ಹುಳಿಯಾರು
ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ಹೊಸಹಳ್ಳಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಸಿರುವುದರಿಂದ ರಸ್ತೆಯ ಮೇಲೆ ಚರಂಡಿ ನೀರು ಹರಿಯುತ್ತಿದ್ದು ಈ ಮಾರ್ಗದಲ್ಲಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಪರದಾಡುವಂತ್ತಾಗಿದೆ ಎಂದು ಅಲ್ಲಿನ ನಿವಾಸಿ ಗೋಪಿ ಅವರು ಆರೋಪಿಸಿದ್ದಾರೆ.
ರಸ್ತೆಯ ಎರಡೂ ಕಡೆ ಚರಂಡಿ ನಿರ್ಮಿಸಲಾಗಿತ್ತಾದರೂ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿರುವುದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ಅಲ್ಲೇ ನಿಂತು ಕೊಳ್ಳುತ್ತದೆ. ಚರಂಡಿ ತುಂಬಿದ ಮೇಲೆ ರಸ್ತೆಗೆ ಕೊಳಚೆ ನೀರು ಹರಿಯುತ್ತದೆ. ಪರಿಣಾಮ ಕೊಳಚೆ ನೀರಿನಿಂದ ಈ ಮಾರ್ಗದಲ್ಲಿ ತಿರುಗಾಡುವ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ನಿತ್ಯ ಹೊಲಸು ನೀರಿನಲ್ಲಿ ತಿರುಗಾಡುತ್ತಿದ್ದರೂ ಸಂಬಂಧಿತರು ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಇಲ್ಲಿ ವಾಸಿಸುವ ಬಹುತೇಕ ಮನೆಗಳ ಜನರು ನಿತ್ಯ ಬಳಸುವ ಬಚ್ಚಲು ನೀರು, ಕಸ ರಸ್ತೆಯ ಮೇಲೆ ಸೇರಿ ದುರ್ನಾತ ಬೀರುತ್ತಿದೆ. ಕಾಲು ಜಾರಿ ಕೊಳಕು ರಸ್ತೆಯ ಮೇಲೆ ಬೀಳುವ ಮುಗ್ದ ಮಕ್ಕಳು, ನಿಂತ ನೀರಿನಿಂದ ಸೊಳ್ಳೆ ಕಚ್ಚಿಸಿಕೊಳ್ಳುತ್ತಾ ನರಕಯಾತನೆ ಅನುಭವಿಸುತ್ತಿರುವ ಪಾಡು ಹೇಳತೀರದು. ಈ ಊರಿನಲ್ಲಿ ಜನಪ್ರತಿನಿಧಿಗಳು ಇದ್ದರೂ ಇದರ ಬಗ್ಗೆ ಚಕಾರವೆತ್ತದಿರುವದು ಆಶ್ಚರ್ಯವನ್ನುಂಟು ಮಾಡಿದೆ.
ಈ ಬಗ್ಗೆ ಸ್ಥಳೀಯ ಗ್ರಾಪಂ ಅಧ್ಯಕ್ಷ, ಪಿಡಿಒ ಅವರಿಗೆ ಸಾಕಷ್ಟು ಸಲ ಮೌಖಿಕ ಮತ್ತು ಲಿಖಿತ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಇನ್ನಾದರೂ ಗ್ರಾಪಂ ಎಚ್ಚೆತ್ತುಕೊಂಡು ಅವ್ಯವಸ್ಥೆಯ ಆಗರವಾಗಿರುವ ಸರಿಪಡಿಸಿ ಇಲ್ಲಿ ನಿತ್ಯ ನಿಲ್ಲುವ ನೀರು, ಕಸ ಬೇರೆಡೆ ಸಾಗಿಸುವ ವ್ಯವಸ್ಥೆ ಮಾಡಿ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ