ದಾವಣಗೆರೆ:
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಬಜೆಟ್‍ನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಿಸುವುದರ ಜೊತೆಗೆ ಕ್ರೈಸ್ತರ ಸಮಗ್ರ ಅಭಿವೃದ್ಧಿಗಾಗಿ 200 ಕೋಟಿ ರೂ. ಮೀಸಲಿಟ್ಟಿರುವುದು ಐತಿಹಾಸಿಕ ನಿರ್ಧಾರವಾಗಿದೆ ಎಂದು ಜೆಡಿಎಸ್ ಕ್ರೈಸ್ತ ಅಲ್ಪಸಂಖ್ಯಾತ ವಿಭಾಗದ ರಾಜ್ಯ ವಕ್ತಾರ ಜಸ್ಟಿನ್ ಜಯಕುಮಾರ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಕ್ರೈಸ್ತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿರುವ ರಾಜಕೀಯ ಪಕ್ಷಗಳು, ಕ್ರೈಸ್ತರನ್ನು ಸಂಪೂರ್ಣ ಕಡೆಗಣಿಸಿದ್ದವು. ಆದರೆ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದಂತೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸುವ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಇದು ಅಲ್ಪಸಂಖ್ಯಾತ ಕ್ರೈಸ್ತರ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿರವರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ ಎಂದರು.
ದೇಶದ ಯಾವುದೇ ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿಲ್ಲ. ಅಲ್ಲದೆ, ಯಾವುದೇ ರಾಜಕೀಯ ಪಕ್ಷದಲ್ಲೂ ಕ್ರೈಸ್ತರ ಪ್ರತ್ಯೇಕ ಘಟಕ ಇಲ್ಲ. ಇವೆರೆಡನ್ನೂ ಕಾರ್ಯಗತಗೊಳಿಸುವ ಮೂಲಕ ಕ್ರೈಸ್ತರ ಸಂಘಟನೆ, ಅಭಿವೃದ್ಧಿಗೆ ಜೆಡಿಎಸ್ ಆಸಕ್ತಿ ತೋರಿದೆ. ನಿಗಮ ಸ್ಥಾಪನೆಯಿಂದ ಕ್ರೈಸ್ತ ಸಮುದಾಯಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಬರುವ ಲೋಕಸಭಾ ಚುನಾವಣೆಯಲ್ಲೂ ಕ್ರೈಸ್ತರು ಹೆಚ್ಚು ಜನಸಂಖ್ಯೆ ಹೊಂದಿರುವ ಬೀದರ್ ಹಾಗೂ ಲೋಕಸಭಾ ಕ್ಷೇತ್ರದಿಂದ ಟಿಕೇಟ್ ನೀಡಬೇಕೆಂದು ಬೇಡಿಕೆ ಇಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪಾಸ್ಟರ್ ಇಮ್ಮಾನುವೇಲ್, ಸುನೀಲ್ ಕುಮಾರ, ಅಲಗುವೇಲ್ ಪೀಟರ್, ಜಾನ್, ಹರ್ಷ ಮತ್ತಿತರರು ಹಾಜರಿದ್ದರು.