ಬೆಂಗಳೂರು
ಮಂಡ್ಯದಿಂದ ಸ್ಪರ್ಧಿಸಲು ಸುಮಲತಾ ಅಂಬರೀಶ್‍ಗೆ ಅವಕಾಶ ಕೊಡುವುದಕ್ಕಿಂತ ಮೈತ್ರಿ ಧರ್ಮ ಪಾಲಿಸಿ ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಹಿತಿ ಕೇಳಿ ಬಂದಿದೆ.
ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಮುಂದಿನ ಲೋಕಸಭೆ ಚುನಾವಣೆ ಕೂಡ ಇದೇ ಮೈತ್ರಿ ಮೂಲಕ ತೆರಳಲು ತೀರ್ಮಾನಿಸಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಲಿ ಸಂಸದರು ಇರುವಲ್ಲಿ ಅವರಿಗೆ ಅವಕಾಶ ಕಲ್ಪಿಸಿ ಉಳಿದ ಕಡೆ ಸೀಟು ಹೊಂದಾಣಿಕೆ ಮಾಡಿಕೊಂಡು, ಮೈತ್ರಿ ಧರ್ಮ ಪಾಲಿಸಲು ಅಲಿಖಿತವಾಗಿ ತೀರ್ಮಾನಿಸಿವೆ.ಇದೇ ಪ್ರಕಾರ ಸದ್ಯ ಮಂಡ್ಯ ಕ್ಷೇತ್ರ ಜೆಡಿಎಸ್ ತೆಕ್ಕೆಯಲ್ಲಿದೆ. ಇದರಿಂದ ಕಾಂಗ್ರೆಸ್ ಮಂಡ್ಯ ಕಿತ್ತುಕೊಳ್ಳುವ ಯತ್ನ ಮಾಡಿದರೆ ಮೈತ್ರಿ ಮುರಿಯಬಹುದು, ಇಲ್ಲವೇ ಕಾಂಗ್ರೆಸ್ ಸಂಸದರ ಕ್ಷೇತ್ರವನ್ನು ಜೆಡಿಎಸ್ ಕೇಳಬಹುದು. ಇದರಿಂದ ಎದುರಾಗುವ ಸಮಸ್ಯೆಗೆ ಹೈಕಮಾಂಡ್ ಕಾಂಗ್ರೆಸ್ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತ. ತಲೆದಂಡ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಸುಮಲತಾ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸುಮಲತಾ ಅಂಬರೀಶ್ ಮಂಡ್ಯದಿಂದ ತಮ್ಮ ಸ್ಪರ್ಧೆ ಖಚಿತಪಡಿಸಿದ್ದಾರೆ. ಇದರಿಂದ ಅವರಿಗೆ ಕಾಂಗ್ರೆಸ್‍ನಿಂದ ಅವಕಾಶ ಸಿಗದಿ ದ್ದರೆ, ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೆ. ಹಾಗೊಮ್ಮೆ ಆದಲ್ಲಿ, ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿ, ಬಿಜೆಪಿ ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳನ್ನು ಎದುರಿಸಿ ಸುಮಲತಾ ಸಂಸದರಾಗಿ ಗೆದ್ದು ಬಂದರೆ ನಂತರ ಅವರ ಜೊತೆ ಮಾತುಕತೆ ನಡೆಸಿ ಪಕ್ಷಕ್ಕೆ ಬರಮಾಡಿಕೊಂಡ ರಾಯಿತು ಎನ್ನುವ ಲೆಕ್ಕಾಚಾರ ಕೂಡ ಕಾಂಗ್ರೆಸ್ ಮಾಡಿದೆ. ಒಂದೊಮ್ಮೆ ಮೈತ್ರಿ ಮುರಿದರೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲು ಚಿಂತನೆ ನಡೆಸಿದೆ.
ಇನ್ನೊಂದೆಡೆ ಬಿಜೆಪಿಗೆ ಇದುವರೆಗೂ ಹಳೆಮೈಸೂರು ಭಾಗದಲ್ಲಿ ಹೇಳಿಕೊಳ್ಳುವಂತ ನೆಲೆ ಇಲ್ಲ. ಕಳೆದ ಲೋಕಸಭೆ ಉಪಚುನಾವಣೆ ಸಂದರ್ಭ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ವಿರುದ್ಧವೇ ಬಿಜೆಪಿ 2.5 ಲಕ್ಷ ದಾಖಲೆಯ ಮತ ಗಳಿಸಿತ್ತು.ಇದೀಗ ಸುಮಲತಾರನ್ನು ಪಕ್ಷಕ್ಕೆ ಸೆಳೆದರೆ ನಿಶ್ಚಿತವಾಗಿ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಬಿಜೆಪಿ ಮಾಡಿಕೊಂಡಿದೆ ಎಂಬ ಮಾತಿದೆ. ಪಕ್ಷೇತರರಾಗಿಯೇ ನಿಂತರೂ ಗೆಲ್ಲುವ ಲಕ್ಷಣ ಹೊಂದಿರುವ ಸುಮಲತಾ ಬಿಜೆಪಿಗೆ ಬಂದರೆ ಮಂಡ್ಯವನ್ನು ಮೈತ್ರಿ ಪಕ್ಷಗಳಿಂದ ಕಿತ್ತುಕೊಳ್ಳುವುದು ಸುಲಭ ಎಂದು ಲೆಕ್ಕಾಚಾರ ಮಾಡಿಕೊಂಡಿರುವ ಬಿಜೆಪಿ ನಾಯಕರು ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ.ಒಟ್ಟಿನಲ್ಲಿ ಈ ಬಾರಿ ಮಂಡ್ಯ ಲೋಕಸಭೆ ಅಖಾಡ ಭಾರಿ ಸುದ್ದಿ ಮಾಡಲಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ