ಎಪಿಎಂಸಿಯಲ್ಲಿ ರೈತರಿಗೆ ತೂಕದಲ್ಲಿ ವಂಚನೆ…!!

ಕೊಟ್ಟೂರು

         ಪಟ್ಟಣದಲ್ಲಿ ಕೆಲ ವ್ಯಾಪಾರಿಗಳು ಹಳೆ ಮಾದರಿ ತೂಕದಲ್ಲಿ ಧವಸ ಧಾನ್ಯಗಳನ್ನು ಖರೀದಿಸಿ ತೂಕದಲ್ಲಿ ರೈತರಿಗೆ ವಂಚಿಸುತ್ತಿದ್ದಾರೆ ಎಂದು ಕರವೇ ತಾಲೂಕು ಅಧ್ಯಕ್ಷ(ಪ್ರವೀಣ ಶೆಟ್ಟಿ ಬಣ) ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ತೋಟದ ರಾಮಣ್ಣ ಆರೋಪಿಸಿದ್ದಾರೆ.

        ಪಟ್ಟಣದಲ್ಲಿ ಶನಿವಾರ ತೂಕದಲ್ಲಿ ರೈತರಿಗೆ ವಂಚಿಸುವ ವ್ಯಾಪಾರಿಗಳಿಗೆ ಕ್ರಮ ಕೈಗೊಳ್ಳಬೇಕೆಂದು ಎಪಿಎಂಸಿ ಕಾರ್ಯದರ್ಶಿ ಹೀರೆಮಠ ಅವರಿಗೆ ಮನವಿ ಸಲ್ಲಿಸಿದರು.

        ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದಲ್ಲಿ ಮುಖ್ಯವಾಗಿ ಉಜ್ಜಿನಿ ರಸ್ತೆಯಲ್ಲಿರುವ ವ್ಯಾಪಾರಿಗಳು ಇಂದಿಗೂ ಹಳೆ ಕಾಲದ ತೂಕದಲ್ಲಿ ರೈತರಿಂದ ಮಾಲನ್ನು ಖರೀದಿಸುತ್ತಾರೆ.

        50 ಕೆ.ಜಿ. ತೂಕವಿರುವ ಮಾಲಿನಲ್ಲಿ ಕನಿಷ್ಟ ನಾಲ್ಕೈದು ಕೆ.ಜಿ. ಮೋಸ ಮಾಡುತ್ತಿದ್ದಾರೆ ಎಂದು ಎಪಿಎಂಸಿ ಕಾರ್ಯದರ್ಶಿ ಮುಂದೆಯೇ ವ್ಯಾಪಾರಿಗಳು ರೈತರನ್ನು ವಂಚಿಸುತ್ತಿರುವುದನ್ನು ಹೇಳಿದರು.

        ರೈತರಿಗೆ ಆಗುತ್ತಿರುವ ವಂಚನೆ ಕುರಿತು ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಗುಮಾಸ್ತ ಬಸವರಾಜ್ ಅವರಿಗೆ ಮನವಿ ಕೊಟ್ಟು ಎಂಟು ದಿವಸಗಳಾದರೂ ಕಾರ್ಯದರ್ಶಿಯಾದ ನಿಮಗೆ ತಲುಪಿಸಿಲ್ಲವೆಂದರೆ ರೈತರ ಬಗ್ಗೆ ನಿರ್ಲಕ್ಷ್ಯೆ ವ್ಯಾಪಾರಿಗಳ ಮೇಲೆ ಪ್ರೀತಿ ತೋರಿಸುತ್ತದೆ ಎಂದು ಹೇಳಿದರು.

        ರೈತರಿಗೆ ಮೋಸವಾಗಬಾರದು ಎಂದು ಸರ್ಕಾರ ಎಲೆಕ್ಟ್ರಾನಿಕ್ಸ್ ತೂಕದ ಯಂತ್ರ ಅಳವಡಿಸಬೇಕು ಎಂದು ಕಡ್ಡಾಯ ಮಾಡಿದೆ. ವ್ಯಾಪಾರಿಗಳು ಇಂದಿಗೂ ಎಲೆಕ್ಟ್ರಾನಿಕ್ಸ್ ತೂಕದ ಯಂತ್ರವನ್ನು ಅಳವಡಿಸಿಲ್ಲ. ಇದು ಎಪಿಎಂಸಿ ಅಧಿಕಾರಿಗಳಿಗೂ ಗೊತ್ತಿದ್ದು ಜಾಣ ಮೌನ ನಮಗೆ ಅರ್ಥವಾಗುತ್ತದೆ ಎಂದು ಕಾರ್ಯದರ್ಶಿ ಹೀರೆಮಠ ಅವರಿಗೆ ಖಾರವಾಗಿಯೇ ಪ್ರಶ್ನೆ ಮಾಡಿದರು.

       ಕಡ್ಡಾಯವಾಗಿ ವ್ಯಾಪಾರಿಗಳು ಎಲೆಕ್ಟ್ರಾನಿಕ್ಸ್ ತೂಕದ ತಂತ್ರದ ಮೂಲಕ ವ್ಯಾಪಾರ ಮಾಡಬೇಕು. ಎಲೆಕ್ಟ್ರಾನಿಕ್ಸ ತೂಕದ ಯಂತ್ರ ಇಲ್ಲದ ವ್ಯಾಪಾರಿಗಳಿಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕರವೇ ಹಾಗೂ ರೈತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.

       ಮನವಿ ಸ್ವೀಕರಿಸಿದ ಎಪಿಎಂಸಿ ಕಾರ್ಯದರ್ಶಿ ಹೀರೆಮಠ ಎಲೆಕ್ಟ್ರಾನಿಕ್ಸ್ ತೂಕದ ಯಂತ್ರ ಇಲ್ಲದೆ ವ್ಯಾಪಾರಿಗಳಿಗೆ ನೋಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

      ಕರವೇ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯ್ತಿ ಸದಸ್ಯ ತೋಟದ ರಾಮಣ್ಣ ಅವರೊಂದಿಗೆ ರೈತರಾದ ಬೋರನಹಳ್ಳಿ ಹಾಲಪ್ಪ, ತಳವಾರ ಚೌಡಪ್ಪ, ಬೆಣ್ಣಿಹಳ್ಳಿ ಅಂಜಿನಪ್ಪ, ಜಾಗಟಗೇರೆ ತಾತಪ್ಪ, ಕೆ. ಸುಭಾನ್ ಸಾಹೇಬ್ ಮುಂತಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link