ಘನತ್ಯಾಜ್ಯ ವಿಲೇವಾರಿ : ಡೆನ್ಮಾರ್ಕ್ ಪ್ರತಿನಿಧಿ ಜೊತೆ ಚರ್ಚೆ

ತುಮಕೂರು
    ಘನತ್ಯಾಜ್ಯ ವಿಲೇವಾರಿಯ ಯಶಸ್ಸಿನಲ್ಲಿ ಜಾಗತಿಕ ಗಮನ ಸೆಳೆದಿರುವ ಡೆನ್ಮಾರ್ಕ್ ದೇಶದ ಪ್ರತಿನಿಧಿ ಜೊತೆ ಬೆಂಗಳೂರಿನಲ್ಲಿ ನಾವೂ ಸಹ ಘನತ್ಯಾಜ್ಯ ವಿಲೇವಾರಿ ಬಗ್ಗೆ ಚರ್ಚಿಸಿದ್ದೇವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
       ಅವರು ಶುಕ್ರವಾರ ಬೆಳಗ್ಗೆ ತುಮಕೂರು ನಗರದ ಎಂ.ಜಿ. ರಸ್ತೆಯ ಬಾಲಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಅನುಷ್ಠಾನ ಕುರಿತು ಜಿಲ್ಲೆಯಲ್ಲಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಿಗಾಗಿ “ಸ್ವಚ್ಛತೆಯೇ ಸಮೃದ್ಧಿ’’ ಶೀರ್ಷಿಕೆಯಡಿ ಏರ್ಪಟ್ಟಿದ್ದ ಸಮಾಲೋಚನೆ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು.
     ತಾವು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಜಿಲ್ಲಾಧಿಕಾರಿಗಳು ಡೆನ್ಮಾರ್ಕ್ ಪ್ರತಿನಿಧಿ ಜೊತೆ ಮಾತುಕತೆ ನಡೆಸಿದ್ದೇವೆ. ಕಸ ವಿಲೇವಾರಿಗೆ ಅವರು ಬಳಸುವ ಅತ್ಯಾಧುನಿಕ ತಾಂತ್ರಿಕತೆಗಳ ಬಗ್ಗೆ ಚರ್ಚಿಸಿದ್ದು, ತುಮಕೂರಿನ ಕಸ ವಿಲೇವಾರಿಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಆಲೋಚಿಸುತ್ತಿದ್ದೇವೆ ಎಂದರು.
ಸಂಸ್ಕರಿತ ಕೊಳಚೆ ನೀರು
    ಕಸವಿಲೇವಾರಿಗೆ ಪೂರಕವಾಗಿ ಕೊಳಚೆ ನೀರಿನ ಸಂಸ್ಕರಣೆ ಬಗೆಗೂ ಅವರು ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಬೆಂಗಳೂರಿನಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುತ್ತಿರುವ ಕೊಳಚೆ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಚಿಕ್ಕಬಳ್ಳಾಪುರ ಮತ್ತು ಕೋಲಾರ  ಜಿಲ್ಲೆಗಳ ಕೆರೆಗಳಿಗೆ ತುಂಬಿಸುವ ಯೋಜನೆಯಿಂದ ಈಗಾಗಲೇ ಆ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇನ್ನೂ ಮೂರು ಟಿ.ಎಂ.ಸಿ.ಯಷ್ಟು ಕೊಳಚೆ ನೀರು ಬೆಂಗಳೂರಿನಲ್ಲಿ ಹರಿದುಹೋಗುತ್ತಿದ್ದು, ಇದನ್ನೇನಾದರೂ ಸಂಸ್ಕರಿಸಿ ಸದರಿ ಎರಡು ಜಿಲ್ಲೆಗಳಿಗೆ ಹರಿಸಿದರೆ, ಅಲ್ಲಿನ ಎಲ್ಲ ಕೆರೆಗಳನ್ನೂ ಭರ್ತಿ ಮಾಡಬಹುದು. ಕುಡಿಯುವ ಹಾಗೂ ಗೃಹಬಳಕೆ ಹೊರತಾಗಿ ಕೃಷಿಗೆ ಈ ನೀರನ್ನು ಬಳಸಬಹುದಾಗಿದೆ. ಜೊತೆಜೊತೆಗೇ ಅಂತರ್ಜಲ ಮಟ್ಟ ಏರಿಕೆಯಾಗಿ, ಕೊಳವೆ ಬಾವಿಗಳಲ್ಲಿ ಸುಲಭವಾಗಿ ನೀರು ಲಭಿಸುತ್ತದೆ. ಈ ನಿಟ್ಟಿನಲ್ಲಿ ತಾವು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿರುವುದಾಗಿ ಮಾಧುಸ್ವಾಮಿ ಹೇಳಿದರು.
ಸಾರ್ವಜನಿಕ ಸ್ವಚ್ಛತೆ ಅಲಕ್ಷ್ಯ
      ನಾವು ಭಾರತೀಯರು ವೈಯಕ್ತಿಕ ಸ್ವಚ್ಛತೆಗೆ ಪರಮ ಆದ್ಯತೆ ನೀಡಿದ್ದೇವೆ. ಆದರೆ ಸಾರ್ವಜನಿಕ ಸ್ವಚ್ಛತೆಯನ್ನು ಅಲಕ್ಷಿಸಿದ್ದೇವೆ. ಆದರೆ ಪಾಶ್ಚಾತ್ಯರು ಇದಕ್ಕೆ ತದ್ವಿರುದ್ಧ. ಅವರು ವೈಯಕ್ತಿಕ ಸ್ವಚ್ಛತೆಗಿಂತ, ಸಾರ್ವಜನಿಕ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಇದನ್ನು ನಾವಿಂದು ಅನುಸರಿಸಬೇಕಾದ ಅನಿವಾರ್ಯತೆ ಇದೆ ಎಂದು ಒತ್ತಿ ಹೇಳಿದರು.
      ನಮ್ಮ ಗ್ರಾಮಗಳು ಮೊದಲಿನಿಂದಲೂ ಕಸ ವಿಲೇವಾರಿಯಲ್ಲಿ ತನ್ನದೇ ವಿಧಾನಗಳನ್ನು ಅನುಸರಿಸಿಕೊಂಡಿದ್ದವು. ಆದರೆ ಯಾವಾಗ ಪ್ಲಾಸ್ಟಿಕ್ ಉತ್ಪನ್ನಗಳು ಗ್ರಾಮಗಳನ್ನು ಪ್ರವೇಶಿಸಿದವೋ ಅಂದಿನಿಂದ ಗ್ರಾಮನೈರ್ಮಲ್ಯಕ್ಕೆ ಭಾರಿ ಅಪಾಯ ಆರಂಭಗೊಂಡಿತು. ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಒಂದೇ ಪರ್ಯಾಯ ಎಂಬಂತಾಗಿ ಎಲ್ಲ ರೀತಿಯ ಸಮಸ್ಯೆಗಳು ತಲೆಯೆತ್ತಿದವು. ಸಾಕಷ್ಟು ಪ್ರಯತ್ನಗಳ ಬಳಿಕ ಇಂದು ಬಯಲುಶೌಚಾಲಯ ಸಮಸ್ಯೆ ಶೇ.90 ರಷ್ಟು ಬಗೆಹರಿದಂತಾಗಿದ್ದರೂ, ಈ ಕಸದ ಸಮಸ್ಯೆ ಮಾತ್ರ ಇನ್ನೂ ಬೃಹದಾಕಾರವಾಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು. 
 
     ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಅನುಷ್ಠಾನ ಕುರಿತು ಜಿಲ್ಲೆಯಲ್ಲಿ ಆಯ್ಕೆಯಾಗಿರುವ 37 ಗ್ರಾಮ ಪಂಚಾಯಿತಿಗಳು ಈ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ, ಮುಂದಿನ ಹಂತಕ್ಕೆ ಮಾದರಿ ಆಗಬೇಕೆಂದು ಮಾಧುಸ್ವಾಮಿ ಆಶಿಸಿದರು. 
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಸ ಎಂಬುದು ಇಂದು ಬಹುದೊಡ್ಡ ಗಂಡಾಂತರವಾಗಿ ಕಾಡುತ್ತಿದೆ. ಕಸವಿಲೇವಾರಿ ಸಮರ್ಪಕವಾಗಿ ಆಗದಿದ್ದರೆ ಇಡೀ ಊರು-ಊರುಗಳೇ ಸಂಕಷ್ಟಕ್ಕೀಡಾಗುತ್ತದೆ. ಆದ್ದರಿಂದ ವೈಜ್ಞಾನಿಕವಾಗಿ ಹಾಗೂ ಸುಸ್ಥಿರವಾಗಿ ಕಸವಿಲೇವಾರಿ ಆಗಬೇಕಾಗಿದೆ ಎಂದು ಕಳಕಳಿಯಿಂದ ಹೇಳಿದರು. ಕಸ ಎಂಬುದು ವ್ಯರ್ಥವಲ್ಲ, ಅದು ಲಾಭದಾಯಕವೂ ಆಗಿದ್ದು ಇದರತ್ತ ಗಂಭೀರವಾಗಿ ಆಲೋಚಿಸಬೇಕು ಎಂದು ಅಭಿಪ್ರಾಯಪಟ್ಟರು. 
    ಮುಖ್ಯಅತಿಥಿ ಜಿ.ಪಂ. ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಕವರ್‍ಗಳೂ ಕಸದ ಮೂಲಕ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದು, ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರತೆಗೆಯುವುದನ್ನು ನೋಡಿದಾಗ ದುಃಖವುಂಟಾಗುತ್ತದೆ ಎಂದು ಉದ್ಗರಿಸುತ್ತ, ಗ್ರಾಮ ಮಟ್ಟದಲ್ಲಿ ಕಸ ವಿಲೇವಾರಿಗೆ ವಿಶೇಷವಾಗಿ ಮಹಿಳೆಯರು ಆದ್ಯ ಗಮನ ಕೊಡಬೇಕು ಎಂದು ಆಶಿಸಿದರು. 
    ಜಿಲ್ಲಾಧಿಕಾರಿ ಡಾ.ಕೆ. ರಾಕೇಶ್ ಕುಮಾರ್ ಮಾತನಾಡುತ್ತ, ಕಸ ವಿಲೇವಾರಿಯು ಕೇವಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲೂ ಯಶಸ್ವಿಯಾಗಿ ನಡೆಯಬೇಕೆಂಬುದು ಈ ಯೋಜನೆಯ ಆಶಯವಾಗಿದ್ದು, ಇದಕ್ಕೆ ಎಲ್ಲರ ಸಹಕಾರ ಅವಶ್ಯವೆಂದರು. 
  ಪ್ರಾಸ್ತಾವಿಕವಾಗಿ ಮಾತನಾಡಿದ ಜಿ.ಪಂ. ಸಿಇಓ ಶುಭ ಕಲ್ಯಾಣ್, ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 37 ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿ, ಅವುಗಳ ಕ್ರಿಯಾಯೋಜನೆ ಅನುಮೋದನೆಗೊಂಡಿದೆ. ಈ ಯೋಜನೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಗ್ರಾಮ ನೈರ್ಮಲ್ಯಕ್ಕೆ ಎಲ್ಲರೂ ಸಹಕರಿಸಬೇಕು ಎಂದರು. 
ಮೂತ್ರದ ಬಂಕ್ ಬರಲಿದೆ
     ಇದಕ್ಕೂ ಮೊದಲು ಪರಿಸರ ತಜ್ಞ ಗುರುದೇವ್ ಮಾತನಾಡಿ, ಕಸದಲ್ಲಿ ವ್ಯರ್ಥ ಎಂಬುದು ಇಲ್ಲವೇ ಇಲ್ಲ ಎನ್ನುತ್ತ ಸ್ವೀಡನ್ ದೇಶದ ಉದಾಹರಣೆ ನೀಡಿದರು. ಸ್ವೀಡನ್ ದೇಶದಲ್ಲಿ ಕಸ ಉತ್ಪತ್ತಿ ಕಡಿಮೆ. ಲಭ್ಯ ಕಸವನ್ನು ವಿವಿಧ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಳ್ಳ ಲಾಗುತ್ತಿದೆ. ಆದ್ದರಿಂದ ಆ ದೇಶ ಇನ್ನೊಂದು ದೇಶದಿಂದ ಕಸವನ್ನು ಆಮದು ಮಾಡಿಕೊಳ್ಳುತ್ತದೆ. ಆ ಕಸದಿಂದ ವಿದ್ಯುತ್ ಉತ್ಪಾದನೆಯನ್ನೂ ಮಾಡುತ್ತದೆ. ಹೀಗೆ ಅಲ್ಲಿ ಕಸ ಎಂಬುದು ಅಮೂಲ್ಯವಸ್ತು ಆಗಿದೆ.
      ಆ ದೇಶದಲ್ಲಿ ಮನುಷ್ಯನ ಮೂತ್ರವನ್ನೂ ಸಂಸ್ಕರಿಸಿ, ಕೃಷಿಗೆ ಬಳಸಿ ಯಶಸ್ಸು ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ ಬಂಕ್‍ಗಳಂತೆ ಮೂತ್ರದ ಬಂಕ್‍ಗಳು ಅಸ್ತಿತ್ವಕ್ಕೆ ಬಂದರೂ ಅಚ್ಚರಿಯಿಲ್ಲ. ಮೂತ್ರವನ್ನು ಹಣ ನೀಡಿ ಖರೀದಿಸುವ ದಿನಗಳು ಬರಲಿವೆ ಎಂದು ಅನೇಕ ಉದಾಹರಣೆಗಳೊಂದಿಗೆ ವಿವರಿಸಿದರು. 
     ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಮಾತನಾಡಿದರು. ಜಿ.ಪಂ. ಸದಸ್ಯರುಗಳಾದ ವೈ.ಎಚ್.ಹುಚ್ಚಯ್ಯ, ಪ್ರಕಾಶ್, ಲಕ್ಷ್ಮೀನರಸಯ್ಯ, ಭಾಗ್ಯ ರಮೇಶ್ ಗೌಡ, ಶಿವಪ್ಪ, ಕೆ.ನರಸಿಂಹಮೂರ್ತಿ ಮೊದಲಾದವರು ವೇದಿಕೆಯಲ್ಲಿದ್ದರು. ರಮೇಶ್ ಸ್ವಾಗತಿಸಿದರು. ಸಮಾರಂಭಕ್ಕೂ ಮೊದಲು ಘನತ್ಯಾಜ್ಯ ವಿಲೇವಾರಿಗೆ ಆಯ್ಕೆಯಾದ ಗ್ರಾಮ ಪಂಚಾಯತ್‍ಗಳ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ಸಚಿವ ಮಾಧುಸ್ವಾಮಿ ಚಾಲನೆ ನೀಡಿದರು. ಘನತ್ಯಾಜ್ಯ ವಿಲೇವಾರಿ ಕುರಿತ ಪ್ರಾತ್ಯಕ್ಷಿತೆ ಹಾಗೂ ವಸ್ತುಪ್ರದರ್ಶನದ ಸ್ಟಾಲ್‍ನ್ನು ಜಿ.ಪಂ. ಅಧ್ಯಕ್ಷೆ ಎಂ.ಲತಾ ರವಿಕುಮಾರ್ ಉದ್ಘಾಟಿಸಿದರು. ಜಿಲ್ಲೆಯ ತಾ.ಪಂ./ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಭಾಗವಹಿಸಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link