ಅಕ್ರಮ ತಡೆಯುವಲ್ಲಿ ವಿಫಲವಾದ ಪೊಲೀಸರ ವಿರುದ್ಧ ಹೋರಾಟ : ಡಿ ಸಿ ಗೌರಿ ಶಂಕರ್

ತುಮಕೂರು
      ತುಮಕೂರು ತಾಲ್ಲೂಕಿನಲ್ಲಿ ಇಸ್ಪೀಟ್ ದಂಧೆ ಮತ್ತು ಮರಳು ಮಾಫಿಯಾಗಳಿಗೆ ಪೊಲೀಸರಿಂದಲೇ ಕುಮ್ಮಕ್ಕು ದೊರೆಯುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದಲೇ ವ್ಯಾಪಕವಾಗಿ ಕೇಳಿಬರುತ್ತಿದೆಯೆಂಬುದನ್ನು ನೇರವಾಗಿ ಪ್ರಸ್ತಾಪಿಸಿದ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ. ಗೌರಿಶಂಕರ್ (ಜೆಡಿಎಸ್) ಅವರು, `ತುಮಕೂರು ಗ್ರಾಮಾಂತರ ಮತ್ತು ಕ್ಯಾತಸಂದ್ರ ಠಾಣೆಗಳ ಪೊಲೀಸ್ ಸಬ್‍ಇನ್ಸ್‍ ಪೆಕ್ಟರ್‍ಗಳು ತಕ್ಷಣವೇ ತಮ್ಮ ನಡವಳಿಕೆಯನ್ನು ಬದಲಿಸಿಕೊಳ್ಳದಿದ್ದರೆ ಅವರ ವಿರುದ್ಧ ಹೋರಾಟಕ್ಕೂ ಸಿದ್ಧ’ ಎಂದು ಖಡಕ್ ಆಗಿ ಎಚ್ಚರಿಸಿದ ಅಪರೂಪದ ಬೆಳವಣಿಗೆ ನಡೆದಿದೆ.
       ಗುರುವಾರ ಬೆಳಗ್ಗೆ ತುಮಕೂರು ನಗರದಲ್ಲಿರುವ ತುಮಕೂರು ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಂಗಣದಲ್ಲಿ ಈ ಸಾಲಿನ ಮೊದಲ ತ್ರೈಮಾಸಿಕ ಕೆ.ಡಿ.ಪಿ. ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡುವಾಗ, ಪೊಲೀಸ್ ಇಲಾಖೆಯ ವಿಷಯವನ್ನು ಅವರು ತಾವಾಗಿಯೇ ಪ್ರಸ್ತಾಪಿಸಿ ಹೀಗೊಂದು ಎಚ್ಚರಿಕೆ ಕೊಟ್ಟರು.
      ‘ನಮ್ಮ ತಾಲ್ಲೂಕಿಗೆ ಅಂದರೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಕ್ಯಾತಸಂದ್ರ ಪೊಲೀಸ್ ಠಾಣೆಗೆ ಹೊಸ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ಗಳು ಬಂದಿದ್ದಾರೆ. ಇವರುಗಳು ಇಸ್ಪೀಟ್ ದಂಧೆಗೆ ಮತ್ತು ಮರಳು ಮಾಫಿಯಾಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆಂದು ಎಲ್ಲೆಲ್ಲೂ ಜನರೇ ದೂರುತ್ತಿದ್ದಾರೆ. ಈ ಪೊಲೀಸ್ ಅಧಿಕಾರಿಗಳು ಕೆ.ಡಿ.ಪಿ. ಸಭೆಗೂ ಬರಲಾರರು’ ಎಂದು ಅಸಮಾಧಾನದಿಂದಲೇ ಪ್ರಸ್ತಾಪಿಸಿದರು. 
      ‘ಗ್ರಾಮೀಣ ಭಾಗದಲ್ಲಿ ಹಸುಗಳ ಕಳ್ಳತನ, ಇತರೆ ಕಳ್ಳತನಗಳು ನಡೆಯುತ್ತಿದ್ದರೂ, ಅವನ್ನು ನಿಯಂತ್ರಿಸುವ ಹಾಗೂ ಪತ್ತೆ ಮಾಡುವ ಕೆಲಸ ಮಾಡದೆ ಇವರುಗಳು ಚಕ್ಕಂದ ಆಡುತ್ತಿದ್ದಾರೆ. ಜನರ ರಕ್ಷಕರಾಗುವ ಬದಲು ಭಕ್ಷಕರಾಗುತ್ತಿದ್ದಾರೆಂದು ಜನರೇ ದೂರುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇವರುಗಳು ತಕ್ಷಣವೇ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಎಸ್ಪಿ, ಡಿಜಿ ಮತ್ತು ಐ.ಜಿ. ಅವರಿಗೆ ದೂರು ಕೊಡುತ್ತೇನೆ. ಅಗತ್ಯವಾದರೆ ಇವರ ವಿರುದ್ಧ ಪ್ರತಿಭಟನೆ ಮಾಡಲು ಹಾಗೂ ಹೋರಾಟಕ್ಕೂ ಸಿದ್ಧ’ ಎಂದು ಎಚ್ಚರಿಕೆ ನೀಡಿದರು.
ಕ್ಷಮೆ ಕೋರಿದ ಇಂಜಿನಿಯರ್
      ಬೆಸ್ಕಾಂ ವಿಷಯ ಚರ್ಚೆಗೆ ಬಂದಾಗ ಬೆಸ್ಕಾಂನ ಇಂಜಿನಿಯರ್ ಪ್ರಶಾಂತ್ ಎಂಬುವವರು ಸಭೆಯಲ್ಲೇ ಶಾಸಕರ ಕ್ಷಮೆ ಯಾಚಿಸಿದ ಮತ್ತೊಂದು ಅಪರೂಪದ ಪ್ರಸಂಗವೂ ಜರುಗಿತು.ಬೆಸ್ಕಾಂ ಕುರಿತು ಒಬ್ಬ ಇಂಜಿನಿಯರ್ ಮಾಹಿತಿ ಕೊಟ್ಟರು. ಬಳಿಕ ಪ್ರಶಾಂತ್ ಮಾಹಿತಿ ಕೊಡತೊಡಗಿದರು. ಆಗ ಮಧ್ಯಪ್ರವೇಶಿಸಿದ ಶಾಸಕ ಗೌರಿಶಂಕರ್, `ಅಧಿಕಾರಿ ಯಾವಾಗಲೂ ಅಧಿಕಾರಿಯಂತೆ ಮಾತನಾಡಬೇಕೇ ವಿನಃ ಬೇರೆ ರೀತಿ ಮಾತನಾಡಬಾರದು.
     ನನಗೂ ಮಾತನಾಡಲು ಬರುತ್ತದೆ. ನಾನು ಚೆನ್ನಿಗಪ್ಪನವರ ಮಗ’ ಎನ್ನುತ್ತಿದ್ದಂತೆ ಅದರ ಅರ್ಥವನ್ನು ತಕ್ಷಣವೇ ಗ್ರಹಿಸಿದ ಇಂಜಿನಿಯರ್ `ತಪ್ಪಾಗಿದೆ. ಕ್ಷಮೆ ಕೇಳುತ್ತಿದ್ದೇನೆ’ ಎಂದರು. ಸಭಾಂಗಣದಲ್ಲಿದ್ದ ಎಲ್ಲರೂ ಅಚ್ಚರಿಯಿಂದ ಇಂಜಿನಿಯರ್ ಮತ್ತು ಶಾಸಕರತ್ತ ನೋಡತೊಡಗಿದರು. 
     ಮತ್ತೆ ಮಾತು ಮುಂದುವರೆಸಿದ ಶಾಸಕರು, `ನೀವು ಬಿ.ಇ. ಓದಿದ್ದರೆ, ನಾನೂ ಸಹ ಬಿ.ಎಸ್ಸಿ. ಓದಿದ್ದೇನೆ. ಆ ರೀತಿ ಮಾತನಾಡುವುದು ಸರಿಯಲ್ಲ. ನಾನು ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಬಹುದಿತ್ತು. ನಿಮ್ಮ ಮೇಲಧಿಕಾರಿಗಳಿಗೆ ನಿಮ್ಮ ವಿರುದ್ಧ ದೂರು ಸಲ್ಲಿಸಬಹುದಿತ್ತು. ಆಗ ನಿಮ್ಮ ಪರಿಸ್ಥಿತಿ ಏನಾಗುತ್ತಿತ್ತೆಂಬುದನ್ನು ಊಹಿಸಿಕೊಳ್ಳಿ. ಇನ್ನು ಮುಂದೆ ಹೀಗಾಗುವುದು ಬೇಡ. ಇದು ಇಲ್ಲಿಗೇ ನಿಲ್ಲಲಿ’ ಎಂದು ಆ ವಿಷಯಕ್ಕೆ ತೆರೆ ಎಳೆದರು. ಇಷ್ಟರ ಮಧ್ಯ ಆ ಇಂಜಿನಿಯರ್ ನಾಲ್ಕಾರು ಬಾರಿ `ತಪ್ಪಾಗಿದೆ ಕ್ಷಮಿಸಿ’ ಎಂದು ಪುನರುಚ್ಛರಿಸಿದರು.
ಪಿಡಿಓ ಸಸ್ಪೆಂಡ್ ಮಾಡಿ
     ಕುಡಿಯುವ ನೀರು ಪೂರೈಕೆ ವಿಷಯ ಚರ್ಚೆಗೆ ಬಂತು. ಆಗ ಶಾಸಕರು ಒಂದು ನೀರಿನ ಟ್ಯಾಂಕರ್‍ಗೆ ನೀರು ತುಂಬಿಸಿ, ಅದನ್ನು ನಿಗದಿತ ಸ್ಥಳಕ್ಕೆ ಒಯ್ದು ನೀರು ವಿತರಿಸಿ ವಾಪಸ್ ಬರಲು ಕನಿಷ್ಟ 2 ಗಂಟೆಗಳಾದರೂ ಆಗುತ್ತದೆ. ಆದರೆ ತುಮಕೂರು ತಾಲ್ಲೂಕು ಕುಚ್ಚಂಗಿ ಗ್ರಾಮದಲ್ಲಿ ಕೇವಲ 10 ನಿಮಿಷಕ್ಕೆ ಒಮ್ಮೆ ಒಂದು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವುದಾಗಿ ತೋರಿಸಿ ಬಿಲ್ ಮಾಡುತ್ತಿದ್ದು, ಇದರಲ್ಲಿ ಅಕ್ರಮ ಆಗುತ್ತಿದೆ ಎಂದು ಸಭೆಯ ಗಮನಕ್ಕೆ ತಂದರು.
     ಈ ಕಾರಣದಿಂದ ಅಲ್ಲಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಯನ್ನು ತಕ್ಷಣವೇ ಸಸ್ಪೆಂಡ್ ಮಾಡಬೇಕು ಎಂದು ಶಾಸಕರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಜೈಪಾಲ್ ಅವರಿಗೆ ಸೂಚಿಸಿದರು. ಕುಡಿಯುವ ನೀರಿನ ಟ್ಯಾಂಕರ್ ವಿಷಯದಲ್ಲಿ ಅಕ್ರಮಗಳಾಗುತ್ತಿದ್ದು, ಇದನ್ನು ತಡೆಯಲು ಎಲ್ಲ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್. ಅಳವಡಿಸಬೇಕು ಎಂದು ಸಲಹೆ ನೀಡಿದರು.
ಶಿಷ್ಟಾಚಾರ ಪಾಲಿಸಬೇಕು
      ತಾಲ್ಲೂಕಿನಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ಮಾಡುವಾಗ ಸರ್ಕಾರದ ನಿರ್ದೇಶನದ ಅನುಸಾರವಾಗಿ ಶಿಷ್ಟಾಚಾರ (ಪ್ರೊ ಟೊಕಾಲ್) ವನ್ನು ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕರು, ಸಂಸದರನ್ನು ಆಹ್ವಾನಿಸುವಂತೆಯೇ, ವಿಧಾನಪರಿಷತ್ ಸದಸ್ಯರನ್ನೂ ಆಹ್ವಾನಿಸಬೇಕೆಂಬುದನ್ನು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಅವರು ವಿಶೇಷವಾಗಿ ಲೋಕೋಪಯೋಗಿ ಇಲಾಖೆಯ ಗಮನವನ್ನು ಸೆಳೆದರು.
      ಕುಡಿಯುವ ನೀರು ಸರಬರಾಜು ಇಲಾಖೆಯ ಪ್ರಗತಿಯನ್ನು ಪರಿಶೀಲಿಸುವಾಗ ಶಾಸಕ ಗೌರಿಶಂಕರ್ ಅವರು ಕೆಲವು ಗುತ್ತಿಗೆದಾರರ ವರ್ತನೆಯನ್ನು ಉಲ್ಲೇಖಿಸಿದರು. `ಈಗ ಆನ್‍ಲೈನ್‍ನಲ್ಲಿ ಎಲ್ಲೋ ಕುಳಿತುಕೊಂಡು ಗುತ್ತಿಗೆದಾರರು ಟೆಂಡರ್ ಹಾಕುತ್ತಾರೆ. ಗುತ್ತಿಗೆ ಸಿಕ್ಕಿದವರಿಗೆ ಕೆಲಸಾದೇಶ ಕೊಡಲಾಗಿರುತ್ತದೆ. ಆದರೂ ಕೆಲಸ ಆರಂಭವಾಗಿರುವುದಿಲ್ಲ. ಇಲಾಖಾಧಿಕಾರಿಗಳು ನೋಟೀಸ್ ಜಾರಿಗೊಳಿಸಿದರೂ ಉತ್ತರಿಸುವುದೇ ಇಲ್ಲ’ ಎಂದು ಅಸಮಾಧಾನದಿಂದ ವಿವರಿಸಿದರು.
       ಆಗ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಉತ್ತರಿಸುತ್ತ ಇಂತಹ ಪ್ರಸಂಗಗಳಲ್ಲಿ ದಂಡ ವಿಧಿಸಬಹುದು, ಮೂರು ಬಾರಿ ನೋಟೀಸ್ ಕೊಟ್ಟರೂ, ಉತ್ತರಿಸದಿದ್ದರೆ ಅಂಥವರನ್ನು ಬ್ಲಾಕ್ ಲಿಸ್ಟ್‍ಗೆ ಹಾಕಬಹುದು ಎಂದು ಹೇಳಿದರು. ಆಗ ಶಾಸಕರು ಇಂತಹ ಪ್ರಕರಣಗಳಲ್ಲಿ ಒಂದಿಬ್ಬರನ್ನು ಬ್ಲಾಕ್ ಲಿಸ್ಟ್‍ಗೆ ಹಾಕಿದರೆ, ಉಳಿದ ಗುತ್ತಿಗೆದಾರರು ಎಚ್ಚೆತ್ತುಕೊಳ್ಳುತ್ತಾರೆ ಎಂದರು.
ಶಾಸಕರ ಅಸಮಾಧಾನ
     ಸಭೆಯಲ್ಲಿ ಇಲಾಖಾವಾರು ಮಾಹಿತಿ ಪಡೆಯುವಾಗ ಅಧಿಕಾರಿಗಳು ಸಮರ್ಪಕವಾದ ಮಾಹಿತಿಯನ್ನು ನೀಡುತ್ತಿಲ್ಲವೆಂದು ಶಾಸಕರು ಪದೇ ಪದೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೂ ಉಂಟಾಯಿತು.
    “ನೀವಿಲ್ಲಿ ಸುಮ್ಮನೆ ಅಂಕಿ ಅಂಶ ಓದುತ್ತಿದ್ದೀರಿ. ಅದರಿಂದ ಕೂಲಂಕಷವಾಗಿ ಅರ್ಥವಾಗುವುದಿಲ್ಲ. ನೀವಿಲ್ಲಿ ಅಂಕಿ ಅಂಶ ಕೊಡುವುದು ಒಂದು; ಮಾತನಾಡುವುದೇ ಇನ್ನೊಂದು ಎಂಬಂತಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದು ಇಂದಿಗೇ ಕೊನೆಯಾಗಲಿ. ಇನ್ನು ಮುಂದೆ ಇಂಥ ಸಭೆಗೆ ಮೂರು ದಿನಗಳ ಮುಂಚೆಯೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಮಗ್ರವಾದ ವಿವರಣೆಯನ್ನು ನನಗೆ ಒದಗಿಸಬೇಕು” ಎಂದು ತಾಕೀತು ಮಾಡುತ್ತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ತಾ.ಪಂ. ಇಓ ಜೈಪಾಲ್ ಅವರಿಗೆ ಸೂಚಿಸಿದರು.
     ಕೃಷಿ ಇಲಾಖೆಯ ಅಧಿಕಾರಿಯು ತಮ್ಮ ಇಲಾಖಾ ಮಾಹಿತಿ ನೀಡುವಾಗ ಮಧ್ಯ ಪ್ರವೇಶಿಸಿದ ಶಾಸಕರು, `ಒಬ್ಬನೇ ವ್ಯಕ್ತಿಯು ಎರಡೆರಡು ಸೌಲಭ್ಯಯ ಪಡೆದುಕೊಂಡಿರುವ ದಾಖಲಾತಿಗಳು ನನ್ನ ಬಳಿ ಇವೆ. ಇದು ಮರುಕಳಿಸಬಾರದು. ಆದ್ದರಿಂದ ಸೌಲಭ್ಯಗಳನ್ನು ರೈತ ಫಲಾನುಭವಿಗಳಿಗೆ ವಿತರಿಸುವ ಮೊದಲು ಸಿದ್ಧಗೊಳಿಸುವ ಪಟ್ಟಿಯನ್ನು ನನ್ನ ಗಮನಕ್ಕೂ ತನ್ನಿ’ ಎಂದು ಅಧಿಕಾರಿಗೆ ಕಿವಿಮಾತು ಹೇಳಿದರು.
     ಆರೋಗ್ಯ ಇಲಾಖೆಯ ಪ್ರಗತಿಯನ್ನು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಮಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೌರಿಶಂಕರ್, `ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬಹುದು. ಆದರೆ ಈಗ ಎಲ್ಲೆಡೆ ವೈದ್ಯರ ಸಮಸ್ಯೆ ಕಾಡುತ್ತಿದೆ. ಎರಡು ಲಕ್ಷ ರೂ. ವೇತನ ಕೊಡುವುದಾಗಿ ಸರ್ಕಾರ ಹೇಳಿದರೂ, ವೈದ್ಯರು ಸರ್ಕಾರಿ ಸೇವೆಗೆ ಮುಂದೆ ಬರುತ್ತಿಲ್ಲ. ಅನೇಕ ಕಡೆ ನರ್ಸ್‍ಗಳು ಸಹ ಇರುವುದಿಲ್ಲ. ಈ ಸಮಸ್ಯೆಯ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ಮಾಡಬೇಕಾಗುತ್ತದೆ’ ಎಂದು ಹೇಳಿದರು.
     ಭೂಮಾಪನ ಇಲಾಖೆಯ ವಿಷಯ ಚರ್ಚೆಗೆ ಬಂದಾಗ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತುಮಕೂರು ತಾಲ್ಲೂಕಿನ 144 ಸರ್ಕಾರಿ ಶಾಲೆಗಳ ಅಳತೆ ಹಾಗೂ ಖಾತೆಗಳ ಬಗ್ಗೆ ಸಮಸ್ಯೆ ಇದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸರ್ಕಾರಿ ಶಾಲೆಗಳ ಇಂತಹ ಸಮಸ್ಯೆಯನ್ನು ವಿಶೇಷ ಆಂದೋಲನವಾಗಿ ಪರಿಗಣಿಸಿ ಬಗೆಹರಿಸಬೇಕು ಎಂದು ತುಮಕೂರು ತಹಸೀಲ್ದಾರ್ ಯೋಗಾನಂದ್ ಅವರಿಗೆ ಕೋರಿದರು.
 
      ಇದಕ್ಕೆ ಉತ್ತರಿಸಿದ ತಹಸೀಲ್ದಾರರು, `ಈ ವಿಷಯವನ್ನು ಮೊನ್ನಿನ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಇದೇ ಸೆಪ್ಟೆಂಬರ್ 11 ರಂದು ವಿಶೇಷ ಸಭೆ ನಡೆಸಲು ತೀರ್ಮಾನಿಸಿದ್ದು, ಅಂದು ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಲಾಗುವುದು’ ಎಂದರು. ಸಭೆಯಲ್ಲಿ ಇದೇ ರೀತಿ ವಿವಿಧ ಇಲಾಖಾ ಪ್ರಗತಿಯನ್ನು ಪರಿಶೀಲಿಸಲಾಯಿತು. ವೇದಿಕೆಯಲ್ಲಿ ಜಿ.ಪಂ. ಸದಸ್ಯ ಲಕ್ಷ್ಮೀನರಸಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರುಗಳಾದ ಎಸ್. ರಂಗಸ್ವಾಮಯ್ಯ (ಸಿರಿವರ ಕ್ಷೇತ್ರ- ಕಾಂಗ್ರೆಸ್), ಆರ್. ಪ್ರದೀಪ್ (ನಾಗವಲ್ಲಿ ಕ್ಷೇತ್ರ- ಜೆಡಿಎಸ್) ಮತ್ತು ಜಗದೀಶ್(ಬೆಳಧರ ಕ್ಷೇತ್ರ- ಜೆಡಿಎಸ್), ತಹಸೀಲ್ದಾರ್ ಯೋಗಾನಂದ್, ತಾ.ಪಂ. ಇಓ ಜೈಪಾಲ್ ಹಾಜರಿದ್ದರು.  ತಾಲ್ಲೂಕು ಮಟ್ಟದ ಇಲಾಖಾಧಿಕಾರಿಗಳು ಭಾಗವಹಿಸಿದ್ದರು. 
      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link