ತುಮಕೂರು
ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಸರ್ಕಾರ ಹಳ್ಳಿಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಲು ಅನುಕೂಲ ಮಾಡಿಕೊಡುತ್ತಿದೆ. ಮಾಫಿಯಾಗಳು, ಕಪ್ಪುಹಣ ಮಾಡಿಕೊಂಡಿರುವವರು ಸ್ವೇಚ್ಚಾಚಾರದಿಂದ ಬಡವರ ಜಮೀನು ಖರೀದಿ ಮಾಡುವ ದಂಧೆ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ, ಕಾರ್ಮಿಕ ಕಾಯಿದೆಗಳಿಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ತಂದು ಜಾರಿಗೊಳಿಸಿರುವ ಕ್ರಮ ಖಂಡಿಸಿ ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ದೇವೇಗೌಡರು ಭಾಗವಹಿಸಿ, ಪ್ರಗತಿಪರ, ರೈತರಪರ, ಕಾರ್ಮಿಕರಪರ ಇರುವ ಕಾಯಿದೆಗಳಿಗೆ ತಂದಿರುವ ತಿದ್ದುಪಡಿ ವಿರೋಧಿಸಿ, ತಿದ್ದುಪಡಿ ವಾಪಾಸ್ ಪಡೆಯಲು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಬಂದು ಡಿಸಿ ಕಚೇರಿ ಮುಂದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಮೂರು ವಿಧೇಯಕಗಳಿಗೆ ತಿದ್ದುಪಡಿ ತಂದಿರುವುದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ದೇವೇಗೌಡರು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ದೇವೇಗೌಡರು, ಯಾರ ಹಿತಕ್ಕಾಗಿ ಕಾಯಿದೆಗಳಿಗೆ ಸರ್ಕಾರ ತಿದ್ದುಪಡಿ ತಂದು ಜಾರಿಗೊಳಿಸಿದೆ, ರೈತರಿಗೆ ಮಾರಕವಾಗುವ ಕಪ್ಪುಹಣ ಇರುವವರಿಗೆ ಅನುಕೂಲ ಆಗುವಂತಹ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದಿರುವುದರ ವಿರುದ್ಧ ಈಗಾಗಲೇ 14 ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ, ಕೊರೊನಾ ಇದ್ದರೂ ನಿಯಮಗಳನ್ನು ಅನುಸರಿಸಿಕೊಂಡು ಎಲ್ಲಾ 30 ಜಿಲ್ಲೆಗಳಲ್ಲಿ ಹೋರಾಟ ರೂಪಿಸಲಾಗುವುದು, ನಂತರ ತಾಲ್ಲೂಕು ಮಟ್ಟದಲ್ಲೂ ಪ್ರತಿಭಟನೆ ನಡೆಸಲಾಗವುದು. ದೇವೇಗೌಡರಿಗೆ ವಯಸ್ಸಾಯಿತು ಎನ್ನುವ ಪ್ರಶ್ನೆಯೇ ಇಲ್ಲ, ಪಾರ್ಲಿಮೆಂಟಿನಲ್ಲಿ ಹಾಗೂ ಹೊರಗೆ ಹೋರಾಟ ಮುಂದುವರೆಸುವುದಾಗಿ ಘೋಷಿಸಿದ ದೇವೇಗೌಡರು, ಕಾಯಿದೆಗಳ ತಿದ್ದುಪಡಿ ವಾಪಾಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದರು.
ಎಪಿಎಂಸಿಗಳಲ್ಲಿ ರೈತರ ಹಿತ ಕಾಪಾಡುವ ಕಾನೂನುಗಳನ್ನು ತಿದ್ದುಪಡಿ ಮಾಡಿರುವ ಸರ್ಕಾರ ಆನ್ಲೈನ್ ಖರೀದಿಗೆ ಅವಕಾಶ ಮಾಡಿ, ರೈತರಿಗೆ ಚೆಕ್ ಮೂಲಕ ಹಣ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಹೇಳಿದೆ, ಆದರೆ ಈವರೆಗೆ ಯಾವ ರೈತರಿಗೆ ಹಣದ ಚೆಕ್ ತಲುಪಿದೆ ಎಂದು ಹೇಳಿಬಿಡಲಿ ಎಂದು ಹೇಳಿದರು.
ಕಾಯಿದೆ ತಿದ್ದುಪಡಿ ಮಾಡುವ ಕುರಿತು ವಿಧಾನಸಭೆಯಲ್ಲಿ ಚರ್ಚೆ ಮಾಡಲಿಲ್ಲ, ತರಾತುರಿಯಲ್ಲಿ ತಿದ್ದುಪಡಿ ತಂದು ಜಾರಿ ಮಾಡುವ ತುರ್ತು ಏನಿತ್ತು? ಯಾರಿಗೋಸ್ಕರ ತಂದಿದ್ದಾರೆ? ಎಂದು ದೇವೇಗೌಡರು ಸರ್ಕಾರವನ್ನು ಪ್ರಶ್ನಿಸಿದರು.ರೈತ ವಿರೋಧಿ ಕಾಯ್ದೆಗಳಾಗಿರುವ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿಧೇಯಕ-2020,ಎಪಿಎಂಸಿ ಕಾಯ್ದೆ ತಿದ್ದುಪಡಿ ವಿಧೇಯಕ,2020 ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಕುರಿತಂತೆ ಇನ್ನೊಂದು ರಾಷ್ಟ್ರೀಯ ಪಕ್ಷದ ನಿಲುವು ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಇಂತಹ ಕರಾಳ ಕಾಯ್ದೆಗಳು ಜಾರಿಯಾಗಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡರು, ಈ ಮೂರು ಕಾಯ್ದೆಗಳ ತಿದ್ದುಪಡಿಯಿಂದ ಇದರ ಫಲಾನುಭವಿಗಳಾಗಲಿರುವ ರೈತರು, ಕಾರ್ಮಿಕರಿಗೆ ಏನಾದರೂ ಉಪಯೋಗವಿದೆಯೇ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ಹಾಲಿ ಇದ್ದ ಭೂ ಸುಧಾರಣಾ ಕಾಯಿದೆಯಿಂದ ಏನಾದರೂ ಕೈಗಾರಿಕೆ ತೆರೆಯಲು ಅನಾನುಕೂಲವಿತ್ತೇ ಎಂದು ಕೇಳಿದ ಅವರು, ಭೂ ಸುಧಾರಣೆ ಕಾಯ್ದೆ ಕಲಂ 79(ಬಿ)ಗೆ ತಿದ್ದುಪಡಿ ಮತ್ತು 109ನೇ ಕಲಂ ರದ್ದಿನಿಂದ ಕರ್ನಾಟಕ ಸೇರಿದಂತೆ ರಾಷ್ಟ್ರದಲ್ಲಿ ತುಂಡು ಭೂಮಿ ಹೊಂದಿದ್ದ ರೈತರು ಬೀದಿಗೆ ಬೀಳಲಿದ್ದಾರೆ. ಅಲ್ಲದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಯಿಂದ ದೊಡ್ಡ ಕಂಪನಿಗಳ ಏಕಸಾಮ್ಯದಿಂದ ಸಣ್ಣ ವರ್ತಕರು ಮತ್ತು ರೈತರು ಮತ್ತಷ್ಟು ಅದೋಗತಿಗೆ ತಳ್ಳಲ್ಪಡಲಿದ್ದಾರೆ.
ಈ ಬಗ್ಗೆ ಕಿಂಚಿತ್ತು ಯೋಚನೆಯಿಲ್ಲದ, ಉದ್ದಿಮೆದಾರರು, ಬಂಡವಾಳ ಶಾಹಿಗಳ ಪರವಾಗಿ ಬಿಜೆಪಿ ಸರಕಾರ ತರಾತುರಿಯಲ್ಲಿ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಹೊರಟಿದೆ ಎಂದು ಟೀಕಿಸಿದರು.ಪ್ರತಿಭಟನೆಯಲ್ಲಿ ಶಾಸಕರಾದ ಡಿ.ಸಿ.ಗೌರಿಶಂಕರ್, ಎಂ.ವಿ.ವೀರಭದ್ರಯ್ಯ, ವಿಧಾನಪರಿಷತ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾ ರವಿಕುಮಾರ್, ಮಾಜಿ ಶಾಸಕರಾದ ಕೆ.ಎಂ.ತಿಮ್ಮರಾಯಪ್ಪ, ಎಂ.ಟಿ.ಕೃಷ್ಣಪ್ಪ, ಹೆಚ್.ನಿಂಗಪ್ಪ, ಸುಧಾಕರಲಾಲ್, ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ.ಅಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಎ.ಗೋವಿಂದರಾಜು, ನಗರಪಾಲಿಕೆ ಉಪಮೇಯರ್ ಶಶಿಕಲಾ ಗಂಗಹನುಮಯ್ಯ, ಸದಸ್ಯರಾದ ಶ್ರೀನಿವಾಸ್, ಮಂಜುನಾಥ್, ಧರಣೇಂದ್ರಕುಮಾರ್, ಮನು, ಮುಖಂಡರಾದ ಹಾಲನೂರು ಅನಂತಕುಮಾರ್, ಹಿರೇಹಳ್ಳಿ ಮಹೇಶ್, ಬೆಳ್ಳಿಲೋಕೇಶ್, ಸಿ.ಆರ್.ಉಮೇಶ್, ಕುಂಭಣ್ಣ, ಸೋಲಾರ್ ಕೃಷ್ಣಮೂರ್ತಿ, ದೇವರಾಜು, ತಾಹೇರಾ ಕುಲ್ಸಂ ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
