ಬೆಂಗಳೂರು
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸಿ ಸುಲಿಗೆ ಮಾಡಿದ ಕೇಂದ್ರ ಸರ್ಕಾರ, ಬಡವರು, ಜನ ಸಮಾನ್ಯರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಏನು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಸರಕಾರದಲ್ಲಿ 14 ಬಾರಿ ಪೆಟ್ರೋಲ್ ಹಾಗೂ ಡಿಸೆಲ್ ದರ ಹೆಚ್ಚಿಸಲಾಗಿದೆ. ಜಾಗತಿಕ ಮಾರುಕಟ್ಟೆಯ್ಲಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದಾಗಲೂ ಇಂಧನದ ದರ ಕಡಿಮೆ ಮಾಡಿಲ್ಲ. ಬ್ಯಾರೆಲ್ ಬೆಲೆ ಕಡಿಮೆಯಾದ ಪರಿಣಾಮ 2 ಲಕ್ಷ ಕೋಟಿ ರು.ಗೂ ಹೆಚ್ಚು ಹಣ ಉಳಿತಾಯವಾಗಿದೆ, ಆ ಹಣವೆಲ್ಲಾ ಎಲ್ಲಿ ಎಂದು ಪ್ರಶ್ನಿಸಿದರು?.
ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೃಷ್ಣಭೈರೇಗೌಡ ಅವರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದ ಅವರು, ಸರಕು ಮತ್ತು ಸೇವಾ ತೆರಿಗೆ ಜಿಎಸ್‌ಟಿ ಜಾರಿಗೆ ತರುವ ಸಂದರ್ಭದಲ್ಲಿ ಕರ್ನಾಟಕದ ಪರವಾಗಿ ಕೃಷ್ಣಭೈರೇಗೌಡ ಅವರು ಕೇಂದ್ರಕ್ಕೆ ಹಲವು ಸಲಹೆ, ಸೂಚನೆಗಳನ್ನು ನೀಡಿದ್ದರು. ಆದರೆ, ಇಂದು ಜಿಎಸ್‌ಟಿ ಬಡವರ ವಿರೋಧಿಯಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡವರು ಅಂಗಡಿಯನ್ನೇ ಮುಚ್ಚುವ ಸ್ಥಿತಿಗೆ ಬಂದಿದ್ದಾರೆ ಎಂದರು.
ಕೇಂದ್ರ ಸಚಿವರಾಗಿ ಡಿ.ವಿ. ಸದಾನಂದ ಗೌಡ ಅವರು ತಮ್ಮ ಐದು ವರ್ಷಗಳ ಸಾಧನೆ ಮೇಲೆ ಮತಯಾಚಿಸಬೇಕು. ಆದರೆ ಸಾಧನೆಗಳನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕಿ ಎಂದು ಕೇಳುವುದು ಏಕೆ?. ಮೋದಿ ಹೆಸರಿನಲ್ಲಿ ಮತ ಕೇಳುವುದಾದರೆ ನಿಮ್ಮ ಸಾಧನೆ ಏನು?. ಹೀಗಿರುವಾಗ ಜನ ನಿಮಗೇಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ರೈತರ ಸಂಕಷ್ಟ ದೂರ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರಕಾರ ಐದು ವರ್ಷದಲ್ಲಿ ರೈತರಿಗಾಗಿ ಸಣ್ಣ ಯೋಜನೆಯನ್ನೂ ಜಾರಿಗೊಳಿಸಿಲ್ಲ. ಸಹಸ್ರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಸಾಲಮನ್ನಾ ಮಾಡಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಶಿಕ್ಷಣ ನೀಡಿಲ್ಲ. ಇದು ಬಿಜೆಪಿ ಸರಕಾರದ ಸಾಧನೆ ಎಂದು ವ್ಯಂಗ್ಯವಾಡಿದರು.
ಸದಾನಂದ ಗೌಡರು ಈ ಕ್ಷೇತ್ರದಲ್ಲಿ ತಮ್ಮ ಮುಖವನ್ನೇ ತೋರಿಸಿಲ್ಲ. ಈಗ ಮತ ನೀಡಿ ಎಂದು ಬಂದಿದ್ದಾರೆ. ಅದು ಅವರ ಸಾಧನೆಯಾಗಿದೆ. ಈಗ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ ಎಂದು ಹೇಳಿದರು.