ಅತ್ಯಾಚಾರಕ್ಕೆ ಕೊನೆಯೆಂದು…?

     ನಿರ್ಭಯ, ಆಸೀಫಾ, ಉನಾವ್ ಸಂತ್ರಸ್ತೆ, ಹೀಗೆ ಲೆಕ್ಕವಿಲ್ಲದಷ್ಟು ಹೆಣ್ಣು ಮಕ್ಕಳು ನಮ್ಮ ನೆನಪಿನಾಳದಿಂದ ಮಾಸುವ ಮುನ್ನವೇ ಸಾಲು ಸಾಲಾಗಿ ಮತ್ತೆ  ದೇಶದೆಲ್ಲೆಡೆ  ಅತ್ಯಾಚಾರದ ಪ್ರಕರಣಗಳು ಇಂದು ಮತ್ತೆ ಮುನ್ನೆಲೆಗೆ ಬಂದಿದ್ದು ಆತಂಕ ಸೃಷ್ಟಿಯಾಗಿದೆ. ಪ್ರತಿ 05 ನಿಮಿಷಕ್ಕೆ ದೇಶದಲ್ಲಿ ಒಂದು ಹೆಣ್ಣು ಮಗಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಎಂದರೆ ಈ ನೆಲದಲ್ಲಿ ಯಾವ ರಕ್ಷಣೆ ಇದೆ ಎಂದು ನಾವೇ ಕೇಳಿಕೊಳ್ಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 
      ಅಂಕಿ ಅಂಶಗಳನ್ನು ನೋಡಿದರೆ ಬೆಚ್ಚಿಬೀಳುತ್ತೇವೆ. 2017 ರಲ್ಲಿ ದೇಶಾದ್ಯಂತ ವರದಿಯಾದ ಮಹಿಳೆಯರ ಮೇಲೆ ಆಗುವ ದೌರ್ಜನ್ಯ ಪ್ರಕರಣಗಳು 3.59 ಲಕ್ಷ (ವಿ ಕ 02/12/19) ಆದರೆ ಶಿಕ್ಷೆಯ ಪ್ರಮಾಣ ಬಹಳ ಕಡಿಮೆ ಇರುವುದು ಕಂಡು ಬರುತ್ತದೆ. (25.5%) ಇನ್ನೂ ಆತಂಕ ತರುವ ವಿಚಾರವೆಂದರೆ ಜನವರಿಯಿಂದ ಜೂನ್ 2019 ರ ಅವಧಿಯಲ್ಲಿ 24,212 ಮಕ್ಕಳ ಮೇರೆಗೆ ಆದ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ನಿರ್ಭಯ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ವರನ್ನು ಇನ್ನು ಗಲ್ಲಿಗೇರಿಸದೆಯಿರುವುದರ ಜೊತೆಗೆ ಅವರಲ್ಲಿ ಒಬ್ಬನಾದ ವಿನಯ್ ವರ್ಮ ಕ್ಷಮಾದಾನಾ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿರುವನು.ಇದು ನಮ್ಮ ವಾಸ್ತವ ಸಮಾಜದ ಚಿತ್ರಣವಾಗಿದೆ. 
      ನವ ವಸಾಹತುಶಾಹಿ ನೀತಿಯ ಪರಿಣಾಮ ಜಾಗತಿಕವಾಗಿ ನಾವು ಮುಕ್ತ ಮಾರುಕಟ್ಟೆ ನಿಯಮಗಳನ್ನು ಜಾರಿಗೆ ತಂದು ಎರಡು ದಶಕಗಳು ಕಳೆದಿವೆ. ಆದರೆ ಇದರೊಟ್ಟಿಗೆ ಬಂದ ಸಾಂಸ್ಕೃತಿಕ ಸಂಚಲನವನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಷ್ಟು ಶತಮಾನಗಳು ಹೆಣ್ಣು ಮನೆಯ ಕಣ್ಣು ಎಂದು ಬಿಂಬಿಸಿ ಆಕೆಯನ್ನು ಗೃಹ ನಿರ್ವಹಣೆಯ ಕೆಲಸಕ್ಕೆ ಮಾತ್ರ ಸೀಮಿತ ಗೊಳಿಸಿದ ಸಮಾಜ ಒಮ್ಮೆಲೇ ಆಕೆ ಹೊರಗೂ ದುಡಿಯುವ ವಾತಾವರಣ ನಿರ್ಮಿಸಿ ಎಲ್ಲ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾದಾಗ ಹೊರಗೆ ಕಾಲಿಡುವುದು ಅನಿವಾರ್ಯವಾಯಿತು.
      ಆರ್ಥಿಕವಾಗಿ ಸಬಲಳಾದರೊ ಸಾಮಾಜಿಕವಾಗಿ ಅದೇ ಸಂಪ್ರದಾಯದ ಕಹಿ ನೆರಳು ಆಕೆಗೆ ಒಂದು ಶಾಪವಾಯಿತು. ಈ ಕೆಲವು ವರ್ಷಗಳಲ್ಲಿ ಆಕೆಯನ್ನು ಶಿಕ್ಷಿತಳನ್ನಾಗಿಸಿದ ನಾವು, ಆಕೆ ಹೇಗಿರಬೇಕು ಎಂದು ನಿಬಂಧನೆಗಳನ್ನು ಹಾಕುತ್ತಾ ಬಂದವೆ ಹೊರತು ಪುರುಷರನ್ನು ತಯಾರಿಸುವಲ್ಲಿ ವಿಫಲವಾದೆವು.
     ಇದರೊಟ್ಟಿಗೆ ಜಾಗತೀಕರಣವೆಂಬ ಮಾಯಾಜಾಲ ಹೆಣ್ಣನ್ನು ಒಂದು ಸರಕಾಗಿ ಪರಿಗಣಿಸಿತು. ಬೇಕೊ ಬೇಡವೊ ಎಲ್ಲ ಜಾಹಿರಾತುಗಳಲ್ಲಿ ಆಕೆಯನ್ನು ಅರೆನಗ್ನಳನ್ನಾಗಿ ಬಿಂಬಿಸುವ ಪ್ರಯತ್ನ ನಡೆಯಿತು. ಅಂತರ್ಜಾಲದ ಜಾಲದಲ್ಲಿ ಸಿಕ್ಕ ಯುವ ಮನಸ್ಸುಗಳು ಕಲ್ಮಶಗೊಂಡವು. ಹಾಸ್ಯದ ಹೆಸರಿನಲ್ಲಿ, ಸಲಿಗೆಯ ಹೆಸರಿನಲ್ಲಿ, ಪ್ರೀತಿಯ ಮೂಲಕ, ಮನೆಯವರಿಂದ, ಸಹೋದ್ಯೋಗಿಗಳ ಮೂಲಕ, ಅಪರಿಚಿತರಿಂದ ಇರಬಹುದು ಆಕೆಯ ಮೇಲೆ ದೌರ್ಜನ್ಯವಾದರೆ ಸಮರ್ಥನೆ ನೀಡುವ ಅಥವಾ ಅದನ್ನು ಕ್ಷಮಿಸಿಬಿಡು ಎಂದು ಹೇಳುತ್ತೆವೆಯೇ ಹೊರತು ಅದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷೆ ನೀಡುವ ಪರಿಪಾಟ ಬೆಳೆಸದೆಹೋದೆವು. ಸಮಸ್ಯೆಯ ಗಂಭೀರತೆಗೆ ಇಂದು ಇದು ಸಹ ಒಂದು ಕಾರಣವೆಂದು ಮರೆಯಬಾರದು. 
     ಹಾಗೆಯೇ ಪಿತೃ ಪ್ರಧಾನ ವ್ಯವಸ್ಥೆಯ ಮೌಲ್ಯಗಳು ಇನ್ನೊಂದೆಡೆ ಹೆಣ್ಣು ಮಕ್ಕಳು ಹುಟ್ಟುವುದೇ ಬೇಡವೆಂದು ಗರ್ಭದಲ್ಲಿಯೇ ಹೊಸಕಿ ಹಾಕುತ್ತಿರುವುದರೀಂದ ಸ್ತ್ರೀ ಪುರುಷ ನಡುವಿನ ಅನುಪಾತದಲ್ಲಿಯೂ ಅಂತರ ಹೆಚ್ಚುತ್ತಿದ್ದು ಸಮಾಜದ ಸ್ವಾಸ್ಥ್ಯಕ್ಕೊ ದಕ್ಕೆ ತರುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಹೆಣ್ಣು ಮಕ್ಕಳೇ ಇರದಂತ ವಾತಾವರಣ ಸೃಷ್ಟಿಯಾದರೆ ಆಶ್ಚರ್ಯ ಪಡಬೇಕಿಲ್ಲ. ಇಲ್ಲಿಯೊ ಅನೇಕ ಕಾನೊನುಗಳಿವೆ (PCPNDT Act). ಆದರೆ ಲಿಂಗಾನುಪಾತದಲ್ಲಿ ಭಾರಿ ಅಂತರ (1000 ಪುರುಷರಿಗೆ 914 ಹೆಣ್ಣು ಮಕ್ಕಳು) ಜನಿಸುತ್ತಿರುವರು.
    ಧಾರ್ಮಿಕ ಅಂಧ ಶ್ರದ್ದೆ ಮೌಡ್ಯಗಳು ಮತ್ತಷ್ಟು ಶೋಷಣಾ ವ್ಯವಸ್ಥೆಯನ್ನು ಪೋಷಿಸುತ್ತಿದೆ. ಆಕೆಯ ಮೇಲೆ ಇನ್ನಿಲ್ಲದ ನಿರ್ಬಂಧಗಳು ಜಾರಿಯಾಗುತ್ತಿವೆ. ಆಕೆ ಪವಿತ್ರಳೊ ಅಪವಿತ್ರಳೊ ಎಂದೊ ನಿರ್ಧಾರ ಮಾಡುತ್ತಾ ಗುಡಿ ಗೋಪುರ ಮಸೀದಿಗಳಿಗೂ ಪ್ರವೇಶ ನಿರಾಕರಿಸಲಾಗುತ್ತಿದೆ. ಆಕೆ ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ಸಮಯದಲಿಯೂ ಜಾತಿ ಧರ್ಮಗಳು ಮಧ್ಯ ಬರುತ್ತದೆ.
     ಹಾಗಾಗಿ ಪ್ರತಿ ಸಲ ಒಂದು ಮರ್ಯದೆ ಹತ್ಯೆಯಾದಾಗಲೂ, ಪ್ರತಿ ಬಾರಿ ಅತ್ಯಾಚಾರವಾದಾಗಲೂ ಜನ ಅದನ್ನು ಪ್ರತಿರೋದಿಸಿ ತಮ್ಮ ಎದೆಯಾಳದಳಲ್ಲಿರುವ ಅಳಲನ್ನು, ಆಕ್ರೋಶವನ್ನು ಹೊರಹಾಕುತ್ತಿದ್ದಾರೆ – ಮತ್ತೊಂದು ಘಟಿಸದಿರಲ್ಲೆಂದು ಆಶಿಸುತ್ತಾ.ಹಾಗಾಗಿಯೇ ಸಾಕ್ಕಿನ್ನು ಸಹಿಸಿದ್ದು, ಬೇಕಿದೆ ನೊಂದ ಜೀವಕ್ಕೆ ನ್ಯಾಯ. ಮತ್ತೊಂದು ಪ್ರಕರಣ ಘಟಿಸುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದರೆ ನಮಗೆ ನಾವೇ ಅವಮಾನಿಸಿಕೊಂಡಂತೆ ಹಾಗೂ ಒಂದು ಸಭ್ಯ ಸಮಾಜವಾಗಿ ರೂಪುಗೊಳ್ಳುವಲ್ಲಿ ವಿಫಲವಾದಂತೆ.
ಆಗಬೇಕಿರುವುದೇನು:
1. ಪ್ರತಿ ಮಗುವಿಗೆ good touch – bad touch ಎಂದರೇನು ಎಂಬುದನ್ನು ತಿಳಿಸಬೇಕು. ಶಾಲೆಗಳಲ್ಲಿ ಶಿಕ್ಷಕರು         ಈ  ವಿಚಾರಗಳನ್ನು ವಯಸ್ಸಿಗನುಗುಣವಾಗಿ ತಿಳಿಸಬೇಕು. ಪ್ರತಿ ಮಗುವಿನಲ್ಲಿ ಆತ್ಮವಿಶ್ವಾಸ ತುಂಬಿ, ದೌರ್ಜನ್ಯಗಳ         ಬಗ್ಗೆ ಅರಿವು ಮೂಡಿಸಿ, ಬದುಕನ್ನು ಎದುರಿಸಲು ಸಜ್ಜಾಗುವಂತೆ ತಯಾರಿ ಮಾಡುವ ಹೊಣೆ ಎಲ್ಲ ತಂದೆ-ತಾಯಿಯರ,      ಸಮಾಜದ ಜವಾಬ್ದಾರಿ ಹಿಂದೆಂದಿಗಿಂತಲೂ ಇಂದು ಹೆಚ್ಚು. ಅದರೊಟ್ಟಿಗೆ ಗಂಡು ಮಕ್ಕಳಲ್ಲಿಯೂ ಸಂವೇದನೆ ಮೂಡಿಸಿ,     ಸಹೃದಯತೆ ಬೆಳೆಸಿ ಅವರೂ ನಮ್ಮೊಂದಿಗೆ ಕೈಜೋಡಿಸಿದಾಗ ಒಂದು ಸಭ್ಯ ಸಮಾಜ ಸೃಷ್ಟಿಸಲು ಸಾಧ್ಯ. ಜಾತಿ ಮತ     ಧರ್ಮದಾಚೆ ನಡೆಯಬೇಕಿದೆ.
2.  ಎಲ್ಲಾ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಕರಾಟೆ ಕಲಿಸಬೇಕು. ಸಾಧ್ಯವಾದರೆ ಆಕೆ ತನ್ನನ್ನು ರಕ್ಷಿಸಿಕೊಳ್ಳಲು ಇದು             ಅಗತ್ಯ.
3.  ಅತಿ ಮುಖ್ಯವಾಗಿ ವಾಹಿನಿಗಳಲ್ಲಿ ಹಾಸ್ಯದ ಹೆಸರಿನಲ್ಲಿ ಪ್ರಸಾರವಾಗುವ ಅಶ್ಲೀಲ ಕಾರ್ಯಕ್ರಮ, ಜಾಹಿರಾತುಗಳನ್ನು 
       ನಿಷೇಧಿಸಬೇಕು. 
4.  ಅಂತರ್ಜಾಲದಲ್ಲಿ ಪ್ರಸಾರವಾಗುತ್ತಿರುವ ಅಶ್ಲೀಲ ಚಿತ್ರಗಳನ್ನು ನಿರ್ಬಂದಿಸಬೇಕು.
5.  ಸಮುದಾಯದ ಸಾಕ್ಷಿ ಪ್ರಜ್ಞೆ ಹೆಚ್ಚಬೇಕು. ಹೆಣ್ಣು ಅಬಲೆಯಲ್ಲ ಆಕೆಯೊ ಈ ಸಮುದಾಯದ ಪಾಲುದಾರಳು ಎಂಬ              ಅರಿವು ಬರಬೇಕು. ಅದಕ್ಕೆ ಸರ್ಕಾರಗಳು ಸಕಾರಾತ್ಮಕ ಕಾರ್ಯಕ್ರಮಗಳನ್ನು, ಮಹಿಳೆಯರ ಸಾಧನೆಯನ್ನು                ಬಿಂಬಿಸುವ ವಿಚಾರಗಳು ಹರಡಬೇಕು.
     ಹಾಗಾಗಿ ಎಲ್ಲಿಯವರೆಗೆ ಹೆಣ್ಣು ಮಕ್ಕಳು ಸಮಾಜದ ಉತ್ಪಾದನಾ ವ್ಯವಸ್ಥೆಯ ಒಂದು ಭಾಗವಾಗಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ನಿರಾಕರಿಸಲಾಗುತ್ತದೆಯೊ ಅಲ್ಲಿಯವರೆಗೆ ಈ ಶೋಷಣೆ ಮುಂದುವರೆಯುತ್ತದೆ. ಆದರಿಂದ ಅವರಿಗೆ ಶಿಕ್ಷಣ ಉದ್ಯೋಗದ ಜೊತೆಗೆ ಸಾಮಾಜಿಕ ರಾಜಕೀಯ ಆರ್ಥಿಕ ವ್ಯವಸ್ಥೆಯ ಪಾಲುದಾರಳನ್ನಾಗಿ ಮಾಡುವುದು ಅಷ್ಟೇ ಅಗತ್ಯ. ಆಗ ಶೋಷಣಾ ಮುಕ್ತ ಸಮ ಸಮಾಜ ನಿರ್ಮಿಸಲು ಸಾಧ್ಯ. ಇಂತಹ ಒಂದು ಸಾಮಾಜಿಕ ಬದಲಾವಣೆಗೆ ನಾವು ಸಜ್ಜಾಗಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ.
-ಕೆ ಎಸ್ ಗಿರಿಜಾ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link