ಅವಿನಾಶ್ ಜಾಧವ್‍ಗೆ ಬಿಜೆಪಿ ಟಿಕೆಟ್ ವಂಶವಾಹಿ ನೋಡದ ಸಂತೋಷ್‍ಜಿ ಎಲ್ಲಿ?

ದಾವಣಗೆರೆ :

        ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೆತ್ರದ ಬಿಜೆಪಿ ಟಿಕೆಟ್ ತಪ್ಪಿದ ಸಂದರ್ಭದಲ್ಲಿ ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ನಮ್ಮ ಪಕ್ಷ ಡಿಎನ್‍ಎ (ವಂಶವಾಹಿ) ನೋಡಿ ಟಿಕೆಟ್ ನೀಡುವುದಿಲ್ಲ ಎಂದಿದ್ದರು. ಈಗ ಉಮೇಶ್ ಜಾಧವ್ ಅವರ ಪುತ್ರ ಡಾ.ಅವಿನಾಶ್ ಜಾಧವ್ ಅವರಿಗೆ ಚಿಂಚೋಳಿ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಿಸಿದೆ. ವಂಶವಾಹಿ ನೋಡದ ಸಂತೋಷ್ ಈಗ ಎಲ್ಲಿಗೆ ಹೋಗಿದ್ದಾರೆಂದು ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್ ಪ್ರಶ್ನಿಸಿದ್ದಾರೆ.

        ದೇಶಪ್ರೇಮಿಗಳ ಪಕ್ಷದಲ್ಲಿ ಮಾತಿಗೂ ಕೃತಿಗೂ ಅಜಗಜಾಂತರ ವ್ಯತ್ಯಾಸ ಎಂಬುದು ಇದೀಗ ಜಗತ್‍ಜಾಹಿರಾಗಿದೆ. ಬಿಜೆಪಿಯವರದ್ದು ಯಾವಾಗಲೂ ಹುಸಿ ದೇಶಪ್ರೇಮ ಮತ್ತು ಅವಕಾಶವಾದಿತನವನ್ನು ರಾಜ್ಯದ ಜನತೆ ಹಲವು ಬಾರಿ ನೋಡಿದ್ದಾರೆ. ಜನರಿಂದ ಚುನಾಯಿತರಾದ ಜನಪ್ರತಿನಿಧಿಗಳನ್ನು ಕುರಿ ಕೋಣಗಳಂತೆ ಕೋಟಿ ಕೋಟಿ ರೂಪಾಯಿ ನೀಡಿ ಖರೀದಿಸುವಂತಹ ಅಪರೇಷನ್ ಕಮಲ ಎಂಬ ಹೆಸರಿನಲ್ಲಿ ರಾಜಕೀಯ ವ್ಯಬಿಚಾರವನ್ನು ದೇಶದಲ್ಲೇ ಮೊಟ್ಟಮೊದಲು ಪ್ರಾರಂಭಿಸಿದ ಅಪಕೀರ್ತಿ ರಾಜ್ಯ ಬಿಜೆಪಿ ನಾಯಕರಿಗೆ ಇದೆ ಎಂದು ಲೇವಡಿ ಮಾಡಿದ್ದಾರೆ.

         ರಾಜ್ಯದಲ್ಲಿ ಈಗಾಗಲೇ ಬಿಎಸ್. ಯಡಿಯೂರಪ್ಪ ಮತ್ತು ಮಕ್ಕಳು, ಸಿ.ಎಂ. ಉದಾಸಿ ಮತ್ತು ಮಗ ಸೇರಿದಂತೆ ಹಲವರು ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ಇವರೆಲ್ಲಾ ಡಿಎನ್‍ಎ ವ್ಯಾಪ್ತಿಯಲ್ಲಿ ಬರುವುದಿಲ್ಲವೆ ಎಂದು ಸಂತೋಷ್ ಅವರನ್ನು ಡಿ. ಬಸವರಾಜ್ ಪ್ರಶ್ನಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ