ತುರುವೇಕೆರೆ
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿನ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಮುರುಳಿಧರಹಾಲಪ್ಪ ಭವಿಷ್ಯ ನುಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮುಖಂಡರು, ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜಿನಾಮೆ ನೀಡಿದ ಶಾಸಕರು ಮುಂಬೈಗೆ ತೆರಳಿ ಸುಮಾರು ಎರಡು ತಿಂಗಳ ಕಾಲ ಕ್ಷೇತ್ರದ ಮತದಾರರ ಕೈಗೆ ಸಿಗದೆ ಯಾವುದೇ ಜನಪರವಾದ ಕೆಲಸ ಮಾಡದೆ ಮೋಜುಮಸ್ತಿಯಲ್ಲಿ ಕಾಲಕಳೆದಿದ್ದಾರೆ ಎಂದು ರಾಜ್ಯದ ಜನರಿಗೆ ಗೊತ್ತಿದೆ.
ರಾಜಿನಾಮೆ ನೀಡಿದ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿ ಪಕ್ಷದವರು, ಸುಪ್ರಿಂಕೋರ್ಟ್ ಬಂದ ಕೂಡಲೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಿಜೆಪಿ ಟಿಕೆಟ್ ಸಹ ನೀಡಲಾಗಿದೆ. ಪಕ್ಷಾಂತರ ಮಾಡಿದ ಎಲ್ಲಾ ಶಾಸಕರುಗಳಿಗೆ ಕ್ಷೇತ್ರದ ಮತದಾರರು ಸರಿಯಾದ ಪಾಠ ಕಲಿಸಲಿದ್ದಾರೆ. ಇದಕ್ಕೆ ಉದಾಹರಣೆ ಮಹಾರಾಷ್ಟ್ರ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದ ಯಾವೊಬ್ಬ ಶಾಸಕರು ಆಯ್ಕೆಯಾಗಿಲ್ಲ. ಅದೇ ರೀತಿ ಕರ್ನಾಟಕದಲ್ಲಿಯೂ ಸಹ ಮರುಕಳಿಸಲಿದೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಪಕ್ಷದಲ್ಲಿ ಗೊಂದಲ ಉಂಟು ಮಾಡಿ ರಾಜಿನಾಮೆ ನೀಡಿ ಬಿಜೆಪಿ ಪಕ್ಷ ಸೇರಿರುವ ಮಾಜಿ ಶಾಸಕರುಗಳು ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲಿಯೂ ಇಂತಹ ಬಂಡಾಯ ಬಾವುಟ ಹಾರಿಸಲಿದ್ದಾರೆ. ಬಿಜೆಪಿ ಮುಖಂಡರೆ, ಕಾರ್ಯಕರ್ತರೇ ಎಚ್ಚರ ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್, ಹಿರಿಯ ಮುಖಂಡ ಚೌದ್ರಿರಂಗಪ್ಪ, ವಿಶ್ವೇಶ್ವರಯ್ಯ, ಪಟ್ಟಣ ಪಂಚಾಯ್ತಿ ಸದಸ್ಯ ಯಜಮಾನ್ ಮಹೇಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್, ಪ್ರಸನ್ನಕುಮಾರ್, ಮುಖಂಡರಾದ ಎನ್.ಆರ್.ಜಯರಾಮ್, ಬುಗಡನಹಳ್ಳಿಕೃಷ್ಣಮೂರ್ತಿ, ಜೋಗಿಹಳ್ಳಿಶಿವರಾಜು, ಕಮಲ ಸ್ವರ್ಣಕುಮಾರ್, ನಂಜುಂಡಪ್ಪ, ದೇವರಾಜು ಸೇರಿದಂತೆ ಕಾರ್ಯಕರ್ತರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ