ಬೆಂಗಳೂರು :
ರಾಜ್ಯ ಹಿಂದೆಂದೂ ಕಂಡರಿಯದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಬಹುತೇಕ ಇಲಾಖೆಗಳ ಅನುದಾನವನ್ನು ಕಡಿತ ಮಾಡಿ ಕೃಷಿಗೆ ಅಗ್ರಮನ್ನಣೆ ನೀಡುವ, 2.37 ಲಕ್ಷ ಕೋಟಿ ರೂಪಾಯಿ ಗಾತ್ರದ 2020-21 ರ ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಇಂದು ಮಂಡಿಸಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯಲ್ಲಿ 2020-21 ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ,ಸಂಪನ್ಮೂಲ ಸಂಗ್ರಹಕ್ಕಾಗಿ ಸಾಲದ ಮೊರೆ ಹೋಗಿರುವುದಲ್ಲದೆ ಪೆಟ್ರೋಲ್,ಡೀಸೆಲ್,ಮದ್ಯ ಸೇರಿದಂತೆ ವಿವಿಧ ವಸ್ತುಗಳ ಮೇಲೆ ತೆರಿಗೆ ಹೊರೆ ಹೇರಿದ್ದಾರೆ.
ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ದರವನ್ನು 1.60 ರೂಗಳಷ್ಟು ಹೆಚ್ಚಳ ಮಾಡಲಾಗಿದ್ದು,ಪತ್ರಿ ಲೀಟರ್ ಡೀಸೆಲ್ ಮೇಲೆ 1.59 ರೂಗಳಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಗೆ ತಿಳಿಸಿದರು.ಇದೇ ರೀತಿ ಮದ್ಯದ ಮೇಲಿನ ದರಗಳನ್ನು ಶೇಕಡಾ 6 ರಷ್ಟು ಹೆಚ್ಚಳ ಮಾಡಲಾಗಿದ್ದು ಹದಿನೆಂಟು ಸ್ಲ್ಯಾಬ್‌ಗಳಲ್ಲಿ ಮದ್ಯದ ದರ ಏರಿಕೆಯಾಗಲಿದ್ದು ಆ ಮೂಲಕ ಕಳೆದ ವರ್ಷಕ್ಕಿಂತ 1750 ಕೋಟಿ ರೂ ಹೆಚ್ಚುವರಿ ಆದಾಯ ಸಂಗ್ರಹಿಸಲು ತೀರ್ಮಾನಿಸಲಾಗಿದೆ.
ಸಾರಿಗೆ ವ್ಯವಸ್ಥೆಯ ಮೇಲೂ ತೆರಿಗೆಯ ಹೊರೆ ಬಿದ್ದಿದ್ದು ಹನ್ನೆರಡು ಸೀಟುಗಳಿಗಿಂತ ಹೆಚ್ಚು,ಇಪ್ಪತ್ತು ಸೀಟುಗಳಿಗಿಂತ ಕಡಿಮೆ ಸಾಮರ್ಥ್ಯದ ವಾಹನಗಳು ಪ್ರತಿ ಸೀಟಿಗೆ ಮೂರು ತಿಂಗಳಿಗೊಮ್ಮೆ ತಲಾ ಏಳು ನೂರು ರೂಪಾಯಿ ಕೊಡಬೇಕು ಎಂದು ಸ್ಪಷ್ಟ ಪಡಿಸಿದೆ.
ಈ ಮಧ್ಯೆ ಜನರ ಸೂರಿನ ಕನಸು ನನಸಾಗಲು ಪೂರಕವಾಗಿ ಇಪ್ಪತ್ತು ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯ ಅಪಾರ್ಟ್‌ಮೆಂಟುಗಳ ಮೇಲಿನ ಮುದ್ರಾಂಕ ಶುಲ್ಕವನ್ನು ಶೇಕಡಾ 5 ರಿಂದ ಶೇಕಡಾ 3 ಕ್ಕೆ ಇಳಿಸಲಾಗಿದೆ ಎಂದು ಅವರು ಹೇಳಿದರು.ಆದರೆ ಹೀಗೆ ವಿವಿಧ ವಸ್ತುಗಳ ಮೇಲೆ ತೆರಿಗೆ ಭಾರ ಹೇರಿದರೂ ನಿರೀಕ್ಷಿತ ಪ್ರಮಾಣದ ಆದಾಯ ಸಂಗ್ರಹವಾಗದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ಸಾಲ ಎತ್ತಲು ನಿರ್ಧರಿಸಲಾಗಿದ್ದು ಇತಿಹಾಸದಲ್ಲೇ ಮೊದಲ ಬಾರಿಗೆ ಸಾಲದ ಪ್ರಮಾಣ ಐವತ್ತು ಸಾವಿರ ಕೋಟಿ ರೂಪಾಯಿ ಮೀರಲಿದೆ.
ಒಟ್ಟು ಸಾಲದ ಪ್ರಮಾಣ 52,918 ಕೋಟಿ ರೂಪಾಯಿಗಳಾಗಿದ್ದು ವಿವಿಧ ಯೋಜನೆಗಳಿಗಾಗಿ ವಿಶ್ವಬ್ಯಾಂಕ್,ಏಷಿಯನ್ ಮೂಲಸೌಕರ್ಯ ಅಭಿವೃದ್ಧಿ ಬ್ಯಾಂಕ್,ಎಲ್.ಐ.ಸಿ ಸೇರಿದಂತೆ ವಿವಿಧ ಮೂಲಗಳಿಂದ ಸಾಲ ಪಡೆಯಲು ತೀರ್ಮಾನ ಮಾಡಲಾಗಿದೆ.
ಕಳೆದ ಸಾಲಿನಲ್ಲಿ ಕೇಂದ್ರದಿಂದ ಬರಬೇಕಿದ್ದ ಅನುದಾನದಲ್ಲಿ ರಾಜ್ಯದ ಪಾಲು ಕಡಿಮೆಯಾಗಿದ್ದು ಇದರಿಂದಾಗಿ 8887 ಕೋಟಿ ರೂಪಾಯಿ ಕಡಿತವಾಗಿದೆ.ಜಿ.ಎಸ್.ಟಿಗೆ ಪೂರಕವಾದ ಸೆಸ್ ಸಂಗ್ರಹಣೆಯಲ್ಲಿ ಕುಸಿತವಾಗಿರುವುದರಿಂದ ರಾಜ್ಯಕ್ಕೆ 3000 ಕೋಟಿ ರೂಪಾಯಿ ನಷ್ಟವಾಗಿದೆ.
ಇದರಿಂದಾಗಿ ಕಳೆದ ವರ್ಷದ ಆಯವ್ಯಯದ ಗುರಿಯನ್ನು ತಲುಪಲು ಕಷ್ಟವಾಗಿದ್ದು ಇದೇ ಕಾರಣಕ್ಕಾಗಿ ಈ ವರ್ಷ ಸರ್ಕಾರದ ವಿವಿಧ ಇಲಾಖೆಗಳ ಮೇಲಿನ ಅನುದಾನವನ್ನು ಕಡಿತ ಮಾಡಲಾಗಿದೆ.
ಹಾಗೆಯೇ ಹದಿನೈದನೇ ಹಣಕಾಸು ಆಯೋಗವು ಸಲ್ಲಿಸಿದ ವರದಿಯ ಪ್ರಕಾರ 2020-21 ನೇ ಸಾಲಿಗೆ ನಿಗದಿ ಪಡಿಸಿದ ತೆರಿಗೆಯ ಪಾಲಿನಲ್ಲಿ ಶೇಕಡಾ 3.64 ರಷ್ಟು ಕುಸಿತವಾಗಿದ್ದು ಈ ಕಾರಣದಿಂದ ರಾಜ್ಯಕ್ಕೆ 11,215 ಕೋಟಿ ರೂಪಾಯಿ ಕಡಿತವಾಗಲಿದೆ.ಹೀಗಾಗಿ 2020-21 ನೇ ವರ್ಷದ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ನಷ್ಟವನ್ನು ಸರಿಪಡಿಸಲು ಮತ್ತು 2025-26 ನೇ ಸಾಲಿನವರೆಗೆ ನಿಗದಿ ಮಾಡಿದ ಅನುದಾನದ ಹಂಚಿಕೆ ಪ್ರಮಾಣವನ್ನು ಹೆಚ್ಚಳ ಮಾಡಲು ಆಯೋಗಕ್ಕೆ ಪರಿಷ್ಕೃತ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಗೆ ತಿಳಿಸಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರಿ ನೌಕರರ ವೇತನ,ಪಿಂಚಣಿ,ಸರ್ಕಾರದ ಸಾಲದ ಮೇಲಿನ ಬಡ್ಡಿ ಮೊತ್ತದ ಪ್ರಮಾಣ 10000 ಕೋಟಿ ರೂಗಳಷ್ಟು ಹೆಚ್ಚಳವಾಗಿದೆ ಎಂಬ ಆಘಾತಕಾರಿ ಅಂಶವನ್ನೂ ಅವರು ಬಹಿರಂಗಪಡಿಸಿದರು.ರಾಜ್ಯ ಹಿಂದೆಂದೂ ಈ ಪ್ರಮಾಣದ ಆರ್ಥಿಕ ಸಂಕಷ್ಟವನ್ನು ಎದುರಿಸಿಲ್ಲ ಎಂದು ವಿವರಿಸಿದ ಮುಖ್ಯಮಂತ್ರಿಗಳು ಇದೇ ಕಾರಣಕ್ಕಾಗಿ ಸ್ವಂತ ತೆರಿಗೆಯ ಸಂಗ್ರಹ ಪ್ರಮಾಣವನ್ನು ಹೆಚ್ಚಳ ಮಾಡುವುದು ಸರ್ಕಾರದ ಗುರಿ ಎಂದು ಹೇಳಿದರು.
ವಾಣಿಜ್ಯ ತೆರಿಗೆ ಸಂಗ್ರಹದ ಪ್ರಮಾಣವನ್ನು 82,443 ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿರುವ ಸರ್ಕಾರ ಈ ಬಾಬ್ತಿನಿಂದ ತಪ್ಪಿಸಿಕೊಳ್ಳುತ್ತಿರುವ ವರ್ತಕರ ಮೇಲೆ ಇಲಾಖೆ ಮುಗಿ ಬೀಳಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.ಹೀಗೆ ಸ್ವಂತದ ತೆರಿಗೆಗಳ ಮೂಲಕ 1,28,107 ಕೋಟಿ ರೂಪಾಯಿಗಳನ್ನು ಸಂಗ್ರಹಿಸುವ ಗುರಿ ಹೊಂದಿರುವ
ಸರ್ಕಾರ,ತೆರಿಗೆಯೇತರ ರಾಜಸ್ವದ ಮೂಲಕ 7767 ಕೋಟಿ ರೂಪಾಯಿ ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ.
ಕೇಂದ್ರ ತೆರಿಗೆಯ ಪಾಲಿನ ರೂಪದಲ್ಲಿ 28,591 ಕೋಟಿ ರೂಪಾಯಿ,ಕೇಂದ್ರದ ಸಹಾಯಾನುಧನದ ರೂಪದಲ್ಲಿ 15,454 ಕೋಟಿ ರೂಪಾಯಿಗಳನ್ನು ನಿರೀಕ್ಷಿಸುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಗೆ ವಿವರ ನೀಡಿದರು.
ಈ ಮಧ್ಯೆ ರಾಜಸ್ವ ತೆರಿಗೆಗಳಿಗೆ ಪೂರಕವಾಗಿ 52,918 ಕೋಟಿ ರೂಪಾಯಿ ಮೊತ್ತದ ಸಾಲ ಪಡೆಯುವುದಾಗಿ ತಿಳಿಸಿದ ಅವರು,40 ಕೋಟಿ ರೂಪಾಯಿಗಳ ಋಣೇತರ ಸ್ವೀಕೃತಿಗಳು ಮತ್ತು ಸಾಲಗಳ ಮೇಲಿನ ವಸೂಲು ಮೊತ್ತದ ಪ್ರಮಾಣ 257 ಕೋಟಿ ರೂಪಾಯಿಗಳು ಬಜೆಟ್‌ನ ಗಾತ್ರವನ್ನು ವಿಸ್ತರಿಸಿವೆ ಎಂದರು.
ಹದಿನೈದನೇ ಹಣಕಾಸು ಆಯೋಗದ ಅನುದಾನದ ಹಂಚಿಕೆ ಹಾಗೂ ಜಿ.ಎಸ್.ಟಿ ಪರಿಹಾರ ಹಂಚಿಕೆಯ ಕೊರತೆಯಿದ್ದಾಗಲೂ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ವ್ಯಾಪ್ತಿಯಲ್ಲಿ ಮಿತಿಗೊಳಿಸಿದ ಸಾಲ ಪಡೆದು ಬಜೆಟ್ ಮಂಡಿಸಲಾಗಿದೆ.ಅದೇ ರೀತಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಂಗಡಿಸಲ್ಪಟ್ಟಿದ್ದ ಕುಡಿಯುವ ನೀರು,ಶಾಲಾ ಮಕ್ಕಳ ಪ್ರಗತಿಯ ಬಾಬ್ತಿನ ಹಣವನ್ನು ಒಂದು ಕಡೆ ಬರುವಂತೆ ಮಾಡಲಾಗಿದ್ದು ಪರಿಶಿಷ್ಟ ಜಾತಿ,ಪಂಗಡಗಳಿಗೆ ಮೀಸಲಿಡಬೇಕಾದ ಹಣದ ಪ್ರಮಾಣವನ್ನು ಹೆಚ್ಚಿಸಲಾಗಿದೆ ಎಂದರು.
ಕೃಷಿಗೆ ಅಗ್ರಸ್ಥಾನ ನೀಡಲಾಗಿದ್ದು ಅದೇ ಕಾಲಕ್ಕೆ ಹಿಂದಿನ ಸರ್ಕಾರಗಳ ಹಲವು ಯೋಜನೆಗಳನ್ನು ಯಥಾವತ್ತಾಗಿ ಮುಂದುವರಿಸಲಾಗಿದೆ ಎಂದು ಕೂಡಾ ಮುಖ್ಯಮಂತ್ರಿಗಳು ಸಭೆಗೆ ವಿವರ ನೀಡಿದರು.ಹಲವು ಜನಪರ ಯೋಜನೆಗಳನ್ನು ಬಜೆಟ್ ಒಳಗೊಂಡಿದ್ದು ರೈತರು,ಮಹಿಳೆಯರು,ಪರಿಶಿಷ್ಟರು,ಮಕ್ಕಳು ಹೀಗೆ ಎಲ್ಲ ಸಮುದಾಯಗಳನ್ನು ನೆಮ್ಮದಿಯ ಪಥದತ್ತ ಕೊಂಡೊಯ್ಯುವ ಗುರಿ ಹೊಂದಿದೆ ಎಂದರು.
ಎಲ್ಲ ಸಮಸ್ಯೆಗಳ ನಡುವೆಯೂ ಸಮರ್ಪಕ ಪ್ರಮಾಣದಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು ಹೀಗಾಗಿ ಮುಂದಿನ ಮಾರ್ಚ್ 31 ರವರೆಗಿನ ಬಜೆಟ್‌ಗೆ ಅಂಗೀಕಾರ ನೀಡಬೇಕು ಎಂದು ಯಡಿಯೂರಪ್ಪ ವಿಧಾನ ಸಭೆಯನ್ನು ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ