ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕಿವೆ

ದಾವಣಗೆರೆ:
 
    ಹಣ, ಶ್ರೀಮಂತಿಕೆಯನ್ನೂ ಮೀರಿ ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಅವಶ್ಯಕವಾಗಿ ಬೇಕಾಗಿವೆ ಎಂದು ಚಿತ್ರನಟ ವಿಜಯ ರಾಘವೇಂದ್ರ ಅಭಿಪ್ರಾಯಪಟ್ಟರು.ನಗರದಲ್ಲಿ ವಿಶ್ವ ವಿರಳ ರೋಗಿಗಳ ದಿನಾಚರಣೆ ಅಂಗವಾಗಿ ಕರ್ನಾಟಕ ಹಿಮೊಫೀಲಿಯಾ ಸೊಸೈಟಿ ಹಾಗೂ ಭಾರತೀಯ ವಿರಳ ರೋಗಿಗಳ ಸಂಸ್ಥೆಯ (ಒಆರ್‍ಡಿಐ) ಸಹಯೋಗದಲ್ಲಿ ಏರ್ಪಡಿಸಿದ್ದ  ಸಾರ್ವಜನಿಕರಲ್ಲಲಿ ಅರಿವು ಮೂಡಿಸುವ ರೇಸ್ ಫಾರ್-7 ಅಭಿಯಾನಕ್ಕೆ ಶನಿವಾರ ಬೆಳಿಗ್ಗೆ ಚಾಲನೆ ನೀಡಿ, ನಡಿಗೆ ಆರಂಭಿಸಿ ಜನರಿಗೆ ಸ್ಫೂರ್ತಿ ತುಂಬಿದ ಬಳಿಕ ಅವರು ಮಾತನಾಡಿದರು.
   
    ಸಂಕಷ್ಟಕ್ಕೆ ಒಳಗಾಗಿರುವ ಜನರಿಗೆ ಹಣ ಎಷ್ಟು ಮುಖ್ಯವೋ, ಅದೇರೀತಿ ಅವರ ಸಂಕಷ್ಟಕ್ಕೆ ಜೊತೆಯಾಗುವುದು ಅಷ್ಟೇ ಮುಖ್ಯವಾಗಿದೆ. ಹಣ, ಶ್ರೀಮಂತಿಕೆಯನ್ನೂ ಮೀರಿ ಜನರ ಸಂಕಷ್ಟಕ್ಕೆ ಮಿಡಿಯುವ ಹೃದಯಗಳು ಬೇಕು ಎಂದ ಅವರು, ನಿಮ್ಮ ಸಂಕಷ್ಟಕ್ಕೆ ಹೆಗಲಾಗಿ ನಾನು ಇರುತ್ತೇನೆ ಎಂದು ವಾಗ್ದಾನ ಮಾಡಿದರು.
    ಇದು ಕೇವಲ ನಡಿಗೆಯಲ್ಲ. ಇದರಲ್ಲಿ ನಮ್ಮ ಜವಾಬ್ದಾರಿಯೂ ಅಡಗಿದೆ. ನಾಗರಿಕರಾಗಿ ಎಲ್ಲರಿಗೂ ಒಂದು ಕರ್ತವ್ಯ ಇದೆ. ಎಲ್ಲರಿಗೂ ಒಂದೇ ತರಹದ ಕಷ್ಟಗಳು ಇರುವುದಿಲ್ಲ. ದೇವರು ಅಪರೂಪದ ಕಾಯಿಲೆಗಳನ್ನು ಕೊಟ್ಟಿರುತ್ತಾನೆ. ಜನರ ಸಂಕಷ್ಟಕ್ಕೆ ಸ್ಪಂದಿಸುವವರಿಗೆ ಧನ್ಯವಾದ ಎಂದು ಹೇಳಿದರು.
   ನಟನೆ, ನೃತ್ಯ, ಹಾಡಿನ ಮೂಲಕವೇ ಕಾಲ ಕಳೆಯುತ್ತಿರುವ ನಮಗೆ ವಾಕಥಾನ್ ಆರಂಭಕ್ಕೆ ಚಾಲನೆ ನೀಡುವ ಸದಾವಕಾಶ ಸಿಕ್ಕಿರುವುದು ಸಂತಸ ತಂದಿದೆ. ಇದು ಸಹಾಯವಲ್ಲ, ನಮ್ಮ ಕರ್ತವ್ಯ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನಮಗೆ ಬೇಕಾಗಿದೆ. ಯಾವುದೇ ಸಮಯದಲ್ಲೂ ಸಂಕಷ್ಟದಲ್ಲಿರುವವ ಸಹಾಯಕ್ಕೆ ನಾನು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದರು.
   ಭಾರತೀಯ ವಿರಳ ರೋಗಿಗಳ ಸಂಸ್ಥೆಯ (ಒಆರ್‍ಡಿಐ) ಸಂಸ್ಥಾಪಕ ಪ್ರಸನ್ನ ಶಿರೋಳ್ ಮಾತನಾಡಿ, ವಿಶ್ವದಲ್ಲಿ 7 ಸಾವಿರ ವಿರಳ ರೋಗಗಳಿದ್ದಾರೆ. ಇವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ವಿರಳ ರೋಗಗಳ ಬಗ್ಗೆ ಜನರಿಗಷ್ಟೇ ಅಲ್ಲ ವೈದ್ಯರಲ್ಲೂ ಜಾಗೃತಿ ಕಡಿಮೆ ಇದೆ. ರೋಗಿಗಳಿಗೆ ಸಹಾಯ ಮಾಡುವುದಕ್ಕೆ ಸಮಾಜದಲ್ಲಿ ಬದಲಾವಣೆ ಅಗತ್ಯವಿದೆ. ಅದಕ್ಕಾಗಿ ಈ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
    ವಿರಳ ಕಾಯಿಲೆಗಳು ವಂಶವಾಹಿನಿ ಕಾಯಿಲೆಗಳಾಗಿದ್ದು, ಕಾಯಿಲೆ ಪತ್ತೆ ಹಚ್ಚಲು 7 ವರ್ಷಗಳೇ ಬೇಕು. ಮನೆಯಲ್ಲಿ ಒಬ್ಬರಿಗೆ ಇದ್ದರೆ, ಇತರೆ ಸದಸ್ಯರಿಗೂ ಬರುವ ಸಂಭವ ಇದೆ. ಗರ್ಭಿಣಿಯಾಗಿರುವಾಗಲೇ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಸಂಬಂಧಗಳಲ್ಲೇ ಮದುವೆಯಾಗುವುದರಿಂದ ಈ ತರಹದ ಕಾಯಿಲೆಗಳು ಬರುವ ಸಂಭವ ಹೆಚ್ಚಿರುತ್ತದೆ. ಹೀಗಾಗಿ ಯೋಚಿಸಿ ಮದುವೆ ಆಗಬೇಕು ಎಂದು ಕಿವಿಮಾತು ಹೇಳಿದರು.
    ಕಳೆದ ಐದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಒಆರ್‍ಡಿಐ ಆರಂಭವಾಗಿದ್ದು, ರಾಷ್ಟ್ರದ 20 ನಗರಗಳಲ್ಲಿ ಈ ಜಾಥಾ ಮಾಡುತ್ತಿದ್ದೇವೆ. ಈ ರೋಗಿಗಳಿಗೆ 14 ಕೋಟಿ ವರೆಗೂ ವೆಚ್ಚವಾಗುವ ಸಾಧ್ಯತೆ ಇರುತ್ತದೆ.  ಆದ್ದರಿಂದ ಸರ್ಕಾರ ಜೊತೆಗೂಡಿಸಬೇಕು. 2019ರಲ್ಲಿ ವಿರಳ ರೋಗ ಕುರಿತು ಹೊಸ ನೀತಿ ರೂಪಿಸಿದ್ದು, ಇದರಲ್ಲಿ ಯಾವುದೇ ಸ್ಪಷ್ಟತೆ ಇಲ್ಲದೆ, ಗೊಂದಲದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ವಿರಳ ರೋಗಿಗಳ ಸಂಕಷ್ಟಕ್ಕೆ ಸಹಕರಿಸುವಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಲ್ಲದೆ, ನನ್ನ ಅನುದಾನದಲ್ಲಿ ಸಹಾಯ ಮಾಡುತ್ತೇನೆ. ಅಲ್ಲದೇ, ಸಂಸ್ಥೆಯವರು ನೀಡಿರುವ ಮನವಿಯನ್ನು ಸಂಸತ್ತಿನಲ್ಲಿ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
    ಕರ್ನಾಟಕ ಹಿಮೊಫೀಲಿಯಾ ಸೊಸೈಟಿ ಅಧ್ಯಕ್ಷ ಡಾ.ಸುರೇಶ್ ಹನಗವಾಡಿ, ವಿಶ್ವದಲ್ಲಿ ಸುಮಾರು 7 ಸಾವಿರ ವಿವಿಧ ವಿರಳ ರೋಗಗಳಿರುವ ಅಂದಾಜಿದೆ. ಸಾರ್ವಜನಿಕರಲ್ಲಿ ಅರಿವಿನ ಕೊರತೆಯಿಂದಾಗಿ ಈ ರೋಗಿಗಳು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ರೇಸ್ ಫಾರ್ 7 ಅಭಿಯಾನವು ರೋಗಿಗಳು ಮತ್ತು ಕುಟುಂಬ ವರ್ಗದವರಿಗೆ 7 ಸಾವಿರ ಮೀಟರ್ ನಡೆದು, ನಿಮ್ಮ ಜೊತೆ ನಾವಿದ್ದೇವೆ ಎಂಬ ಆತ್ಮಸ್ಥೈರ್ಯ ತಂಬುವ ಪ್ರಯತ್ನವಾಗಿದೆ ಎಂದರು.
    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆದು ರೋಗಿಗಳ ಕ್ಷೇಮಾಭಿವೃದ್ಧಿಗೆ ವ್ಯವಸ್ಥೆ ರೂಪಿಸುವುದು ಸಹ ಈ ಅಭಿಯಾನದ ಉದ್ದೇಶವಾಗಿದೆ. ಆರ್ಗನೈಜೇಷನ್ ಫಾರ್ ರೇರ್ ಡಿಸೀಜಸ್- ಇಂಡಿಯಾ ವತಿಯಿಂದ ದೇಶಾದ್ಯಂತ ವಿರಳ ರೋಗಿಗಳ ಬಗ್ಗೆ ಜಾಗೃತಿ ಮೂಡಿಸಲು ಅಭಿಯಾನ ಆಯೋಜಿಸುತ್ತಿದ್ದು, ಪ್ರಸಕ್ತ ವರ್ಷ ಫೆ.9ರಿಂದ ಮಾ.15ರವರೆಗೆ 23 ನಗರಗಳಲ್ಲಿ ಅಭಿಯಾನ ನಡೆಯುತ್ತಿದೆ
 
    ಬಹುತೇಕ ರೋಗಗಳ ಅನುವಂಶೀಯವಾಗಿದ್ದು, ಈ ರೋಗಗಳಿಗೆ ಸೂಕ್ತ ಚಿಕಿತ್ಸೆ ಕಂಡು ಹಿಡಿಯಲು ಸಂಶೋಧನೆಗಳಿಗೆ ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಆದ್ಯತೆ ನೀಡಬೇಕು. ಜೊತೆಗೆ ಸ್ವಯಂಸೇವಾ ಸಂಸ್ಥೆಗಳನ್ನು ರಚಿಸಿ, ಅವರ ಹಕ್ಕಿನ ರಕ್ಷಣೆಗಾಗಿ ಸಂಘಟಿತರಾಗಲು ಪ್ರೋತ್ಸಾಹ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಜಾಥಾ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
    ಹಿಮೊಫೀಲಿಯಾ ರೋಗಿಗಳಿಗೆ ಸರ್ಕಾರದಿಂದ ಉಚಿತ ಔಷಧ ನೀಡುತ್ತಿದ್ದು, ಇದು 30 ವರ್ಷಗಳ ಕಾಲ ನಾವು ನಡೆಸಿದ ಹೋರಾಟದ ಫಲವಾಗಿದೆ. ಒಂದೇ ಸೂರಿನಡಿ, ವಸತಿ, ಚಿಕಿತ್ಸೆ, ಬ್ಲಡ್ ಬ್ಯಾಂಕ್ ಎಲ್ಲವೂ ಇದೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಸಂಚರಿಸಿ ರೋಗಗಳನ್ನು ತಡೆ ಹಿಡಿಯುವ ಪ್ರಯತ್ನ ಮಾಡುತ್ತೇವೆ’ ಎಂದು ಹೇಳಿದರು.
    ಈ ಸಂದರ್ಭದಲ್ಲಿ ಪಾಲಿಕೆ ಮೇಯರ್ ಬಿ.ಜಿ.ಅಜಯ್ ಕುಮಾರ್, ಕಲಾವಿದ ಆರ್.ಟಿ. ಅರುಣ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಘವೇಂದ್ರ ಸ್ವಾಮಿ, ಜೆಜೆಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶಪ್ಪ, ಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಬಿ.ಎಸ್., ಮಕ್ಕಳ ತಜ್ಞ ಎನ್.ಕೆ.ಕಾಳಪ್ಪನವರ್, ಪಾಲಿಕೆ ಸದಸ್ಯೆ ರೇಖಾ ಸುರೇಶ್, ನಿವೇಶನ ದಾನಿ ಕಿರುವಾಡಿ ಗಿರಿಜಮ್ಮ, ಜಯಕುಮಾರ್, ನಿವೃತ್ತ ಪ್ರಾಚಾರ್ಯ ಡಾ.ಬಿ.ಟಿ.ಅಚ್ಚುತ್, ಡಾ.ಮೀರಾ ಹನಗವಾಡಿ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link