ಕೊರಟಗೆರೆ

ಪ್ರತಿನಿತ್ಯ ಚನ್ನರಾಯನದುರ್ಗದ ತಿಮ್ಮಲಾಪುರ ಅರಣ್ಯದಲ್ಲಿರುವ ಬೆಟ್ಟಗುಡ್ಡಗಳಲ್ಲಿ ಕ್ರಷರ್‍ಗಳ ಹಾವಳಿಯಿಂದಾಗಿ ಕಾಡು ಪ್ರಾಣಿಗಳಳಿಗೆ ಆಹಾರ ಸಿಗದೆ ಹಾಗೂ ಸಿಡಿಮದ್ದುಗಳ ಅಬ್ಬರಕ್ಕೆ ಅವುಗಳು ಅಲ್ಲಿಂದ ಊರುಗಳ ಕಡೆ ಬಂದು ಮನುಷ್ಯರ ಪ್ರಾಣಕ್ಕೆ ಹಾನಿ ಉಂಟುಮಾಡುತ್ತಿವೆ ಎಂದು ರೈತ ನಾಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಕೈಮರದಲ್ಲಿ ಜಲ್ಲಿಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ತಡೆದು ಕ್ರಷರ್‍ಗಳ ವಿರುದ್ದ ಧಿಕ್ಕಾರ ಕೂಗುತ್ತಾ ಕೆಲಗಂಟೆಗಳ ಕಾಲ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪ್ರತಿದಿನವೂ ಸಹ ಸುಮಾರು 300 ಕ್ಕೂ ಹೆಚ್ಚು ಲಾರಿಗಳು ಜಿಲ್ಲೆಯ ನಾನಾ ಕಡೆಗೆ ಜಲ್ಲಿಗಳನ್ನು ತುಂಬಿಕೊಂಡು ಸಾಗಿಸುತ್ತಿದ್ದಾರೆ. ಅತಿಭಾರ ಮತ್ತು ಅತಿವೇಗವಾಗಿ ಚಾಲನೆ ಮಾಡುವುದರಿಂದ ಇಲ್ಲಿ ಈಗಾಗಲೆ ನಾಲ್ಕೈದು ಜನರಿಗೆ ಅಪಘಾತವಾಗಿದೆ.
ರಸ್ತೆಯ ಪಕ್ಕದಲ್ಲೆ ಶಾಲೆಗಳಿರುವುದರಿಂದ, ಈ ಲಾರಿಗಳ ಕರ್ಕಶ ಶಬ್ದ ಮತ್ತು ವಿಪರೀತ ಧೂಳಿನಿಂದ ಮ್ಕಕಳು ನಿರಾತಂಕವಾಗಿ ಪಾಠ ಪ್ರವಚನ ಕೇಳದಂತಾಗಿದೆ. ಅಲ್ಲದೆ ಮಕ್ಕಳ ಆರೋಗ್ಯ ಹದಗೆಡುವಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕ್ರಷರ್‍ಗಳಿಗೆ ಕಡಿವಾಣ ಹಾಕಬೇಕೆಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು ಮಾತನಾಡಿ, ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯಿಂದ ಕೊರಟಗೆರೆ ಮಾರ್ಗಮಧ್ಯದಲ್ಲಿರುವ 4-5 ಕ್ರಷರ್‍ಗಳು ಇಲ್ಲಿನ ರೈತರಿಗೆ ಕಂಟಕವನ್ನು ತಂದೊಡ್ಡಿವೆ. ಕ್ರಷರ್‍ಗಳಿಂದ ಬರುವ ಧೂಳು ಮತ್ತು ಸಣ್ಣ ಸಣ್ಣ ಕಲ್ಲು ರೈತರ ಜಮೀನುಗಳ ಮೇಲೆ ದುಷ್ಪರಿಣಾಮ ಬೀರುವಂತಹ ಪರಿಸ್ಥಿತಿ ಬಂದಿದೆ. ಸಮೀಪದಲ್ಲಿ ರಾಷ್ಟ್ರೀಯ ಅರಣ್ಯ ಇದ್ದರೂ ಕೂಡ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ, ಪರಿಸರ ಮತ್ತು ಭೂವಿಜ್ಞಾನದ ಅಧಿಕಾರಿಗಳಾಗಲಿ ಇದುವರೆಗೆ ಭೇಟಿ ನೀಡಿಲ್ಲ. ಇದೇ ರೀತಿ ಕ್ರಷರ್‍ಗಳಿಂದ ಪರಿಸರಕ್ಕೆ, ರೈತರಿಗೆ ಹಾಗೂ ಅರಣ್ಯಕ್ಕೆ ತೊಂದರೆ ಉಂಟಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರ ಉಮಾಶಂಕರ್, ರೈತರುಗಳಾದ ನಾಗೇಶಪ್ಪ, ತಿಮ್ಮನಹಳ್ಳಿ ನಾಗಣ್ಣ, ನೀಲಿ ವೆಂಕಟೇಶಪ್ಪ, ತಿಪ್ಪಣ್ಣ, ಎಸ್‍ಟಿಡಿ ಹನುಮಂತರಾಯಪ್ಪ, ಸುರೇಶ್, ಗೋವಿಂದರಾಜು, ರಾಮಣ್ಣ, ವೆಂಕಟೇಶಪ್ಪ ಸೇರಿದಂತೆ ಹಲವು ರೈತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
