ಎಲ್ಲಾ ಸರ್ಕಾರಗಳ ಮೇಲೆ ಒತ್ತಡ;ಮುರುಘಾ ಶರಣರು

ಚಿತ್ರದುರ್ಗ

    ಜಿಲ್ಲೆಯ ವಾಣಿವಿಲಾಸ ಸಾಗರ, ಭದ್ರಾ ಮೇಲ್ಡಂಡೆ ಯೋಜನೆ ಮತ್ತು ದಾವಣಗೆರೆ-ತುಮಕೂರು-ಬೆಂಗಳೂರು ರೈಲ್ವೆ ಯೋಜನೆಗಳ ಅನುಷ್ಟಾನ ಸಂಬಂಧ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.ಶ್ರೀಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ನಡೆದ 2019ರ ಶರಣಸಂಸ್ಕೃತಿ ಉತ್ಸವದ ಕೈಗಾರಿಕಾ ಮತ್ತು ಕೃಷಿಮೇಳದ ಪೂರ್ವಭಾವಿ ಸಮಾಲೋಚನೆ ಸಭೆಯಲ್ಲಿ ಶ್ರೀಗಳು ಮಾತನಾಡಿದರು.

    ಈ ಬಾರಿ ಉತ್ಸವದಲ್ಲಿ ಸಿರಿಧಾನ್ಯಗಳಿಗೆ ವಿಶೇಷ ಮಹತ್ವ ನೀಡಲಾಗುತ್ತಿದೆ. ಒಂದು ದಿನ ಪ್ರಸಾದವು ಸಿರಿಧಾನ್ಯಗಳಿಂದಲೇ ತಯಾರಾಗುವುದು. ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟ ಇಂದು ನಿನ್ನೆಯದಲ್ಲ. ಸುಮಾರು 25 ವರ್ಷಗಳಿಂದ ಹೋರಾಟ ನಡೆಯುತ್ತಲೇ ಬಂದಿದೆ ಎಂದರು

   1994ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಶ್ರೀಮಠಕ್ಕೆ ಬಂದಾಗ ಈ ಭಾಗಕ್ಕೆ ನೀರಾವರಿ ಯೋಜನೆ ಮತ್ತು ರೈಲ್ವೆ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದ್ದೆವು. ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗಲೂ ನಮ್ಮದು ಇದೇ ಮನವಿ ನೀರು ಮತ್ತು ರೈಲ್ವೆ. ಮಧ್ಯಕರ್ನಾಟಕ ನಿರ್ಲಕ್ಷ್ಯಕ್ಕೆ ಒಳಗಾಗಿದೆ ನೀರಾವರಿ ಅಭಿವೃದ್ಧಿಪಡಿಸಿ ಎಂದು ಒತ್ತಾಯಿಸಲಾಗಿತ್ತು. ಹಾಗೆಯೇ ಎಲ್ಲ ಮುಖ್ಯಮಂತ್ರಿಗಳಿಗೂ ಈ ಕುರಿತು ಮನವಿ ಮಾಡುತ್ತ ಈ ಹೋರಾಟವನ್ನು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಮಾಡುತ್ತ ಬರಲಾಗಿದೆ. ಈಗ ಯಶಸ್ಸಿನ ತುದಿಯಲ್ಲಿ ಬಂದಿರುವುದು ಸಂತಸ ತಂದಿದೆ. ಈ ಬಾರಿಯ ಉತ್ಸವದಲ್ಲಿ ರೈತಪರ ಕಾಳಜಿಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶರಣರು ನುಡಿದರು.

    ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಮಾತನಾಡಿ, ಸ್ವತಃ ಮುಖ್ಯಮಂತ್ರಿಗಳು ವಾಣಿವಿಲಾಸ ಸಾಗರಕ್ಕೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವರು. ಇದಕ್ಕಾಗಿ ಎಲ್ಲ ಸಿದ್ಧತೆಗಳಿಗೆ ಪ್ರಯತ್ನಿಸಲಾಗುತ್ತಿದೆ. ಹಾಗೆಯೇ ಭಾರತದಲ್ಲಿ ಈಗ ನದಿ ಜೋಡಣೆ ಅವಶ್ಯವಾಗಿದೆ. ರೈತಪರವಾದ ವಿಚಾರ ಕುರಿತು ಯೋಜನೆಗಳ ಕುರಿತು ರೈತರ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಉತ್ಸವದ ಕೈಗಾರಿಕಾ, ಕೃಷಿಮೇಳ ಮತ್ತು ವಸ್ತು ಪ್ರದರ್ಶನ ಜರುಗಬೇಕಿದೆ ಎಂದು ಹೇಳಿದರು.

    ಶರಣಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಹನುಮಲಿ ಷಣ್ಮುಖಪ್ಪ ಮಾತನಾಡಿ, ರೈತರ ಬಗ್ಗೆ ಶರಣರು ಅಪಾರ ಕಾಳಜಿ ಹೊಂದಿದ್ದಾರೆ. ಆ ನಿಟ್ಟಿನಲ್ಲಿ ಉತ್ಸವ ಯಶಸ್ವಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷ ಲಿಂಗರಾಜು, ಬಬ್ಬೂರು ಫಾರಂ ಕೃಷಿ ವಿಜ್ಞಾನ ಕೇಂದ್ರದ ಡೀನ್ ನಾರಾಯಣಸ್ವಾಮಿ, ಶಂಕರಪ್ಪ ಜಂಗಂಡಿ, ಎಂ.ಕೆ.ಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುನಂದಮ್ಮ ಮಲ್ಲಪ್ಪ, ರೈತಮುಖಂಡರಾದ ಸಿದ್ಧವೀರಪ್ಪ, ಶಂಕರಪ್ಪ, ನಿಂಗಪ್ಪ, ಭೂತಯ್ಯ ಹಾಗೂ ಉತ್ಸವ ಸಮಿತಿಯ ಕಾರ್ಯದರ್ಶಿಗಳಾದ ಶ್ರೀಮತಿ ಆರತಿ ಮಹಡಿ ಶಿವಮೂರ್ತಿ, ಶ್ರೀಮತಿ ಮೋಕ್ಷ ರುದ್ರಸ್ವಾಮಿ ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಆಗಮಿಸಿದ್ದರು. ವೀರೇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link