ಸ್ಮಾರ್ಟ್‍ಸಿಟಿ ಅವೈಜ್ಞಾನಿಕ, ಅಸ್ಪಷ್ಟ ಕಾಮಗಾರಿಗಳಿಗೆ ಮುಕ್ತಿ ಯಾವಾಗ?


ಕಾಮಗಾರಿ ಸರಿಪಡಿಸಲು ಮೂರ್ನಾಲ್ಕು ತಿಂಗಳು ಬೇಕೆ?

ತುಮಕೂರು:

     ಸೆಪ್ಟೆಂಬರ್ ಮಧ್ಯಭಾಗದಿಂದಲೂ ಖಾಲಿಯಾಗಿಯೇ ಉಳಿದಿದ್ದ ಸ್ಮಾರ್ಟ್‍ಸಿಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ (ಎಂ.ಡಿ.) ಹುದ್ದೆ ನಿನ್ನೆ ಭರ್ತಿಯಾಗಿದೆ. ಪಾಲಿಕೆಯ ಆಯುಕ್ತರಾಗಿ ಡಿ.19ರಂದು ಮರು ನಿಯುಕ್ತಿ ಹೊಂದಿರುವ ಟಿ.ಭೂಬಾಲನ್ ಅವರೆ ಸ್ಮಾರ್ಟ್‍ಸಿಟಿ ಎಂ.ಡಿ.ಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‍ಸಿಟಿ ಮತ್ತು ನಗರ ಪಾಲಿಕೆ ಎರಡನ್ನೂ ಅತ್ಯಂತ ಎಚ್ಚರದಿಂದ ನಡೆಸಿಕೊಂಡು ಹೋಗುವ ಕಾರ್ಯಕ್ಷಮತೆ ಈಗ ಟಿ.ಭೂಬಾಲನ್ ಅವರ ಮೇಲಿದೆ.

    ಡಿ.19 ರಂದು ಸ್ಮಾರ್ಟ್‍ಸಿಟಿ ಎಂ.ಡಿ. ಆಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಮಾತನಾಡಿ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಒಂದು ದಿನದಲ್ಲಿ ಸಾಧ್ಯವಿಲ್ಲ, ಮೂರ್ನಾಲ್ಕು ತಿಂಗಳಾದರೂ ಬೇಕಾಗುವುದು ಎಂದಿದ್ದಾರೆ. ಸಾರ್ವಜನಿಕರು, ಜನಪ್ರತಿನಿಧಿಗಳು ತಾಳ್ಮೆಯಿಂದ ಇದ್ದು, ಸಹಕಾರ ಕೊಡಬೇಕು ಎಂಬ ಮಾತುಗಳನ್ನು ಉಚ್ಚರಿಸಿದ್ದಾರೆ. ಅಂದರೆ, ಮೂರು ತಿಂಗಳ ಕಾಲ ಯಾರೂ ಮಾತನಾಡಬಾರದು ಎಂದರೆ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

     ಬಹುಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಂಡಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿ ಕೆಲವನ್ನು ಈಗಾಗಲೇ ಮುಕ್ತಾಯಗೊಳಿಸಲಾಗಿದೆ. ಮತ್ತೆ ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಹೀಗಿರುವಾಗ ದಿನ ದಿನವೂ ಈ ಕಾಮಗಾರಿಗಳ ಪರಿಶೀಲನೆ ನಡೆಯಬೇಕು. ಅಲ್ಲಿನ ಅವ್ಯವಸ್ಥೆ, ಅಕ್ರಮಗಳನ್ನು ನೋಡಿಕೊಂಡು ಸುಮ್ಮನೆ ಇರಲಾಗದು.

     ಈಗಾಗಲೇ ಕೋಟ್ಯಂತರ ರೂಪಾಯಿಗಳ ಕಾಮಗಾರಿಗಳು ಅವ್ಯವಸ್ಥೆಯಿಂದ ನಡೆದು ಹೋಗಿದ್ದು, ಮುಂದೆಯೂ ಇದೇ ರೀತಿ ಆಗದಿರಲಾರವು ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಸ್ಮಾರ್ಟ್‍ಸಿಟಿ ಕಾಮಗಾರಿಗಳಲ್ಲಿನ ಅವ್ಯವಸ್ಥೆಯ ಬಗ್ಗೆ ಪತ್ರಿಕೆಯು ನಿರಂತರವಾಗಿ ಬೆಳಕು ಚೆಲ್ಲುತ್ತಲೇ ಬರಲಾಗಿದೆ. ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಎಚ್ಚೆತ್ತುಕೊಂಡು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ಇಷ್ಟಾದರೂ ಕಾಮಗಾರಿಗಳಲ್ಲಿ ಗುಣಾತ್ಮಕತೆ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂದರೆ ಅದು ತುಮಕೂರು ಜನರ ಕರ್ಮವೆಂದೇ ಭಾವಿಸಬೇಕು.

     ಸ್ಮಾರ್ಟ್ ಸಿಟಿ ಕಾಮಗಾರಿಗಳು ಒಂದು ಇಲಾಖೆಯ ಅಡಿಯಲ್ಲಿ ನಡೆಯುತ್ತಿಲ್ಲ. ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಬೇಕು. ಆದರೆ ಈ ಸಮನ್ವಯತೆಯೇ ಇಲ್ಲವಾಗಿದೆ. ಅವೈಜ್ಞಾನಿಕ ಕಾಮಗಾರಿಗಳನ್ನು ತಡೆಯುವಲ್ಲಿ ಇಂಜಿನಿಯರ್‍ಗಳು ವಿಫಲರಾಗಿದ್ದಾರೆ. ರಸ್ತೆ ಕಾಮಗಾರಿಗಳಂತೂ ಅಯೋಮಯವಾಗಿವೆ. ಇವುಗಳನ್ನು ಸರಿಪಡಿಸುವ ಕಾರ್ಯ ಆಗಬೇಕಿತ್ತು.

     ಜನರಲ್ ಕಾರ್ಯಪ್ಪ ರಸ್ತೆಯನ್ನು ಮೊದಲು ಆಯ್ಕೆ ಮಾಡಿಕೊಂಡು ಆ ಕಾಮಗಾರಿ ಮುಗಿಸಿದ ನಂತರ ಅಲ್ಲಿನ ಸಮಸ್ಯೆಗಳನ್ನು ಅರಿತು ಇತರೆ ರಸ್ತೆಗಳಲ್ಲಿ ಕಾಮಗಾರಿ ಮಾಡಿ ಎಂದು ಸ್ಮಾರ್ಟ್‍ಸಿಟಿ ಸಭೆಗಳಲ್ಲಿಯೇ ಸೂಚಿಸಲಾಗಿತ್ತು. ಆದರೆ ಈ ಎಲ್ಲ ಸೂಚನೆಗಳೂ ಈಗ ಕಸದ ಬುಟ್ಟಿ ಸೇರಿವೆ. ಸ್ಮಾಟ್‍ಸಿಟಿಗೆ ಸಂಬಂಧಿಸಿದ ಸಮಾಲೋಚನಾ ಮತ್ತು ಪರಿಶೀಲನಾ ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು, ಸೂಚನೆಗಳು ಇದಾವುದೂ ಪಾಲನೆಯಾಗುತ್ತಿಲ್ಲ ಎಂದರೆ ಹೇಗೆ?

    ಬಟವಾಡಿಯಿಂದ ಪ್ರಾರಂಭವಾಗಿರುವ ಬಿ.ಎಚ್.ರಸ್ತೆಯ 6 ಕಿಮೀವರೆಗಿನ ರಸ್ತೆ ಕಾಮಗಾರಿ ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ಇಲ್ಲಿ ಮಾಡಲಾಗುತ್ತಿರುವ ಸರ್ವೀಸ್ ಛೇಂಬರ್ ವ್ಯರ್ಥ, ಮುಂದಾಲೋಚನೆ ಇಲ್ಲದೆ ಮಾಡಿರುವ ಕಾಮಗಾರಿ ಎಂದು ಇಲ್ಲಿನ ಶಾಸಕರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸ್ಮಾರ್ಟ್‍ಸಿಟಿ ಯೋಜನೆಯಡಿ 18 ರಸ್ತೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲೆಲ್ಲಾ ರಸ್ತೆಗಳನ್ನು ಅಗೆದು ಗುಂಡಿ ತೋಡುವುದೇ ಸ್ಮಾರ್ಟ್ ಕಾಮಗಾರಿಯ ಮಹತ್ತರವಾದ ಕೆಲಸ ಎಂಬಂತಾಗಿದೆ. ಅಲ್ಲಲ್ಲಿ ಗುಂಡಿಗಳಲ್ಲಿ ಬಿದ್ದು ಹೋಗಿರುವವರು, ವಾಹನಗಳು ಸಿಲುಕಿಕೊಂಡು ನರಳುತ್ತಿರುವವರು ಬಹಳಷ್ಟು ಜನರಿದ್ದಾರೆ. ರಸ್ತೆ ಕಾಮಗಾರಿಗಳು ನಡೆಯುವಾಗ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಲ್ಲಿ ಫಲಕಗಳನ್ನು ಅಳವಡಿಸಬೇಕು. ಆದರೆ ಪತ್ರಿಕೆಯಲ್ಲಿ ಒಂದಷ್ಟು ವರದಿಗಳು ಪ್ರಕಟವಾದ ನಂತರವೇ ಇಂತಹ ಕ್ರಮಕ್ಕೆ ಮುಂದಾಗಿರುವ ಉದಾಹರಣೆಗಳು ನಗರದ ಅನೇಕ ಕಡೆಗಳಲ್ಲಿ ಕಾಣಬಹುದು.

    ಎಂ.ಜಿ.ರಸ್ತೆ ಕನ್ಸರ್‍ವೆನ್ಸಿಗಳನ್ನು ಈ ಹಿಂದೆ ಪಾಲಿಕೆ ವತಿಯಿಂದಲೇ ಅಭಿವೃದ್ಧಿಪಡಿಸಲಾಗಿತ್ತು. ಕಾಂಕ್ರಿಟ್ ಕೂಡ ಹಾಕಲಾಗಿತ್ತು. ಈಗ ಸ್ಮಾರ್ಟ್‍ಸಿಟಿ ಅಭಿವೃದ್ಧಿ ಯೋಜನೆಯಡಿ ಇಲ್ಲಿ ಪಾರ್ಕಿಂಗ್ ಜಾಗ ಮಾಡಲಾಗಿದ್ದು, ಮತ್ತೆ ಮತ್ತೆ ಹಣ ವೆಚ್ಚವಾಗುವಂತಹ ಕಾಮಗಾರಿಗಳಾಗಿವೆ. ಇಂತಹ ಹಲವಾರು ಅವೈಜ್ಞಾನಿಕ ಯೋಜನೆಗಳು ನಡೆದಿದ್ದು, ಕೆಲವು ಕಣ್ಣಿಗೆ ಕಾಣುತ್ತಿದ್ದರೆ ಮತ್ತೆ ಕೆಲವು ಯಾರಿಗೂ ಕಾಣಿಸುತ್ತಿಲ್ಲವಾಗಿವೆ.

   ಇನ್ನು ಅಮಾನಿಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ. ಇಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸ್ಪಷ್ಟ ಚಿತ್ರಣವಿಲ್ಲ, ಸಮಗ್ರತೆಯೂ ಇಲ್ಲ. ಈ ಹಿಂದೆ ತುಮಕೂರು ಅಮಾನಿಕೆರೆ ಏರಿಯನ್ನು ನಗರಾಭಿವೃದ್ಧಿ ಪ್ರಾಧಿಕಾರವು ಅಭಿವೃದ್ಧಿಪಡಿಸಿತ್ತು. ಇದೀಗ ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ವಿವಿಧ ಹಂತದ ಯೋಜನೆಗಳು ಪ್ರಗತಿಯಲ್ಲಿವೆ. ಒಟ್ಟಾರೆ 47 ಕೋಟಿ ರೂ. ವೆಚ್ಚದಲ್ಲಿ ಅಮಾನಿಕೆರೆ ಉದ್ಯಾನವನ ಅಭಿವೃದ್ಧಿ ಮಾಡಲಾಗುತ್ತಿದ್ದು, ಕೆರೆಯ ಸುತ್ತಲೂ ಏರಿಯನ್ನು ಭದ್ರಪಡಿಸಿ ಅದನ್ನು ಅಭಿವೃದ್ಧಿ ಮಾಡುವ ಕಾಮಗಾರಿಗಾಗಿಯೇ 22 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.

    ಕೆರೆಯ ಏರಿಯಲ್ಲಿ ನೀರು ನುಸುಳಿ ಹೋಗದಂತೆ ಕಲ್ಲುಗಳನ್ನು ಹೊದಿಸಲಾಗುತ್ತಿದ್ದು, ಇಲ್ಲಿ ರಿವೀಲ್ಟ್‍ಮೆಂಟ್ ಕಾಮಗಾರಿ ಪುನರ್ ನಿರ್ಮಾಣ ಆಗಬೇಕಿದೆ. ಅಳವಡಿಸಲಾಗುತ್ತಿರುವ ಕಲ್ಲುಗಳು ನಾನಾ ಗಾತ್ರದ ಅಳತೆಯಲ್ಲಿವೆ. ಸಣ್ಣ ಕಲ್ಲುಗಳನ್ನು ತುರುಕಲಾಗಿದ್ದು, ನೀರು ಕೆರೆ ತುಂಬಿದಾಗ ರಂಧ್ರಗಳಾಗಿ ಏರಿಗೆ ಅಪಾಯವಿರುವ ಸಾಧ್ಯತೆಗಳಿವೆ. ಈ ಬಗ್ಗೆ ವೈಜ್ಞಾನಿಕ ಕಾಮಗಾರಿ ನಡೆಯುತ್ತಿಲ್ಲ ಎಂಬ ಆರೋಪಗಳು ಸಾಕಷ್ಟಿವೆ.

     ಉಪ ಚುನಾವಣೆ ಮುಗಿದ ನಂತರ ಈಗ ಎಲ್ಲವೂ ಸರಿ ಹೋದಂತಿದೆ. ಅಧಿಕಾರಿಗಳು ನೇಮಕವಾಗಿದ್ದಾರೆ. ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಲು ಸ್ವತಂತ್ರ ಮೌಲ್ಯಮಾಪನ ಹಾಗೂ ಯೋಜನಾ ತಂಡವನ್ನು ರಚಿಸಲಾಗಿದೆ. ಹೀಗಿರುವಾಗ ಸ್ಮಾರ್ಟ್‍ಸಿಟಿ ಕಾಮಗಾರಿಗಳು ತ್ವರಿತ ವೇಗ ಪಡೆದುಕೊಳ್ಳಬೇಕಲ್ಲದೆ, ಗುಣಮಟ್ಟದ ಅಸ್ತತ್ವವನ್ನೂ ಉಳಿಸಿಕೊಳ್ಳಬೇಕಿದೆ.

    ಈ ವಿಷಯದಲ್ಲಿ ಒಂದೊಂದು ದಿನವೂ ಪ್ರಮುಖವಾಗಿದ್ದು, ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಲೇಬೇಕಾದ ಅನಿವಾರ್ಯತೆ ಇದೆ. ಎಲ್ಲ ಮುಗಿದ ಹೋದ ನಂತರ ಕಾಮಗಾರಿಗಳ ಬಗ್ಗೆ ಮಾತನಾಡಿ ಪ್ರಯೋಜನವೇನು? ಇದರ ಜೊತೆಗೆ ಈವರೆಗೆ ನಡೆದಿರುವ ಅವೈಜ್ಞಾನಿಕ, ಲೋಪದ ಕಾಮಗಾರಿಗಳ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link