ತುಮಕೂರು
ಪೌರತ್ವ ತಿದ್ದುಪಡಿ ಮಸೂದೆ ಜಾರಿಯಿಂದ ಈ ದೇಶದ ಯಾರದೇ ಪೌರತ್ವ ಕಿತ್ತುಕೊಳ್ಳುವುದಿಲ್ಲ. ಇಲ್ಲಿನ ಮುಸ್ಲೀಮರು ಈ ದೇಶ ಬಿಟ್ಟು ಹೋಗಬೇಕಾಗಿಲ್ಲ. ಆದರೆ ಪಾಕಿಸ್ತಾನ, ಬಾಂಗ್ಲದಿಂದ ಬರುವವರಿಗೆ ಇಲ್ಲಿ ಅವಕಾಶವಿಲ್ಲ. ಈ ವಿಚಾರ ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಮುಖಂಡರಿಗೂ ತಿಳಿದಿದೆ. ಆದರೂ ಜನರಲ್ಲಿ ಗೊಂದಲ ಮೂಡಿಸಲು ತಪ್ಪು ತಿಳುವಳಿಕೆ ಹರಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಭಾನುವಾರ ಬೆಳಿಗ್ಗೆ ನಗರದ 26ನೇ ವಾರ್ಡಿನ ಅಶೋಕ ನಗರದಲ್ಲಿ ಪೌರತ್ವ ಕಾಯ್ದೆ ಪರ ಮನೆಮನೆಗೆ ತೆರಳಿ ಪ್ರಚಾರ ಮಾಡುವ ಅಭಿಯಾನ ಉದ್ಘಾಟಿಸಿದ ಸಚಿವರು, ಯಾರೇ ವಿರೋಧ ಮಾಡಿದರೂ ಈ ಕಾಯ್ದೆ ಹಿಂಪಡೆಯುವುದಿಲ್ಲ, ಜಾರಿ ಮಾಡಿಯೇ ತೀರುತ್ತೇವೆ, ದೇಶದ ಜನರ ಸುರಕ್ಷತೆ, ಸೌಕರ್ಯಕ್ಕಾಗಿ ಜಾರಿಗೆ ತರುವ ಈ ಕಾಯ್ದೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಾದ ಹಿಂದುಗಳು, ಜೈನರು ಸಿಕ್ಕರು, ಬೌದ್ಧರನ್ಮು ಎರಡನೇ ಪ್ರಜೆಗಳೆಂದು ಕಾಣಲಾಗುತ್ತಿದೆ.
ಈ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಸಹಿಸಲಾಗದೆ ಸಾವಿರಾರು ಜನ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದು ಬೀದಿ ಬದಿ ವಾಸ ಮಾಡುತ್ತಿದ್ದಾರೆ. ಅವರಿಗೆ ರಕ್ಷಣೆ ನೀಡಿ, ಆಶ್ರಯ ಕೊಡಬೇಕು ಎನ್ನುವ ಕಾರಣಕ್ಕೆ ಈ ಹಿಂದೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಪ್ರಸ್ತಾಪ ಮಾಡಿದ್ದರು, ಈಗ ಮೋದಿ ಸರ್ಕಾರ ಅದರ ಜಾರಿಗೆ ಮುಂದಾಗಿದೆ ಎಂದು ತಿಳಿಸಿದರು.
ಪಾಕಿಸ್ತಾನದಲ್ಲಿ ದೌರ್ಜನ್ಯ ಅನುಭವಿಸುತ್ತಿರುವ ಅಲ್ಲಿನ ಅಲ್ಪ ಸಂಖ್ಯಾತರ ಬಗ್ಗೆ ಏನೂ ಮಾತನಾಡದ ಕಾಂಗ್ರೆಸಿನವರು ಪಾಕಿಸ್ತಾನ, ಬಾಂಗ್ಲದಲ್ಲಿರುವ ಮುಸ್ಲೀಮರ ಪರ ಮಾತನಾಡುತ್ತಿದ್ದಾರೆ. ಇಂತಹ ಧೋರಣೆಗಳನ್ನು ಅನುಸರಿಸಿಕೊಂಡು ಈಗಾಗಲೇ ನೆಲಕಚ್ಚಿರುವ ಕಾಂಗ್ರೆಸ್ ,ಇದೇ ವರ್ತನೆ ಮುಂದುವರೆಸಿದರೆ ಈ ದೇಶದಿಂದಲೇ ತೊಲಗುತ್ತದೆ ಎಂದು ಸಚಿವ ಅಶೋಕ್ ಹೇಳಿದರು.
ಭಾರತದಲ್ಲಿ ವಾಸಿಸುವ ಮುಸ್ಲೀಮರು ಇಲ್ಲಿಯ ಪೌರರೇ, ಅವರನ್ನು ದೇಶ ಬಿಟ್ಟು ಓಡಿಸು ಉದ್ದೇಶದ ಕಾಯ್ದೆ ಇದಲ್ಲ. ಆದರೆ ಕಾಂಗ್ರೆಸ್, ಕಮ್ಯೂನಿಸ್ಟ್ ಮತ್ತಿತರ ಪಕ್ಷಗಳ ನಾಯಕರು ಓಟಿಗಾಗಿ ಈ ಕಾಯ್ದೆ ವಿರುದ್ಧ ಮುಸ್ಲೀಮರಲ್ಲಿ ತಪ್ಪು ಭಾವನೆ ತುಂಬಿ, ಅಪ್ರಪ್ರಚಾರ ಮಾಡುತ್ತಿದ್ದಾರೆ. ನಮ್ಮ ದೇಶ ನಿವಾಸಿಗಳಿಗೆ ರಕ್ಷಣೆ ಸಿಗಬೇಕು, ಇಲ್ಲಿನವರಿಗೆ ಸೌಲಭ್ಯ ದೊರೆಯಬೇಕು ಎಂಬ ಆಶಯದ ಪೌರತ್ವ ಕಾಯ್ದೆ ಜಾರಿಯಾಗಬೇಕು. ಅಕ್ರಮವಾಗಿ ಬಂದು ಇಲ್ಲಿ ನೆಲೆಸುವವರು ನಮ್ಮ ತೆರಗೆ ಹಣದಿಂದ ಅನುಕೂಲ ಪಡೆಯುವುದನ್ನು ನಾವು ವಿರೋಧಿಸುತ್ತೇವೆ. ಬಾಂಗ್ಲಾ, ಪಾಕಿಸ್ತಾನದಿಂದ ಸುಮಾರು ಎರಡು ಕೋಟಿ ಜನ ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದಾರೆ. ಅವರ ಜೊತೆ ಭಯೋತ್ಪಾದಕರೂ ಬಂದಿರಬಹುದು, ಅಂತಹವರಿಂದ ದೇಶದಲ್ಲಿ ಕೋಮುಗಲಭೆಗಳಾಗುತ್ತಿವೆ. ಅಂತಹವರು ದೇಶದಲ್ಲಿ ಇರಬೇಕಾ? ಎಂದು ಸಚಿವ ಅಶೋಕ್ ಪ್ರಶ್ನಿಸಿದರು.
ಕಾಂಗ್ರೆಸ್, ಮತ್ತಿತರ ಪಕ್ಷಗಳ ನಾಯಕರು ಪೌರತ್ವ ಕಾಯ್ದೆ ಬಗ್ಗೆ ದ್ವಂದ್ವ ಹೇಳಿಕೆ ನೀಡಿ, ಅಪಪ್ರಚಾರ ಮಾಡುವುದನ್ನು ಬಿಟ್ಟು ಕಾಯ್ದೆ ಜಾರಿಗೆ ಬೆಂಬಲ ನೀಡಬೇಕು. ಬಿಜೆಪಿಯಿಂದ ದೇಶಾದ್ಯಂತ ಪೌರತ್ವ ಕಾಯ್ದೆ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿ, ಅವರ ಬೆಂಬಲ ಪಡೆದು ಕಾಯ್ದೆ ಜಾರಿಗೊಳಿಸುವುದಾಗಿ ಸಚಿವ ಅಶೋಕ್ ಹೇಳಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಡಾ. ಎಂ.ಆರ್.ಹುಲಿನಾಯ್ಕರ್, ನಗರಪಾಲಿಕೆಯ 26ನೇ ವಾರ್ಡ್ ಸದಸ್ಯ ಮಲ್ಲಿಕಾರ್ಜುನ್ ಮತ್ತಿತರ ಮುಖಂಡರು ಹಾಜರಿದ್ದು, ಮನೆಮನೆಗೆ ತೆರಳಿ ಕರಪತ್ರ ಹಂಚಿ ಪೌರತ್ವ ಕಾಯ್ದೆ ಪರ ಅರಿವು ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ