ನಾಲ್ಕು ಬಾರಿ ಸಂಸದರಾಗಿದ್ದ ಬಸವರಾಜು ಕೊಡುಗೆ ಜಿಲ್ಲೆಗೆ ಏನು? : ಡಾ.ಜಿ.ಪರಮೇಶ್ವರ್

ಕೊರಟಗೆರೆ

       ಬಿಜೆಪಿ ಪಕ್ಷ ನಮ್ಮ ದೇಶದ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆ ನೀಡುತ್ತಿದ್ದು, ಒಂದು ವೇಳೆ ಸಂವಿಧಾನ ಬದಲಾಯಿಸಲು ಹೊರಟರೆ ನಾವೇನು ಕೈಕಟ್ಟಿ ಕುಳಿತಿರುತ್ತೇವೆಯೇ? ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಪ್ರತಿಯೊಬ್ಬ ಭಾರತೀಯನಿಗೂ ಬದುಕುವ ಹಕ್ಕು ನೀಡಲಾಗಿದೆ. ದೇಶದಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯವನ್ನು ವಿರೋಧಿಸುವ ಬಿಜೆಪಿ ಪಕ್ಷಕ್ಕೆ ನಾವೆಲ್ಲರೂ ಮತ ಹಾಕಬೇಕೆ? ಮೀಸಲಾತಿ ತೆಗೆಯಲು ಪ್ರಯತ್ನ ಪಟ್ಟವರಿಗೆ ಎಂದೆಂದೂ ಮತ ಹಾಕಬೇಡಿ ಎಂದು ಡಿಸಿಎಂ ಡಾ.ಜಿ ಪರಮೇಶ್ವರ್ ಮತದಾರರಿಗೆ ಕಿವಿಮಾತು ಹೇಳಿದರು.

         ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ದೇವೆಗೌಡರ ಪರವಾಗಿ ಏರ್ಪಡಿಸಲಾಗಿದ್ದ ಚುನಾವಣೆ ಪ್ರಚಾರ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡುತ್ತಾ ಮೀಸಲಾತಿ ಹಾಗೂ ಸಂವಿಧಾನವನ್ನು ಬದಲಾಯಿಸುವಂತಹ ಪಕ್ಷಕ್ಕೆ ಜನ ಬೆಂಬಲಿಸಬಾರದು ಎಂದರು.

        ಮಾಜಿ ಪ್ರಧಾನಿ ಮನಮೋಹನಸಿಂಗ್ ನೇತೃತ್ವದ ಕೇಂದ್ರ ಸರಕಾರ ದೇಶದ ರಕ್ಷಣೆಗಾಗಿ 1ಕ್ಕೆ 560 ಕೋಟಿಯಂತೆ 70560 ಕೋಟಿ ವೆಚ್ಚದ 126 ಯುದ್ದ ವಿಮಾನ ಖರೀದಿಗೆ ಫ್ರ್ರಾನ್ಸ್‍ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ನರೇಂದ್ರ ಮೋದಿ ಫ್ರ್ರಾನ್ಸ್ ಒಪ್ಪಂದವನ್ನು ರದ್ದುಗೊಳಿಸಿ 1 ಕ್ಕೆ 1660 ಕೋಟಿ ವೆಚ್ಚದ 36 ಯುದ್ದ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡು, ಸುಮಾರು 30 ಸಾವಿರ ಕೋಟಿ ರೂ.ಗಳನರ್ನು ದೇಶಕ್ಕೆ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದರು.

         ಬಿಜೆಪಿ ಅಭ್ಯರ್ಥಿ ಬಸವರಾಜು ನೇತ್ರಾವತಿ ನದಿಯ ನೀರು ತರುವ ಸುಳ್ಳು ಆಶ್ವಾಸನೆಯನ್ನು ನೀಡಿ ಕಳೆದ 20 ವರ್ಷದಿಂದ ತುಮಕೂರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಆದ ಇವರ ಕೊಡುಗೆ ಏನು? ಜಿಲ್ಲೆಯಲ್ಲಿ ಅಭಿವೃದ್ದಿ ಕೆಲಸ ಮಾಡದೆ ದೇವೇಗೌಡರ ವಿರುದ್ದ ಪಿತೂರಿ ಮತ್ತು ಅಪಪ್ರಚಾರ ಮಾಡಿ, ಕೆಜಿಪಿಯಿಂದ ಬಿಜೆಪಿ ಪಕ್ಷಕ್ಕೆ ಬಂದು ನರೇಂದ್ರ ಮೋದಿಗೆ ಮತ ಹಾಕಿ ಎನ್ನುತ್ತಿದ್ದಾರೆ ಎಂದು ಬಸವರಾಜು ವಿರುದ್ದ ವಾಗ್ದಾಳಿ ನಡೆಸಿದರು.

         ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಮಾಜಿ ಪ್ರಧಾನಿ ಸ್ಪರ್ಧಿಸುತ್ತಿರುವ ತುಮಕೂರು ಕ್ಷೇತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ನೀರಾವರಿ ಯೋಜನೆ ತಂದು ಕೆರೆಗಳಿಗೆ ನೀರು ತುಂಬಿಸುವ ಕೆಲಸವನ್ನು ದೇವೇಗೌಡರು ಮಾಡಲಿದ್ದಾರೆ. ಬಡವರು, ಹಿಂದುಳಿದ ವರ್ಗ ಮತ್ತು ರೈತರ ಪರವಾಗಿ ಹೋರಾಟ ಮಾಡಿರುವ ರಾಷ್ಟ್ರದ ಮಹಾನ್ ರೈತ ನಾಯಕನ ಗೆಲುವಿಗೆ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಮನವಿ ಮಾಡಿದರು.

         ಕೋಳಾಲ ಜಿಪಂ ಸದಸ್ಯ ಶಿವರಾಮಯ್ಯ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದಂತಹ ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಬಿಜೆಪಿ ಪಕ್ಷಕ್ಕೆ ಮತ ಹಾಕಬೇಡಿ. ದೃಶ್ಯ ಮಾಧ್ಯಮದ ಮೂಲಕ ದೇಶದ ಜನರನ್ನು ಮೋದಿ ದಾರಿತಪ್ಪಿಸುತ್ತಿದ್ದಾರೆ. 5 ವರ್ಷದ ಕೇಂದ್ರದ ಸಾಧನೆ ಶೂನ್ಯ. 15ಲಕ್ಷ ರೂ. ಬಡವರ ಖಾತೆಗೆ ಹಾಕುವ ಭರವಸೆ ಇನ್ನೂ ನಿಗೂಢವಾಗಿದೆ. ದೇಶದ ಭದ್ರತೆ ಮತ್ತು ಸೈನಿಕರ ಮೂಲಕ ಮೋದಿ ರಾಜಕೀಯ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಒತ್ತಾಯ ಮಾಡಿದರು.

       ಕಾರ್ಯಕ್ರಮದಲ್ಲಿ ಪರಿಶಿಷ್ಟ ಪಂಗಡದ ಜೆಡಿಎಸ್ ರಾಜ್ಯಾಧ್ಯಕ್ಷ ರಮೇಶ್, ಜಿಪಂ ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆ ಶಂಕರ್, ಮುಖಂಡರಾದ ವಾಲೆ ಚಂದ್ರಯ್ಯ, ನರಸಿಂಹರಾಜು, ಕೃಷ್ಣಮೂರ್ತಿ, ಚಂದ್ರಶೇಖರ್, ಜಗನ್ನಾಥ್, ಚಂದ್ರಶೇಖರಗೌಡ, ಈಶ್ವರಪ್ಪ ಸೇರಿದಂತೆ ಇತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap