ಬೆಂಗಳೂರು
ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಗೊಳಿಸಿರುವ ಲಾಕ್ ಡೌನ್ ಸಂದರ್ಭದಲ್ಲಿ ಕಾಳಸಂತೆ ಕೋರರನ್ನು ಹೆಡೆಮುರಿ ಕಟ್ಟುತ್ತಿದ್ದೇವೆ. ನ್ಯಾಯಯುತ ಬೆಲೆಯಲ್ಲಿ ಮಾರಾಟ ಮಾಡದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇನೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಎಚ್ಚರಿಕೆ ನೀಡಿದ್ದಾರೆ.
ಇಡೀ ದೇಶ ದಿಗ್ಬಂಧನದಲ್ಲಿದ್ದು, ಇಂತಹ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಎಲ್ಲಾ ವ್ಯಾಪಾರಸ್ಥರು ಸ್ಪಂದಿಸಬೇಕು. ವ್ಯಾಪಾರ, ವಹಿವಾಟಿನಲ್ಲಿ ನ್ಯಾಯ ಎತ್ತಿ ಹಿಡಿಯಬೇಕು. ನ್ಯಾಯಯುತ ಬೆಲೆಯಲ್ಲಿ ಪಡಿತರ, ಅಗತ್ಯ ವಸ್ತುಗಳನ್ನು ಮಾರಾಟ ಮಾಡಬೇಕು. ಆದರೆ ಬಹುತೇಕ ಕಡೆಗಳಲ್ಲಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ ಎಂದಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಗೋಪಾಲಯ್ಯ, ಪಡಿತರ ಸಾಮಗ್ರಿಗಳು, ದಿನ ಬಳಕೆ ವಸ್ತುಗಳು, ಸ್ಯಾನಿಟೈಸರ್ಸ್ ಗಳು, ಮಾಸ್ಕ್ ಗಳನ್ನು ಎಂ.ಆರ್.ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಒಂದು ಸಾವಿರಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ಮಾಡಿ ಕ್ರಮಕೈಗೊಂಡಿದ್ದಾರೆ ಎಂದರು.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರತಿನಿತ್ಯ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡುತ್ತಿದ್ದು, ಅದರಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಕಾಳಸಂತೆಕೋರರ ಮೇಲೆ ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಬಿರುಸುಪಡೆದಿದೆ ಎಂದು ಹೇಳಿದರು.ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಯೋಜನೆಯಡಿ ಮೂರು ತಿಂಗಳ ಕಾಲ ಪ್ರತಿಯೊಬ್ಬ ಪಡಿತರದಾರರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಲಾಗುವುದು. ಕೇಂದ್ರದಿಂದ ಆಹಾರ ಧಾನ್ಯಗಳು ರಾಜ್ಯಕ್ಕೆ ಬರುತ್ತಿದ್ದು, ಏಪ್ರಿಲ್ 1 ರಿಂದ ಪಡಿತರ ವಿತರಣೆಯಾಲಿಗದೆ ಎಂದು ಗೋಪಾಲಯ್ಯ ಹೇಳಿದರು.
ಇಂತಹ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೆಲವರು ಪಡಿತರ ಚೀಟಿ ನೀಡುವುದಾಗಿ ಅಮಾಯಕರನ್ನು ದಾರಿ ತಪ್ಪಿಸುತ್ತಿದ್ದು, ಅಮಾಯಕರನ್ನು ವಂಚಿಸುತ್ತಿರುವವರನ್ನು ಸುಮ್ಮನೆ ಬಿಡುವುದಿಲ್ಲ. ಪಡಿತರ ಚೀಟಿಗಳನ್ನು ಪಡೆಯಲು ಸರ್ಕಾರದ ಅಧಿಕೃತ ವೆಬ್ ಸೈಟ್ ಗಳ ಮೂಲಕ ಮಾತ್ರ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು ಎಂದರು,
ಪಡಿತರ ಚೀಟಿಗಳನ್ನು ಯಾರ ಕೈಗೆ ನೀಡುವುದಿಲ್ಲ. ಅರ್ಹ ಫಲಾನುಭವಿಗಳ ಮನೆಗಳಿಗೆ ನೇರವಾಗಿ ತಲುಪಿಸಲಾಗುತ್ತಿದೆ. ಯಾರೂ ಕೂಡ ಮಧ್ಯವರ್ತಿಗಳಿಗೆ ಹಣ ಕೊಟ್ಟು ವಂಚನೆಗೆ ಒಳಗಾಗಬಾರದು ಎಂದರು.ಪಡಿತರ ಪಡೆಯುವಾಗ, ಸಾಮಾಜಿಕ ಮತ್ತು ದೈಹಿಕ ಅಂತರ ಕಾಯ್ದುಕೊಳ್ಳಬೇಕು. ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ ಮೇ 3 ರವರೆಗೆ ಮನೆಯಲ್ಲಿಯೇ ಇರಬೇಕು ಎಂದು ಕೆ. ಗೋಪಾಲಾಯ್ಯ ಮನವಿ ಮಾಡಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ