ಏನಾಗುತ್ತಿದೆ ವಶಪಡಿಸಿಕೊಳ್ಳಲಾಗುತ್ತಿರುವ ಪ್ಲಾಸ್ಟಿಕ್…?

ಸಮಾಜದಲ್ಲಿ ಕೇಳಿ ಬರುತ್ತಿವೆ ವಿವಿಧ ಗುಮಾನಿಗಳು : ಅಧಿಕಾರಿಗಳ ಸ್ಪಷ್ಟನೆ ಏನು..?

ತುಮಕೂರು:

ವಿಷೇಶ ವರದಿ:ರಾಕೇಶ್.ವಿ. ತುಮಕೂರು

       ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಿಂದ ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾಗೂ ಮಾನವರ ಆರೋಗ್ಯಕ್ಕೂ ಹಾನಿ ಉಂಟಾಗುತ್ತದೆ ಎಂಬ ಕಾರಣದಿಂದ ಸರ್ಕಾರವು ಪ್ಲಾಸ್ಟಿಕ್ ನಿಷೇಧ ಮಾಡಿ ಆದೇಶ ಹೊರಡಿಸಿತ್ತು. ಅದು ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ನಿಧಾನಗತಿಯಲ್ಲಿ ಬರುತ್ತಿದ್ದು, ನಗರ ಪಾಲಿಕೆಗಳಿಂದ ವಶ ಪಡಿಸಿಕೊಳ್ಳುತ್ತಿರುವ ಪ್ಲಾಸ್ಟಿಕ್ ಎಲ್ಲಿಗೆ ಹೋಗುತ್ತಿದೆ ಎಂಬುದು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಸಂಶಯವಾಗಿದೆ.

      ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‍ಗಳು, ಭಿತ್ತಿ ಪತ್ರಗಳು, ತೋರಣಗಳು, ಫ್ಲೆಕ್ಸ್‍ಗಳು, ಬಾವುಟಗಳು, ಪ್ಲಾಸ್ಟಿಕ್ ತಟ್ಟೆಗಳು, ಪ್ಲಾಸ್ಟಿಕ್ ಲೋಟಗಳು, ಮದುವೆ ಸಮಾರಂಭಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್ ಹಾಳೆಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಜೊತೆಗೆ ಊಟ ಪಾರ್ಸಲ್ ಮಾಡುವ ಕವರ್‍ಗಳಿಂದ ಪ್ರಾಣಿಗಳಿಗೂ ವಿವಿಧ ತೊಂದರೆಗಳು ಕಾಡುತ್ತಿವೆ. ನೀರಿಗೆ ಎಸೆಯುವ ಪಾಸ್ಟಿಕ್‍ನಿಂದ ಜಲಚರಗಳಿಗೂ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ಲಾಸ್ಟಿಕ್ ನಿಷೇಧ ಮಾಡಿ 2015ರ ಅಕ್ಟೋಬರ್ ತಿಂಗಳಿನಲ್ಲಿ ಆದೇಶ ಹೊರಡಿಸಿದೆ. ಆದರೆ ಅದು ಎಲ್ಲಾ ಜಿಲ್ಲೆಗಳಲ್ಲಿ ಅನುಷ್ಠಾನ ಮಾಡುವಲ್ಲಿ ವಿಳಂಭ ಆಗುತ್ತಿದೆ. ಆದರೆ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಶೇ.75ರಷ್ಟು ನಿಷೇಧವಾದರೂ ಅಲ್ಲಲ್ಲಿ ಕದ್ದು ಮುಚ್ಚಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದು ನೋಡಬಹುದಾಗಿದೆ.

ಸಣ್ಣ ವ್ಯಾಪಾರಿಗಳ ಆರೋಪ

      ನಗರದ ಅಲ್ಲಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡುವವರ ಮೇಲೆ ಪಾಲಿಕೆಯ ಅಧಿಕಾರಿಗಳು ದಬ್ಬಾಳಿಕೆ ನಡೆಸುತ್ತಾರೆ. ಮಂಡಿಪೇಟೆಯಲ್ಲಿ ಅನೇಕ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅದರ ಬಗ್ಗೆ ಯಾರೂ ನೋಡುವುದೇ ಇಲ್ಲ. ಕೇವಲ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹೆಚ್ಚಿನ ದಂಡ ವಿಧಿಸಲಾಗುತ್ತಿದೆ. ದಿನಪೂರ್ತಿ ವ್ಯಾಪಾರ ನಡೆಸಿದರೂ ಸಿಗುವ ಹಣ ಐನೂರರಿಂದ ಎಂಟು ನೂರುವರೆಗೆ. ಆದರೆ ಪಾಲಿಕೆ ಅಧಿಕಾರಿಗಳು ಸಾವಿರಾರು ರೂ.ಗಳ ದಂಡ ವಿಧಿಸಿದರೆ ಹೇಗೆ ಎಂಬುದು ಸಣ್ಣ ವ್ಯಾಪಾರಸ್ಥರ ಆರೋಪವಾಗಿದೆ.

ವಶ ಪಡಿಸಿಕೊಂಡ ಪ್ಲಾಸ್ಟಿಕ್ ಹಾಗೂ ಹಾಕಿದ ದಂಡ

     08-06-2018ರಿಂದ 23-03-2019ರ ವರೆಗೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಸಂಗ್ರಹಣೆ ಮತ್ತು ಮಾರಾಟಗಾರರಿಗೆ ದಂಡ ವಿಧಿಸಲಾಗಿದ್ದ ವಿವರ ಇಂತಿದೆ. ನಗರದ 35 ವಾರ್ಡ್‍ಗಳ ವ್ಯಾಪ್ತಿಯಲ್ಲಿ ಒಟ್ಟು 89 ಪ್ರಕರಣಗಳಲ್ಲಿ ಪ್ಲಾಸ್ಟಿಕ್ ವಶ ಪಡಿಸಿಕೊಂಡಿದ್ದು, ಅದಕ್ಕೆ 2,10,800 ರೂಪಾಯಿಗಳಷ್ಟು ದಂಡ ವಿಧಿಸಲಾಗಿದೆ. 04-04-2019ರಿಂದ 09-07-2019ರ ವರೆಗೆ 2,17,250 ರೂಪಾಯಿಯಷ್ಟು ದಂಡ ವಿಧಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 7-8 ಟನ್‍ನಷ್ಟು ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ.

ವ್ಯಾಪಾರಸ್ಥರಲ್ಲಿ ಬದಲಾವಣೆ

     ಈಗಾಗಲೇ ಪ್ರತಿನಿತ್ಯ ಪಾಲಿಕೆಯ ವಾಹನಗಳ ಮೈಕ್‍ಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಕೆಲ ಕಡೆ ಪಾಲಿಕೆ ಅಧಿಕಾರಿಗಳೇ ಖುದ್ದಾಗಿ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದಾರೆ. ಇದೆಲ್ಲಾ ಒಂದು ರೀತಿಯಾದರೆ, ದಂಡ ವಿಧಿಸುತ್ತಾರೆ ಎಂಬ ಭಯದಿಂದ ಕೆಲವರು ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿ ಪೇಪರ್ ಬ್ಯಾಗ್‍ಗಳನ್ನು ನೀಡುತ್ತಿದ್ದರೆ, ಇನ್ನೂ ಕೆಲವರು ಪ್ಲಾಸ್ಟಿಕ್‍ನಿಂದಾಗುವ ಸಮಸ್ಯೆಗಳ ಬಗ್ಗೆ ತಿಳಿದು ಪೇಪರ್ ಬ್ಯಾಗ್‍ಗಳನ್ನು ಬಳಸುತ್ತಿದ್ದಾರೆ.

ಅನಿವಾರ್ಯವಾದ ಪ್ಲಾಸ್ಟಿಕ್ ಬಳಕೆ

     ಇಂದು ಪ್ರತಿಯೊಬ್ಬರಿಗೂ ಪ್ಲಾಸ್ಟಿಕ್ ಬ್ಯಾಗ್‍ಗಳು ಅನಿವಾರ್ಯವಾಗಿಬಿಟ್ಟಿವೆ. ಮಾರುಕಟ್ಟೆಗೆ ಹೋದರೆ ಅಥವಾ ಕಿರಾಣಿ ಅಂಗಡಿಗಳಿಗೆ ಹೋದರೆ ಅಲ್ಲಿ ಕೊಂಡುಕೊಳ್ಳುವ ವಸ್ತುಗಳನ್ನು ತರಲು ಪ್ಲಾಸ್ಟಿಕ್ ಬ್ಯಾಗ್‍ಗಳನ್ನೇ ಬಳಸುತ್ತಾರೆ. ಅದರ ಬದಲಾವಣೆಗೆ ಸರ್ಕಾರ ಹಾಗೂ ಪಾಲಿಕೆ ಅರಿವು ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಿದರೂ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಿಡುವಲ್ಲಿ ಜನರು ಹಿಂದೇಟು ಹಾಕುತ್ತಿದ್ದಾರೆ. ಇದು ಬದಲಾದರೆ ಸಮಾಜದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧವಾಗುತ್ತದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಅಲ್ಲಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ

     ನಗರದ ಕೆಲ ಭಾಗಗಳಲ್ಲಿ ಕಾನೂನು ಬಾಹಿರವಾಗಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದ್ದು, ಇದು ಪಾಲಿಕೆ ಅಧಿಕಾರಿಗಳಿಗೆ ತಿಳಿದರೆ ದಂಡ ಹಾಕುತ್ತಾರೆ ಎಂಬ ಭಯಕ್ಕೆ ರಾತ್ರೋ ರಾತ್ರಿ ಅದನ್ನು ಕಸದ ತೊಟ್ಟಿಗೆ ಬಂದು ಬಿಸಾಡುತ್ತಾರೆ. ಇಲ್ಲವಾದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಒಂದೆಡೆ ಸುರಿದು ಅದಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಈ ಮನೋಭಾವ ಬದಲಾಗಬೇಕಿದೆ. ಪ್ಲಾಸ್ಟಿಕ್ ಸುಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.

       ಮಹಾನಗರ ಪಾಲಿಕೆಯಿಂದ ಅಧಿಕಾರಿಗಳು ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳುತ್ತಾರೆ. ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ ದಂಡ ವಿಧಿಸುತ್ತಾರೆ. ಆದರೆ ಕಳೆದ ಒಂದು ವರ್ಷದಿಂದ ವಶ ಪಡಿಸಿಕೊಂಡ ಪ್ಲಾಸ್ಟಿಕ್ ಅನ್ನು ಎಲ್ಲಿಟ್ಟಿದ್ದಾರೆ? ಏನು ಮಾಡಿದ್ದಾರೆ ಎಂಬ ಮಾಹಿತಿ ಯಾರಿಗೂ ಇಲ್ಲ. ಇಲ್ಲಿಯವರೆಗೆ ಎಷ್ಟು ಟನ್‍ಗಳಷ್ಟು ಪ್ಲಾಸ್ಟಿಕ್ ವಶ ಪಡಿಸಿಕೊಳ್ಳಲಾಗಿದೆ? ಅದಕ್ಕೆ ಎಷ್ಟು ದಂಡ ವಿಧಿಸಲಾಗಿದೆ ಎಂಬ ಮಾಹಿತಿ ಜನರಿಗೆ ತಿಳಿಯುತ್ತಿಲ್ಲ. ವಶ ಪಡಿಸಿಕೊಂಡ ಪ್ಲಾಸ್ಟಿಕ್ ರಾತ್ರೋ ರಾತ್ರಿ ಅದೇ ಮಳಿಗೆದಾರರಿಗೆ ಅರ್ಧದಷ್ಟು ಬೆಲೆಗೆ ಮಾರಾಟವಾಗುತ್ತಿದೆ ಎಂಬ ಆರೋಪಗಳು ಜನರಿಂದ ಕೇಳಿಬರುತ್ತಿವೆ. ಇದಕ್ಕೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಿದೆ.

ಧನಿಯಾಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷರು

      ಮಹಾನಗರ ಪಾಲಿಕೆಯಿಂದ ನಗರದ ಎಲ್ಲೆಡೆ ಪ್ಲಾಸ್ಟಿಕ್ ಬಳಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗುತ್ತಿದೆ. ಅವರಿಗೆ ನಿರ್ದಿಷ್ಟ ಮೊತ್ತದ ದಂಡ ವಿಧಿಸಲಾಗುತ್ತಿದೆ. ವಶ ಪಡಿಸಿಕೊಂಡ ಪ್ಲಾಸ್ಟಿಕ್ ಅನ್ನು ಅಜ್ಜಗೊಂಡನಹಳ್ಳಿ ಕಸ ವಿಲೇವಾರಿ ಘಟಕದಲ್ಲಿ ಸ್ಟೋರ್ ಮಾಡಲಾಗಿದೆ. ಅನುಮಾನ ಇದ್ದವರು ನೇರವಾಗಿ ಅಲ್ಲಿಗೆ ಭೇಟಿ ನೀಡಿ ನೋಡಬಹುದು. ಪ್ಲಾಸ್ಟಿಕ್ ಯಾರೇ ಬಳಸುವುದು ಶಿಕ್ಷಾರ್ಹ ಅಪರಾಧ, ಇದರಲ್ಲಿ ಸಣ್ಣ ವ್ಯಾಪಾರಸ್ಥರು, ದೊಡ್ಡ ಮಾರಾಟಗಾರರು ಎಂದೇನಿಲ್ಲ. ಎಲ್ಲರಿಗೂ ಒಂದೇ ರೀತಿಯಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಇಲ್ಲಿಯವರೆಗೆ ಸಣ್ಣ ವ್ಯಾಪಾರಸ್ಥರಿಗೆ 500ಕ್ಕಿಂತ ಹೆಚ್ಚಿನದಾಗಿ ದಂಡ ವಿಧಿಸಿಲ್ಲ.

ಟಿ.ಭೂಬಾಲನ್, ಪಾಲಿಕೆ ಆಯುಕ್ತರು

       ಪಾಲಿಕೆ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿ, ವಶ ಪಡಿಸಿಕೊಂಡ ಪ್ಲಾಸ್ಟಿಕ್ ಅನ್ನು 230 ಡಿಗ್ರಿ ಸೆಲ್ಸಿಯಸ್ ತಾಪದಲ್ಲಿ ಕರಗಿಸಿ ಅದನ್ನು ರಸ್ತೆಯ ಡಾಂಬರೀಕರಣದಲ್ಲಿ ಮಿಶ್ರಣ ಮಾಡಿಕೊಳ್ಳಲಾಗುತ್ತದೆ. ಡಾಂಬರೀಕರಣದಲ್ಲಿ ಜಲ್ಲಿಗೆ ಅಂಟಿಕೊಳ್ಳಲಾಗುವ ಬಿಟೋಮನ್ ಎಂಬ ಕೆಮಿಕಲ್ ಬದಲಾಗಿ ಶೇ.5ರಷ್ಟು ಪ್ಲಾಸ್ಟಿಕ್ ಮಿಶ್ರಣವನ್ನು ಹಾಕಲಾಗುತ್ತದೆ. ಇದರಿಂದ ರಸ್ತೆಯು ಬಿಗಿಯಾಗಿರುತ್ತದೆ. ಜೊತೆಗೆ ದೀರ್ಘ ಕಾಲದ ಬಾಳಿಕೆ ಬರುತ್ತದೆ. ನಂತರ ಈ ಪ್ಲಾಸ್ಟಿಕ್ ಬಳಕೆ ಮಾಡಿಕೊಂಡು ಟೈಲ್ಸ್ ತಯಾರಿಸಿ ವಾಹನ ಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಪ್ರ್ರಾಯೋಗಿಕವಾಗಿ ಬಳಸಲು ಯೋಚನೆ ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap