ದಾಖಲೆಯ ಮತದಾನದ ಲಾಭ ಯಾರಿಗೆ..?

ತುಮಕೂರು:

     2019ರ ತುಮಕೂರು ಲೋಕಸಭಾ ಸ್ಥಾನಕ್ಕೆ ಏಪ್ರಿಲ್ 18 ರಂದು ನಡೆದ ಚುನಾವಣೆಯಲ್ಲಿ ಅಚ್ಚರಿ ಎನ್ನುವಂತಹ ಶೇ.77.03 ದಾಖಲೆಯ ಮತದಾನವಾಗಿದ್ದು, ಇದರ ಲಾಭ ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಎಳೆಯುವ ಕಾಲ ಸನ್ನಿಹಿತವಾಗಿದೆ. ಈ ಎಲ್ಲ ಚರ್ಚೆ-ಕುತೂಹಲಗಳಿಗೆ ನಾಳಿನ ಫಲಿತಾಂಶ ಉತ್ತರ ನೀಡಲಿದೆ.

    1952 ರಿಂದ ಈವರೆಗೆ ನಡೆದಿರುವ ಚುನಾವಣೆಗಳನ್ನೊಮ್ಮೆ ಅವಲೋಕಿಸಿದರೆ ಈ ಬಾರಿಯ ಶೇಕಡಾವಾರು ಮತದಾನವೇ ಅತ್ಯಧಿಕ. ಕಳೆದ ಬಾರಿ ಶೇ.72.50 ರಷ್ಟು ಮತದಾನವಾಗಿತ್ತು. 2019ರ ಚುನಾವಣೆಗೆ ಇಷ್ಟೂ ಮತದಾನ ಸಾಧ್ಯವಾಗದು ಎಂಬ ಲೆಕ್ಕಾಚಾರಗಳನ್ನು ಮೀರಿದ ಮತದಾನವಾಗಿದ್ದು, ಸಂಜೆಯ ವೇಳೆಗೆ ಚುರುಕು ಪಡೆದ ಈ ಮತಗಳು ಯಾರ ಪಾಲಾಗಲಿವೆ ಎಂಬುದೇ ಹೆಚ್ಚು ಚರ್ಚೆಗೆ ಒಳಪಟ್ಟಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರವು ಜೆಡಿಎಸ್ ಪಾಲಾದ ಹಿನ್ನೆಲೆಯಲ್ಲಿ ಕೆಲವೊಂದು ಅಪಸ್ವರಗಳು ಕೇಳಿಬಂದವು. ಇವೆಲ್ಲವನ್ನೂ ನಿವಾರಿಸಿಕೊಂಡೇ ಚುನಾವಣೆ ನಡೆಯಿತು. ಮಾಜಿ ಪ್ರಧಾನಿ ಇಲ್ಲಿ ಸ್ಪರ್ಧಿಸಿದ ಹಿನ್ನೆಲೆಯಲ್ಲಿ ತುಮಕೂರಿನ ಜನತೆಗಿಂತ ಹೆಚ್ಚಾಗಿ ರಾಜ್ಯದ, ರಾಷ್ಟ್ರಿಯ ವಾಹಿನಿಗಳಿಗೆ ಈ ಕ್ಷೇತ್ರ ಹೆಚ್ಚು ಆಕರ್ಷಿತವಾಯಿತು. ಇಲ್ಲಿನ ಮತದಾರರಲ್ಲಿ ಕಳೆದೆಲ್ಲಾ ಚುನಾವಣೆಗಳಿಗಿಂತ ವಿಶೇಷ ಉತ್ಸಾಹ, ಲವಲವಿಕೆ ಕಾಣದ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಕ್ಷೀಣ ಎಂದೇ ಭಾವಿಸಲಾಗಿತ್ತಾದರೂ ಈ ಲೆಕ್ಕಾಚಾರಗಳನ್ನು ಮೀರಿದ ಮತದಾನ ಆಗಿದ್ದು ಮಾತ್ರ ವಿಸ್ಮಯ.

     ತುಮಕೂರು ಲೋಕಸಭಾ ಕ್ಷೇತ್ರವ್ಯಾಪ್ತಿಯ 2684 ಮತ ಕೇಂದ್ರಗಳಲ್ಲಿ ನಡೆದ ಚುನಾವಣೆ ಆರಂಭದಿಂದಲೂ ನಿಧಾನ ಗತಿಯಲ್ಲಿಯೇ ಸಾಗಿತ್ತು. ಮಧ್ಯಾಹ್ನ 2 ಗಂಟೆ ಮೀರಿದರೂ ಶೇ.50 ರಷ್ಟು ಸರಾಸರಿ ಮತದಾನ ಸಾಧ್ಯವಾಗಿರಲಿಲ್ಲ. 3 ಗಂಟೆಯ ನಂತರವಷ್ಟೇ ದಾಖಲೆಯ ಮತದಾನವಾಯಿತು.

     2014ರ ಚುನಾವಣೆಯಂತೆ 2019 ರಲ್ಲಿಯೂ ತುಮಕೂರು ಗ್ರಾಮಾಂತರದಲ್ಲಿ ಅತಿ ಹೆಚ್ಚಿನ ಮತದಾನವಾಗಿದೆ. 2014 ರಲ್ಲಿ 78.07ರಷ್ಟು ಮತದಾನವಾಗಿದ್ದರೆ, 2019 ರಲ್ಲಿ 81.87 ರಷ್ಟು ಮತದಾನವಾಗಿದೆ. ಗುಬ್ಬಿಯಲ್ಲಿ 2014 ರಲ್ಲಿ 77.30 ರಷ್ಟಿದ್ದರೆ, ಈ ಬಾರಿ 80.29 ರಷ್ಟು ಮತದಾನವಾಗಿದೆ. ತುರುವೇಕೆರೆಯಲ್ಲಿ 70.28 ರಷ್ಟಿದ್ದ ಮತದಾನ ಈ ಬಾರಿ 80ರಷ್ಟಾಗಿದೆ. ತುಮಕೂರು ನಗರ ಕ್ಷೇತ್ರವನ್ನು ಹೊರತುಪಡಿಸಿದರೆ ಉಳಿದ ಎಲ್ಲ 7 ಕ್ಷೇತ್ರಗಳಲ್ಲಿಯೂ ಶೇ.74ರ ಆಚೆಯೇ ಮತದಾನವಾಗಿದ್ದು, ಎಲ್ಲೆಲ್ಲಿ ಮತದಾನ ಹೆಚ್ಚಳವಾಗಿದೆಯೋ ಅಂತಹ ಕಡೆಗಳಲ್ಲಿ ಯಾರಿಗೆ ಗೆಲುವು ತಂದುಕೊಡಲಿದೆ ಎಂಬ ಲೆಕ್ಕಾಚಾರಗಳು ಏಪ್ರಿಲ್ 18ರಿಂದ ಆರಂಭವಾಗಿದ್ದವು. ಇವೆಲ್ಲದಕ್ಕೂ ನಾಳೆ ಉತ್ತರ ಸಿಗಲಿದೆ.

   ಮೈತ್ರಿ ಧರ್ಮ ಪಾಲನೆ ಹಿನ್ನೆಲೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಲಯದಲ್ಲಿ ಅಪಸ್ವರಗಳು ಎದುರಾಗಿದ್ದವು. ಮೈತ್ರಿ ಧರ್ಮ ಪಾಲನೆಯಾಗುವುದೆ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಚುನಾವಣಾ ಪ್ರಚಾರ ಸಭೆಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಕ್ಕಷ್ಟೇ ಸೀಮಿತಗೊಂಡವು. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಚುನಾವಣಾ ಪ್ರಚಾರ ನಡೆಸುವ ಕಾರ್ಯ ಯಾವ ಪಕ್ಷಗಳಿಂದಲೂ ಸಾಧ್ಯವಾಗಲಿಲ್ಲ.

     ಹೀಗಾಗಿ ಮತದಾರ ನಿರ್ಲಿಪ್ತತೆ ಹೊಂದಲಿದ್ದಾನೆ. ಮತದಾನ ಕೇಂದ್ರಗಳಿಗೆ ಬಾರದೆ ಇರಬಹುದು. ಹೆಚ್ಚಿನ ಮತದಾನ ಆಗದೇ ಇರಬಹುದು ಎಂಬ ವ್ಯಾಖ್ಯಾನಗಳು ನಡೆದಿದ್ದವು. ಅನಿರೀಕ್ಷಿತ ಎಂಬಂತೆ ಮತದಾನದ ದಿನದಂದು ನಡೆದ ಶೇಕಡಾವಾರು ಮತದಾನ ಹಲವರ ಹುಬ್ಬೇರಿಸಿತು. ಹೆಚ್ಚಿನ ಪ್ರಮಾಣದ ಮತದಾನವಾಗಿರುವ ಹಿನ್ನೆಲೆಯಲ್ಲಿ ಯಾರಿಗೆ ಲಾಭವಾಗುತ್ತದೆ ಎಂಬ ತರ್ಕಗಳು ಮುಂದುವರಿದೇ ಇವೆ. ಈ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಲೀಡ್ ಎಂದು ಕೆಲವರು ಹೇಳಿದರೆ, ಮತ್ತೆ ಕೆಲವರು ಜೆಡಿಎಸ್‍ಗೆ ಇಂತಹ ಭಾಗದಲ್ಲಿ ಲೀಡ್ ಸಿಗಲಿದೆ ಎಂದು ಹೇಳುತ್ತಿದ್ದಾರೆ. ಈ ಎಲ್ಲಾ ವಾದಗಳಿಗೆ ನಾಳಿನ ಫಲಿತಾಂಶವೇ ಉತ್ತರ ನೀಡಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap