ನಾಮಪತ್ರ ಸಲ್ಲಿಸಿದ್ದಾಯ್ತು: ಕಣದಲ್ಲಿ ಉಳಿಯುವವರಾರು?

ತುಮಕೂರು

     ಲೋಕಸಭಾ ಚುನಾವಣಾ ಕಣದಲ್ಲಿ 27 ಅಭ್ಯರ್ಥಿಗಳ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಕಣದಲ್ಲಿ ಯಾರ್ಯಾರು ಉಳಿಯಲಿದ್ದಾರೆಂಬ ಕುತೂಹಲ ಈಗ ಎಲ್ಲರ ಚರ್ಚಾ ವಿಷಯ.ನಾಮಪತ್ರ ಹಿಂಪಡೆಯಲು ಮಾ.29 ಕೊನೆಯ ದಿನ. ಇರುವ ಎರಡು ದಿನಗಳ ಅವಧಿಯಲ್ಲಿ ರಾಜಕೀಯ ಆಟಗಳು ಶುರುವಾಗುತ್ತವೆ. ಯಾರ ಮೂಲಕ ಮತ್ಯಾರಿಗೆ ಹೇಳಿಸಬೇಕು ಎಂಬ ತಂತ್ರಗಳು ಇನ್ನೆರಡು ದಿನಗಳ ಕಾಲ ನಡೆದೇ ತೀರುತ್ತವೆ. ತುಮಕೂರು ಕ್ಷೇತ್ರ ಈ ಬಾರಿ ಇಂತಹ ಚರ್ಚಾ ವಿಷಯಕ್ಕೆ ಕಾರಣವಾಗಿದೆ.

        ಕಾಂಗ್ರೆಸ್‍ನಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಾಲಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತು ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ನಾಮಪತ್ರ ಸಲ್ಲಿಕೆ ತೀವ್ರ ಕುತೂಹಲ ಕೆರಳಿಸಿದೆ. ಹೆಬ್ಬೂರಿನ ತೋಟದ ಮನೆಯಲ್ಲಿ ಮಾ.23 ರಂದು ಹಿತೈಷಿಗಳ ಸಭೆ ನಡೆಸಿದ್ದ ಮುದ್ದಹನುಮೇಗೌಡರು ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದರು. ಅದರಂತೆ ನಾಮಪತ್ರ ಸಲ್ಲಿಸಿದ್ದಾರೆ. ಈ ನಡುವೆ ವಿವಿಧ ವಲಯಗಳಲ್ಲಿ ನಡೆದಿದ್ದ ವಿಶ್ಲೇಷಣೆಗಳಂತೆ ಮುದ್ದಹನುಮೇಗೌಡರನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಕಾಂಗ್ರೆಸ್ ವರಿಷ್ಠರು ಯಶಸ್ವಿಯಾಗುತ್ತಾರೆಂದೇ ಹೇಳಲಾಗುತ್ತಿದೆ.

        ನಾಮಪತ್ರ ಸಲ್ಲಿಸಿದರೂ ಸಹ ಕೊನೆಯ ದಿನದ ವೇಳೆಗೆ ವಾಪಸ್ ಪಡೆಯಲಿದ್ದಾರೆಂಬ ಮಾತುಗಳು ಕೇಳಿಬರುತ್ತಲೇ ಇವೆ. ಆದರೆ ಮುದ್ದಹನುಮೇಗೌಡ ಅವರ ಆಪ್ತರು ಹೇಳುವ ಪ್ರಕಾರ ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂಬ ಹೇಳಿಕೆಗಳು ಮುಂದುವರೆದಿವೆ.

        ತುಮಕೂರು ಕ್ಷೇತ್ರಕ್ಕೆ ದೇವೇಗೌಡರ ಸ್ಪರ್ಧೆಯನ್ನು ಬಹಿರಂಗವಾಗಿಯೇ ವಿರೋಧಿಸುತ್ತಾ ಬಂದಿರುವ ಮಧುಗಿರಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ರೆಬೆಲ್ ಆಗಿಯೇ ನಾಮಪತ್ರ ಸಲ್ಲಿಸಿದ್ದಾರೆ. ಕೆಲವರು ಹೇಳುವ ಪ್ರಕಾರ ಮುದ್ದಹನುಮೇಗೌಡರು ನಾಮಪತ್ರ ವಾಪಸ್ ಪಡೆದರೂ ಕೆ.ಎನ್.ರಾಜಣ್ಣ ಕಣದಲ್ಲಿ ಉಳಿಯುತ್ತಾರೆ. ಇಬ್ಬರಲ್ಲಿ ಯಾರಾದರೊಬ್ಬರು ಉಳಿಯಲೇಬೇಕು, ಚುನಾವಣೆ ಎದುರಿಸಲೇಬೇಕು ಎಂಬುದು ಕೆ.ಎನ್.ಆರ್. ಉದ್ದೇಶ.

        ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರೆ ಇಲ್ಲಿ ಸ್ಪರ್ಧಿಸಿರುವುದರಿಂದ ಈ ಕ್ಷೇತ್ರ ವಿಶೇಷ ಮಹತ್ವ ಪಡೆದುಕೊಳ್ಳಲಿದೆ. ಜಿಲ್ಲೆಯ ಜೆಡಿಎಸ್ ಶಾಸಕರು ಹಾಗೂ ಮಾಜಿ ಶಾಸಕರು ದೇವೆಗೌಡರ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಇವರಿಗೆ ಡಾ.ಜಿ.ಪರಮೇಶ್ವರ್ ಸಾಥ್ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಅಸಮಾಧಾನವನ್ನು ನಿವಾರಣೆ ಮಾಡಿಕೊಳ್ಳುವುದು ಹಾಗೂ ಚುನಾವಣಾ ಗೆಲುವಿಗೆ ತಂತ್ರ ರೂಪಿಸುವುದು ಹೇಗೆ ಎಂಬುದರಲ್ಲಿ ಮುಖಂಡರು ನಿರತರಾಗಿದ್ದಾರೆ.

       ಈ ಕಾರಣಕ್ಕಾಗಿಯೇ ನಿನ್ನೆ ಜೆಡಿಎಸ್ ಶಾಸಕರು ಮತ್ತು ಮುಖಂಡರ ಸಭೆ ನಡೆದಿದೆ. ಡಾ.ಜಿ.ಪರಮೇಶ್ವರ್ ಸಹ ಭಾಗಿಯಾಗಿದ್ದಾರೆ. ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಅಷ್ಟೇ ಅಲ್ಲ, ಬಂಡಾಯವೆದ್ದು ನಾಮಪತ್ರ ಸಲ್ಲಿಸಿರುವ ಮುದ್ದಹನುಮೇಗೌಡರು ಮತ್ತು ಕೆ.ಎನ್.ರಾಜಣ್ಣ ಅವರ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಕಾಂಗ್ರೆಸ್ ವರಿಷ್ಠರ ಮಟ್ಟದಲ್ಲಿ ಪ್ರಯತ್ನಗಳು ಮುಂದುವರೆದಿವೆ. ಸ್ವತಃ ಡಾ.ಜಿ.ಪರಮೇಶ್ವರ್ ಈ ಕೆಲಸದಲ್ಲಿ ನಿರತರಾಗಿದ್ದಾರೆ. ಹೀಗಾಗಿ ಮುಂದಿನ ನಡೆಗಳು ಕುತೂಹಲ ಕೆರಳಿಸಿವೆ.

         ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಮಾ.29 ರ ತನಕ ಎಲ್ಲರ ಗಮನ ನಾಮಪತ್ರ ಯಾರು ವಾಪಸ್ ಪಡೆಯುತ್ತಾರೆ ಎಂಬುದರತ್ತಲೇ ಹರಿದಿರುತ್ತದೆ. ಆನಂತರವಷ್ಟೇ ಕ್ಷೇತ್ರದ ಸ್ಪಷ್ಟ ಚಿತ್ರಣ ಸಿಗಲಿದೆ. ಅಲ್ಲಿಯವರೆಗೂ ಅಂತೆ ಕಂತೆಗಳ ಮಾತುಗಳೇ ಎಲ್ಲರ ಬಾಯಲ್ಲೂ ಹರಿದಾಡುತ್ತಿರುತ್ತವೆ. ಯಾರೋ ಹೇಳಿದ ಮಾತುಗಳು ಮತ್ತಾರಿಗೋ ಹೋಗುತ್ತವೆ. ಸಾಮಾಜಿಕ ಜಾಲತಾಣಗಳು ಚುರುಕಾಗಿರುವ ಈ ಕಾಲದಲ್ಲಿ ಎಲ್ಲವೂ ಥಟ್ಟನೆ ಬಹಿರಂಗವಾಗಿ ಬಿಡುತ್ತವೆ. ಯಾವುದನ್ನು ನಂಬಬೇಕು, ಯಾವುದು ಬಿಡಬೇಕು ಎಂಬ ಗೊಂದಲದಲ್ಲಿ ಸಾರ್ವಜನಿಕರು ಸಿಲುಕುತ್ತಾರೆ.

          ತುಮಕೂರು ಲೋಕಸಭಾ ಕ್ಷೇತ್ರಕ್ಕೆ 27 ಅಭ್ಯರ್ಥಿಗಳಿಂದ 35 ನಾಮಪತ್ರಗಳು ಸಲ್ಲಿಕೆಯಾಗಿದ್ದರೂ ಸಹ ಎಲ್ಲ ಅಭ್ಯರ್ಥಿಗಳು ಕಣದಲ್ಲಿ ಉಳಿಯುತ್ತಾರೆಂದು ಹೇಳಲಾಗುವುದಿಲ್ಲ. ಮಾ.29ರ ನಂತರ ಯಾರ್ಯಾರು ಕಣದಲ್ಲಿ ಉಳಿಯುತ್ತಾರೆ ಎಂಬುದೇ ಪ್ರಮುಖ ಅಂಶ.

         ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ನಂತರ ಉಂಟಾದ ಅಸಮಾಧಾನದಿಂದಾಗಿ ಎಸ್.ಪಿ.ಮುದ್ದಹನುಮೇಗೌಡರು ಮತ್ತು ಕೆ.ಎನ್.ರಾಜಣ್ಣ ಅವರು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಇವರಿಬ್ಬರ ನಾಮಪತ್ರ ವಾಪಸ್ ತೆಗೆಸಲು ಕಾಂಗ್ರೆಸ್ ಮುಖಂಡರು ಪ್ರಯತ್ನಿಸುತ್ತಲೇ ಇದ್ದಾರೆ. ನಾಮಪತ್ರ ವಾಪಸ್ ತೆಗೆಯುವ ಭರವಸೆಯನ್ನೂ ಕಾಂಗ್ರೆಸ್ ಮುಖಂಡರು ನೀಡಿದ್ದಾರೆ. ಈ ಪ್ರಯತ್ನ ಸಫಲವಾಗುವುದೇ ಎಂಬುದನ್ನು ಮಾ.29ರವರೆಗೆ ಕಾದು ನೋಡಬೇಕು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link