ಜಿಐಎಸ್ ಮ್ಯಾಪಿಂಗ್ ಪೂರ್ಣಗೊಳ್ಳುವುದು ಯಾವಾಗ..?

ತುಮಕೂರು
    ನಗರದಲ್ಲಿನ ಸಂಪೂರ್ಣ ಮಾಹಿತಿ ಒದಗಿಸುವ ಜಿಐಎಸ್ ( ಭೌಗೋಳಿಕ ಮಾಹಿತಿ ತಂತ್ರಜ್ಞಾನ) ಮ್ಯಾಪಿಂಗ್ ತಂತ್ರಜ್ಞಾನವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಜಾರಿಗೆ ತರಲಾಗುತ್ತಿದೆ. ಈ ವ್ಯವಸ್ಥೆ ಜಾರಿ ಬಂದಲ್ಲಿ ನಗರದಲ್ಲಿ ನಡೆಯುತ್ತಿರುವ ಪ್ರತಿಯೊಂದು  ಹಂತದ ಕಾಮಗಾರಿಗಳು ಹಾಗೂ ಇತರೆ ಮಾಹಿತಿಗಳು ಈ ಜಿಐಎಸ್ ಪೋರ್ಟಲ್‍ನಲ್ಲಿ ಸಿಗಬೇಕು. ಇದಕ್ಕಾಗಿ ಹಲವು ಸಭೆಗಳು ನಡೆದಿವೆ. 
    ಈ ಹಿಂದೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಸಂಸದ ಜಿಎಸ್ ಬಸವರಾಜು ನೀಡಿದ್ದ ಸೂಚನೆ ಮೇರೆಗೆ ಜಿಐಎಸ್ ಮ್ಯಾಪಿಂಗ್ ಶೀಘ್ರ ಅನುಷ್ಠಾನಕ್ಕೆ ತರಲು ತೀರ್ಮಾನಿಸಲಾಗಿತ್ತು. ಆ ಪ್ರಕಾರ ಈ ತಿಂಗಳಾಂತ್ಯಕ್ಕೆ ಇದು ಪೂರ್ಣಗೊಳ್ಳಬೇಕಿದೆ. 
ನಗರದಲ್ಲಿನ ಪ್ರತಿಯೊಂದು ಕಟ್ಟಡದ ಮಾಹಿತಿ, ಒತ್ತುವರಿಯಾದ ಸ್ಥಳಗಳು, ವಿವಿಧ ಇಲಾಖೆಗಳಿಂದ ಮಾಡಲಾದ ಕಾಮಗಾರಿಗಳು, ಮುಗಿದಿರುವ ಕಾಮಗಾರಿಗಳು, ಸೆಟ್ ಬ್ಯಾಕ್ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಈ ಜಿಐಎಸ್ ಪೋರ್ಟಲ್‍ನಡಿ ಕಾಣಬಹುದಾಗಿದೆ. 
    ಜಿಐಎಸ್ ಮ್ಯಾಪಿಂಗ್‍ನಲ್ಲಿ ರಾಜ್ಯ ಮತ್ತು ಕೇಂದ್ರದ ಎಲ್ಲಾ ಇಲಾಖೆಗಳ ಪ್ರತಿಯೊಂದು ಮಾಹಿತಿಯೂ ಕೈ ಬೆರಳ ತುದಿಯಲ್ಲಿಯೇ ದೊರೆಯಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ 2 ಕೋಟಿ ರೂಗಳು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಸ್ಟರ್ ಪ್ಲಾನ್ ರೂಪಿಸಲು 1 ಕೋಟಿ 20 ಲಕ್ಷ ರೂಗಳು, ಸ್ಮಾರ್ಟ್ ಸಿಟಿ ಕಂಪನಿ ಲಿಮಿಟೆಡ್‍ನಿಂದ 72 ಲಕ್ಷಗಳನ್ನು ಖರ್ಚು ಮಾಡಿ ರೂಪಿಸಲಾಗುತ್ತಿದೆ. 
ಜಿಐಎಸ್ ( ಭೌಗೋಳಿಕ ಮಾಹಿತಿ ತಂತ್ರಜ್ಞಾನ )
    ಜಿಐಎಸ್ ಎಂಬುದು ಜಿಯೋಗ್ರಾಫಿಕಲ್ ಇನ್‍ಫರ್ಮೇಶನ್ ಸಿಸ್ಟಮ್ ಆಗಿದ್ದು, ತುಮಕೂರು ಜಿಐಎಸ್‍ನಲ್ಲಿ ನಗರಕ್ಕೆ ಸಂಬಂಧಿಸಿದಂತೆ ಎಲ್ಲಾ ಲೇಯರ್ಸ್‍ಗಳನ್ನು (ಸಂಬಂಧಿಸಿದ ವಿಷಯದ ಸಂಪೂರ್ಣ ಮಾಹಿತಿ ) ಇತಿಹಾಸ ಸಹಿತ ಅಪ್‍ಲೋಡ್ ಮಾಡಲಾಗುವುದು. ಈ ಬಗ್ಗೆ ಸಂಸದ ಜಿಎಸ್ ಬಸವರಾಜು ಸ್ಮಾರ್ಟ್ ಸಿಟಿ ಎಂಡಿ ಭೂಬಾಲನ್ ಹಾಗೂ ಟೂಡಾ ಆಯುಕ್ತ ಯೋಗಾನಂದ್‍ರೊಂದಿಗೆ ಚರ್ಚಿಸಿ ನಗರದ ಎಲ್ಲಾ ಅಭಿವೃದ್ಧಿ ಮಾಹಿತಿಗಳು ಒಂದೆಡೆ ಲಭ್ಯವಾಗುವಂತೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದರು.
    ಕೇಂದ್ರ ಸರ್ಕಾರ ತುಮಕೂರು ಮಹಾನಗರ ಪಾಲಿಕೆ ಮೂಲಕ ಮಾಡಿರುವ ಎಬಿಡಿ (ಏರಿಯಾ ಬೇಸ್ಡ್ ಡೆವಲಪ್‍ಮೆಂಟ್) ವ್ಯಾಪ್ತಿಯ ಡ್ರೋಣ್ ಸರ್ವೆ ಮತ್ತು ಸ್ಮಾರ್ಟ್ ಸಿಟಿ ಮೂಲಕ ಮಾಡಿರುವ ನಗರ ವ್ಯಾಪ್ತಿಯ ಡ್ರೋಣ್ ಸರ್ವೆ ವೆಚ್ಚ ಮತ್ತು ಕಾಮಗಾರಿಯ ಪ್ರಗತಿ ಹಾಗೂ ವ್ಯಾಪ್ತಿಯ ಸಂಪೂರ್ಣ ಮಾಹಿತಿ ಸೇರಿಸಬೇಕು.
    ನಗರಾಭಿವೃದ್ಧಿ ಇಲಾಖೆ ಮೂಲಕ ಮಾಡಲು ಉದ್ದೇಶಿಸಿರುವ ಪ್ರಾಪರ್ಟಿ ಸರ್ವೆ ವೆಚ್ಚ ಮತ್ತು ವ್ಯಾಪ್ತಿ ಹಾಗೂ ಪ್ರಗತಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ಮಾಡಿರುವ ಜಿಐಎಸ್ ಬೇಸ್ ಮ್ಯಾಪ್ ವೆಚ್ಚ, ಕಾರ್ಯವ್ಯಾಪ್ತಿ ಮತ್ತು ಪ್ರಗತಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಮಾಡುತ್ತಿರುವ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ವೆಚ್ಚ ಮತ್ತು ಕಾರ್ಯವ್ಯಾಪ್ತಿ ಹಾಗೂ ಪ್ರಗತಿಯ ಮಾಹಿತಿ, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಾಮಾನುಸಾರ ಎಂಜಿನಿಯರ್‍ಗಳಿಗೆ  ನಿರ್ದಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು.
    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಚತೆ ಮಾಡುವ ನೌಕರರ ನಿರ್ದಿಷ್ಠ ವ್ಯಾಪ್ತಿ, ಕರ ವಸೂಲಿ ಮಾಡುವ ನೌಕರರ ವ್ಯಾಪ್ತಿ, ನೀರು ಬೀಡುವ ನೌಕರರ ವ್ಯಾಪ್ತಿ, ಹಸಿರು- ತುಮಕೂರು ಯೋಜನೆ ಕೈಗೊಳ್ಳಲು ಪರಿಸರಾಸಕ್ತರಿಗೆ /ಸಂಘ ಸಂಸ್ಥೆಗಳಿಗೆ /ಕೈಗಾರಿಕೆಗಳಿಗೆ /ಶಿಕ್ಷಣ ಸಂಸ್ಥೆಗಳಿಗೆ /ವ್ಯಕ್ತಿಗಳಿಗೆ, ಕುಟುಂಬಗಳಿಗೆ ಜವಾಬ್ಧಾರಿ ನೀಡಲು ಮುಖ್ಯ ರಸ್ತೆ, ಅಡ್ಡ ರಸ್ತೆ, ಲಿಂಕ್ ರಸ್ತೆವಾರು, ಕನಿಷ್ಟ ಒಂದು ಕೀಮೀ ಉದ್ದಕ್ಕೆ ಒಂದು ನಿರ್ದಿಷ್ಠ ವ್ಯಾಪ್ತಿ ನಿಗದಿ ಪಡಿಸಿ ಲೇಯರ್ ಮಾಡಬೇಕಿರುವುದು ಈ ಯೋಜನೆಯಲ್ಲಿ ಒಂದು. 
ತುಮಕೂರು ನಗರ ವ್ಯಾಪ್ತಿಯಲ್ಲಿ ಇತರೆ ಇಲಾಖೆಗಳು ನಡೆಸಿರುವ ಸಮೀಕ್ಷೆಗಳ ಮಾಹಿತಿ, ಇಲಾಖಾವಾರು ಮಾಹಿತಿ ಸಂಗ್ರಹಿಸಲು ಅಗತ್ಯ ಕ್ರಮಕೈಗೊಳ್ಳುವುದು.
 
     ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಾಣೆ ನಕ್ಷೆ ವ್ಯಾಪ್ತಿಯ ಮಾಹಿತಿಗಳು, ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ವ್ಯಾಪ್ತಿಯ ಮಾಹಿತಿ ಸೇರ್ಪಡಿಸುವುದು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಎಲ್.ಪಿ.ಎ ವ್ಯಾಪ್ತಿ ಮತ್ತು ನಗರದ ಸುತ್ತ-ಮುತ್ತ 10 ಕೀಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನು ಲೇಯರ್ ಮಾಡಿಸಿ ಜನತೆಗೆ ನಿವೇಶನ/ ವಸತಿ ನೀಡಲು ಮತ್ತು ಸರ್ಕಾರಿ ಯೋಜನೆಗಳಿಗೆ ಅಗತ್ಯ ನಿವೇಶನ ನಿಗದಿ ಪಡಿಸಲು ಲೇಯರ್ ಮಾಡುವುದು, ಎಐಸಿಟಿ ಮಾರ್ಗದರ್ಶಿ ಅನ್ವಯ ನಗರದಲ್ಲಿರುವ ಇಂಜಿನಿಯರ್ ಕಾಲೇಜುಗಳ ವಿದ್ಯಾರ್ಥಿಗಳ ಆಕ್ಟಿವಿಟಿ ಪಾಯಿಂಟ್ಸ್‍ಗೆ ಅನುಗುಣವಾಗಿ ಅವರ ಸಹಕಾರ ಪಡೆಯಲು ಸಲಹೆ ಸೂಚನೆಗಳನ್ನು ನೀಡಲಾಗಿತ್ತು. 
     ಸಂಸದರು ನೀಡಿದ ಸಲಹೆ ಸೂಚನೆಗಳ ಆಧಾರದಲ್ಲಿ ತುಮಕೂರು ಜಿಐಎಸ್ ಮ್ಯಾಪಿಂಗ್ ಕೆಲಸ ಪೂರ್ಣವಾಗಿದೆಯಾ? ಆಗಿದ್ದರೆ ಎಷ್ಟು ಲೇಯರ್‍ಗಳನ್ನು ಅಳವಡಿಸಲಾಗಿದೆ. ಈ ಲೇಯರ್‍ನಲ್ಲಿ ಯಾವ್ಯಾವ ಮಾಹಿತಿಗಳು ದೊರೆಯಲಿವೆ. ಈ ಸೌಲಭ್ಯದಿಂದ ಜನರಿಗೆ ಮಾಹಿತಿ ದೊರೆಯಲಿದೆಯಾ ಎಂಬುದು ತಿಳಿಯಬೇಕಿದೆ. ಸ್ಮಾರ್ಟ್ ಸಿಟಿಯವರು ಮಾಡುತ್ತಿರುವ ಜಿಐಎಸ್ ಮ್ಯಾಪಿಂಗ್ ಲೇಯರ್‍ಗಳು ಸಾರ್ವಜನಿಕರು ನೋಡುವಂತಾಗಬೇಕು. ಅವರಿಗೂ ಮಾಹಿತಿ ತಿಳಿಯಬೇಕು. ಒಟ್ಟಾರೆ ಜಿಐಎಸ್ ಬಗ್ಗೆ ಸಮಗ್ರ ಮಾಹಿತಿ ನಗರದ ನಾಗರಿಕರಿಗೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. 
    ಸಂಸದರ ಸೂಚನೆಯಂತೆ ಮಾರ್ಚ್ 31ರೊಳಗೆ ನೂರು ಜಿಐಎಸ್ ಲೇಯರ್‍ಗಳನ್ನು ಮಾಡುವುದಾಗಿ ಸ್ಮಾರ್ಟ್ ಸಿಟಿ ಎಂಜನಿಯರ್‍ಗಳು ತಿಳಿಸಿದ್ದರು. ಆದರೆ ಇಲ್ಲಿ ಒಂದೇ ಯೋಜನೆಗೆ ನಾಲ್ಕು ಕೋಟಿಯಷ್ಟು ಹಣ ಖರ್ಚು ಮಾಡಿರುವುದರ ಬಗ್ಗೆ ಹಲವು ಅನುಮಾನಗಳು ಕಂಡು ಬರುತ್ತಿವೆ. ತುಮಕೂರು ನಗರಸಭೆಯಿದ್ದಾಗ ಈಗಾಗಲೇ ಜಿಐಎಸ್ ಬೇಸ್ ಮ್ಯಾಪ್ ಮಾಡಿಸಲು ಹಣ ವ್ಯಯಿಸದರೂ ಸಾಫ್ಟ್‍ವೇರ್ ಸರಿಯಿಲ್ಲ ಎಂದು ಮೂಲೆಗೆ ಎಸೆದಿದ್ದರು. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಿಂದ ರೂ 2 ಕೋಟಿ ವೆಚ್ಚದಲ್ಲಿ ಡ್ರೋಣ್ ಸಮೀಕ್ಷೆ ಮಾಡಿಸಲಾಗಿದೆ. ಈ ಬಗ್ಗೆಯೂ ಸಂಪೂರ್ಣ ಮಾಹಿತಿ ಸ್ಮಾರ್ಟ್ ಸಿಟಿಯವರ ಬಳಿ ಸಿಗುತ್ತಿಲ್ಲ. 
      ಪುನಃ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ತುಮಕೂರು ನಗರದ ವ್ಯಾಪ್ತಿಯ ಲೇಯರ್‍ಗಾಗಿ ರೂ 1 ಕೋಟಿ ಯೋಜನೆ ರೂಪಿಸಿದೆ. ಅದರಲ್ಲಿ ಸಂಪೂರ್ಣವಾಗಿ ಲೇಯರ್‍ಗಳು ಪೂರ್ಣಗೊಳಿಸಲಾಗಿಲ್ಲ ಎಂದು ತಿಳಿದು ಬಂದಿದೆ. ಕರ್ನಾಟಕ ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ ಜಿ.ಐಎಸ್ ಬೇಸ್ ಮ್ಯಾಪ್ ಮಾಡಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿತ್ತು. ಇದರ ಖರ್ಚು ವೆಚ್ಚ ಎಷ್ಟು ಎಂಬುದರ ಮಾಹಿತಿ ಸಿಗುತ್ತಿಲ್ಲ. ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಡುತ್ತಿರುವ ಜಿಐಎಸ್ ಮಾಸ್ಟರ್ ಪ್ಲಾನ್‍ನ ಖರ್ಚು ವೆಚ್ಚ ಎಷ್ಟು ಎಂಬುದರ ಮಾಹಿತಿ ಇಲ್ಲ. ಕರ್ನಾಟಕ ನಗರ ನೀರು ಸರಬರಾಜು ಮಂಡಳಿ 24/7  ಕುಡಿಯುವ ನೀರಿನ ಯೋಜನೆಗೆ ಮತ್ತು ಒಳಚರಂಡಿ ಯೋಜನೆಗೆ ಜಿಐಎಸ್ ಆಧಾರಿತ ಸಮೀಕ್ಷೆ ನಡೆಸಿರುವುದರ ವೆಚ್ಚದ ಮಾಹಿತಿ ತಿಳಿಯುತ್ತಿಲ್ಲ. 
 
    ಇದಲ್ಲದೆ ಸ್ಮಾರ್ಟ್ ಸಿಟಿ ಮಾರ್ಗದರ್ಶಿಯಲ್ಲಿ ಕನ್ವರ್ಜೆನ್ಸ್ ಮಾಡಲು ಎಲ್ಲಾ ಇಲಾಖೆಗಳ ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕಿತ್ತು. ಆದರೆ ಇಲ್ಲಿ ಒಂದಕ್ಕೊಂದು ಇಲಾಖೆಗಳು ಸಂಬಂಧವೇ ಇಲ್ಲವೆಂಬಂತೆ ಇರುವುದರಿಂದ ಈ ವ್ಯವಸ್ಥೆಯ ಯೋಜನೆ ಫಲಪ್ರದವಾಗುವುದೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸ್ಮಾರ್ಟ್ ಸಿಟಿಯ ಕಾಮಗಾರಿಗಳ ಸಮೀಕ್ಷೆ ನಡೆಸಲು ವಿವಿಧ ಸಮಿತಿಗಳು ಇದ್ದರೂ ಈ ಸಮಿತಿಗಳು ಯಾಕೆ ಈ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂಬುದು ಸಹ ತಿಳಿಯದಾಗಿದೆ.
    ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಸ್ಮಾರ್ಟ್ ಸಿಟಿ ಸಲಹಾ ಸಮಿತಿಯ ಸಭೆ ಆಯೋಜಿಸಲಾಗಿದ್ದು, ಸ್ಮಾರ್ಟ್ ಸಿಟಿ ಎಂಡಿ ಭೂಬಾಲನ್, ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಸಂಸದ ಜಿ.ಎಸ್.ಬಸವರಾಜು, ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಇದರ ಜೊತೆಗೆ ವಿವಿಧ ಇಲಾಖೆಯ ಮುಖ್ಯಸ್ಥರು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಜನರ ಸಮಸ್ಯೆಗಳು ಹಾಗೂ ಗೊಂದಲಗಳಿಗೆ ಉತ್ತರ ಸಿಗಬಹುದೆ..?
     ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಅಡ್ವೈಸರಿ ಫೋರಂ, ತುಮಕೂರು ಮಹಾನಗರ ಪಾಲಿಕೆ, ಶಾಸಕರ ಪ್ರಗತಿ ಪರಿಶೀಲನೆ ಸಭೆ, ಜಿಲ್ಲಾ ಉಸ್ತುವಾರಿ ಸಚಿವರು ನಡೆಸುವ ಸಭೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಡೆಸುವ ಸಭೆ, ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯ ಸಭೆ, ಕೆಯುಐಡಿಎಫ್‍ಸಿ ನಡೆಸುವ ಸಭೆ ಹಾಗೂ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಗರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬಹುದಿತ್ತು. ಈ ಬಗ್ಗೆ ಕೇವಲ ದಿಶಾ ಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತಿದೆ ಹೊರತು ಇತರೆ ಯಾವುದೇ ಸಭೆಗಳಲ್ಲಿ ಚರ್ಚೆಯಾಗುತ್ತಿಲ್ಲವೇಕೆ..? 
ಕುಂದರನಹಳ್ಳಿ ರಮೇಶ್, ದಿಶಾ ಸಮಿತಿ ಸದಸ್ಯ
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link