಾರತಾಂಬೆಯ ಮುಕುಟ. ಯಾವುದೇ ಕಾರಣಕ್ಕೂ ಕಾಶ್ಮೀರದಲ್ಲಿ 370ನೇ ವಿಧಿ ಜಾರಿ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು, ಹೋರಾಟ ಮಾಡಲು ರೇಖೆಯನ್ನು ದಾಟಿಕೊಂಡು ಕಾಶ್ಮೀರಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವರನ್ನು ಬಂಧಿಸಿ ಜೈಲಿಗೆ ಅಟ್ಟಲಾಯಿತು. ತಮ್ಮ ಜೀವನದ ಕೊನೆಯ ಅವಧಿಯ ವರೆಗೂ ಹೋರಾಟವನ್ನು ಮುಂದುವರೆಸಿ ಜೈಲಿನಲ್ಲಿಯೇ ಸತ್ತರು ಎಂದು ಸ್ಮರಿಸಿದರು.
ಆದರೆ, ಇತ್ತಕಡೆ ಕಾಂಗ್ರೆಸ್ ನಮಗೂ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಲ್ಲದೇ, ನಮ್ಮ ರಾಜ್ಯಗಳಿಗೆ ಕಡಿಮೆ ಮೊತ್ತ ನೀಡಿದರೆ, ಕಾಶ್ಮೀರಕ್ಕೆ ಸಾವಿರಾರು ಕೋಟಿ ನೀಡುತ್ತಲೇ ಬರುತಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಇರುವ ಭಾರತ ನನ್ನ ತಾಯಿ ಎಂಬ ದಿಟ್ಟ ನಿಲುವು ಕೈಗೊಂಡರು.
ಅಲ್ಲದೇ, ಸರ್ದಾರ್ ವಲ್ಲಭಾಯ್ ಪಟೇಲ್ ಅವರ ರೂಪದ ಗೃಹ ಸಚಿವ ಅಮಿತ್ ಶಾ ಅವರು ದೃಢ ನಿರ್ಧಾರದಿಂದ ಕಾಶ್ಮೀರದಲ್ಲಿದ್ದ 370ನೇ ವಿಧಿಯನ್ನು ರದ್ದುಗೊಳಿಸಿ, ಅಲ್ಲಿಗೆ ಸಿಗುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದರು. ಹೀಗಾಗಿ ಭಾರತವನ್ನು ತುಂಡು ಮಾಡಲು ಬಿಡುವುದಿಲ್ಲ ಎಂಬುದಾಗಿ ಪಣತೊಟ್ಟು ಹೋರಾಡಿ ತ್ಯಾಗ ಬಲಿದಾನ ಮಾಡಿ, ಸ್ವರ್ಗದಲ್ಲಿರುವ ಶ್ಯಾಮಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ, ಸರ್ಧಾರ್ ವಲ್ಲಭಭಾಯ್ ಪಟೇಲ್ ಅವರಂತಹ ಅನೇಕರಿಗೆ 370ನೇ ವಿಧಿ ರದ್ದು ಆಗಿರುವುದರಿಂದ ಸ್ವಲ್ಪಮಟ್ಟಿಗೆ ನೆಮ್ಮದಿ ಸಿಕ್ಕಂತಾಗಿದೆ ಎಂದು ಹೇಳಿದರು.
ದೇಶಕ್ಕಾಗಿ ಅಸಂಖ್ಯಾತರು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟಿರುವುದು ಚರಂಡಿ, ರಸ್ತೆ, ಕೈಗಾರಿಕೆಗಳನ್ನು ನಿರ್ಮಿಸಲಲ್ಲ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಪ್ರಶ್ನೆಯೇ ಇಲ್ಲದೇ, ಪ್ರತಿಯೊಬ್ಬ ವ್ಯಕ್ತಿಯೂ ಈ ಮಣ್ಣನ್ನು ಪೂಜಿಸಿ, ಜಗತ್ ಜನನಿಯನ್ನಾಗಿಸಲು. ಆದರೆ, ದೇಶವನ್ನು ಹೆಚ್ಚು ಕಾಲ ಒಡೆದು ಆಳಿರುವ ಕಾಂಗ್ರೆಸ್ ಮುಸ್ಲಿಮರಲ್ಲಿ ನೀವು ಬಿಜೆಪಿಗೆ ಹೋದರೆ, ನಿಮ್ಮನ್ನು ಪಾಕಿಸ್ತಾನಕ್ಕೆ ಓಡಿಸಿ ಬಿಡುತ್ತಾರೆ ಎಂಬ ಅಪಪ್ರಚಾರ ಮಾಡಿ ಅಪನಂಬಿಕೆಯನ್ನು ಬಿತ್ತಿತು ಎಂದು ಆಪಾದಿಸಿದರು.
ಮುಸ್ಲಿಂ ಮಹಿಳೆಯರ ಶೋಷಣೆಗೆ ಕಾರಣವಾಗಿದ್ದ ತ್ರಿವಳಿ ತಲ್ಲಾಖ್ ಸಂಸ್ಕøತಿಯನ್ನು ಕಿತ್ತು ಹಾಕಿದಾಗ, ಮುಸಲ್ಮಾನ್ ಗಂಡಸರು, ಹೆಂಗಸರ್ಯಾರೂ ವಿರೋಧಿಸಲಿಲ್ಲ. ಆದರೆ, ಅದನ್ನು ವಿರೋಧಿಸಿದ ಕಾಂಗ್ರೆಸ್‍ಗೆ ಏನೆಂದು ಕರೆಯಬೇಕೆಂದು ಮಾರ್ಮಿಕವಾಗಿ ನುಡಿದರು.
ಹಿಂದೂಗಳು ಒಂದಕ್ಕಿಂತ ಹೆಚ್ಚು ಮದುವೆ ಆದರೆ, ಜೈಲಿಗೆ ಹಾಕುತ್ತಾರೆ. ಆದರೆ, ಮುಸ್ಲಿಮರು ಐದೈದು ಮದುವೆಯಾಗಿ 25 ಜನ ಮಕ್ಕಳು ಪಡೆಯ ಬಹುದು ಎಂಬ ನೀತಿ ಇದೆ. ಇದು ಮುಸ್ಲಿಂ ಹೆಣ್ಣು ಮಕ್ಕಳ ದುರ್ಬಳಕೆಗೆ ಕಾರಣವಾಗಿದೆ. ಆದ್ದರಿಂದ ದೇಶದಲ್ಲಿ ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೆ ತರುವ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಒಂದೇ ಕಾನೂನು ತರಲು ಮೋದಿ ಸರ್ಕಾರ ಮುಂದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಜಿಲ್ಲಾ ಬಿಜೆಪಿ ಸೇರಿದಂತೆ ಹಲವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ವಹಿಸಿದ್ದರು. ವೇದಿಕೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕರುಗಳಾದ ಎಸ್.ಎ.ರವೀಂದ್ರನಾಥ್, ಪ್ರೊ.ಎನ್.ಲಿಂಗಣ್ಣ, ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸಹನಾ ಮಂಜುನಾಥ್ ಪ್ರಾರ್ಥಿಸಿದರು. ವಾಗೀಶಸ್ವಾಮಿ ಸ್ವಾಗತಿಸಿದರು. ಬಿ.ಎಂ.ಸತೀಶ್ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
