ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು ?

ಬೆಂಗಳೂರು

   ” ಪಾಕಿಸ್ತಾನದ ಉಗ್ರ ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು ” ನೀವು ನಮಗೆ ದೇಶ ಪ್ರವೇಮದ ಬಗ್ಗೆ ಪಾಠ ಮಾಡುತ್ತೀರಾ ಎಂದು ಕೆಪಿಸಿಸಿ ಅಧ್ಯಕ್ಷ, ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

 ” ನಿಮ್ಮ ಪ್ರಧಾನಿ ಲಾಹೋರ್ ಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ನೀವು ನಮಗೆ ಪಾಕಿಸ್ತಾನ, ದೇಶ ಪ್ರೇಮ, ಭಾರತ ಮಾತೆಯ ಬಗ್ಗೆ ಪಾಠ ಮಾಡುತ್ತೀರಾ ” ಎಂದು ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

    ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ, ಪೌರತ್ವ ತಿದ್ದುಪಡಿ ಕಾಯ್ದೆ – ಸಿಸಿಎ ವಿರುದ್ಧ ಮಾತನಾಡುತ್ತಿರುವವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿ ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಪ್ರಾಸ್ತಾವಿಕವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಸ್ತಾವಿಕವಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಸಚಿವರು ಮಧ್ಯ ಪ್ರವೇಶಿಸಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಉಲ್ಲಂಘಿಸಿರುವುದನ್ನು ಕೆಣಕಿದಿರು. ಅಗ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ ಹೀಗೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ದೇಶಾದ್ಯಂತ ಸಿಎಎ, ಎನ್ ಆರ್ ಸಿ ವಿರೋಧಿ ಪ್ರತಿಭಟನೆ ನಡೆಯುತ್ತಿದ್ದು, ಒಂದು ವರ್ಗದ ಜನ ಇದನ್ನು ವಿರೋಧಿಸುತ್ತಿಲ್ಲ. ಎಲ್ಲ ವರ್ಗದ, ಎಲ್ಲ ಕ್ಷೇತ್ರಗಳ ಜನರೂ ಸಿಎಎ ವಿರೋಧ ಮಾಡುತ್ತಿದ್ದಾರೆ. ಕೆಲ ಐಎಎಸ್ ಅಧಿಕಾರಿಗಳು ಸಹ ರಾಜೀನಾಮೆ‌ ಕೊಟ್ಟಿದ್ದಾರೆ ಎಂದರು. ಆಗ ಗೃಹ ಸಚಿವ ಬಸವರಾಜ ಬೊಮ್ಮಾಯಿ ಯಾವ ಅಧಿಕಾರಿ ರಾಜೀನಾಮೆ ಕೊಟ್ಟಿದ್ದಾರೆ. ಮಾಹಿತಿ ಕೊಡಿ ಎಂದರು. ಇದಕ್ಕೆ ಸಿದ್ದರಾಮಯ್ಯ ಈ ಬಗ್ಗೆ ಮಾಹಿತಿ ಕೊಡುತ್ತೇನೆ. ಸ್ವಲ್ಪ ತಾಳ್ಮೆಯಿಂದ ವರ್ತಿಸುವಂತೆ ಗೃಹ ಸಚಿವರಿಗೆ ಕಿವಿ ಮಾತು ಹೇಳಿದರು.

    ಆಗ ಬಸವರಾಜ ಬೊಮ್ಮಾಯಿ, ಸಂವಿಧಾನದ ಬಗ್ಗೆ ಪಾಠ ಮಾಡುವ ಮುನ್ನ ತುರ್ತು ಪರಿಸ್ಥಿತಿ ನೆನಪಿಸಿಕೊಳ್ಳಿ ಎಂದರೆ, ಸಿ.ಟಿ. ರವಿ ಪ್ರಜಾಪ್ರಭುತ್ವ ಕತ್ತು ಹಿಸುಕಿದ ಪಕ್ಷ ನಿಮ್ಮದು ಎಂದರು. ಕೆ.ಎಸ್.ಈಶ್ವರಪ್ಪ, ಇಂದಿರಾಗಾಂಧಿ ಅವರ ವಿರುದ್ಧ ನೀವೇ ಟೀಕೆಮಾಡಿದ್ದೀರಿ. ತುರ್ತು ಪರಿಸ್ಥಿತಿ ವಿರುದ್ಧ ನೀವೇ ಬಹಿರಂಗವಾಗಿ ಮಾತನಾಡಿದ್ದೀರಿ. ಸಂವಿಧಾನ ಹಾಳು ಮಾಡಿದವರು ನೀವೇ ಎಂದರು.

    ಅದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಆಗ ಬಹಿರಂಗವಾಗಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಆಗ ಏನೇನು ಆಯಿತು ತಮಗೆ ಗೊತ್ತಿಲ್ಲ. ಈಗ ಉಸಿರುಗಟ್ಟುವ ವಾತಾವರಣ ಇದೆ. ಭಾರತ ಮಾತೆಯನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ. ದೇಶದ 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದರು.

     ಆಗ ಸಿ.ಟಿ. ರವಿ ಆದರೂ ನಿಮ್ಮಲ್ಲಿ ತುಕಡೆ ತುಕಡೆ ಗ್ಯಾಂಗ್ ಇದೆ ಎಂದರು. ಇದರಿಂದ ಸಿಟ್ಟಾದ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ತುಕಡೆ ಗ್ಯಾಂಗ್ ಬಂಧಿಸಿ, ನಿಮ್ಮನ್ನು ಯಾರು ತಡೆದಿಲ್ಲ. ಸುಮ್ಮನೆ ಆರೋಪ ಮಾಡಿ ಜನರನ್ನು ದಾರಿ ತಪ್ಪಿಸುವುದು ಬೇಡ ಎಂದರು.
ಬಸವರಾಜ ಬೊಮ್ಮಾಯಿ, ಈ ಬಗ್ಗೆ ಎಲ್ಲಾ ದಾಖಲೆಗಳಿವೆ. ಕಾನೂನು ಪ್ರಕಾರ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು. ಮತ್ತೆ ಬಿಜೆಪಿ ನಾಯಕರು ತುಕಡೆ ಗ್ಯಾಂಗ್ ಬಗ್ಗೆ ಪ್ರಸ್ತಾಪಿಸಿದಾಗ ದಿನೇಶ್ ಗುಂಡೂರಾವ್ ಸಿಟ್ಟಿನಿಂದ ” ಮಸೂದ್ ಅಜರ್ ನನ್ನು ಕಂದಹಾರ್ ಗೆ ಬಿಟ್ಟು ಬಂದವರು ಯಾರು. ನಿಮ್ಮ ಗೃಹ ಸಚಿವರು [ಎಲ್.ಕೆ. ಅಡ್ವಾಣಿ] ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂಗ್ ಸಿಂಗ್. ನಿಮ್ಮಿಂದ ನಾವು ದೇಶ ಪ್ರೇಮದ ಪಾಠ ಕಲಿಬೇಕಾಗಿಲ್ಲ ಎಂದು ತಿವಿದರು.

    ಸಿ.ಟಿ. ರವಿ, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆಗ ಸಂಜಯ್ ಬ್ರಿಗೆಡ್ ಹೆಸರಿನಲ್ಲಿ ಏನೇನು ಮಾಡಿದ್ದಾರೆ ಗೊತ್ತಿದೆ ಎಂದರು.
ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿ, ಆಡಳಿತ ಮಾಡಿ ಎಂದರೆ ನೀವು ಪಾಕಿಸ್ಥಾನ ಎನ್ನುತ್ತೀರಿ. ನಿಮ್ಮ ಪ್ರಧಾನಿ ಪಾಕಿಸ್ಥಾನದಲ್ಲಿ ಪುಕಸಟ್ಟೆ ಬಿರಿಯಾನಿ ತಿಂದು ಬಂದವರು. ನೀವು ನಮಗೆ ಪಾಠ ಮಾಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪರಿಸ್ಥಿತಿಯನ್ನು ನಿಯಂತ್ರಣ ತಂದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap