ತುಮಕೂರು
ತುಮಕೂರು-ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯಿಂದ ವೇದಿಕೆ ವತಿಯಿಂದ ಭಾನುವಾರ ಬೆಳಗ್ಗೆ ಸಂಸತ್ತಿಗೆ ನೂತನವಾಗಿ ಆಯ್ಕೆಯಾಗಿರುವ ಸಂಸದ ಜಿ.ಎಸ್.ಬಸವರಾಜು ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೈಲ್ವೇ ಇಲಾಖೆಯಿಂದ ತುಮಕೂರಿಗೆ ಅಗತ್ಯವಾಗಿರುವ ಕಾರ್ಯಗಳ ಬಗ್ಗೆ ಮನವಿ ಮೂಲಕ ಮನವರಿಕೆ ಮಾಡಿಕೊಡಲಾಯಿತು. ಮನವಿಗೆ ಸ್ಪಂದಿಸಿದ ಸಂಸದರು, ರೈಲ್ವೇ ಸಚಿವರುಗಳೊಂದಿಗೆ ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದರು ಎಂದು ವೇದಿಕೆಯ ಕಾರ್ಯದರ್ಶಿ ಕರಣಂ ರಮೇಶ್ ತಿಳಿಸಿದ್ದಾರೆ.
ಪದಾಧಿಕಾರಿಗಳೊಂದಿಗೆ ಮಾತನಾಡಿರುವ ಸಂಸದರು, ತುಮಕೂರಿಗೆ ಬೆಂಗಳೂರಿನಿಂದ ರಾತ್ರಿ ನಿಲುಗಡೆ ರೈಲು ಆರಂಭಿಸುವ ಬಗ್ಗೆ ಈ ಹಿಂದೆ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ರೈಲ್ವೇ ಮಂಡಳಿ ಅನುಮೋದನೆ ನೀಡಿದ್ದು, ಸಾಧ್ಯವಾದಷ್ಟೂ ಬೇಗ ತುಮಕೂರಿಗೆ ರಾತ್ರಿ ನಿಲುಗಡೆ ರೈಲು ಸಂಚಾರ ಆರಂಭಗೊಳ್ಳಲಿದೆ. ಇದರೊಂದಿಗೆ ತುಮಕೂರಿಗೆ ಮೆಟ್ರೋ ರೈಲು ಸಂಚಾರ ಆರಂಭಕ್ಕೆ ರೈಲ್ವೇ ಸಚಿವರುಗಳಾದ ಪಿಯೂಶ್‍ಗೋಯಲ್ ಹಾಗೂ ಸುರೇಶ್‍ಅಂಗಡಿಯವರೊಂದಿಗೆ ಮಾತನಾಡುತ್ತೇನೆ. ಚಿಕ್ಕಬಾಣಾವರ ತುಮಕೂರು ನಡುವಿನ ರೈಲು ಮಾರ್ಗ ವಿದ್ಯುದೀಕರಣಕ್ಕೆ ಅನುಮೋದನೆ ದೊರೆತಿದೆ. ಅನುಷ್ಠಾನದಲ್ಲಿ ವಿಳಂಬವಾಗುತ್ತಿದ್ದು, ಈ ಬಾರಿಯ ರೈಲ್ವೇ ಬಜೆಟ್ಟಿನಲ್ಲಿ ಸೇರಿಸಲು ಮನವಿ ಮಾಡುತ್ತೇನೆ ಎಂದು ನೂತನ ಸಂಸದರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪದಾಧಿಕಾರಿಗಳು, ಯಶವಂತಪುರ-ಕಾರವಾರ ರೈಲಿಗೆ ಲಿಂಕ್ ಮಾಡುವಂತೆ ತುಮಕೂರಿನಿಂದ ಹಾಸನಕ್ಕೆ ಹೊಸ ರೈಲು ಸಂಚಾರ ಆರಂಭಿಸಬೇಕು. ಇದರಿಂದ ಕುಕ್ಕೆ, ಧರ್ಮಸ್ಥಳ, ಶೃಂಗೇರಿ ಮತ್ತಿತರ ಪುಣ್ಯಕ್ಷೇತ್ರಗಳಿಗೆ ತೆರಳಲು ತುಮಕೂರು ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ತುಮಕೂರು ನಿಲ್ದಾಣದಲ್ಲಿ ವೃದ್ಧರು, ಮಹಿಳೆಯರು ಹಾಗೂ ವಿಶೇಷವಾಗಿ ವಿಕಲಚೇತನರಿಗೆ ಅನುಕೂಲವಾಗುವಂತೆ ಪ್ಲಾಟ್‍ಫಾರಂಗಳಲ್ಲಿ ಲಿಫ್ಟ್ ಅಳವಡಿಸಬೇಕು. ಈ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ ಟೆಂಡರ್ ಕರೆದಿದೆ. ಈ ಕಾರ್ಯ ಶೀಘ್ರವಾಗಿ ಅನುಷ್ಠಾನಗೊಳಿಸಿ ಅನುಕೂಲ ಮಾಡಿಕೊಡಬೇಕು.
ಯಶವಂತಪುರ-ಶಿವಮೊಗ್ಗ ನಡುವೆ ಇತ್ತೀಚೆಗೆ ಆರಂಭಗೊಂಡಿರುವ ಶತಾಬ್ಧಿ ರೈಲನ್ನು ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್‍ನ್ನಾಗಿ ಬದಲಾಯಿಸಿದಲ್ಲಿ ತುಮಕೂರು ನಾಗರಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತಾವು ಸಚಿವರೊಂದಿಗೆ ಮಾತನಾಡಬೇಕು. ತುಮಕೂರು ರೈಲು ನಿಲ್ದಾಣದಲ್ಲಿ ದ್ವಿಚಕ್ರವಾಹನ ನಿಲುಗಡೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಹು ಅಂತಸ್ತಿನ ವಾಹನ ನಿಲ್ದಾಣ ನಿರ್ಮಿಸಬೇಕು.
ಜೊತೆಗೆ ತುಮಕೂರು ರೈಲು ನಿಲ್ದಾಣಕ್ಕೆ ನಿಗದಿತ ವೇಳೆಯಲ್ಲಿ ನಗರ ಸಾರಿಗೆ ಬಸ್‍ಗಳ ಸಂಚಾರ ಆರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಂತಾಗಿ ಹತ್ತಾರು ಬೇಡಿಕೆಗಳ ಮನವಿಯನ್ನು ಸಂಸದರಿಗೆ ಅರ್ಪಿಸಲಾಗಿದೆ. ವೇದಿಕೆಯ ಎಲ್ಲ ಬೇಡಿಕೆಗಳ ಈಡೇರಿಕೆಗೆ ನೂತನ ಸಂಸದರು ಪೂರಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷೆ ಬಾ.ಹ. ರಮಾಕುಮಾರಿ , ಪ್ರಧಾನ ಕಾರ್ಯದರ್ಶಿ ಕರಣಂರಮೇಶ್, ಹಿರಿಯ ಉಪಾಧ್ಯಕ್ಷ ಪರಮೇಶ್ವರ್, ಖಜಾಂಚಿ ಆರ್. ಬಾಲಾಜಿ ಮತ್ತು ನಿರ್ದೇಶಕರಾದರ ರಘೋತ್ತಮರಾವ್, ಸಿ.ನಾಗರಾಜ್, ಮಾಧವಮೂರ್ತಿಗುಡಿಬಂಡೆ, ರಘುಎಂ.ಆರ್., ಹರೀಶ ಹಾಗೂ ರಾಮಾಂಜನೇಯ ಹಾಜರಿದ್ದರು.