ಬಾಕಿ ವೇತನ ಕೊಡಿಸಲು ಪ್ರಾಮಾಣಿಕ ಪ್ರಯತ್ನ

ದಾವಣಗೆರೆ:

    ತಾಲೂಕಿನ ಯಾವ ಗ್ರಾಮ ಪಂಚಾಯಿತಿಯಲ್ಲಿ, ಯಾವ ನೌಕರರ ಎಷ್ಟು ತಿಂಗಳ ವೇತನ, ಯಾವ ಕಾರಣಕ್ಕೆ ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ, ಪಂಚಾಯತ್ ರಾಜ್ ಅಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪನವರಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ ಗ್ರಾಮ ಪಂಚಾಯಿತಿ ನೌಕರರ ಬಾಕಿ ವೇತನ ಕೊಡಿಸುತ್ತೇನೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಂ.ಧಾರುಕೇಶ್ ಭರವಸೆ ನೀಡಿದರು.

     ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ 6ನೇ ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾಡ ಮಾಲಿ, ನೀರ್‍ಗಂಟಿ, ಜವಾನ, ಕರ ವಸೂಲಿಗಾರರು ಇಲ್ಲದಿದ್ದರೆ, ಗ್ರಾಮ ಪಂಚಾಯಿತಿಯೇ ಇಲ್ಲವಾಗಲಿದೆ. ಇವರ್ಯಾರೂ ತಮ್ಮ, ತಮ್ಮ ಕರ್ತವ್ಯ ನಿರ್ವಹಿಸದಿದ್ದರೆ, ದಾವಣಗೆರೆ ತಾಲೂಕನ್ನು ಊಹಿಸಿಕೊಳ್ಳಲು ಸಹ ಸಾಧ್ಯವಾಗದು ಎಂದರು.

     ನಿಮ್ಮ ಸಂಬಳ ವಿಳಂಬ ಆಗಿರುವುದು ಸರಿಯಲ್ಲ. ನೀವು ಬೇರೆಯವರಂತೆ ನಿವೃತ್ತಿಯ ಕಾಲಕ್ಕೆ 50 ಸಾವಿರ ವೇತನ ಪಡೆಯುವಂತಾಗಬೇಕು. ಡಿ ಗ್ರೂಪ್ ನೌಕರರನ್ನಾಗಿ ನಿಮ್ಮನ್ನು ಖಾಯಂ ಗೊಳಿಸಬೇಕು. ಎಲ್ಲರಂತೆ ನಿಮಗೂ ಸೌಲಭ್ಯ ದಕ್ಕಬೇಕೆಂಬ ಅಭಿಲಾಷೆ ತಮ್ಮದಾಗಿದೆ ಎಂದ ಅವರು, ನಿಮ್ಮ ಸಂಬಳ ಎಲ್ಲೂ ಹೋಗಿಲ್ಲ ನಿಮ್ಮ ಕೈಯಲ್ಲಿಯೇ ಇದೆ.

      ದಾವಣಗೆರೆ ತಾಲೂಕಿನ 152 ಹಳ್ಳಿಗಳಲ್ಲಿ 84 ಸಾವಿರ ಆಸ್ತಿಗಳಿಂದ ಕರ ವಸೂಲಿ ಮಾಡಲಾಗುತ್ತಿದೆ. 6.48 ಕೋಟಿ ರೂ., ತೆರಿಗೆ ಸಂಗ್ರಹ ಗುರಿ ಹೊಂದಲಾಗಿದೆ. ಆದರೆ, ಇಲ್ಲಿ ಸಂಗ್ರಹ ಆಗಿರುವುದು 1.11 ಕೋಟಿ ರೂ. ಮಾತ್ರ. ಇನ್ನೂ 5.37 ಕೋಟಿ ತೆರಿಗೆ ಬಾಕಿ ಇದೆ. ಈ ಎಲ್ಲಾ ತೆರಿಗೆಯನ್ನು ಸಂಗ್ರಹಿಸಿದರೆ, ನಿಮ್ಮ ವೇತನ ಬಾಕಿ ಇರುವ ಪ್ರಶ್ನೆಯೇ ಬರುವುದಿಲ್ಲ ಎಂದು ಸೂಚ್ಯವಾಗಿ ಎಚ್ಚರಿಸಿದರು.

      ಈಗ ಎಷ್ಟೇಷ್ಟು ತಿಂಗಳ ವೇತನ ಬಾಕಿ ಇದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ, ಉನ್ನತ ಮಟ್ಟದಲ್ಲಿ ಪ್ರಯತ್ನಿಸಿ, ಬಾಕಿ ವೇತನ ಕೊಡಿಸಲು ಪ್ರಯತ್ನಿಸುತ್ತೇನೆ. ತಾಲೂಕು ಪಂಚಾಯತ್ ಯಾವತ್ತೂ ಕೂಡ ನೌಕರರನ್ನು ಕೈ ಬಿಡುವುದಿಲ್ಲ. ನಿಮ್ಮ ಮೇಲೆ ಹಲ್ಲೆ, ದಾಳಿ ನಡೆದರೆ, ತಮ್ಮ ಗಮನಕ್ಕೆ ತನ್ನಿ ನಿಮಗೆ ರಕ್ಷಣೆ ನೀಡಲು ನಾನು ಸದಾ ಕಟೀಬದ್ದನಾಗಿದ್ದೇನೆ. ನಿಮಗೆ ಗುರುತಿನ ಚೀಟಿ ವಿತರಿಸಿ ಬಸ್ ಪ್ರಯಾಣದರಲ್ಲಿ ಮತ್ತು ಆರೋಗ್ಯ ವೆಚ್ಚದಲ್ಲಿ ರಿಯಾಯಿತಿ ಕೊಡಿಸುವ ಚಿಂತನೆ ಇದೆ ಎಂದರು.

     ತಾಲೂಕು ಪಂಚಾಯತ್ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಮಾತನಾಡಿ, ವರ್ಷಾನುಗಟ್ಟಲೇ ಗ್ರಾ.ಪಂ. ನೌಕರರ ಸಂಬಳವಾಗದಿದ್ದರೆ, 200 ರೂ.ಗೆ ಕೆಜಿ ಈರುಳ್ಳಿ ಆಗಿರುವ ಈ ದುಬಾರಿ ಕಾಲದಲ್ಲಿ ಜೀವನ ನಡೆಸುವುದಾದರೂ ಹೇಗೆ? ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೇಗೆ? ತಕ್ಷಣವೇ ಪಿಡಿಒಗಳು ನಿಮ್ಮ ಸಮಸ್ಯೆಗೆ ಸ್ಪಂದಿಸಿ ಮಾನವೀಯತೆಯ ಆಧಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಬಾಕಿ ವೇತನ ನೀಡಲಾಗದಿದ್ದರೂ, ಲಭ್ಯ ಇರುವ ಅನುದಾನದಲ್ಲಿ ಆದಷ್ಟು ವೇತನ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

     ತಾ.ಪಂ. ಉಪಾಧ್ಯಕ್ಷ ಎ.ಬಿ.ಹನುಮಂತಪ್ಪ ಮಾತನಾಡಿ, ಯಾವುದೇ ಗ್ರಾಮ ಪಂಚಾಯತ್‍ಗಳಲ್ಲಿ ಜಾಡ ಮಾಲಿ, ನೀರಗಂಟಿ, ಕರವಸೂಲಿಗಾರ, ಜವಾನರ ಕೆಲಸವೇ ಮೊದಲು ಆಗಲಿದೆ. ಇಂತಹವರಿಗೆ ವರ್ಷಾನುಗಟ್ಟಲೇ ಸಂಬಳ ಕೊಡದಿರುವುದು ವಿಷಾಧನೀಯ. ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಮುಂದಾದರೂ ಸರ್ಕಾರಿ ನೌಕರರ ಮಾದರಿಯಲ್ಲಿಯೇ ಪ್ರತಿ ತಿಂಗಳು ವೇತನ ನೀಡಲು ಕ್ರಮ ಕೈಗೊಳ್ಳಬೇಕು ಎಂದರು.

     ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷ ಕೆ.ಎಲ್.ಭಟ್ ಮಾತನಾಡಿ, ನಮ್ಮ ಸಂಘದ ಹೋರಾಟದ ಫಲವಾಗಿ 100-200 ರೂ,ಗಳಿಗೆ ಕೆಲಸ ಮಾಡುತ್ತಿದ್ದ ಗ್ರಾ.ಪಂ. ನೌಕರರಿಗೆ ಇಂದು ಕನಿಷ್ಠ ವೇತನ ನಿಗದಿಯಾಗಿದೆ. ಆದರೆ, ಸರ್ಕಾರ ಕನಿಷ್ಠ ಕೂಲಿ ಕಾಯ್ದೆಯನ್ನು ಜಾರಿ ಗೊಳಿಸಲು ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

     ಪ್ರಾಸ್ತಾವಿಕ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಉಮೇಶ್ ಮಾತನಾಡಿ, ಗಾಮ ಪಂಚಾಯಿತಿ ನೌಕರರಿಗೆ 5ರಿಂದ 20 ತಿಂಗಳ ವರೆಗಿನ ವೇತನ ನೀಡಿಲ್ಲ. ಆದ್ದರಿಂದ ಈ ಬಾಕಿ ವೇತನ ನೀಡಲು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ನಮ್ಮ ಸಂಬಳಕ್ಕಾಗಿ 890 ಕೋಟಿ ರೂ. ಅವಶ್ಯಕತೆ ಇದ್ದು, 518 ಕೋಟಿ ರೂ.ಗೆ ಹಿಂದಿನ ಸರ್ಕಾರ ಮಂಜೂರಾತಿ ನೀಡಿದೆ. ಹೀಗಾಗಿ ಇನ್ನುಳಿದ 372 ಕೋಟಿ ರೂ. ಮಂಜೂರು ಮಾಡಬೇಕು. ಗ್ರಾ.ಪಂ. ನೌಕರರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿ, ಹಲ್ಲೆಯನ್ನು ತಡೆದು ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

     ಸಂಘದ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಕೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಶ್ರೀನಿವಾಸಾಚಾರ್ ಉಪಸ್ಥಿತರಿದ್ದರು. ಬೇತೂರು ಬಸವರಾಜ್ ನಿರೂಪಿಸಿದರು. ಹಾಲೇಶ್ ಸ್ವಾಗತಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link