ಬೆಂಗಳೂರು
ಒಡಿಶಾ ಹಾಗೂ ಆಂಧ್ರ ಪ್ರದೇಶದಿಂದ ಚಾಕೊಲೆಟ್ ಡಬ್ಬಗಳ ಅಡಿಯಲ್ಲಿ ಗಾಂಜಾ ಇಟ್ಟುಕೊಂಡು ನಗರಕ್ಕೆ ರೈಲು ಬಸ್‌ಗಳಲ್ಲಿ ತಂದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿ 30 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರದ ಅನಂತ್‌ಪುರ ಜಿಲ್ಲೆಯ ಶಿವಕುಮಾರ್ ಅಲಿಯಾಸ್ ಯರ್ಲಾ (34)ನನ್ನು ಬಂಧಿಸಿ 10 ಕೆಜಿ ಗಾಂಜಾ ವಶಪಡಿಸಿಕೊಂಡರೆ, ಒಡಿಶಾದ ಕಂದಮಾಲ ಜಿಲ್ಲೆಯ ರತ್ನಾಕರ್ ಸಾಹು (41) ಹಾಗೂ ಪಂಕಜ್ ಡಿಂಗಲ್ (45) ಎಂಬುವರನ್ನು ಬಂಧಿಸಿ 25 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.
ವರ್ತೂರು, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಬೊಮ್ಮನ ಹಳ್ಳಿ, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ ಇನ್ನಿತರ ಕಡೆಗಳಲ್ಲಿ ಸಾಫ್ಟ್‌ವೇರ್ ಕಂಪನಿ ನೌಕರರಿಗೆ,ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಚಾಕೊಲೇಟ್ ಡಬ್ಬಗಳಲ್ಲಿ ಕೆಳಗೆ ಗಾಂಜಾ ಇಟ್ಟು ಮೇಲೆ ಚಾಕೊಲೇಟ್ ಇಟ್ಟುಕೊಂಡು ರೈಲುಗಳಲ್ಲಿ ಕಳ್ಳ ಸಾಗಾಣೆ ಮಾಡುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಆರೋಪಿ ಶಿವಕುಮಾರ್‌ನನ್ನು ಪೊಲೀಸರು ಮಾರುವೇಷದಲ್ಲಿ ಸಿಗರೇಟ್ ಮಾಡುವವರಂತೆ ಹೋಗಿ ರೈಲು ನಿಲ್ದಾಣದಲ್ಲಿ ಬಂಧಿಸುವಲ್ಲಿ ಇನ್ಸ್‌ಪೆಕ್ಟರ್ ಪ್ರವೀಣ್ ಬಾಬು ಮತ್ತವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
39 ಮಂದಿ ಬಂಧನ
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮಾದರ ವಸ್ತುಗಳ ಮಾರಾಟ ಸೇವನೆ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ದಕ್ಷಿಣ ವಿಭಾಗದ ಪೊಲೀಸರು 27 ಪ್ರಕರಣಗಳನ್ನು ದಾಖಲಿಸಿ 39 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಗಳಿಂದ 75 ರೂ. ಸಾವಿರ ಮೌಲ್ಯದ 2. ಕೆ.ಜಿ. 576 ಗ್ರಾಂ ಗಾಂಜಾ, 12 ಗ್ರಾಂ. ಎಂ.ಡಿ.ಎಂ.ಎ, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ. ರೋಹಿಣಿ ಕಟೋಚ್ ತಿಳಿಸಿದ್ದಾರೆ.
ಬನಶಂಕರಿ 4, ಜಯನಗರ 3, ಕೋಣನಕುಂಟೆ ಕೆ.ಎಸ್.ಲೇಔಟ್ ತಲಾ 6, ಸುಬ್ರಮಣ್ಯಪುರ 3, ತಲಘಟ್ಟಪುರ, ಪುಟ್ಟೇನಹಳ್ಳಿ ತಲಾ 2, ಜೆ.ಪಿ.ನಗರ ಸಿದ್ದಾಪುರ ತಲಾ ಒಂದು ಸೇರಿ 27 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








