ಬಿಜೆಪಿಗೆ 22 ಕ್ಷೇತ್ರಗಳಲ್ಲಿ ಗೆಲುವು ನಿಶ್ಚಿತ : ಈಶ್ವರಪ್ಪ

ಚಿತ್ರದುರ್ಗ

     ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ರಾಜ್ಯದಲ್ಲಿ 20 ರಿಂದ 25 ಸ್ಥಾನಗಳನ್ನು ಗೆದ್ದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

     ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಕೇವಲ ಪ್ರಧಾನಿ ಅಭ್ಯರ್ಥಿಯಾಗಿದ್ದರು. ಆಗ ಬಿಜೆಪಿ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿದಿತ್ತು. ಈಗ ಪ್ರಧಾನಿಯಾಗಿ ಐದು ವರ್ಷ ಉತ್ತಮ ಆಡಳಿತ ನೀಡಿದ್ದಾರೆ. ರೈತರು, ಯುವಕರು, ದಲಿತರು, ಹಿಂದುಳಿದವರು ಮತ್ತೆ ಮೋದಿ ಪ್ರಧಾನಿ ಆಗಬೇಕೆಂದು ಬಯಸುತ್ತಿದ್ದಾರೆ. ಹಾಗಾಗಿ ಈ ಬಾರಿ ನಿರೀಕ್ಷೆಗೆ ಮೀರಿ ಗೆಲುವು ಸಾಧಿಸುವ ಭರವಸೆ ಇದೆ ಎಂದರು.

     ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸಂಪೂರ್ಣ ವಿಫಲವಾಗಿದೆ. ಲೋಕಸಭಾ ಚುನಾವಣೆ ನಂತರ ಯಾವುದೇ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಕಾಂಗ್ರೆಸ್‍ನಲ್ಲಿ ಆಂತರಿಕ ಭಿನ್ನಾಭಿಪ್ರಾಯ ಹೆಚ್ಚಾಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ಸಂಘರ್ಷ ನಡೆಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸುತ್ತಿರುವ ಮತದಾರ ನಿರೀಕ್ಷೆಗೂ ಮೀರಿ ಬಿಜೆಪಿಗೆ ಬೆಂಬಲ ನೀಡಲಿದ್ದಾನೆ ಎಂದು ಹೇಳಿದರು.

     ಸಿದ್ದರಾಮಯ್ಯ ಹಾಗೂ ದೇವೇಗೌಡರು ಮೇಲ್ನೋಟಕ್ಕೆ ಒಂದಾಗಿದ್ದಾರೆ. ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರು ಕಾಂಗ್ರೆಸ್ ಪಕ್ಷದವರು ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿಲ್ಲ. ಹಾಗಾಗಿ ನಾವು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವುದಿಲ್ಲ ಎಂದಿದ್ದರು. ಹೆಚ್.ಡಿ.ರೇವಣ್ಣ ಭಾಗವಹಿಸಿದ್ದ ಸಭೆಯಲ್ಲಿ ಕಾರ್ಯಕರ್ತರು ‘ಮೋದಿ ಮೋದಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇವೆಲ್ಲವನ್ನು ಗಮನಿಸಿದಲ್ಲಿ ಮೈತ್ರಿಗಳ ನಡುವೆ ಭಿನ್ನಾಭಿಪ್ರಾಯ ಮೂಡಿರುವುದು ತಿಳಿದುಬರುತ್ತದೆ ಎಂದರು.

     ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನರೇಂದ್ರ ಮೋದಿಯನ್ನು ವಿಶ್ವದ ಇತರೆ ರಾಷ್ಟ್ರಗಲು ಸಹ ಒಪ್ಪಿಕೊಂಡಿವೆ. ಅಂತಹ ನಾಯಕ ನಮಗೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಅವರ ಸಾಧನೆ, ಕಾರ್ಯ ವೈಖರಿಯಿಂದ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಅವರ ಹೆಸರು ಇಟ್ಟುಕೊಂಡು ಮತ ಕೇಳುತ್ತೇವೆ. ಕಾಂಗ್ರೆಸ್‍ನವರು ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತಾರೆ. 

     ವಿಧಾನಸಭೆಯಲ್ಲಿ ಮತದಾರರು ಯಾರಿಗೆ ಎಷ್ಟು ಸ್ಥಾನ ನೀಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು. ಕಳೆದ ಚುನವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಲ್ಲಿ ನಾನು ದೇಶ ಬಿಟ್ಟು ಹೋಗುತ್ತೇನೆಂದು ಹೆಚ್.ಡಿ.ದೇವೇಗೌಡ ಹೇಳಿದ್ದರು. ಆದರೆ ಹೋಗಲಿಲ್ಲ. ಇನ್ನು ಸಿದ್ದರಾಮಯ್ಯ ಹೇಳುವುದು ಯಾವುದೂ ಆಗುವುದಿಲ್ಲ. ವಿಧಾನಸಭೆ ಚುನಾವಣೆಗೆ ಮೊದಲು ನಾನೇ ಮುಂದಿನ ಮುಖ್ಯಮಂತ್ರಿ ಎಂದಿದ್ದರು, ಆಗಲಿಲ್ಲ. ಅವರಪ್ಪನಾಣೆ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಎಂದಿದ್ದರು, ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ಈಗ ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಎನ್ನುತ್ತಿದ್ದಾರೆ. ಮೋದಿ ಪ್ರಧಾನಿ ಆಗುತ್ತಾರೆ ನೋಡಿ ಎಂದರು.

      ಬಿಜೆಪಿ ಕೋಮುವಾದಿ ಪಕ್ಷ ಎನ್ನುತ್ತಾರೆ. ಆದರೆ ಜೆಡಿಎಸ್‍ನ ಶಿವರಾಮೇಗೌಡ ಮಂಡ್ಯದಲ್ಲಿ ಸುಮಲತಾ ಅವರು ಒಕ್ಕಲಿಗರಲ್ಲ ಎಂದು ಹೇಳುವುದು ಸರಿಯೇ. ಸಿದ್ದರಾಮಯ್ಯ ಕುರುಬರು ನನಗೆ ಮತ ಹಾಕಿ ಎಂದು ಬಾದಾಮಿಯಲ್ಲಿ ಕೇಳಿದ್ದು ಸರಿಯೇ. ಈಗ ಕುರುಬರು ಸುಮಲತಾಗೆ ಮತ ಹಾಕಬೇಡಿ ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮಾಡುವುದು ಜಾತಿ ರಾಜಕಾರಣವಲ್ಲ. ಬಿಜೆಪಿ ರಾಷ್ಟ್ರೀಯತೆ ಬಗ್ಗೆ ಮಾತನಾಡಿದರೆ ಅದು ಕೋಮುವಾದ ಎಂದು ಕಿಡಿಕಾರಿದರು.

      ಈಶ್ವರಪ್ಪ ಒಬ್ಬ ಪೆದ್ದ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಪೆದ್ದ, ಯಾರು ಜಾಣ ಎಂಬುದನ್ನು ಜನರು ತೀರ್ಮಾನ ಮಾಡಬೇಕು. ಶಿವಮೊಗ್ಗದ ಜನರು ನನ್ನ ಬಗ್ಗೆ ತೀರ್ಮಾನ ಮಾಡಿದ್ದಾರೆ. ಆದರೆ ಚಾಮುಂಡೇಶ್ವರಿಯಲ್ಲಿ ಯಾರು ಪೆದ್ದ ಎಂಬುದನ್ನು ಜನರು ತೀರ್ಮಾನಿಸಿದ್ದಾರೆ ಎಂದು ಟಾಂಗ್ ನೀಡಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚುನಾವಣಾ ಪ್ರಭಾರಿ ಡಾ.ಶಿವಯೋಗಿಸ್ವಾಮಿ, ಸಹ ಪ್ರಭಾರಿ ಜಿ.ಎಂ.ಸುರೇಶ್, ಸಿದ್ದೇಶ್ ಯಾದವ್, ಸೂರನಹಳ್ಳಿ ವಿಜಯಕುಮಾರ್, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap