ನಿಜವಾಗಲಿದೆಯಾ ಚುನಾವಣಾ ಸಮೀಕ್ಷೆಗಳ ವರದಿ ?!

ತುಮಕೂರು

    ಮತಗಟ್ಟಿ ಸಮೀಕ್ಷೆಗಳು ಹೊರ ಬೀಳುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಸಂಚಲನ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್‍ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎನ್ನುವ ಸಮೀಕ್ಷಾ ವರದಿಗಳಿಂದಾಗಿ ಆ ಪಕ್ಷದ ನಾಯಕರು ಸಂಭ್ರಮದಲ್ಲಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ 125ರ ಆಜುಬಾಜಿನಲ್ಲಿ ಇರುವ ಬಗ್ಗೆ ಸಮೀಕ್ಷೆಗಳು ಪ್ರಕಟಿಸಿದ್ದು, ಆ ಪಕ್ಷಗಳಲ್ಲಿ ಅಸಮಾಧಾನವು ವ್ಯಕ್ತವಾಗುತ್ತಿದೆ. ಇಂತಹ ಸಮೀಕ್ಷೆಗಳಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಕೆಲವರು ಹೇಳಿದರೆ, ಇವಿಎಂ ಮತಯಂತ್ರಗಳ ಬಗ್ಗೆಯೇ ಇನ್ನೂ ಕೆಲವರು ತಮ್ಮ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

     ಸರಳ ಬಹುಮತದೊಂದಿಗೆ ಮತ್ತೆ ನರೇಂದ್ರಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಸಮೀಕ್ಷೆಗಳು ಪ್ರತಿಪಾದಿಸಿದರೆ, ಪ್ರಾದೇಶಿಕ ಪಕ್ಷಗಳ ಸಹಕಾರವಿಲ್ಲದೆ ಸರ್ಕಾರ ರಚನೆ ಅಸಾಧ್ಯ ಎಂದು ಕೆಲವರು ಪ್ರತಿಪಾದಿಸುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ವಿರುದ್ದ ಪ್ರಚಾರಕ್ಕೆ ಹಲವು ಅಸ್ತ್ರಗಳು ಸಿಕ್ಕಿದ್ದವು. ಆ ಸಂದರ್ಭದಲ್ಲಿ ಕಾಂಗ್ರೆಸ್ ಕೆಲವು ಹಗರಣಗಳಲ್ಲಿ ಸಿಲುಕಿತ್ತು.

       ಈ ಬಾರಿ ಬಿಜೆಪಿಗೆ ಅಂತಹ ಅಸ್ತ್ರಗಳು ಸಿಗದೇ ಹೋದರೂ ವೈಯಕ್ತಿಕ ನೆಲಗಟ್ಟಿನಲ್ಲಿ ದಾಳಿ ಮುಂದುವರೆಸಿತ್ತು. ಹಿಂದೂತ್ವದ ಪ್ರತಿಪಾದನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿತು. ಅಭಿವೃದ್ಧಿಯ ಬಗ್ಗೆ ಆರಂಭದಲ್ಲಿ ಮಾತುಗಳು ಆರಂಭವಾದರೂ ಕೊನೆಯ ಹಂತದ ಚುನಾವಣೆಯ ವೇಳೆಗೆ ಬಿಜೆಪಿ ಮುಖಂಡರು ಕಾಂಗ್ರೆಸ್ ಹಾಗೂ ಇತರೆ ಮುಖಂಡರುಗಳ ವಿರುದ್ದ ವೈಯಕ್ತಿಕ ದಾಳಿಗೆ ಇಳಿದು ಬಿಟ್ಟರು. ಕಾಂಗ್ರೆಸ್ ಪಕ್ಷವೂ ಇದಕ್ಕೆ ಹೊರತಾಗಲಿಲ್ಲ.

       ಭಾರಿ ಅಬ್ಬರದೊಂದಿಗೆ ಸದ್ದು ಮಾಡುತ್ತಲೇ ಭಾನುವಾರ ಸಂಜೆ ಅಂತಿಮ ಹಂತದ ಏಳನೇ ಸುತ್ತಿನ ಮತದಾನ ಮುಕ್ತಾಯವಾಗು ತ್ತಿದ್ದಂತೆಯೇ ಟಿವಿ ಚಾನಲ್‍ಗಳು ಸಮೀಕ್ಷೆಗಳನ್ನು ಪ್ರಕಟಿಸಿದವು. ಈ ಬಾರಿ 10ಕ್ಕೂ ಹೆಚ್ಚು ಅಧಿಕ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು ಇದರಲ್ಲಿ ಹೆಚ್ಚಿನ ಸಮೀಕ್ಷೆಗಳು ಎನ್‍ಡಿಎಗೆ ಸರಳ ಬಹುಮತ ನೀಡಿವೆ.

       ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ ಒಂದು ಸರ್ಕಾರ ಸ್ಥಾಪನೆಗೆ 272 ಸದಸ್ಯ ಬಲಬೇಕು. ಇದನ್ನೇ ಮ್ಯಾಜಿಕ್ ನಂಬರ್ ಎಂದು ಕರೆಯಲಾಗುತ್ತದೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 336 ಸ್ಥಾನಗಳನ್ನು ಪಡೆಯುವುದರೊಂದಿಗೆ ದೊಡ್ಡ ಕೂಟವಾಗಿ ಹೊರಹೊಮ್ಮಿ ಸರ್ಕಾರದ ಗದ್ದುಗೆ ಹಿಡಿದಿತ್ತು. ಒಟ್ಟು 12 ಅಂಗ ಪಕ್ಷಗಳ ಪೈಕಿ ಬಿಜೆಪಿ 282 ಸ್ಥಾನಗಳನ್ನು ಪಡೆದುಕೊಂಡಿತ್ತು.

       ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ 59 ಸ್ಥಾನಗಳನ್ನು ಪಡೆದಿತ್ತು. 7 ಮೈತ್ರಿ ಪಕ್ಷಗಳನ್ನು ಒಳಗೊಂಡಿದ್ದ ಕಾಂಗ್ರೆಸ್ ಪಕ್ಷವು 44 ಸ್ಥಾನಗಳನ್ನು ಪಡೆದಿದ್ದರೆ, ಇತರೆ ಸ್ಥಾನಗಳನ್ನು ಯುಪಿಎ ಅಂಗ ಪಕ್ಷಗಳು ಪಡೆದುಕೊಂಡಿದ್ದವು. ಭಾರತದ ಚುನಾವಣಾ ಇತಿಹಾಸದಲ್ಲೆ ಕಾಂಗ್ರೆಸ್ ಇಂತಹ ಹೀನಾಯ ಸ್ಥಿತಿಯನ್ನು ಕಂಡಿರಲಿಲ್ಲ.

       ಅಷ್ಟೆ ಅಲ್ಲ ಸಾಂವಿಧಾನಿಕವಾಗಿ ವಿರೋಧ ಪಕ್ಷವಾಗಿ ಕುಳಿತುಕೊಳ್ಳುವಂತಹ ಅರ್ಹ ಸ್ಥಾನವನ್ನು ಕಾಂಗ್ರೆಸ್ ಪಡೆಯಲು ಸಾಧ್ಯವಾಗಲಿಲ್ಲ. ಅಧಿಕೃತವಾಗಿ ಒಂದು ಪಕ್ಷ ವಿರೋಧÀ ಪಕ್ಷದಲ್ಲಿ ಕೂರಬೇಕಾದರೆ ಒಟ್ಟು ಸ್ಥಾನಗಳ ಪೈಕಿ ಶೇ.10ರಷ್ಟು ಅಂದರೆ 55 ಸೀಟುಗಳನ್ನು ಪಡೆಯಬೇಕು.

        ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೂ ವಿವಿಧ ಏಜೆನ್ಸಿಗಳ ಸಮೀಕ್ಷೆಗಳು ಪ್ರಕಟವಾಗಿದ್ದವು. ಆದರೆ ಆಗಿನ ಸಮೀಕ್ಷಾ ಸಂಸ್ಥೆಗಳ ಸಂಖ್ಯೆ ಕಡಿಮೆ ಇತ್ತು. ಈ ಬಾರಿ ಈ ಸಮೀಕ್ಷೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕೆಲವು ಸಮೀಕ್ಷೆಗಳು ಈಗಾಗಲೇ ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸಿದ್ದರೆ ಮತ್ತೆ ಕೆಲವು ಸಮೀಕ್ಷೆಗಳು ಅಧಿಕಾರದ ಹತ್ತಿರಕ್ಕೆ ಬರುತ್ತಿರುವ ಅಂಕಿಗಳನ್ನು ಪ್ರಕಟಿಸಿದೆ. ಏನೇ ಸಮೀಕ್ಷೆಗಳು ಪ್ರಕಟವಾದರೂ ಮೇ 23ರವರೆಗೆ ಕಾಯಲೇಬೇಕು.

       ಅಲ್ಲಿಯವರೆಗೆ ಈ ಸಮೀಕ್ಷಾ ವರದಿಗಳೆ ಎಲ್ಲರ ಬಾಯಲ್ಲಿನ ಚರ್ಚಾ ವಿಷಯ. ಈ ಸಮೀಕ್ಷೆಗಳು ಫಲಿತಾಂಶದ ನಿಖರತೆಯನ್ನು ಹೇಳಲು ಸಾಧ್ಯವಿಲ್ಲವಾದರೂ ಯಾವ ಸಮೀಕ್ಷೆ ಫಲಿತಾಂಶದ ಹತ್ತಿರದ ಚಿತ್ರಣವನ್ನು ಕೊಡಬಲ್ಲದು ಎಂಬ ಬಗ್ಗೆ ಹೆಚ್ಚು ಕುತೂಹಲವಂತೂ ಇದ್ದೆ ಇರುತ್ತದೆ.

          2014ರ ಚುನಾವಣೆಯಲ್ಲಿ ಸಿಎನ್‍ಎನ್-ಐಬಿಎನ್-ಸಿಎಸ್‍ಬಿಎಸ್ ಏಜೆನ್ಸಿಯು ಎನ್‍ಡಿಎಗೆ 276, ಯುಪಿಎಗೆ 97, ಇಂಡಿಯಾ ಟುಡೇ ಸಮೀಕ್ಷೆಯು ಎನ್‍ಡಿಎಗೆ 272, ಯುಪಿಎಗೆ 115, ನ್ಯೂಸ್ 24 ಚಾಣಕ್ಯ ಸಮೀಕ್ಷೆಯು ಎನ್‍ಡಿಎಗೆ 340, ಯುಪಿಎಗೆ 70, ಟೈಮ್ಸ್ ನೌ ಸಮೀಕ್ಷೆಯು ಎನ್‍ಡಿಎಗೆ 249, ಯುಪಿಎಗೆ 148, ಎಬಿಪಿ ನ್ಯೂಸ್ ಎನ್‍ಡಿಎಗೆ 274, ಯುಪಿಎಗೆ 97, ಇಂಡಿಯಾ ಟಿವಿ-ಸಿಓಟರ್ ಸಮೀಕ್ಷೆಯು ಎನ್‍ಡಿಎಗೆ 289, ಯುಪಿಎಗೆ 101, ಎನ್‍ಡಿಟಿವಿ ಸಮೀಕ್ಷೆಯು ಎನ್‍ಡಿಎಗೆ 279, ಯುಪಿಎಗೆ 103 ಸ್ಥಾನಗಳನ್ನು ಪ್ರಕಟಸಿತ್ತು.

       2019ರ ಪ್ರಸ್ತುತ ಚುನಾವಣೆಗೆ ಸಂಬಂಧಿಸಿದಂತೆ ವಿವಿಧ ಸಮೀಕ್ಷೆಗಳು ಈ ಕೆಳಕಂಡಂತೆ ತಮ್ಮ ಸಮೀಕ್ಷಾ ವರದಿಗಳನ್ನು ಪ್ರಕಟಿಸಿವೆ.

        ಟೈಮ್ಸ್ ನೌ ಎನ್‍ಡಿಎಗೆ 306, ಯುಪಿಎಗೆ 132 ಸ್ಥಾನಗಳನ್ನು, ಚಾಣಕ್ಯ ಸಂಸ್ಥೆಯು ಎನ್‍ಡಿಎಗೆ 350, ಯುಪಿಎಗೆ 95, ಇಂಡಿಯಾ ಟುಡೇ ಸಮೀಕ್ಷೆಯು ಎನ್‍ಡಿಎಗೆ 339ರಿಂದ 365, ಯುಪಿಎಗೆ 77ರಿಂದ 108 ಸ್ಥಾನಗಳನ್ನು ನೀಡಿದೆ. ನ್ಯೂಸ್-18 ಸಂಸ್ಥೆಯು ಎನ್‍ಡಿಎಗೆ 336, ಯುಪಿಎಗೆ 82 ಸ್ಥಾನಗಳನ್ನು ಹೇಳಿದೆ.

       ಸಿ ಓಟರ್ ಸಮೀಕ್ಷೆಯು ಎನ್‍ಡಿಎಗೆ 287, ಯುಪಿಎಗೆ 128, ಎಬಿಪಿ ನ್ಯೂಸ್ ಎನ್‍ಡಿಎಗೆ 267, ಯುಪಿಎಗೆ 127 ಸ್ಥಾನಗಳನ್ನು, ನ್ಯೂಸ್ ನೇಷನ್ ಎನ್‍ಡಿಎಗೆ 282ರಿಂದ 290 ಹಾಗೂ ಯುಪಿಎಗೆ 118 ರಿಂದ 126 ಸ್ಥಾನಗಳನ್ನು ನೀಡಿದೆ. ನೇತಾ ನ್ಯೂಸ್ ಎಕ್ಸ್ ಸಂಸ್ಥೆಯು ಎನ್‍ಡಿಎಗೆ 242, ಯುಪಿಎಗೆ 164 ಸ್ಥಾನಗಳನ್ನು, ಇಂಡಿಯಾ ನ್ಯೂಸ್ ಸಂಸ್ಥೆಯು ಎನ್‍ಡಿಎಗೆ 287, ಯುಪಿಎಗೆ 128 ಸ್ಥಾನಗಳನ್ನು, ಜಾನ್‍ಕೀಬಾತ್ ಸಮೀಕ್ಷೆಯು ಎನ್‍ಡಿಎಗೆ 305, ಯುಪಿಎಗೆ 124 ಸ್ಥಾನಗಳನ್ನು ಪ್ರಕಟಿಸಿದೆ.

       ಒಟ್ಟು 11 ವಿವಿಧ ಏಜೆನ್ಸಿಗಳು ಸಮೀಕ್ಷೆಗಳನ್ನು ನಡೆಸಿದ್ದು, ಒಟ್ಟಾರೆ ಸಮೀಕ್ಷೆಯ ಪ್ರಕಾರ (ಅವರೇ ಪ್ರಕಟಿಸಿರುವಂತೆ) ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ 300ರಿಂದ 305 ಸ್ಥಾನಗಳನ್ನು ಪಡೆಯುವುದಾಗಿ, ಕಾಂಗ್ರೆಸ್ ನೇತೃತ್ವದ ಯುಪಿಎ ಅಂಗಪಕ್ಷಗಳು 120ರಿಂದ 124 ಸ್ಥಾನಗಳನ್ನು ಪಡೆಯುವುದಾಗಿ ಹೇಳಿಕೊಂಡಿವೆ. ಇತರೆ ಪಕ್ಷಗಳು 87ರಿಂದ 122 ಸ್ಥಾನಗಳನ್ನು ಪಡೆಯುವುದಾಗಿ ಸಮೀಕ್ಷಾ ವರದಿಗಳು ತಿಳಿಸುತ್ತವೆ. ಬಿಜೆಪಿಯು ಗುಜರಾತ್, ದೆಹಲಿ ಮತ್ತು ಹರಿಯಾಣದಲ್ಲಿ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಚಾಣಕ್ಯ ಸಂಸ್ಥೆ ಹೇಳಿದೆ.

        ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ಮತ್ತು ಸಮಾಜವಾದಿ ಪಕ್ಷ ಜಂಟಿಯಾಗಿ ಮಾಡಿಕೊಂಡಿದ್ದ ಮಹಾಘಟ ಬಂಧನ್‍ಗೆ ಅಭೂತಪೂರ್ವ ಯಶಸ್ಸು ಸಿಗಲಿದೆ ಎಂದು ಕೆಲವು ಸಮೀಕ್ಷೆಗಳು ಹೇಳಿವೆ. ಒಟ್ಟಾರೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಿನ್ನಡೆಯನ್ನು ತಿಳಿಸಿವೆ. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ಇನ್ನೂ ಅಸ್ಥಿತ್ವದಲ್ಲಿದ್ದು ಈ ಬಾರಿ ಅಲ್ಲಿ ಖಾತೆ ತೆರೆಯಬಹುದೇ ಎಂಬ ಬಗ್ಗೆ ಸಮೀಕ್ಷಾ ವರದಿಗಳು ಗಮನಹರಿಸಿದರೂ ಈ ಬಗ್ಗೆ ಸ್ಪಷ್ಟತೆಯನ್ನು ನೀಡಿಲ್ಲ.

        ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಎಲ್ಲಾ ಸಮೀಕ್ಷಾ ಏಜೆನ್ಸಿಗಳು ಹೇಳಿವೆ. ಸಿಓಟರ್ ಸಮೀಕ್ಷೆಯಲ್ಲಿ ಬಿಜೆಪಿ 18, ಕಾಂಗ್ರೆಸ್ 7, ಜೆಡಿಎಸ್ 2 ಮತ್ತು ಇತರೆ ಒಂದು ಸ್ಥಾನದಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ. ಇಂಡಿಯಾ ಟುಡೇ ಮತ್ತು ಆಕ್ಸಿಸ್ ಸಂಸ್ಥೆಯೂ ಕೂಡ ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದೆ. ಬಿಜೆಪಿ 21 ರಿಂದ 25 ಸ್ಥಾನಗಳಲ್ಲಿ ಕಾಂಗ್ರೆಸ್ 3 ರಿಂದ 6 ಸ್ಥಾನಗಳಲ್ಲಿ, ಜೆಡಿಎಸ್ 1 ರಿಂದ 3 ಸ್ಥಾನಗಳಲ್ಲಿ ಜಯಗಳಿಸಲಿದ್ದಾರೆ ಎಂದು ಹೇಳಿದೆ.

      ಇಂಡಿಯಾ ಟಿವಿ ಸಮೀಕ್ಷೆಯ ಪ್ರಕಾರ ಬಿಜೆಪಿ 17, ಕಾಂಗ್ರೆಸ್ 8 ಮತ್ತು ಜೆಡಿಎಸ್ 8 ಸ್ಥಾನ ಗಳಿಸಲಿದೆಯಂತೆ. ಚಾಣಕ್ಯ ಸಮೀಕ್ಷೆಯು ಬಿಜೆಪಿಗೆ ರಾಜ್ಯದಲ್ಲಿ 23 ಸೀಟುಗಳು ಸಿಗುತ್ತವೆ ಎಂದು ಹೇಳಿದೆ. ಕೇಂದ್ರದಲ್ಲಿ ಎನ್‍ಡಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸೂಚನೆಗಳನ್ನು ಸಮೀಕ್ಷೆಗಳು ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿನ ರಾಜಕೀಯ ಸಮೀಕರಣದ ಬದಲಾವಣೆಗಳು ಆಗಬಹುದಾ? ಎಂಬ ಲೆಕ್ಕಾಚಾರಗಳು ಆರಂಭವಾಗಿವೆ.

      2014ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳನ್ನು ಪಡೆದುಕೊಂಡಿತ್ತು. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನವನ್ನು ಪಡೆಯಲಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿಕೊಳ್ಳುತ್ತಿದ್ದ ಹಿಂದೆಯೇ ಅದಕ್ಕೆ ಪೂರಕ ಎಂಬಂತೆಯೇ ಸಮೀಕ್ಷಾ ವರದಿಗಳು ಪ್ರಕಟವಾಗಿವೆ. ಚುನಾವಣೆಯ ಸಂದರ್ಭದಲ್ಲಿ 17ರಿಂದ 18 ಸ್ಥಾನ ಎಂದು ಹೇಳುತ್ತಿದ್ದರು. ಆ ನಂತರ 22 ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ ಎಂದು ಹೇಳಿದರು. ಮೇ.23ರ ಫಲಿತಾಂಶ ಇದೆಲ್ಲದಕ್ಕೂ ಉತ್ತರ ನೀಡಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap