ದಾವಣಗೆರೆ :
ಮಹಾನಗರ ಪಾಲಿಕೆಯಲ್ಲಿ ವಾಮಮಾರ್ಗದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ತಕ್ಷಣವೇ ಸರ್ಕಾರ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕು. ಇಲ್ಲದಿದ್ದರೆ, ಹೈಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್‍ನಲ್ಲಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿದೆ. ಆದರೂ ಈ ವರೆಗೂ ರಾಜ್ಯಪತ್ರದಲ್ಲಿ ಪಾಲಿಕೆಯ ನೂತನ ಸದಸ್ಯರ ಹೆಸರನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿಲ್ಲ. ಈ ವರೆಗೂ ಪಾಲಿಕೆ ಸದಸ್ಯರ ಹೆಸರು ಗೆಜೆಟ್ ಸೇರದಿರಲು ಹಿಂದಿರುವ ಕಾರಣ ಏನು? ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಮಂತ್ರಿಗಳು ಉತ್ತರಿಸಬೇಕೆಂದು ಆಗ್ರಹಿಸಿದರು.
ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಜಿಲ್ಲಾ ಮಂತ್ರಿ, ಸಂಸದರು, ಶಾಸಕರು ಕಾಲಿಗೆ ಚಕ್ರ ಕಟ್ಟಿಕೊಂಡು ತೀರಗಾಡಿದರೂ ಬಿಜೆಪಿಗೆ ಜನಾದೇಶ ಸಿಕ್ಕಲ್ಲ. ಆದರೆ, ಕಾಂಗ್ರೆಸ್ 22 ಸ್ಥಾನಗಳನ್ನು ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈಗ ಮೇಯರ್ ಮತ್ತು ಉಪ ಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಿದರೆ, ದಾವಣಗೆರೆ ಪಾಲಿಕೆ ಕಾಂಗ್ರೆಸ್ ಕೈವಶವಾಗಿ ಬಿಜೆಪಿಗೆ ಅಧಿಕಾರ ತಪ್ಪಲಿದೆ ಎಂಬ ಏಕೈಕ ಕಾರಣಕ್ಕೆ ಬಿಜೆಪಿ ಸರ್ಕಾರ ಚುನಾವಣೆಗೆ ಅಧಿಸೂಚನೆ ಹೊರಡಿಸದೆ, ವಾಮಮಾರ್ಗದ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಕುರಿ-ಕೋಳಿಗಳಂತೆ ಖರೀದಿಸಿ ರಾಜ್ಯದಲ್ಲಿ ಬಿಜೆಪಿ ಅನೈತಿಕವಾಗಿ ಅಧಿಕಾರ ಹಿಡಿದಿರುವಂತೆ, ಪಕ್ಷೇತರ ಪಾಲಿಕೆ ಸದಸ್ಯರನ್ನು ಖರೀದಿಸಿ ಮಹಾನಗರ ಪಾಲಿಕೆಯಲ್ಲೂ ಅನೈತಿಕವಾಗಿ ಅಧಿಕಾರ ಹಿಡಿಯಲು ಬಿಜೆಪಿಯವರು ಹವಣಿಸುತ್ತಿದ್ದಾರೆ ಎಂದು ಅವರು ದೂರಿದರು.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತರಳಬಾಳು ಜಗದ್ಗುರುಗಳು ಯಾವುದೇ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬಹುಮತ ಬರುತ್ತದೆಯೊ ಆ ಪಕ್ಷವನ್ನು ಅಧಿಕಾರ ನಡೆಸಲು ಬಿಡಬೇಕೆಂಬ ಆಶಯ ವ್ಯಕ್ತಪಡಿಸಿದ್ದರು. ಬಿಜೆಪಿಯವರಿಗೆ ಶ್ರೀಗಳ ಮೇಲೆ ನಿಜಕ್ಕೂ ಗೌರವವಿದ್ದರೆ, ಅವರ ಆಶಯದಂತೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್ ಪಕ್ಷಕ್ಕೆ ಪಾಲಿಕೆಯಲ್ಲಿ ಆಡಳಿತ ನಡೆಸಲು ಬಿಡಬೇಕೆಂದು ಅವರು ಒತ್ತಾಯಿಸಿದರು.
ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲು ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಿ 20 ದಿನಗಳಾಗಿವೆ. ಅಲ್ಲದೆ, ಪಾಲಿಕೆ ಚುನಾವಣೆಯಾಗಿ ಎರಡು ತಿಂಗಳಿಗೂ ಹೆಚ್ಚು ಸಮಯವಾಗಿದೆ. ಆದ್ದರಿಂದ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಪ್ರಾದೇಶಿಕ ಆಯುಕ್ತರಿಗೆ, ಚುನಾವಣಾ ಆಯೋಗದ ಆಯುಕ್ತರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇಂದು ರಿಜಿಸ್ಟರ್ ಪೋಸ್ಟ್ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆಯ ಹಿರಿಯ ಸದಸ್ಯ ಎ.ನಾಗರಾಜ್ ಮಾತನಾಡಿ, ನಾವು ಪಾಲಿಕೆ ಸದಸ್ಯರುಗಳಾಗಿ ಆಯ್ಕೆಯಾಗಿ 2 ತಿಂಗಳು 8 ದಿನಗಳಾಯಿತು. ಪಾಲಿಕೆಯ ಎಲ್ಲಾ ಸದಸ್ಯರನ್ನು ಕರೆದು ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟು, ವಾರ್ಡ್‍ಗಳ ಅಭಿವೃದ್ಧಿಗೆ ಶ್ರಮಿಸಿ ಎಂಬುದಾಗಿ ಆಯುಕ್ತರಿಗೆ ಸಲಹೆ ನೀಡಿದರೂ ಸ್ಪಂದಿಸುತ್ತಿಲ್ಲ. ಮಾರ್ಚ್ 3, 4ರಂದು ನಗರ ದೇವತೆ ದುರ್ಗಾಂಭಿಕಾ ದೇವಿ ಜಾತ್ರೆ ಬರುತ್ತಿದೆ. ಇದಕ್ಕೆ ಸಿದ್ಧತೆ ಕೈಗೊಳ್ಳುವುದು ಯಾವಾಗ? ಎಂದು ಪ್ರಶ್ನಿಸಿದರು.
ಇನ್ನೋರ್ವ ಸದಸ್ಯ ಅಬ್ದುಲ್ ಲತಿಫ್ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಅಂಧ ದರ್ಬಾರ್ ನಡೆಯುತ್ತಿದೆ. ನಾವೊಬ್ಬ ಸದಸ್ಯರಾಗಿ ಸತ್ತವರ ಮನೆಗೆ ಒಂದು ಟ್ಯಾಂಕರ್ ನೀರು ಕಳುಹಿಸಿ ಎಂಬುದಾಗಿ ಸಲಹೆ ನೀಡಿದರೂ ಆಯುಕ್ತರನ್ನ ಕೇಳಿ, ಪತ್ರ ಬರೆಯಿರಿ ಎಂಬುದಾಗಿ ದರ್ಪ ಮೆರೆಯುತ್ತಿದ್ದಾರೆ. ಉನ್ನತ ಅಧಿಕಾರಿಗಳು ಇವರಿಗೆ ಪತ್ರ ಬರೆದ ಮೇಲೆಯೇ ಅವರ ಮನೆಗೆ ಟ್ಯಾಂಕರ್ ತೆಗೆದುಕೊಂಡು ಹೋಗುತ್ತಾರಾ? ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರುಗಳಾದ ದೇವರಮನಿ ಶಿವಕುಮಾರ್, ಮಂಜುನಾಥ್ ಗಡಿಗುಡಾಳ್, ಕೆ.ಚಮನ್‍ಸಾಬ್, ಸೈಯದ್ ಚಾರ್ಲಿ, ಯಶೋಧ ಉಮೇಶ್, ಪಾಮೇನಹಳ್ಳಿ ನಾಗರಾಜ್, ಕಾಂಗ್ರೆಸ್ ಮುಖಂಡರುಗಳಾದ ಶಿವಗಂಗಾ ಬಸವರಾಜ್, ನಂಜಾ ನಾಯ್ಕ, ಉದಯಕುಮಾರ್, ದಾದಾಪೀರ್, ಲಿಯಾಕತ್ ಅಲಿ, ಡಿ.ಶಿವಕುಮಾರ್, ವಿಜಯಕುಮಾರ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ