ಬಿಜೆಪಿ ಪ್ರಾಬಲ್ಯಕ್ಕೆ `ಮೈತ್ರಿ’ ಸೆಡ್ಡು ಹೊಡೆದೀತೇ?

ತುಮಕೂರು

ವಿಶೇಷ ವರದಿ:ಆರ್.ಎಸ್.ಅಯ್ಯರ್

        ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಪ್ರದೇಶವನ್ನಷ್ಟೇ ಹೊಂದಿರುವ “ತುಮಕೂರು ನಗರ ವಿಧಾನ ಸಭಾ ಕ್ಷೇತ್ರ”ದಲ್ಲಿ ಸಹಜವಾಗಿಯೇ ಇರುವ ಬಿಜೆಪಿ ಪ್ರಾಬಲ್ಯವನ್ನು ಈ ಬಾರಿಯ 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ “ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ”ಯು ಹಿಮ್ಮೆಟ್ಟಿಸೀತೇ? ಬಿಜೆಪಿಯ ಶಕ್ತಿಗೆ ಎದುರಾಗಿ ಸೆಡ್ಡು ಹೊಡೆದೀತೇ? ಎಂಬ ಪ್ರಶ್ನೆಗಳು ಇದೀಗ ತುಮಕೂರು ನಗರಾದ್ಯಂತ ಮತದಾರರ ವಲಯದಲ್ಲಿ ಹಾಗೂ ವಿಶೇಷವಾಗಿ ರಾಜಕೀಯಾಸಕ್ತರಲ್ಲಿ ಕದನ ಕುತೂಹಲ ಮೂಡಿಸಿದೆ.

     `ತುಮಕೂರು ಲೋಕಸಭಾ ಕ್ಷೇತ್ರ’ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ (ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ ಮತ್ತು ಮಧುಗಿರಿ) ತುಮಕೂರು ನಗರ ಕ್ಷೇತ್ರವೂ ಒಂದಾಗಿದ್ದು, ಈ ಕ್ಷೇತ್ರವು ಜಿಲ್ಲಾ ಕೇಂದ್ರವೂ ಆಗಿರುವುದು ವಿಶೇಷವಾಗಿದೆ.

       ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಜಿತರಾಗಿದ್ದ ಜಿ.ಎಸ್.ಬಸವರಾಜು ಅವರೆ ಮತ್ತೊಮ್ಮೆ ಈಗಲೂ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಮತ್ತು ಜೆ.ಡಿ.ಎಸ್. “ಮೈತ್ರಿ” ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡರವರೇ ಕಣಕ್ಕಿಳಿದಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರವು “ಹೈ ಓಲ್ಟೇಜ್” ಕ್ಷೇತ್ರವಾಗಿ ಮಾರ್ಪಟ್ಟು , ದೇಶದ ಗಮನ ಸೆಳೆಯುತ್ತಿದೆ. ಬಸವರಾಜು ಅವರು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ತಂದೆಯವರೆಂಬುದು ಸಹ ಮುಖ್ಯಸಂಗತಿ. ಇಂತಹುದೊಂದು ವಿಶೇಷ ಸನ್ನಿವೇಶದಲ್ಲಿ “ತುಮಕೂರು ನಗರ ವಿಧಾನ ಸಭಾ ಕ್ಷೇತ್ರ”ದ ರಾಜಕೀಯ ಪರಿಸ್ಥಿತಿಯು ಈ ಚುನಾವಣೆಯಲ್ಲಿ ಹೇಗೆ ಪರಿಣಾಮ ಬೀರಬಹುದೆಂಬುದು ಬಹುಚರ್ಚಿತ ವಿಷಯವಾಗಿದೆ.

       2018 ರ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಬಿಜೆಪಿಯ ಜಿ.ಬಿ.ಜ್ಯೋತಿಗಣೇಶ್ ಅವರು ಆರಿಸಿಬಂದರು. ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‍ನ ಡಾ.ಎಸ್.ರಫೀಕ್ ಅಹಮದ್ ಅವರು ಶಾಸಕರಾಗಿದ್ದುದು ಬಿಟ್ಟರೆ, ಅದಕ್ಕೂ ಹಿಂದೆ 20 ವರ್ಷಗಳ ಕಾಲ ತುಮಕೂರು ಕ್ಷೇತ್ರದಲ್ಲಿ ಬಿಜೆಪಿಯೇ ಸತತ ಗೆಲುವು ಸಾಧಿಸಿ ಇತಿಹಾಸ ಬರೆದಿತ್ತು.

        ಐದು ವರ್ಷಗಳ ಅಂತರದ ಬಳಿಕ ಮತ್ತೆ ಬಿಜೆಪಿಯೇ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿಯ ಜ್ಯೋತಿಗಣೇಶ್ ಅವರು 60421 (ಶೇ.35.57) ಮತಗಳನ್ನು ಪಡೆದು ವಿಜೇತರಾಗಿದ್ದರೆ, ಪ್ರತಿಸ್ಪರ್ಧಿಗಳಾಗಿದ್ದ ಜೆ.ಡಿ.ಎಸ್.ನ ಎನ್.ಗೋವಿಂದರಾಜು ಅವರು 55128 (ಶೇ. 32.45) ಹಾಗೂ ಕಾಂಗ್ರೆಸ್‍ನ ಡಾ.ಎಸ್.ರಫೀಕ್ ಅಹಮದ್ ಅವರು 51219 (ಶೇ.30.15) ಮತಗಳನ್ನು ಪಡೆದುಕೊಂಡಿದ್ದರು.

        ವಿಧಾನ ಸಭಾ ಚುನಾವಣೆ ಬಳಿಕ 2018 ರಲ್ಲೇ ತುಮಕೂರು ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲೂ ಬಿಜೆಪಿಯು 12 ಸ್ಥಾನಗಳನ್ನು ಗಳಿಸಿ ಏಕೈಕ ದೊಡ್ಡಪಕ್ಷವಾಗಿ ಹೊರಹೊಮ್ಮಿದೆಯೆಂಬುದು ಗಮನಾರ್ಹ. ಆದರೆ 35 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ “ಮೈತ್ರಿ” ಮಾಡಿಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿದೆಯೆಂಬುದು ಬೇರೆ ಮಾತು.

         ಈ ಹಿಂದಿನ ಅಂದರೆ 2014ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡ ಅವರು 4,29,868 (ಶೇ.39.49) ಮತಗಳನ್ನು ಪಡೆದು ವಿಜೇತರಾಗಿದ್ದರು. ಆಗಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ಎಸ್. ಬಸವರಾಜು ಅವರು 3,55,827 (ಶೇ.32.69) ಮತಗಳನ್ನು ಪಡೆದರೆ, ಮತ್ತೋರ್ವ ಪ್ರತಿಸ್ಪರ್ಧಿ ಜೆ.ಡಿ.ಎಸ್.ನ ಎ.ಕೃಷ್ಣಪ್ಪ ಅವರು 2,58,683 (ಶೇ.23.76) ಮತಗಳನ್ನು ಪಡೆದುಕೊಂಡಿದ್ದರು.

         ಒಟ್ಟಾರೆ ಅಂದು ಕಾಂಗ್ರೆಸ್‍ನ ಮುದ್ದಹನುಮೆಗೌಡರು ಗೆಲುವು ಸಾಧಿಸಿದ್ದರೂ, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತಗಳಿಕೆಯಲ್ಲಿ ಬಿಜೆಪಿಯ ಜಿ.ಎಸ್.ಬಸವರಾಜು ಅವರು ಮುನ್ನಡೆ ಸಾಧಿಸಿದ್ದರೆಂಬುದು ಗಮನ ಸೆಳೆವ ಸಂಗತಿ. ಅಂದು -2014 ರಲ್ಲಿ – ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯ ಬಸವರಾಜು ಅವರಿಗೆ 63,675 (ಶೇ.44.07) ಮತಗಳು ಬಂದರೆ, ಕಾಂಗ್ರೆಸ್‍ನ ಮುದ್ದಹನುಮೆಗೌಡರಿಗೆ 57,629 (ಶೇ.39.89) ಮತಗಳು ಹಾಗೂ ಜೆಡಿಎಸ್‍ನ ಎ.ಕೃಷ್ಣಪ್ಪ ಅವರಿಗೆ 19,563 (ಶೇ.13.54) ಮತಗಳೂ ಲಭಿಸಿದ್ದವೆಂಬುದನ್ನು ಚುನಾವಣಾ ಅಂಕಿಅಂಶಗಳು ಎತ್ತಿ ತೋರಿಸುತ್ತವೆ. ಇವೆಲ್ಲ ಈಗ ರಾಜಕೀಯ ಪಕ್ಷಗಳಲ್ಲಿ, ರಾಜಕೀಯಾಸಕ್ತರಲ್ಲಿ ಬಹುಚರ್ಚೆಗೊಳ್ಳುತ್ತಿರುವ ಸಂಗತಿಗಳು.

ವಿದ್ಯಾವಂತ ಮತದಾರರು

        ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,59,514 ಮತದಾರರಿದ್ದಾರೆ. ಇವರಲ್ಲಿ 1,28,883 ಪುರುಷ, 1,30,597 ಮಹಿಳಾ ಮತ್ತು 34 ಇತರೆ ಮತದಾರರಿದ್ದಾರೆ. ಗಮನೀಯ ಸಂಗತಿಯೆಂದರೆ ಮಹಿಳಾ ಮತದಾರರೇ ಇಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ಜೊತೆಗೆ ನಗರದ ಸಾಕ್ಷರತಾ ಪ್ರಮಾಣ ಶೇ. 88.91 ರಷ್ಟಿದೆ. ಅಂದರೆ ಇಲ್ಲಿ ವಿದ್ಯಾವಂತರು/ ಅಕ್ಷರಸ್ಥರೆ ಅಧಿಕ ಸಂಖ್ಯೆಯಲ್ಲಿದ್ದಾರೆ. ಯುವ ಮತದಾರರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಜಾತಿವಾರು ಲೆಕ್ಕಾಚಾರ

       ರಾಜಕೀಯ ಪಕ್ಷಗಳವರು ಮುಂದಿಡುವ ಜಾತಿವಾರು ಲೆಕ್ಕಾಚಾರದ ಪ್ರಕಾರ, ತುಮಕೂರು ನಗರ ಕ್ಷೇತ್ರದಲ್ಲಿ ಸರಿ ಸುಮಾರು 60 ರಿಂದ 65 ಸಾವಿರದಷ್ಟು ಮುಸ್ಲಿಂ ಮತದಾರರಿದ್ದಾರೆ. ವೀರಶೈವ-ಲಿಂಗಾಯಿತರು-40,000, ಒಕ್ಕಲಿಗರು- 20,000, ಪರಿಶಿಷ್ಟ ಜಾತಿ -35,000, ಪರಿಶಿಷ್ಟ ವರ್ಗದವರು- 5,000, ಕ್ರೈಸ್ತರು-10,000, ತಿಗಳರು-18,000, ಕುರುಬರು-15,000, ಬ್ರಾಹ್ಮಣರು-15,000, ಜೈನರು-5000, ವೈಶ್ಯರು-4,000, ಮಿಕ್ಕಂತೆ ಇತರೆ ಎಲ್ಲ ಜಾತಿಗಳವರು ಇದ್ದಾರೆಂದು ಅಂದಾಜಿಸಲಾಗುತ್ತಿದೆ.

      ಬಿಜೆಪಿಗೆ ಲಿಂಗಾಯಿತರು, ಬ್ರಾಹ್ಮಣರು, ವೈಶ್ಯರು, ಜೈನರು ಮೊದಲಾದ ಮೇಲ್ವರ್ಗದ ಮತಗಳು ಸಾರಾಸಗಟಾಗಿ ಬೀಳಲಿವೆ. ಜೊತೆಗೆ ಹಿಂದುಳಿದ ವರ್ಗಗಳು ಹಾಗೂ ದಲಿತ ಸಮುದಾಯದ ಮತಗಳನ್ನೂ ಬಿಜೆಪಿ ಸೆಳೆಯಲಿದೆ. ವಿಶೇಷವಾಗಿ ಎಲ್ಲ ಸಮುದಾಯಗಳ ಹೊಸ ಮತದಾರರು ಸಹಜವಾಗಿ ಮೋದಿ ಪ್ರಭಾವಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಿಜೆಪಿಯ ಜಿ.ಎಸ್.ಬಸವರಾಜು ಅವರು ಸಹಜವಾಗಿ ತುಮಕೂರು ನಗರ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸುತ್ತಾರೆ” ಎನ್ನುವ ವಾದ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

        ಮಾಜಿ ಪ್ರಧಾನಿ ಎಂಬ ಹೆಗ್ಗಳಿಕೆ ಇರುವುದರಿಂದ ಈ ಬಾರಿ ಇಲ್ಲಿ ದೇವೆಗೌಡರ ಗೆಲುವು ಖಚಿತ. ಕಾರಣ ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳು ಒಗ್ಗೂಡಲಿವೆ. ತುಮಕೂರು ನಗರ ಕ್ಷೇತ್ರದಲ್ಲಿ ಒಕ್ಕಲಿಗರ ಓಟುಗಳ ಜೊತೆಗೆ ದೊಡ್ಡ ಸಂಖ್ಯೆಯಲ್ಲಿರುವ ಮುಸ್ಲಿಮರು ಅನಿವಾರ್ಯವಾಗಿ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಜೊತೆಗೆ ಕ್ರೈಸ್ತರು, ಹಿಂದುಳಿದವರು, ದಲಿತರು ಸಹ ದೊಡ್ಡ ಪ್ರಮಾಣದಲ್ಲಿ ದೇವೆಗೌಡರನ್ನು ಬೆಂಬಲಿಸಲಿದ್ದಾರೆ.

         ದೇವೆಗೌಡರನ್ನು ಗೆಲ್ಲಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿಯು ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಹೆಗಲ ಮೇಲಿದೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತುಮಕೂರು ನಗರ ಕ್ಷೇತ್ರದಲ್ಲಿ ಗಳಿಸಿರುವ ಓಟುಗಳ ಸಂಖ್ಯೆ ಒಂದು ಲಕ್ಷ ದಾಟುತ್ತದೆ. ಅಷ್ಟೇ ಪ್ರಮಾಣದ ಓಟುಗಳು ಈಗ ದೇವೇಗೌಡರಿಗೂ ಲಭಿಸಲಿವೆ. ನಗರ ಕ್ಷೇತ್ರದಲ್ಲಿ ದೇವೇಗೌಡರು ಭಾರಿ ಮುನ್ನಡೆಯನ್ನು ಸಾಧಿಸಲಿದ್ದಾರೆ” ಎನ್ನುವ ಮಾತುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ವಲಯದಲ್ಲಿ ಕೇಳುತ್ತಿವೆ.
 

       2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವರಾಜು ಅವರಿಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು (63,675) ಬಂದಿದ್ದವು. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಅವರು 60,421 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಅದೇ 2018 ರಲ್ಲಿ ನಡೆದ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದು, ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಇದೇ ಫಲಿತಾಂಶ ಮುಂದುವರೆಯುವುದೇ? ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಯು ಬಿಜೆಪಿಗೆ ಈಗ ಸೆಡ್ಡು ಹೊಡೆಯುವುದೇ?” ಎಂಬುದು ರಾಜಕೀಯಾಸಕ್ತರ ಚರ್ಚೆಯ ವಿಷಯವಾಗಿದೆ.

       ಬಿಜೆಪಿಯಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಜಿತರಾಗಿದ್ದ ಜಿ.ಎಸ್.ಬಸವರಾಜು ಅವರೇ ಮತ್ತೊಮ್ಮೆ ಈಗಲೂ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ಮತ್ತು ಜೆ.ಡಿ.ಎಸ್. “ಮೈತ್ರಿ” ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರೇ ಕಣಕ್ಕಿಳಿದಿರುವುದರಿಂದ ಸಹಜವಾಗಿಯೇ ಈ ಕ್ಷೇತ್ರವು “ಹೈ ಓಲ್ಟೇಜ್” ಕ್ಷೇತ್ರವಾಗಿ ಮಾರ್ಪಟ್ಟು ದೇಶದ ಗಮನ ಸೆಳೆಯುತ್ತಿದೆ. ಬಸವರಾಜು ಅವರು ತುಮಕೂರು ನಗರದ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರ ತಂದೆಯವರೆಂಬುದು ಸಹ ಮುಖ್ಯಸಂಗತಿ.

     “2014 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವರಾಜು ಅವರಿಗೆ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳು (63675) ಬಂದಿದ್ದವು. 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಅವರು 60421 ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ಅದೇ 2018 ರಲ್ಲಿ ನಡೆದ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳನ್ನು ಪಡೆದು, ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಇದೇ ಫಲಿತಾಂಶ ಮುಂದುವರೆ ಯುವುದೇ ? ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಯು ಬಿಜೆಪಿಗೆ ಈಗ ಸೆಡ್ಡು ಹೊಡೆಯುವುದೇ?” ಎಂಬುದು ರಾಜಕೀಯಾಸಕ್ತರ ಚರ್ಚೆಯ ವಿಷಯವಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap