ತುಮಕೂರು
ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಈಗಾಗಲೇ ಚಿರತೆಗಳು ನಾಲ್ಕು ಜೀವಗಳನ್ನು ಬಲಿ ಪಡೆದುಕೊಂಡ ಬೆನ್ನಲ್ಲೆ ಸೋಮವಾರ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾರೆ.
ತುಮಕೂರು ತಾಲ್ಲೂಕು ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿಹಳ್ಳಿಯಲ್ಲಿ ಘಟನೆ ಸಂಭವಿಸಿದ್ದು, ಮೂರ್ತಪ್ಪ(70) ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾವನದುರ್ಗ ಅರಣ್ಯ ಪ್ರದೇಶದಿಂದ ಬಂದಿರುವ ಈ ಕಾಡಾನೆ ಹಿರೇಹಳ್ಳಿ ಸಿಂಗೋನಹಳ್ಳಿ, ಕೊಳಿಹಳ್ಳಿ ಗ್ರಾಮಗಳ ತೋಟಕ್ಕೆ ದಾಳಿ ಇಟ್ಟಿದ್ದು, ಅಡಿಕೆ, ತೆಂಗಿನ ಮರಗಳು ಸೇರಿದಂತೆ ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ ಎನ್ನಲಾಗಿದೆ.
ಗಾಯಾಳು ಮೂರ್ತಪ್ಪ ಅವರು ತಮ್ಮ ತೋಟದಲ್ಲಿ ಮನೆ ಕಟ್ಟುತ್ತಿದ್ದು, ಇಂದು ಬೆಳಗ್ಗೆ ಹೊಸ ಮನೆಯ ಮುಂಭಾಗ ನಿಂತಿದ್ದ ಸಂದರ್ಭದಲ್ಲಿ ಅತಿ ವೇಗವಾಗಿ ಓಡಿ ಬಂದಿರುವ ಈ ಕಾಡಾನೆ ಅವರ ಮೇಲೆರಗಿದ ಪರಿಣಾಮ ರೈತ ನೆಲದ ಮೇಲೆ ಕುಸಿದು ಬಿದ್ದು, ಕಿರುಚಾಡಿದ್ದಾರೆ. ಆಕ್ರೋಶಭರಿತವಾಗಿದ್ದ ಆನೆಯು ಅವರ ಎರಡು ಕಾಲುಗಳನ್ನು ತುಳಿದು ದಂತ ಮತ್ತು ಸೊಂಡಿಲಿನಿಂದ ಪಕ್ಕಕ್ಕೆ ಎಸೆದಿದೆ.
ಕಳೆದ 15 ದಿನಗಳ ಹಿಂದೆಯೇ ಜಿಲ್ಲೆಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದರೂ ಅರಣ್ಯ ಇಲಾಖೆಗೆ ಆನೆಯ ಸಂಚಾರದ ಮಾಹಿತಿ ಇರಲಿಲ್ಲ. ಇಂದು ಏಕಾಏಕಿ ಕೋಳಿಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಆನೆ ದಾಳಿ ನಡೆಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರು ವಿಡಿಯೋ ನೋಡಿ ಆತಂಕಕ್ಕೆ ಒಳಗಾಗಿದ್ದಾರೆ. ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆನೆಗೆ ಈ ಭಾಗದಿಂದ ನೆಲಮಂಗಲ ಕಡೆಗೆ ಪಲಾಯನ ಮಾಡಿತು. ಗಾಯಾಳು ಮೂರ್ತಪ್ಪನವರಿಗೆ ಕೈಲುಗಳು ಮುರಿದಿದ್ದು, ಎದೆ, ಹೊಟ್ಟೆ ಸೊಂಗ ಭಾಗಕ್ಕೆ ಪೆಟ್ಟಾಗಿದೆ. ಗಾಯಾಳು ಈಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜೀವಕ್ಕೇನು ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








