ತುಮಕೂರು
ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಇಡೀ ವಿಶ್ವ ಖಂಡನೆ ಮಾಡಿದೆ. ಈ ವಿಧ್ವಂಸಕ ಕೃತ್ಯ ಮಾಡಿರುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿಪರಮೇಶ್ವರ್ ತಿಳಿಸಿದರು.
ಶ್ರೀಲಂಕಾದಲ್ಲಿ ನಡೆದ ಸ್ಪೋಟದಲ್ಲಿ ಮೃತಪಟ್ಟಿದ್ದ ತುಮಕೂರಿನ ಉದ್ಯಮಿ ರಮೇಶ್‍ಗೌಡರವರ ಪಾರ್ಥೀವ ಶರೀರ ತುಮಕೂರಿನ ಮೃತರ ಸ್ವಗೃಹಕ್ಕೆ ಬಂದಿದ್ದು, ಪಾರ್ಥಿವ ಶರೀರದ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಲಂಕಾದಲ್ಲಿ ನಡೆದಂತಹ ಘಟನೆಗಳು ಮರುಕಳುಹಿಸದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಖಂಡಿಸಿವೆ. ಈ ಘಟನೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು.
ಮತ್ತು ಅಂತಹ ವ್ಯಕ್ತಿಗಳನ್ನಾಗಲಿ, ಸಂಘಟನೆಗಳನ್ನಾಗಿ ಗುರುತಿಸಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಬಾಂಬ್ ಸ್ಪೋಟದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನೂ ಅನೇಕ ಗಾಯಾಳುಗಳು ಇದ್ದಾರೆ. ಹಾಗಾಗಿ ಅಂತಿಮವಾಗಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎಂಬುದು ಸದ್ಯಕ್ಕೆ ಗೊತ್ತಾಗುವುದಿಲ್ಲ. ಹಾಗಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಕರ್ನಾಟದವರು ಇಬ್ಬರು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಈಗ 8 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರಿಗೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಬಳಿ ಚರ್ಚೆ ನಡೆಸುತ್ತೇನೆ. ಪರಿಹಾರ ಕೊಡುವ ಬಗ್ಗೆ ಸರಕಾರವೇ ತೀರ್ಮಾನ ಮಾಡಬೇಕು ಎಂದರು.
ಮೃತ ದೇಹ ಬರುವುದು ಅಲ್ಲಿನ ನಿಯಮಗಳಿಂದಾಗಿ ವಿಳಂಬವಾಗಿದೆ. ಅಲ್ಲಿ ಹೆಚ್ಚಿನ ಸಾವುಗಳು ಸಂಭವಿಸಿರುವುದರಿಂದ ಸ್ವಲ್ಪ ತಡವಾಗಿದೆ. ಮೃತ ರಮೇಶ್‍ಗೌಡರು ಉತ್ಸಾಹಿ ಯುವಕ ತಮ್ಮದೇ ರೀತಿಯಲ್ಲಿ ಬದುಕು ಕಟ್ಟಿಕೊಂಡಿದ್ದವರು. ಅಂತಹವರು ನಮ್ಮಿಂದ ದೂರ ಆಗಿರುವುದು ಬಹಳ ದು:ಖ ತಂದಿದೆ. ಸ್ವಾಭಾವಿಕವಾಗಿ ಅವರ ಕುಟುಂಬಕ್ಕೆ ಮಾತ್ರ ಅಲ್ಲ, ನಮಗೆಲ್ಲರಿಗೂ ನೋವಾಗಿದೆ. ರಮೇಶ್ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ಅವರ ಕುಟುಂಬದವರಿಗೆ ದು:ಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಚುನಾವಣೆ ಮುಗಿದ ನಂತರ ಸ್ನೇಹಿತರೊಂದಿಗೆ ಶ್ರೀಲಂಕಾಗೆ ತೆರಳಿದ್ದ ಅವರು ಉಗ್ರರ ಅಟ್ಟಹಾಸಕ್ಕೆ ಇಹಲೋಕ ತ್ಯಜಿಸಿದ್ದಾರೆ. ಇತ್ತ ನಗರದ ಸರಸ್ಪತಿ ಪುರಂನಲ್ಲಿನ ರಮೇಶ್ ಗೌಡರ ನಿವಾಸದಲ್ಲಿ ಪೋಷಕರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆಂಡತಿ ಮಂಜುಳಾ ಮತ್ತು ಮಗಳು ನಿಶಾ ದುಖಃದ ಮಡುವಿನಲ್ಲಿ ಅತ್ತು ಅತ್ತು ನಿದ್ರಾಣವಾಗಿದ್ದರು.
ಮಧ್ನಾಹ್ನ 2 ಗಂಟೆ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ್ದ ರಮೇಶ್ ಗೌಡ ಪಾರ್ಥಿವ ಶರೀರ 3.30 ವೇಳೆಗೆ ಎಕ್ಸ್‍ಕಾರ್ಟ್ ಮೂಲಕ ನೆಲಮಂಗಲ ಮಾರ್ಗವಾಗಿ 5:30 ರ ಸುಮಾರಿಗೆ ತುಮಕೂರು ತಲುಪಿತು. ನಗರದ ಸರಸ್ಪತಿ ಪುರಂನ ನಿವಾಸದಲ್ಲಿ ಅರ್ಧ ಗಂಟೆ ಕಾಲ ಅಂತಿಮ ದರ್ಶನಕ್ಕೆ ಇಡಲಾಗಿದ್ದು ನಂತರ ಕುಣಿಗಲ್ ನಗರಕ್ಕೆ ತೆಗೆದುಕೊಂಡು ಹೋಗಲಾಯಿತು.
ಅಲ್ಲಿಂದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬೆಟ್ಟದಕೋಟೆ ಗ್ರಾಮದಲ್ಲಿ ತಂದೆ ಸಮಾಧಿ ಪಕ್ಕದಲ್ಲೇ ಮೃತ ಅಂತ್ಯಕ್ರಿಯೆ ನೆರವೇರಿಸಲಾಯಿತು.
ತುಮಕೂರಿನ ಸರಸ್ವತಿಪುರಂನಲ್ಲಿನ ಮೃತರ ನಿವಾಸದ ಬಳಿ ಮೃತ ದೇಹ ಆಗಮಿಸಿದಾಗ ಸಣ್ಣಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್, ಎಸ್‍ಪಿ ಡಾ: ವಂಶಿಕೃಷ್ಣ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಮುರುಳೀಧರ ಹಾಲಪ್ಪ, ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಬೆಳ್ಳಿ ಲೋಕೇಶ್ ಮತ್ತಿತರರು ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಮೃತರ ತಾಯಿ ರತ್ನಮ್ಮ ಮಾತನಾಡಿ, ನನ್ನ ಮಗನಿಗೆ ಇಬ್ಬರು ಮಕ್ಕಳು. ಇದೀಗ ಇಬ್ಬರೂ ತಬ್ಬಲಿಯಾಗಿದ್ದಾರೆ. ಶನಿವಾರ ಮಧ್ಯಾಹ್ನ ಮೂರು ಗಂಟೆಗೆ ಮನೆ ಬಿಟ್ಟಿದ್ದ, ಸಂಜೆ ಏಳುಗಂಟೆಗೆ ಶ್ರೀಲಂಕಾಗೆ ತಲುಪಿದ್ದ. ಅದಾದ ಮೇಲೆ ಒಮ್ಮೆಯೂ ಕರೆ ಮಾಡಿರಲಿಲ್ಲ. ಅದ್ಯಾಕೆ ಅಲ್ಲಿ ಹೋದನೋ ಎಂದು ಕಣ್ಣೀರಿಟ್ಟರು.