ಉದ್ಯೋಗ ಮೇಳ: ಯಾರಿಗೆ ಎಷ್ಟು ಅನುಕೂಲ…?

ತುಮಕೂರು

       `ತುಮಕೂರು ನಗರದಲ್ಲಿ ಆಯೋಜಿತವಾಗಿದ್ದ “ಬೃಹತ್ ಉದ್ಯೋಗ ಮೇಳ” ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಯುವ ಉದ್ಯೋಗಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಮುಕ್ತವಾಗಿ ತೆರೆದಿಟ್ಟಿದೆ’ ಎಂದೇ `ಮೇಳ’ದ ಸಫಲತೆ ಕುರಿತು ವಿಶ್ಲೇಷಿಸಲಾಗುತ್ತಿದೆ.
ಇದೇ ಫೆ.16 ಮತ್ತು 17 ರಂದು ತುಮಕೂರು ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಈ “ಬೃಹತ್ ಉದ್ಯೋಗ ಮೇಳ” ಆಯೋಜಿತವಾಗಿತ್ತು.

         ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಮೇಳ ಏರ್ಪಟ್ಟಿತ್ತು. ಎರಡೂ ಜಿಲ್ಲೆಗಳಿಂದ `ಉದ್ಯೋಗಾರ್ಥಿ’ಗಳಾಗಿ ವಿಶೇಷವಾಗಿ ಗ್ರಾಮಾಂತರದ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ಹೊಸ-ಹೊಸ ನಿರೀಕ್ಷೆಗಳಿಂದ ಭಾಗವಹಿಸಿದ್ದರು. ಈ “ಮೇಳ”ದಿಂದ ಆದ ಪ್ರಯೋಜನ ಕುರಿತು ಈಗ ನಡೆದಿರುವ ಪರಾಮರ್ಶೆಯಲ್ಲಿ ಇಂತಹುದೊಂದು ವಿಶ್ಲೇಷಣೆ ಕೇಳಿಬರುತ್ತಿದೆ.

        40 ಲಕ್ಷ ರೂ. ವೆಚ್ಚ,  120 ಕಂಪನಿಗಳು ಭಾಗಿ 40 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ನಡೆದ ಎರಡು ದಿನಗಳ ಅವಧಿಯ “ಮೇಳ”ಕ್ಕೆ ಒಟ್ಟು 120 ವಿವಿಧ ಕಂಪನಿಗಳು `ಉದ್ಯೋಗದಾತ’ರಾಗಿ ಭಾಗವಹಿಸಿದ್ದವು. ಇವುಗಳಲ್ಲಿ ಕೆಲವು ಕಂಪನಿಗಳು ಒಂದು ದಿನ, ಮತ್ತೆ ಕೆಲವು ಕಂಪನಿಗಳು ಎರಡೂ ದಿನಗಳ ಕಾಲ ಇಲ್ಲಿದ್ದು ತಮ್ಮ -ತಮ್ಮ ಕಂಪನಿಗಳ ಬಗ್ಗೆ ಹಾಗೂ ತಮ್ಮ ಕಂಪನಿಯಲ್ಲಿರುವ ಉದ್ಯೋಗಗಳ ಬಗ್ಗೆ ಹಾಗೂ ತಮ್ಮ ಕಂಪನಿಗೆ ಅಗತ್ಯವಿರುವ ಉದ್ಯೋಗಾರ್ಥಿಗಳ ಬಗ್ಗೆ ಸವಿವರ ಮಾಹಿತಿಗಳನ್ನು ಪ್ರಚುರಪಡಿಸಿದವು.

8,926 ಜನ ಹಾಜರಿ

      `ಮೇಳ’ಕ್ಕೆ ಉದ್ಯೋಗಾರ್ಥಿಗಳ ಪ್ರತಿಕ್ರಿಯೆಯೂ ಆಶಾದಾಯಕವಾಗಿಯೇ ವ್ಯಕ್ತವಾಗಿದೆ. `ನನಗೆ ಉದ್ಯೋಗ ಬೇಕು’ ಎಂದು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದ 8,926 ಉದ್ಯೋಗಾರ್ಥಿಗಳು `ಮೇಳ’ಕ್ಕೆ ಹಾಜರಾಗಿದ್ದರು. ಎಸ್.ಎಸ್.ಎಲ್.ಸಿ. ಅನುತ್ತೀರ್ಣರು ಹಾಗೂ ಎಸ್.ಎಸ್.ಎಲ್.ಸಿ. ಉತ್ತೀರ್ಣರು, ಪಿ.ಯು.ಸಿ., ಬಿ.ಎ.-ಬಿಕಾಂ ಇತ್ಯಾದಿ ಪದವೀಧರರು, ಐ.ಟಿ.ಐ., ಡಿಪ್ಲಮೊ ಪದವೀಧರರು ಈ ನೋಂದಣಿಯಲ್ಲಿ ಸೇರಿದ್ದರು.

2,594 ಜನರಿಗೆ ಉದ್ಯೋಗಾವಕಾಶ

        `ಮೇಳ’ಕ್ಕೆ ನೋಂದಾವಣಿ ಮಾಡಿಕೊಂಡು `ಮೇಳ’ಕ್ಕೆ ಆಗಮಿಸಿ ವಿವಿಧ ಕಂಪನಿಗಳ ಮಳಿಗೆಗಳಿಗೆ ಭೇಟಿ ಕೊಟ್ಟು ತಮಗೆ ಒಪ್ಪಿಗೆಯಾದ ಕಂಪನಿಗೆ ಸ್ವವಿವರದ ಅರ್ಜಿ ಕೊಟ್ಟವರಲ್ಲಿ ಒಟ್ಟು 2,594 ಜನ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕಂಪನಿಗಳಿಂದ ವಿವಿಧ ರೀತಿಯ ಉದ್ಯೋಗಾವಕಾಶದ `ನೇಮಕಾತಿ ಪತ್ರ’ ದೊರೆತಿದೆಯೆಂಬುದು ಈ `ಮೇಳ’ದ ಫಲಿತಾಂಶ ಎಂದು ಬಿಂಬಿಸಲಾಗಿದೆ. ಪ್ರಯತ್ನ ಮುಂದುವರೆಸಿದಲ್ಲಿ ಮಿಕ್ಕವರಿಗೂ ಉದ್ಯೋಗಗಳು ದೊರೆಯಲಿವೆ ಎಂದು ಹೇಳಲಾಗುತ್ತಿದೆ.

ಅಭ್ಯರ್ಥಿಗಳಿಗೆ ಮಾರ್ಗದರ್ಶನ

        ಈ `ಮೇಳ’ದಲ್ಲಿ ಬೆಳಗಿನಿಂದ ಸಂಜೆಯವರೆಗೆ ಇಲ್ಲಿಗೆ ಬಂದ ಉದ್ಯೋಗಾಕಾಂಕ್ಷಿಗಳಿಗೆ ವಿವಿಧ ಕಂಪನಿಗಳ ಅಧಿಕಾರಿಗಳಿಂದ ಅತ್ಯಂತ ಉಪಯುಕ್ತ ಮಾರ್ಗದರ್ಶನ ಲಭಿಸಿದ್ದು `ಮೇಳ’ದ ಮತ್ತೊಂದು ಪ್ಲಸ್ ಪಾಯಿಂಟ್ ಎನ್ನಲಾಗಿದೆ.

          ಸಾಮಾನ್ಯವಾಗಿ ಯಾವುದೇ ಉದ್ಯೋಗಾರ್ಥಿಯು ಕಂಪನಿಯ ಬಾಗಿಲಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಒಂದು ಕಂಪನಿಯಿಂದ ಮತ್ತೊಂದು ಕಂಪನಿಯ ಬಾಗಿಲು ತಟ್ಟಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗಂತೂ ಇದು ಅತಿ ಕಷ್ಟದ ವಿಷಯ. ಆದರೆ ಈ `ಮೇಳ’ದಿಂದಾಗಿ ಅಭ್ಯರ್ಥಿಗಳು ಒಂದೇ ಸ್ಥಳದಲ್ಲಿ , ಏಕಕಾಲದಲ್ಲಿ 120 ಕಂಪನಿಗಳನ್ನು ಪರಿಚಯಿಸಿಕೊಳ್ಳಲು ಸಾಧ್ಯವಾಗಿದೆ. ತನಗಿಷ್ಟವಾದ ಹಾಗೂ ತನ್ನ ವಿದ್ಯಾರ್ಹತೆಗೆ ಅನುಕೂಲವಾದ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಅನುಕೂಲವಾಗಿದೆ.

         ಇದರ ಜೊತೆ-ಜೊತೆಗೇ ಕಂಪನಿ ಅಧಿಕಾರಿಗಳ ಮಾರ್ಗದರ್ಶನ ದೊರೆತಿರುವುದು ಗಮನೀಯ ಸಂಗತಿ. ಏಕೆಂದರೆ ಅಭ್ಯರ್ಥಿಗಳಿಗೆ ಶಿಕ್ಷಣ ಇರಬಹುದು. ಆದರೆ ಉದ್ಯೋಗ ಅರಸುವುದು ಹೇಗೆಂಬುದರ ಬಗ್ಗೆ ಅರಿವಿರಲಾರದು. ಈ ನಿಟ್ಟಿನಲ್ಲಿ ಇಂತಹ ತರಬೇತಿ ಪರಿಣಾಮ ಬೀರುತ್ತದೆ.

         ಅರ್ಜಿಯನ್ನು ಸಿದ್ಧಗೊಳಿಸುವುದು ಹೇಗೆ? ಅರ್ಜಿಯೊಂದರಲ್ಲಿ ಇರಬೇಕಾದ ಮಾಹಿತಿಗಳೇನು? ಯಾರಿಗೆ ಅರ್ಜಿ ಸಲ್ಲಿಸಬೇಕು? ಸಂದರ್ಶನ ಎದುರಿಸುವುದು ಹೇಗೆ? ಸಂದರ್ಶನಕ್ಕೆ ಹೇಗೆ ಹೋಗಬೇಕು? ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಯ ಆಟಿಟ್ಯೂಡ್ ಯಾವ ರೀತಿ ಇರಬೇಕು? ಡ್ರೆಸ್ ಕೋಡ್ ಹೇಗಿರಬೇಕು? ತಾನು ಅರ್ಜಿ ಸಲ್ಲಿಸುವ, ಸಂದರ್ಶನಕ್ಕೆ ತೆರಳುವ ಕಂಪನಿಯ ಬಗ್ಗೆ ತನಗೆಷ್ಟು ಮಾಹಿತಿ ಇದೆ?” ಎಂಬಿತ್ಯಾದಿ ಸಂಗತಿಗಳ ಬಗ್ಗೆ ಕಂಪನಿಗಳ ಅಧಿಕಾರಿಗಳು ಸವಿವರ ಮಾಹಿತಿ ನೀಡಿದ್ದು, ಇದು ಉದ್ಯೋಗಾರ್ಥಿಗಳಿಗೆ ತುಂಬ ಸಹಕಾರಿಯಾಗಲಿದೆ ಎಂದು ಹೇಳಲಾಗುತ್ತಿದೆ.

        15,000 ರೂ. ಕನಿಷ್ಠ ವೇತನ, ವಿಪುಲ ಉದ್ಯೋಗಾವಕಾಶಗಳು ಯಾವುದೇ ಕಂಪನಿ ಇಂದು ಸರ್ಕಾರದ ನಿಯಮದ ಪ್ರಕಾರ ಒಬ್ಬ ಉದ್ಯೋಗಿಗೆ ಕನಿಷ್ಠ 15,000 ರೂ. ಮಾಸಿಕ ವೇತನ ನೀಡುತ್ತದೆ. ಅಭ್ಯರ್ಥಿಗಳು ಆಯಾ ಕಂಪನಿಯಲ್ಲಿ ಕನಿಷ್ಠ ಕಾಲಾವಧಿಯಾದರೂ ಕಾರ್ಯನಿರ್ವಹಿಸಬೇಕೆಂದು ಕಂಪನಿಗಳು ನಿರೀಕ್ಷಿಸುತ್ತವೆ. ಎಸ್.ಎಸ್.ಎಲ್.ಸಿ./ ಪಿ.ಯು.ಸಿ.ಯಲ್ಲಿ ಉತ್ತೀರ್ಣತೆ ಅಥವಾ ಅನುತ್ತೀರ್ಣತೆ ಆಗಿರುವವರಿಗೆ ಹಾಗೂ ವಿವಿಧ ಪದವೀಧರರುಗಳಿಗೆ ವಿಪುಲವಾದ ಉದ್ಯೋಗಾವಕಾಶಗಳಿವೆ. ನಗರ ಪ್ರದೇಶಗಳಲ್ಲಿ ಪಾಳಿಯಲ್ಲಿ ಬೇರೆ ಬೇರೆ ಕೆಲಸ ಮಾಡಬಹುದು.

       ಆದರೆ 18 ರಿಂದ 25 ರ ವಯೋಮಾನದ ಯುವಜನರು ಕೆಲಸದ ತಾರತಮ್ಯ ಮನೋಭಾವವಿಲ್ಲದಂತೆ ಮುನ್ನುಗ್ಗಬೇಕಷ್ಟೇ. ಪೋಷಕರ ಮನೋಧರ್ಮವೂ ಬದಲಾಗಬೇಕಾಗಿದೆ. ಮನೆಯ ಮುಂದೆಯೇ ಕೆಲಸ ಸಿಗಬೇಕೆಂದು ಬಯಸುವವರೂ ಇದ್ದು, ಅಂಥವರು ಅವಕಾಶವಂಚಿತರಾಗುತ್ತಾರೆ. ಆದರೆ ಎಲ್ಲಿಯಾದರೂ ಸರಿ, ಯಾವುದೇ ಉದ್ಯೋಗವಾದರೂ ಸರಿ ಎಂದು ಮುನ್ನುಗ್ಗುವವರು ಜೀವನದಲ್ಲಿ ನೆಲೆ ನಿಲ್ಲಬಹುದು.

         ಎಲ್ಲರಿಗೂ ಸರ್ಕಾರಿ ಉದ್ಯೋಗವೇ ಲಭಿಸುವುದು ಸಾಧ್ಯವಿಲ್ಲ. ಖಾಸಗಿ ವಲಯದಲ್ಲಿ ಉದ್ಯೋಗಗಳು ಹೇರಳವಾಗಿವೆ. ಅದನ್ನು ಬಳಸಿಕೊಳ್ಳುವ ಸಂದರ್ಭ ಈಗ ಬರುತ್ತಿದೆ” ಎಂಬ ಅಭಿಪ್ರಾಯ ಅಧಿಕಾರಿಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ.

        ಯಾವುದೇ ಉದ್ದಿಮೆ ನಡೆಸುವುದು ಈಗ ಸುಲಭಸಾಧ್ಯವಲ್ಲ. ನೂರಾರು ಸಮಸ್ಯೆಗಳಿರುತ್ತವೆ. ಅವುಗಳಲ್ಲಿ ಕಾರ್ಮಿಕರ ಸಮಸ್ಯೆಯೂ ಒಂದು. ಕಾರ್ಮಿಕರು ಪದೇ ಪದೇ ಕೆಲಸ ಬಿಟ್ಟುಬಿಡುತ್ತಾರೆ. ಆಗ ಉದ್ದಿಮೆದಾರರು ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗುತ್ತದೆ. ಇದು ಒಂದು ರೀತಿಯ ಸಮಸ್ಯೆಯಾದರೆ, ಇನ್ನೊಂದು ಕಡೆಯಲ್ಲಿ ಕಾರ್ಮಿಕರಿಗೂ ವೈಯಕ್ತಿಕ ಸಮಸ್ಯೆಗಳಿರುತ್ತವೆ. ಇದಕ್ಕಾಗಿ ಕಾರ್ಮಿಕರನ್ನೂ ಟೀಕಿಸುವಂತಿಲ್ಲ. ಕಾರ್ಮಿಕರಿಗೂ ತಮ್ಮದೇ ಆದ ಕೌಟುಂಬಿಕ ಸಮಸ್ಯೆ, ಜವಾಬ್ದಾರಿಗಳಿರುತ್ತವೆ. ಹೆಚ್ಚಿನ ವೇತನ ಬಯಸಿ, ಅವರು ಬೇರೆ ಉದ್ಯೋಗಕ್ಕೆ ಹೋಗಬಹುದು. ಕೌಟುಂಬಿಕ ಕಾರಣದಿಂದ ಕೆಲಸ ಬಿಟ್ಟು ಊರಿಗೆ ತೆರಳಿಬಿಡಬಹುದು. ಆದ್ದರಿಂದ ಇದು ಆಯಾ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ” ಎಂದೂ ಕೆಲವರು ಹೇಳುತ್ತಾರೆ.

     ಬದಲಾಗಿರುವ ಈಗಿನ ಸಾಮಾಜಿಕ ಸನ್ನಿವೇಶದಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಅನೇಕ ಅವಕಾಶಗಳು ದೊರಕುತ್ತವೆ. ಬೆಂಗಳೂರಿನಂತಹ ನಗರಗಳಲ್ಲಿ ಎರಡು ಮೂರು ರೀತಿಯ ಕೆಲಸ ಮಾಡಿಕೊಂಡು ಬದುಕುವವರೂ ಇರುತ್ತಾರೆ. ಯುವಜನರು ಮನೆ ಬಿಟ್ಟು ಬಂದು ಕೆಲಸ ಮಾಡುವ ಮನಃಸ್ಥಿತಿ ಹೊಂದಬೇಕು. ಪೋಷಕರೂ ಮಕ್ಕಳನ್ನು ಕಳಿಸಬೇಕು. ಆದರೆ ಈಗಂತೂ ಒಬ್ಬರೇ ಮಗ/ಮಗಳಿರುವ ಕುಟುಂಬಗಳು ಹೆಚ್ಚುತ್ತಿರುವುದರಿಂದ ಪೋಷಕರು ಸಾಮಾನ್ಯವಾಗಿ ಮಕ್ಕಳನ್ನು ಪರಸ್ಥಳಕ್ಕೆ ಕಳಿಸಲು ಹಿಂಜರಿಯುತ್ತಾರೆ. ಇದು ಸಾಮಾಜಿಕ ಸಮಸ್ಯೆ” ಎಂಬ ಮಾತುಗಳೂ ಉಂಟು.

ಉದ್ಯೋಗಕ್ಕೆ ತೆರಳುವುದು  ಅವರ ವೈಯಕ್ತಿಕ ನಿರ್ಧಾರ:

       ಪ್ರಸ್ತುತ ಈ `ಬೃಹತ್ ಉದ್ಯೋಗ ಮೇಳ’ದಲ್ಲಿ 2,594 ಜನರಿಗೆ ಉದ್ಯೋಗಗಳು ಲಭಿಸಿವೆಯೆಂಬುದು ನಿಜ. ಇವರೆಲ್ಲರಿಗೂ ನೇಮಕಾತಿ ಪತ್ರಗಳೂ ದೊರೆತಿವೆ. ಆದರೆ ಆ ಉದ್ಯೋಗಕ್ಕೆ ತೆರಳುವುದು ಅಂತಿಮವಾಗಿ ಅವರವರ ವೈಯಕ್ತಿಕ ತೀರ್ಮಾನವನ್ನು ಅವಲಂಬಿಸಿರುತ್ತದೆ. ಸರ್ಕಾರವೇನಿದ್ದರೂ ಉದ್ಯೋಗದಾತರ ಮತ್ತು ಉದ್ಯೋಗಾರ್ಥಿಗಳ ನಡುವಿನ ಕೊಂಡಿಯಾಗಿ `ಉದ್ಯೋಗಮೇಳ’ದ ಮೂಲಕ ವೇದಿಕೆಯನ್ನು ಸೃಷ್ಟಿಸಿಕೊಡಬಹುದು. ಆದರೆ ನಿರ್ಧಾರವೇನಿದ್ದರೂ ಉದ್ಯೋಗಾಕಾಂಕ್ಷಿಗಳದ್ದೇ ಆಗಿರುತ್ತದೆ. ಆದರೂ ಸಹ ಬಹುತೇಕ ಯುವಜನರು ಉದ್ಯೋಗಗಳಿಗೆ ತೆರಳುತ್ತಾರೆಂಬುದರಲ್ಲಿ ಸಂಶಯವಿಲ್ಲ” ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸುತ್ತಾರೆ.

ಹೊಸ ಇಲಾಖೆ, ಹೊಸ ಯತ್ನ

         ಇನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಎಂಬುದು ಹೊಸ ಇಲಾಖೆಯಾಗಿದೆ. ತುಮಕೂರು ನಗರದ ಬಾಳನಕಟ್ಟೆ ಪ್ರದೇಶದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದ ಪಕ್ಕ ಇರುವ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಮೊದಲನೇ ಮಹಡಿಯಲ್ಲಿ ಈ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಸೀಮಿತ ಅಧಿಕಾರಿ-ಸಿಬ್ಬಂದಿ ಇಲ್ಲಿಗೆ ನಿಯುಕ್ತಿಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಲಾಖೆಯ ಕೆಲಸ ಕಾರ್ಯಗಳು ಬಹುತೇಕ ಆನ್‍ಲೈನ್‍ನಲ್ಲೇ ಆಗುತ್ತವೆ.

         ಕೌಶಲ್ಯಾಭಿವೃದ್ಧಿಗೆ ತರಬೇತಿ ನೀಡಲು ಬಯಸುವ ಸಂಸ್ಥೆಗಳು ಆನ್‍ಲೈನ್‍ನಲ್ಲೇ ನೋಂದಣಿ ಮಾಡಿಕೊಂಡು ಸರ್ಕಾರಕ್ಕೆ ನಿಗದಿತ ಶುಲ್ಕ ಪಾವತಿಸಬೇಕು. ಸರ್ಕಾರ ನಿಗದಿಪಡಿಸಿದ ನಿಯಮಾವಳಿ ಪ್ರಕಾರ ಮೂಲ ಸೌಕರ್ಯ ಹೊಂದಿರಲೇಬೇಕು. ಇಲಾಖೆಯ ಉನ್ನತಾಧಿಕಾರಿಗಳು ಅನಿರೀಕ್ಷಿತ ತಪಾಸಣೆ ನಡೆಸಿ, ಇಂಥ ಸಂಸ್ಥೆಗಳು ಹೊಂದಿರುವ ಮೂಲಸೌಕರ್ಯಗಳನ್ನು ಪರಿಶೀಲಿಸಿ ಆನ್‍ಲೈನ್‍ನಲ್ಲೇ ಮಾಹಿತಿ ರವಾನಿಸುತ್ತಾರೆ. ಸಮರ್ಪಕ ಸಂಸ್ಥೆಗಳಿಗೆ ತರಬೇತಿ ನೀಡುವ ಬಗ್ಗೆ ಮಾನ್ಯತೆ ದೊರಕುತ್ತದೆ.

         ಇಂತಹ ಮಾನ್ಯತೆ ಪಡೆದ ಸಂಸ್ಥೆಗಳಿಗೆ ನೋಂದಾಯಿತ ಉದ್ಯೋಗಾರ್ಥಿಗಳನ್ನು ಸಾಮಾಜಿಕ ನ್ಯಾಯದ (ಮೀಸಲಾತಿ) ಪ್ರಕಾರ ಕೌಶಲ್ಯ ತರಬೇತಿಗೆ ಕಳಿಸಲಾಗುತ್ತದೆ. ಇಂತಹ ಉದ್ಯೋಗಾರ್ಥಿಗಳ ತರಬೇತಿ ವೆಚ್ಚವನ್ನು ಸರ್ಕಾರವೇ ಆಯಾ ಸಂಸ್ಥೆಗೆ ಭರಿಸುತ್ತದೆ. ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಸೂಕ್ತ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ತರಬೇತಿ ಸಂಸ್ಥೆಯೂ ಪರಿಶ್ರಮ ಪಡಬೇಕೆಂಬುದು ಸರ್ಕಾರ ನಿಯಮಾವಳಿಗಳ ಮೂಲಕ ಸೂಚಿಸಿದೆ.

         ಆದಕಾರಣ ತರಬೇತಿ ಕೊಡುವ ಸಂಸ್ಥೆಯು ಉದ್ಯೋಗದಾತ ಕಂಪನಿಗಳೊಂದಿಗೆ ನಿಕಟ ಸಂಪರ್ಕ ಹೊಂದುವುದು ಅನಿವಾರ್ಯವಾಗುತ್ತದೆ. ಉದ್ಯೋಗ ದೊರೆತರೆ ಮಾತ್ರ ಆ ತರಬೇತಿ ಸಂಸ್ಥೆಯ ವಿಶ್ವಾಸಾರ್ಹತೆ ಹೆಚ್ಚಲಿದೆ. ಆಗ ಮಾತ್ರ ಹೊಸಹೊಸ ಅಭ್ಯರ್ಥಿಗಳು ತರಬೇತಿಗಾಗಿ ಅಲ್ಲಿಗೆ ನಿಯೋಜನೆಗೊಳ್ಳುತ್ತಾರೆ.

         ಇನ್ನು ಯಾವುದೇ ಅಭ್ಯರ್ಥಿ ಉದ್ಯೋಗ ಪಡೆಯಬೇಕಾದರೆ ಆತನಲ್ಲಿ ಕೌಶಲ್ಯ ಇರಬೇಕಾದುದು ಅಗತ್ಯ. ಈ ನಿಟ್ಟಿನಲ್ಲಿ ಇಂತಹ ಕೌಶಲ್ಯ ತರಬೇತಿಗಳು ಅನಿವಾರ್ಯ. ಕೌಶಲ್ಯ ತರಬೇತಿ ಪಡೆಯಬಯಸುವವರು ಆನ್‍ಲೈನ್ ಮೂಲಕ ಕೌಶಲ್ಯಾಭಿವೃದ್ಧಿ ಇಲಾಖೆಯ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಯು ಸರ್ಕಾರದ ನಿಯಮದ ಪ್ರಕಾರ ಯಾವುದಾದರೂ ಐದು ತರಬೇತಿಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

          ಅಂತಹ ಒಂದು ತರಬೇತಿ ಆತನಿಗೆ ಉಚಿತವಾಗಿ ದೊರಕುತ್ತದೆ. ಒಮ್ಮೆ ಒಂದು ತರಬೇತಿ ಪಡೆದ ಬಳಿಕ, ಮತ್ತೊಮ್ಮೆ ನೋಂದಣಿ ಸಾಧ್ಯವಾಗದು. ಬೇರೆ ತರಬೇತಿ ಬೇಕೆಂದರೆ ಆತ ಖಾಸಗಿಯಾಗಿ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. ಈ ರೀತಿ ತರಬೇತಿ ಪಡೆದವರನ್ನೇ ಉದ್ಯೋಗ ಮೇಳಕ್ಕೆ ಆಹ್ವಾನಿಸಲಾಗುವುದು. ಉದ್ಯೋಗದಾತರೂ ಸಹ ತರಬೇತಿ ಪಡೆದವರನ್ನೇ ಅಪೇಕ್ಷಿಸುತ್ತಾರೆ.

          ಈ ಬಾರಿಯ `ಉದ್ಯೋಗಮೇಳ’ದ ಫಲಶ್ರುತಿಗಾಗಿ ಹೊಸ ಯತ್ನವನ್ನು ಸರ್ಕಾರ ಕೈಗೊಂಡಿದೆ. 2,594 ಜನರಿಗೆ ಉದ್ಯೋಗ ದೊರೆತಿದ್ದು, ಇವರಲ್ಲಿ ಯಾವ-ಯಾವ ವಲಯ (ಸೆಕ್ಟರ್)ದಲ್ಲಿ (ಉದಾಹರಣೆಗೆ ಕೃಷಿ, ಕೈಗಾರಿಕೆ, ವಾಣಿಜ್ಯ ಇತ್ಯಾದಿ) ಎಷ್ಟೆಷ್ಟು ಜನರು ಉದ್ಯೋಗ ಪಡೆದಿದ್ದಾರೆಂಬ ಅಂಕಿಅಂಶಗಳ ಕ್ರೋಡೀಕರಣವನ್ನು ಈಗ ಇಲಾಖೆಯು ನಡೆಸುತ್ತಿದೆ. ಮೊದಲ ಹಂತದಲ್ಲಿ ಇಂಥ ಮಾಹಿತಿಗಳು ಲಭ್ಯವಾಗಲಿವೆ. ಮುಂದಿನ ದಿನಗಳಲ್ಲಿ ಈ `ಮೇಳ’ದಲ್ಲಿ ಭಾಗಿಯಾಗಿದ್ದ 120 ಕಂಪನಿಗಳ ಪೈಕಿ ಯಾವ-ಯಾವ ಕಂಪನಿಗಳಲ್ಲಿ ಎಷ್ಟೆಷ್ಟು ಜನರಿಗೆ ಉದ್ಯೋಗ ಲಭಿಸಿದೆಯೆಂಬ ವಿವರವು ದೊರಕಲಿದೆಯೆಂದು ಮೂಲಗಳು ಹೇಳುತ್ತಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap