ಕರ್ನಾಟಕದಲ್ಲಿ ರಾಜ್ಯಪಾಲರ ಆಡಳಿತ ಹೇರುವುದೇ ಕೇಂದ್ರ ಸರ್ಕಾರ??

ಬೆಂಗಳೂರು

   ರಾಜ್ಯ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ತಯಾರಿ ಆರಂಭಿಸಿದ್ದು, ಇದಕ್ಕಾಗಿ ವೇದಿಕೆ ಸಜ್ಜುಗೊಳಿಸುತ್ತಿದ್ದಾರೆ.ಕಳೆದೆರಡು ದಿನಗಳ ಹಿಂದೆ ಪಶ್ಚಿಮ ಬಂಗಾಳ ರಾಜ್ಯಕ್ಕೆ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಎಚ್ಚರಿಕೆ ನೋಟಿಸ್ ನೀಡಿದ್ದ ಕೇಂದ್ರ ಗೃಹ ಸಚಿವಾಲಯ, ಇದೀಗ ಕರ್ನಾಟಕದ ಮೇಲೆ ತನ್ನ ಕೆಂಗಣ್ಣು ಬೀರುವುದು ಸ್ಪಷ್ಟವಾಗಿದೆ.

      ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರ ಆಡಳಿತ ಹೇರಲು ಕೇಂದ್ರ ಸರ್ಕಾರ ಸೂಕ್ತ ಕಾರ್ಯತಂತ್ರ ರೂಪಿಸುತ್ತಿದ್ದು, ಕರ್ನಾಟಕದಲ್ಲೂ ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುತ್ತಿದೆ.ಪ್ರಮುಖವಾಗಿ ರಾಜಕೀಯ ಅಸ್ಥಿರತೆ ಇರುವ, ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಬಿಜೆಪಿ ವರಿಷ್ಠರು. ಇದಕ್ಕಾಗಿ ಸೂಕ್ತ ಕಾರ್ಯತಂತ್ರದಲ್ಲಿ ಮಗ್ನರಾಗಿದ್ದಾರೆ.

      ರಾಜ್ಯದ ರಾಜ್ಯಪಾಲ ವಜೂಬಾಯಿ ವಾಲಾ ಅವರನ್ನು ದೆಹಲಿಗೆ ಕರೆಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯದ ರಾಜಕೀಯ ಪರಿಸ್ಥಿತಿ, ಕಾನೂನು ಸುವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಸಂಂಪೂರ್ಣ ಮಾಹಿತಿ ಪಡೆದುಕೊಂಡಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕುವಂತೆ ಮಾಡಿದೆ.

      ಕರ್ನಾಟಕದಲ್ಲಿ ಆಡಳಿತಾರೂಢ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ನಡುವಣ ಸಂಬಂಧ ಕಳೆದ ಕೆಲವು ತಿಂಗಳುಗಳಿಂದ ಹದಗೆಡುತ್ತಿದೆ. ಇಂತಹ ಸಮಸ್ಯೆ ನಡುವೆಯೇ ರಾಜ್ಯಪಾಲರು ಪ್ರಧಾನಿ ಮತ್ತು ಗೃಹ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಭಾರೀ ಮಹತ್ವ ಪಡೆದುಕೊಂಡಿದೆ.

      ಬಳಿಕ ರಾಜ್ಯಪಾಲರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ರಾಜ್ಯದ ರಾಜಕೀಯದ ಸಮಗ್ರ ಚಿತ್ರಣ ನೀಡಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಭಿನ್ನಮತ, ಬಂಡಾಯ ತೀವ್ರಗೊಂಡಿದ್ದು, ಸರ್ಕಾರ ಅಭದ್ರವಾಗಿದೆ ಎಂದು ಹೇಳಿದ್ದಾರೆ.

      ಬಂಡಾಯ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುವ ಬೆದರಿಕೆವೊಡ್ಡುವ ಮೂಲಕ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಚೌಕಾಸಿ ನಡೆಸುತ್ತಿದ್ದು, ಮಂತ್ರಿಮಂಡಲ ವಿಸ್ತರಣೆಗೆ ಇದೇ 14ರ ಶುಕ್ರವಾರ ಸಮಯ ನಿಗದಿಯಾಗಿದೆ.ತೀವ್ರ ರಾಜಕೀಯ ಬಿಕ್ಕಟ್ಟು ತಲೆದೋರಿದಲ್ಲಿ ವಿಧಾನಸಭೆಯನ್ನು ಆರು ತಿಂಗಳ ಮಟ್ಟಿಗೆ ಅಮಾನತ್ತಿನಲ್ಲಿಟ್ಟು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ, ದೆಹಲಿ, ಜಾರ್ಖಂಡ್, ಜಮ್ಮು – ಕಾಶ್ಮೀರ ವಿಧಾನಸಭಾ ಚುನಾವಣೆ ಜತೆಗೆ ಬಿಹಾರ ಮತ್ತು ಕರ್ನಾಟಕ ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಸುವುದು ಬಿಜೆಪಿ ನಾಯಕರ ಕಾರ್ಯತಂತ್ರವಾಗಿದೆ.

      ಬಿಜೆಪಿ ಪರವಾಗಿ ದೇಶದಲ್ಲಿ ಅಲೆ ಎದ್ದಿದ್ದು, ಅಲೆ ಜೀವಂತವಾಗಿರುವಾಗಲೇ ವಿವಿಧ ರಾಜ್ಯಗಳಿಗೆ ಚುನಾವಣೆ ನಡೆಸಿ ಗೆಲ್ಲಲು ಈಗಾಗಲೇ ಕಾರ್ಯತಂತ್ರ ರೂಪಿಸಿದ್ದಾರೆ.ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಮುನಿಸಿಕೊಂಡಿದ್ದು, ಅವರು ಆರ್‍ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಜತೆ ಚುನಾವಣೆ ಎದುರಿಸಲು ಪರಿಶೀಲನೆ ನಡೆಸುತ್ತಿದ್ದಾರೆ.

    ಆದರೆ ಮೈತ್ರಿಕೂಟ ಪಕ್ಷಗಳು ನಮ್ಮ ಜತೆ ಕೈಜೋಡಿಸಲಿ, ಬಿಡಲಿ, ಈ ವರ್ಷಾಂತ್ಯದ ವೇಳೆಗೆ ಕರ್ನಾಟಕ, ಜಮ್ಮು – ಕಾಶ್ಮೀರ, ದೆಹಲಿಯಲ್ಲಿ ಬಿಜೆಪಿ ಆಡಳಿತ ಬರಬೇಕು. ಮಹಾರಾಷ್ಟ್ರ, ಬಿಹಾರದಲ್ಲಿ ಮತ್ತೆ ಕಮಲ ಅರಳಿಸಬೇಕು ಎನ್ನುವುದು ಬಿಜೆಪಿ ವರಿಷ್ಠರ ಗುರಿಯಾಗಿದೆ. ಇದಕ್ಕಾಗಿ ಈಗಿನಿಂದಲೇ ಸೂಕ್ತ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap