ಬೆಂಗಳೂರು:
ವನ್ಯಜೀವಿ ಪ್ರಕೃತಿಯ ಅವಿಭಾಜ್ಯ ಅಂಗವಾಗಿದ್ದು, ಮಾನವನ ಉಳಿವು-ಅಳಿವು ಹಾಗೂ ಜೀವವೈವಿಧ್ಯತೆಯಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದ್ದಾರೆ.
ನಗರದಲ್ಲಿಂದು 76ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಮಾತನಾಡಿರುವ ಅವರು, ಪ್ರಕೃತಿಯ ಸಮತೋಲನವನ್ನು ಕಾಪಾಡುವುದು ಎಲ್ಲರ ಆದ್ಯ ಕರ್ತವ್ಯವಾಗಿದ್ದು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಕಂಕಣಬದ್ಧರಾಗಿರಬೇಕಾಗುತ್ತದೆ ಎಂದು ಹೇಳಿದರು. ರಾಜ್ಯದ ಸುಮಾರು 10ಸಾವಿರದ 238 ಚದರ ಕಿಲೋಮೀಟರ್ ವಿಸ್ತೀಣದ ಅರಣ್ಯಪ್ರದೇಶದಲ್ಲಿ ಐದು ರಾಷ್ಟ್ರೀಯ ಉದ್ಯಾನವನ, 30 ಅಭಯಾರಣ್ಯಗಳು, 15 ಸಂರಕ್ಷಿತ ಮೀಸಲು ಮತ್ತು ಒಂದು ಸಮುದಾಯ ಮೀಸಲು ಪ್ರದೇಶವೂ ಸೇರಿದೆ, ಒಟ್ಟು ಅರಣ್ಯ ಪ್ರದೇಶ ಶೇಕಡ 23.59ರಷ್ಟಿದೆ ಎಂದು ಸಚಿವರು ತಿಳಿಸಿದರು.
ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 406 ಹುಲಿಗಳು ಮತ್ತು 6ಸಾವಿರದ 72 ಆನೆಗಳಿವೆ, ದೇಶದ ಒಟ್ಟು ಆನೆಗಳ ಸಂಖ್ಯೆಯಲ್ಲಿ ಶೇಕಡ 25ರಷ್ಟು ರಾಜ್ಯದಲ್ಲಿ ಇದೆ, ಕರ್ನಾಟಕ ಅತಿಹೆಚ್ಚಿನ ಹುಲಿ ಮತ್ತು ಆನೆಗಳಿರುವ ರಾಜ್ಯವೆಂದು ಗುರುತಿಸಲ್ಪಟಿರುವುದಾಗಿ ಸಚಿವ ಆರ್.ಶಂಕರ್ ಹೇಳಿದರು. ಅನಾದಿಕಾಲದಿಂದ ಮೋಜಿಗಾಗಿ ಮಾನವ ವನ್ಯಜೀವಿ ಬೇಟೆ ನಡೆಸಿದ ಪರಿಣಾಮ ಇಂದು ಹಲವಾರು ವನ್ಯ ಜೀವಿಗಳ ಸಂತತಿ ನಶಿಸಿಹೋಗಿದ್ದು, ಅಳಿದುಳಿದ ವನ್ಯ ಸಂಪತ್ತು ಉಳಿಸಿ ಬೆಳಸುವ ಅಗತ್ಯವಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
