ಎದುರಾಳಿ ನಮ್ಮ ಸರಿಸಮನಾಗಿದ್ದರೆ ಯುದ್ಧ ಮಾಡಬಹುದು: ಡಿ.ಕೆ ಶಿವಕುಮಾರ್

ಬೆಂಗಳೂರು:

    ‘ಎದುರಾಳಿ ನಮ್ಮ ಸರಿ ಸಮನಾಗಿದ್ದರೆ ಯುದ್ಧ ಮಾಡಬಹುದು. ನಮ್ಮ ಸರಿಸಮನಾಗಿ ಇಲ್ಲ ಎಂದರೆ ಯುದ್ಧ ಮಾಡಲು ಆಗಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.ಜಾತ್ಯಾತೀತ ಜನತಾದಳದ ಕುಂದಗೋಳ ಮಾಜಿ ಶಾಸಕ ಮಲ್ಲಿಕಾರ್ಜುನ ಎಸ್. ಅಕ್ಕಿ ಹಾಗೂ ಅವರ ಬೆಂಬಲಿಗರನ್ನು ಡಿ.ಕೆ ಶಿವಕುಮಾರ್ ಅವರು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪಕ್ಷದ ಶಾಲು ಹೊದಿಸಿ, ಧ್ವಜ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಈ ವೇಳೆ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

    ‘ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತಗಳೊಂದಿಗೆ ಗೆಲ್ಲುವು ಸಾಧಿಸಲಿದೆ. ಆರ್ ಆರ್ ನಗರದಲ್ಲಿ ಮಾರಾಮಾರಿ ರಾಜಕಾರಣ ನಡೆಯುತ್ತಿದೆ. ಹೆಣಗಳು ಬೀಳುತ್ತವೆ ಹೀಗಾಗಿ ಪ್ಯಾರಾ ಮಿಲಿಟರಿ ರಕ್ಷಣೆ ನೀಡಬೇಕು ಎಂದು ಪತ್ರ ಬರೆಯುವುದಾಗಿ ಮಾಜಿ ಶಾಸಕರು ಹೇಳಿಕೆ ನೀಡಿದ್ದಾರೆ. ಅವರು ಮುಂಚೆಯೇ ಈ ಪತ್ರ ಬರೆಯಬೇಕಿತ್ತು. ಈಗ ತಡವಾಗಿದೆ. ಆ ಪತ್ರವನ್ನು ಮುಖ್ಯಮಂತ್ರಿಗಳಿಂದಲೋ ಅಥವಾ ಪಕ್ಷದ ಅಧ್ಯಕ್ಷರಿಂದಲೋ ಬರೆಸಿದ್ದಾರೆ ಉತ್ತಮವಾಗಿರುತ್ತಿತ್ತು.

    ಮಾರಾಮಾರಿ ರಾಜಕಾರಣ ಮಾಡುವಂತಹ ಸಂಸ್ಕೃತಿ ಇರುವವರನ್ನು ನಾವು ಬೆಳೆಸಿದೆವಲ್ಲ ಏನು ಮಾಡುವುದು? ಈಗ ಪಶ್ಚಾತ್ತಾಪ ಪಡಬೇಕಾಗಿದೆ. ನಾನು ಯಾರಿಗೂ ಗುರುಗಳಲ್ಲ. ಎಲ್ಲರಿಗೂ ಶಿಷ್ಯರಾಗಿ ಇರುತ್ತೇನೆ. ನಿಮಗೂ ಶಿಷ್ಯನೇ.ನಾವು ಹತಾಶರಾಗಿದ್ದೇವೆ, ನಮ್ಮನ್ನು ಬೆಂಗಳೂರಿನ ಜನ ಪ್ಯಾಕ್ ಮಾಡಿ ಕಳಿಸುತ್ತಾರೆ ಎಂದು ಹೇಳಿದವರಿಗೆ ಒಳ್ಳೆಯದಾಗಲಿ.ನಾನು ಯಾರಿಗೂ ಏನನ್ನೂ ಹೇಳುವುದಿಲ್ಲ. ಕಾನೂನು ಪಾಲನೆ ಮಾಡಿ, ಜನರ ರಕ್ಷಣೆ ಮಾಡಿ, ಆ ಕ್ಷೇತ್ರವನ್ನು ಮತ್ತೆ ಕಾಂಗ್ರೆಸ್ ಕ್ಷೇತ್ರವನ್ನಾಗಿ ಮಾಡಲು ಮಾತ್ರ ನಾವು ಪ್ರಯತ್ನಿಸುತ್ತೇವೆ.

ಇದೊಂದು ಕೇವಲ ಆಶ್ವಾಸನೆ ಸರ್ಕಾರ:

    ಈ ಸರ್ಕಾರ ಕೇವಲ ಘೋಷಣೆ, ಆಶ್ವಾಸನೆಗಳನ್ನು ನೀಡುತ್ತಿದೆಯೇ ಹೊರತು. ಅವುಗಳನ್ನು ಈಡೇರಿಸುತ್ತಿಲ್ಲ. ಕಳೆದ ವರ್ಷ ಪ್ರವಾಹ ಬಂದಾಗ 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದರು. ಕೇಂದ್ರ ಸರ್ಕಾರ ಕೇವಲ 1800 ಕೋಟಿ ಕೊಟ್ಟಿತ್ತು. ಮುಖ್ಯಮಂತ್ರಿಗಳು ಮನೆ ಕಳೆದುಕೊಂಡವರಿಗೆ 5 ಲಕ್ಷ ಹಾಗೂ ಬಾಡಿಗೆ ಕಟ್ಟಲು 5 ಸಾವಿರ ಕೊಡುವುದಾಗಿ ಹೇಳಿದ್ದರು. ಇನ್ನು ಅದು ಜನರ ಕೈಗೆ ಸೇರಿಲ್ಲ. ಇನ್ನು ಈ ವರ್ಷದ ವೈಮಾನಿಕ ಸಮೀಕ್ಷೆ ಮಾಡಿದ್ದು, ಪರಿಹಾರ ಕೊಡೋದು ಯಾವಾಗ.

   ಕಂದಾಯ ಸಚಿವರು ನಮ್ಮ ಬಳಿ ದುಡ್ಡಿದೆ ಅಂತಾ ಹೇಳಿದ್ದಾರೆ. ಕೊರೋನಾ ಸಮಯದಲ್ಲಿ ನಾವು ಆಗ್ರಹ ಮಾಡಿದ ಮೇಲೆ ಒಂದಷ್ಟು ಜನಕ್ಕೆ ಪರಿಹಾರ ನೀಡುವುದಾಗಿ ಘೋಷಿಸಿದರು. ಇದುವರೆಗೂ ಆ ಪರಿಹಾರ ರೈತರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ ತಲುಪಿಲ್ಲ. ಈ ಸರ್ಕಾರ ಆಶ್ವಾಸನೆ ಘೋಷಣೆ ಮಾಡುತ್ತದೆಯೇ ಹೊರತು ಅದನ್ನು ಸಾಕಾರಗೊಳಿಸುವುದಿಲ್ಲ.

ಶಾಸಕಾಂಗ ಪಕ್ಷದ ನಾಯಕರು ಉತ್ತರಿಸುತ್ತಾರೆ:

    ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಹೇಳಿಕೆ ವಿಚಾರವಾಗಿ ನಮ್ಮ ಶಾಸಕಾಂಗ ಪಕ್ಷದ ನಾಯಕರು ಪ್ರತಿಕ್ರಿಯೆ ನೀಡುತ್ತಾರೆ. ಅವರಿಗೆ ಸೋನಿಯಾ ಗಾಂಧಿ ಅವರು ಹೇಳಿರಬಹುದೇನೋ.’

    ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಜೆಡಿಎಸ್ ತೊರೆದು ಪಕ್ಷಕ್ಕೆ ಸೇರ್ಪಡೆಯಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರನಗೌಡ ಹಿರೇಗೌಡ, ಜಿಲ್ಲಾ ರೈತ ಘಟಕದ ಕಾರ್ಯದರ್ಶಿ ಕೃಷ್ಣಗೌಡ ಹನಮಗೌಡ್ರ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಘಟಕ ಅಧ್ಯಕ್ಷ ನಾರಾಯಣ ಕೆ.ಹೂಗಾರ್, ಜಿಲ್ಲಾ ಯುವ ಘಟಕ ಕಾರ್ಯದರ್ಶಿ ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಇತರ ಮುಖಂಡರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap