ಉದ್ಯೋಗದ ಭರವಸೆಗಳು ಪೊಳ್ಳು ಆಶ್ವಾಸನೆಗಳಾಗಿಯೇ ಉಳಿದು ಬಿಟ್ಟಿವೆ. ಪ್ರಧಾನಿಯವರೇ ಹೇಳಿದಂತೆ 10 ಸಾವಿರ ಇರಲಿ, 1 ಸಾವಿರ ಜನರಿಗೂ ಅಲ್ಲಿ ಉದ್ಯೋಗ ದೊರಕಿಸಲು ಸಾಧ್ಯವಾಗಿಲ್ಲ. ಇಲ್ಲಿ ಸುಮಾರು 200 ಮಂದಿ ಖಾಯಂ ನೌಕರರು, 800 ಮಂದಿ ಗುತ್ತಿಗೆ ನೌಕರರು ದುಡಿಯುತ್ತಿರುವ ಅಂದಾಜು ಸಂಖ್ಯೆ ಇದೆ. ಖಾಯಂ ಹುದ್ದೆಗಳು ಉತ್ತರ ಭಾರತದವರ ಪಾಲಾಗಿವೆ.
ಗುಜರಾತಿ ಮತ್ತು ಮಾರ್ವಾಡಿಗಳ ಅಧೀನದಲ್ಲಿ ಇವರೆಲ್ಲ ದುಡಿಯಬೇಕಾಗಿದ್ದು, ಕಸ ಗುಡಿಸುವ, ನೀರು ಹಾಕುವ, ಪರಿಕರಗಳನ್ನು ಸಾಗಿಸುವ, ಪ್ಯಾಕಿಂಗ್ ಮಾಡುವ ಹೀಗೆ ಅಡ್ಡಾಡಿಕೊಂಡು ಕಷ್ಟದ ಕೆಲಸ ಮಾಡುವ ಉದ್ಯೋಗಗಳೆಲ್ಲ ಸ್ಥಳೀಯರ ಪಾಲಾಗಿವೆ. ಸುಮಾರು 800 ಮಂದಿ ಗುತ್ತಿಗೆ ನೌಕರರು ದುಡಿಯುತ್ತಿದ್ದು, ಇವರೆಲ್ಲ ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದಾರೆ. ಉತ್ತರ ಭಾರತದ ಖಾಯಂ ನೌಕರರಿಗೆ ಹೆಚ್ಚು ವೇತನ ಸಿಗುತ್ತಿದ್ದರೆ ಸ್ಥಳೀಯರಿಗೆ 7 ರಿಂದ 8 ಸಾವಿರ ರೂ.ಗಳ ವೇತನ ನೀಡಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ವೇತನ ಕಡಿಮೆ ಎಂದು ಕೇಳುವ ಹಾಗಿಲ್ಲ. ಅನ್ನಲೂ ಆಗದೆ, ಅನುಭವಿಸಲೂ ಆಗದೆ ಅದೆಷ್ಟೋ ಮಂದಿ ಗುತ್ತಿಗೆ ಕಾರ್ಮಿಕರಾಗಿ ಇಲ್ಲಿ ದುಡಿಯುತ್ತಿದ್ದಾರೆ.
ತನ್ನದೇ ಆದ ಗುತ್ತಿಗೆದಾರರನ್ನು ಸಂಸ್ಥೆ ನೇಮಕ ಮಾಡಿಕೊಂಡಿದೆ. ಅವರ ಕೆಳಗೆ ಉದ್ಯೋಗಿಗಳು ದುಡಿಯಬೇಕು. ಕೆಲಸಕ್ಕೆ ಸೇರಿಕೊಂಡ ಮೂರು ತಿಂಗಳ ನಂತರ ವೇತನ ಪಾವತಿಸಲಾಗುತ್ತದೆ. ಆದರೆ ಒಂದು ತಿಂಗಳ ವೇತನ ಹಿಡಿದು ಎರಡು ತಿಂಗಳ ಸಂಭಾವನೆಯನ್ನು ಮಾತ್ರವೆ ನೀಡಲಾಗುತ್ತದೆ ಎನ್ನುತ್ತಾರೆ ಅಲ್ಲಿಂದ ಹೊರಬಂದಿರುವ ಉದ್ಯೋಗಿಗಳು.
ಪ್ರಶ್ನೆ ಮಾಡಿದರೆ ಕೆಲಸ ಬಿಟ್ಟು ಹೋಗಬೇಕಾದ ಪರಿಸ್ಥಿತಿ. ಅದೂ ಸಹ ನಡೆದು ಹೋಗಿದೆ. ಫುಡ್‍ಪಾರ್ಕ್ ಆರಂಭಿಕ ದಿನಗಳಲ್ಲಿ ಗಾರ್ಮೆಂಟ್ಸ್ ಸೇರಿದಂತೆ ತುಮಕೂರಿನ ಕೆಲವು ಕಡೆ ಕೆಲಸ ಮಾಡುತ್ತಿದ್ದವರು ದಿಢೀರ್ ಫುಡ್ ಪಾರ್ಕ್‍ಗೆ ಸೇರಿಬಿಟ್ಟರು. ಅಲ್ಲೇನೋ ಸಿಗಲಿದೆ ಎಂದುಕೊಂಡವರಿಗೆ ನಿರಾಸೆಯೇ ಕಾದಿತ್ತು. ತಮ್ಮ ಮೂಲ ಉದ್ಯೋಗಗಳಿಗೆ ಕೆಲವರು ಮರಳಿದರೆ ಮತ್ತೆ ಕೆಲವರು ಇತರೆ ಉದ್ಯೋಗಗಳನ್ನು ಹುಡುಕಿಕೊಂಡರು.
ಅದೆಷ್ಟೋ ಮಂದಿ ತಿಂಗಳುಗಟ್ಟಲೆ ಕೆಲಸ ಮಾಡಿದ್ದಾರೆ, ಬಿಟ್ಟೂ ಹೋಗಿದ್ದಾರೆ. ಕೆಲವರಿಗೆ ವೇತನವನ್ನೇ ನೀಡಿಲ್ಲ ಎಂಬ ಆರೋಪಗಳಿವೆ. ವಸ್ತುಸ್ಥಿತಿ ಹೀಗಿರುವಾಗ 10 ಸಾವಿರ ಉದ್ಯೋಗ ಸೃಷ್ಟಿ ಎಂಬುದು ಆಗಸದತ್ತ ಕೈಮಾಡಿ ಚಂದಮಾಮನನ್ನು ತೋರಿಸಿದ ಕಥೆಯಾಗಿದೆ. ಇನ್ನು ಪರೋಕ್ಷವಾಗಿ ಉದ್ಯೋಗ ಸಿಗಲಿದೆ ಎಂಬುದರಲ್ಲಿಯೂ ಯಾವ ಹುರುಳೂ ಇಲ್ಲ. ಫುಡ್‍ಪಾರ್ಕ್ ನಂಬಿಕೊಂಡು ಯಾವ ರೈತರೂ ಜೀವನ ಸಾಗಿಸುತ್ತಿಲ್ಲ. ಟನ್‍ಗಟ್ಟಲೆ ಗುಣಮಟ್ಟದ ಉತ್ಪನ್ನ ತಂದರಷ್ಟೇ ಇಲ್ಲಿ ಮಾನ್ಯತೆ. ಇಲ್ಲವಾದರೆ ಅಲ್ಲಿ ರೈತರನ್ನು ಕೇಳುವವರೇ ಇಲ್ಲ.
ಸ್ಥಳೀಯವಾಗಿ ಅನೇಕ ರೈತರು ಟೊಮೆಟೋ, ಈರೇಕಾಯಿ, ಹುರುಳಿ, ಬದನೆ ಇತ್ಯಾದಿ ತರಕಾರಿ ಬೆಳೆಯುತ್ತಾರೆ. ದ್ವಿದಳ ಧಾನ್ಯ, ಏಕದಳ ಧಾನ್ಯ ಬೆಳೆಯುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ತಾವು ಬೆಳೆದ ಉತ್ಪನ್ನ ತಕ್ಷಣಕ್ಕೆ ಹಾಳಾಗದಿರಲೆಂದು ಫುಡ್ ಪಾರ್ಕ್‍ನಲ್ಲಿ ಅಳವಡಿಸಲಾಗಿರುವ ಫ್ರೀಜರ್‍ನಲ್ಲಿ ಇಡಬಹುದೆಂಬ ಆಶಯ ಇತ್ತು. ಆದರೆ ಇಂತಹ ಯಾವ ವ್ಯವಸ್ಥೆಗಳೂ ಅಲ್ಲಿ ಕಾಣುತ್ತಿಲ್ಲ. ಹಾಗಾದರೆ ಕೋಟಿ ಕೋಟಿ ರೂ.ಗಳನ್ನು ವ್ಯಯ ಮಾಡಿ ಅಳವಡಿಸಲಾದ ಉಪಕರಣಗಳಿಂದ ಪ್ರಯೋಜನವಾದರೂ ಏನು?
ಬೃಹತ್ ಶೀಥಲೀಕರಣ ಘಟಕ, ದವಸ ಧಾನ್ಯಗಳನ್ನು ಸಂಗ್ರಹಿಸಲು ಪ್ರತ್ಯೇಕ ಗೋದಾಮು, 0-10 ಡಿಗ್ರಿ ತಾಪಮಾನದ ಫ್ರೀಜರ್‍ಗಳು, ಪ್ರಯೋಗಾಲಯ, ಸಂಸೋಧನೆ ಮತ್ತು ಮೆಷಿನ್ ಪ್ಯಾಕಿಂಗ್ ಘಟಕಗಳು, ಸೂಕ್ಷ್ಮ ವಸ್ತುಗಳು ಕೆಡದಂತೆ ಜೋಪಾನವಾಗಿರಿಸುವ ಹೈಕೇರ್ ರೂ, ಬ್ಯಾಕ್ಟೀರಿಯಾ ವೈರಸ್‍ಗಳನ್ನು ತರಕಾರಿ ಹಣ್ಣಿನಿಂದ ಶೋಧಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಯಂತ್ರೋಪಕರಣಗಳು ಹೀಗೆ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡು ತಲೆ ಎತ್ತಿದ ಫುಡ್‍ಪಾರ್ಕ್‍ನಿಂದ ಯಾರಿಗೆ ಅನುಕೂಲವಾಗುತ್ತಿದೆ?
ಒಡೆದ ಕುಟುಂಬಗಳು
ಇಲ್ಲಿನ ಕೃಷಿ ಭೂಮಿ ಕೈಗಾರಿಕಾ ವಲಯಕ್ಕೆ ಪರಿವರ್ತಿತವಾಗದಿದ್ದರೆ, ಭೂಮಿ ಮಾರಾಟವಾಗದಿದ್ದರೆ ಕುಟುಂಬಗಳಲ್ಲಿ ಸೌಹಾರ್ದತೆ ಕಾಣಬಹುದಾಗಿತ್ತು. ಇದೀಗ ಭೂಮಿ ಕಳೆದುಕೊಂಡು ಬಂದ ಪರಿಹಾರವನ್ನೂ ಉಳಿಸಿಕೊಳ್ಳಲಾಗದೆ ಅನೇಕ ಕುಟುಂಬಗಳು ಜರ್ಝರಿತವಾಗಿವೆ. ಬಹುತೇಕ ಕುಟುಂಬಗಳಲ್ಲಿ ಅಣ್ಣಾ ತಂಗಿ, ಸಹೋದರ ವಾತ್ಸಲ್ಯ ಇಲ್ಲವೇ ಇಲ್ಲ. ಭೂಮಿ ಮಾರಾಟದಿಂದ ಹಣ ಬರುತ್ತಲೇ ಎಲ್ಲರ ಕಣ್ಣು ಅತ್ತ ಬಿದ್ದಿದೆ. ನಮಗೂ ಪಾಲು ಬೇಕು ಎಂದು ಹೆಣ್ಣು ಮಕ್ಕಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ.
ಇಂದಿಗೂ ಸಾಕಷ್ಟು ಕೇಸುಗಳು ತುಮಕೂರು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ. ಕೆಲವರು ರಾಜಿಸೂತ್ರ ಮಾಡಿಕೊಂಡು ಹಣ ಹಂಚಿಕೊಂಡಿದ್ದಾರೆ. ಹೀಗೆ ಹಣ ಹಂಚಿಕೆಯಾಗಿದ್ದರೂ ಆ ಕುಟುಂಬಗಳಲ್ಲಿ ನೆಮ್ಮದಿ ಇಲ್ಲ. ತಾವು ಓಡಾಡುತ್ತಿದ್ದ ಜಾಗವನ್ನು ಬಿಟ್ಟುಕೊಟ್ಟಿರುವುದು, ಅಲ್ಲಿ ಬೇರೆಯವರು ತಳವೂರಿರುವುದು, ಅದೇ ಜಾಗದಲ್ಲಿ ತಮ್ಮವರು ಕೆಲಸಕ್ಕೆ ಹೋಗಿಬರುವುದು ಮತ್ತೊಂದು ಕಡೆ ಜಮೀನು ಖರೀದಿಸಲು ಸಾಧ್ಯವಾಗದೇ ಇರುವುದು, ಕೋರ್ಟ್ ಕಛೇರಿಗಳ ವ್ಯಾಜ್ಯ-ಸುತ್ತಾಟ ಇವೆಲ್ಲವುಗಳಿಂದ ಹಲವು ಕುಟುಂಬಗಳು ಹೈರಾಣಾಗಿ ಹೋಗಿವೆ.
ಹೆಸರಿಗೆ ಮತ್ತು ಲೆಕ್ಕಕ್ಕೆ ಮಾತ್ರ ಆಹಾರ ಸಂಸ್ಕರಣಾ ಘಟಕ. ಸಾಧನೆ ಮಾತ್ರ ಶೂನ್ಯ. ರೈತರ ನೆರವಿಗೆ ಬರಬೇಕಾಗಿದ್ದ, ಸುತ್ತಮುತ್ತಲ ಹಳ್ಳಿಗಳ ಜನರ ನಿರುದ್ಯೋಗ ನಿವಾರಿಸಬೇಕಾಗಿದ್ದ ಈ ಘಟಕ ಸದ್ದಿಲ್ಲದೆ ಪಕ್ಕಾ ವ್ಯವಹಾರದ ಕಂಪನಿಯಾಗಿ ಮಾರ್ಪಟ್ಟಿರುವುದು ಕೆಲವರಲ್ಲಿ ಆತಂಕ ಮೂಡಿಸಿದೆ. ಈ ಸಂಪತ್ತಿಗೆ ಇಲ್ಲಿ ಆಹಾರ ಸಂಸ್ಕರಣಾ ಘಟಕ ತೆರೆಯಬೇಕಿತ್ತೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
