ಸಫಲವಾಗುವುದೇ ಗ್ರಾ.ಪಂ. ವ್ಯಾಪ್ತಿ ಒತ್ತುವರಿ ತೆರವು ?

ತುಮಕೂರು
ವಿಶೇಷ ವರದಿ:ಆರ್.ಎಸ್.ಅಯ್ಯರ್

      “ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಜಾಗಗಳ ಒತ್ತುವರಿಯನ್ನು ಗುರುತಿಸಿ, ತೆರವುಗೊಳಿಸಬೇಕೆಂಬ ಸರ್ಕಾರಿ ಆದೇಶ ತುಮಕೂರು ಜಿಲ್ಲೆಯಲ್ಲಿ ಎಷ್ಟರ ಮಟ್ಟಿಗೆ ಸÀಲವಾಗಿದೆ?” ಎಂಬ ಪ್ರಶ್ನೆ ತುಮಕೂರಿನ ಪ್ರಜ್ಞಾವಂತರ ವಲಯದಲ್ಲಿ ಕೇಳಿಬರುತ್ತಿದೆ. 
      ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಒತ್ತುವರಿಗಳನ್ನು ತೆರವುಗೊಳಿಸಲು ಸೂಚಿಸಿ ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಪಂಚಾಯತ್ ರಾಜ್) ಅವರು ರಾಜ್ಯದ ಎಲ್ಲ ಜಿ.ಪಂ ಸಿಇಓ ಮತ್ತು ಉಪಕಾರ್ಯದರ್ಶಿ (ಅಭಿವೃದ್ದಿ) ಅವರಿಗೆ “ಇಂದೇ- ಅತಿ ತುರ್ತು” ಎಂದು ದಿನಾಂಕ 21-06-2019 ರಲ್ಲಿ ಪತ್ರ (ಸಂಖ್ಯೆ: ಗ್ರಾಅಪ/ 1033/ ಗ್ರಾಪಂಅ/2017, ದಿನಾಂಕ: 21-06-2019) ಬರೆದಿದ್ದರು.
     ಅಷ್ಟೇ ಅಲ್ಲ, ದಿನಾಂಕ 30-06-2019 ರೊಳಗೆ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಆ ಪತ್ರದಲ್ಲಿ ಸೂಚನೆಯನ್ನೂ ನೀಡಿದ್ದರು. ಈ ಪತ್ರದ ಪತ್ರಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ರವಾನಿಸಲಾಗಿತ್ತು. ಆದರೆ, “ರಾಜ್ಯ ಸರ್ಕಾರದ ಆ ಸೂಚನೆ ಪಾಲನೆ ಆಗಿದೆಯೇ? ಈ ಸೂಚನೆಗೆ ಅನುಸಾರವಾಗಿ ತುಮಕೂರು ಜಿಲ್ಲೆಯಲ್ಲಿ ಒತ್ತುವರಿಗಳನ್ನು ಗುರುತಿಸಿ ತೆರವು ಮಾಡಲಾಗಿದೆಯೇ? ಆ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆಯೇ?” ಎಂಬುದೇ ಈಗ ಚರ್ಚಾವಸ್ತುವಾಗಿದೆ. 
ಗ್ರಾ.ಪಂ, ಆಸ್ತಿಗಳಾವುವು?
     ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಆಸ್ತಿಗಳು ಯಾವುವೆಂಬುದನ್ನೂ ಸದರಿ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ. ಅವುಗಳೆಂದರೆ ಗ್ರಾಮ ಠಾಣಾ, ಸಾರ್ವಜನಿಕ ರಸ್ತೆ, ಕಾಲುವೆಗಳು, ಕೆರೆಗಳು, ಆಟದ ಮೈದಾನ, ಉದ್ಯಾನವನಗಳು, ಸಾರ್ವಜನಿಕ ಉಪಯೋಗಕ್ಕಾಗಿ ಇರಿಸಿರುವ ಪ್ರದೇಶ, ಸ್ಮಶಾನ, ನಿವೇಶನ, ಚರಂಡಿ ಇತ್ಯಾದಿ ಎಂದು ಗುರುತಿಸಲಾಗಿದೆ. ಇವುಗಳನ್ನು ಸಂರಕ್ಷಿಸಬೇಕೆಂಬುದೇ ಈ ಪತ್ರದ ಪ್ರಧಾನ ಆಶಯವಾಗಿದೆ.
ಸೂಚಿಸಿದ್ದ ಕ್ರಮಗಳು
    ಈ ಸರ್ಕಾರಿ ಆಸ್ತಿಗಳ ಸಂರಕ್ಷಣೆಗೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂಬುದನ್ನೂ ಆ ಪತ್ರದಲ್ಲಿ ಸೂಚಿಸಲಾಗಿತ್ತು. ಅದರ ವಿವರ ಹೀಗಿದೆ:-
1)ಗ್ರಾ.ಪಂ. ವ್ಯಾಪ್ತಿಗಳಲ್ಲಿನ ಒತ್ತುವರಿ ಆಸ್ತಿಗಳನ್ನು ಗುರುತಿಸಿ “ಒತ್ತುವರಿ ಆಸ್ತಿ” ಎಂದು ಗ್ರಾ.ಪಂ. ಪಿ.ಡಿ.ಓ. ಅವರು ನಾಮಫಲಕ ಅಳವಡಿಸಬೇಕು.
2)ಗ್ರಾ.ಪಂ. ಆಸ್ತಿ ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ (ಸಂಖ್ಯೆ:ಗ್ರಾಅಪ/115/ ಜಿಪಸ/2011, ದಿನಾಂಕ: 04-06-2011) ಅನುಸಾರ ಕ್ರಮ ಜರುಗಿಸಬೇಕು,
3)ಗುರುತಿಸಲಾದ ಆಸ್ತಿ ಒತ್ತುವರಿ ಪ್ರಕರಣಗಳನ್ನು ಸಂಬಂಧಿಸಿದ ಗ್ರಾ.ಪಂ.ನ ಪಿ.ಡಿ.ಓ. ಅವರು ಸಕ್ಷಮ ಪ್ರಾಧಿಕಾರವಾದ ತಾಲ್ಲೂಕು ಪಂಚಾಯಿತಿಯ ಕಾರ್ಯನಿವಾಹಕ ಅಧಿಕಾರಿಗೆ ವರದಿ ಮಾಡಬೇಕು,
4)ಒತ್ತುವರಿಯಾದ ಆಸ್ತಿಗಳನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಅವರು ನಿಯಮಾನುಸಾರ ತೆರವುಗೊಳಿಸಲು ಕೂಡಲೇ ಕ್ರಮ ಜರುಗಿಸಬೇಕು” ಎಂದು ಸ್ಪಷ್ಟ ಶಬ್ದಗಳಲ್ಲಿ ತಿಳಿಸಲಾಗಿದೆ. 
     ಸರ್ಕಾರಕ್ಕೆ ಯಾವ ಕ್ರಮದಲ್ಲಿ ಮಾಹಿತಿ ನೀಡಬೇಕೆಂಬುದನ್ನೂ ಈ ಪತ್ರದಲ್ಲಿ ತಿಳಿಸಿಕೊಡಲಾಗಿದೆ. ಅದಕ್ಕಾಗಿ “ನಮೂನೆ-1” ಮತ್ತು “ನಮೂನೆ-2” ಎಂದು ಎರಡು ವಿಭಾಗ ಮಾಡಲಾಗಿದೆ. “ನಮೂನೆ-1” ರ ಮೂಲಕ ಜಿಲ್ಲೆ, ಒತ್ತುವರಿಯಾದ ಆಸ್ತಿಗಳ ಸಂಖ್ಯೆ, ಒತ್ತುವರಿ ಯನ್ನು ತೆರವುಗೊಳಿಸಿದ ಆಸ್ತಿಗಳ ಸಂಖ್ಯೆ, ತೆರವುಗೊಳಿಸಲು ಬಾಕಿ ಇರುವ ಆಸ್ತಿಗಳ ಸಂಖ್ಯೆ, ಒತ್ತುವರಿ ಮಾಡಿದಂತಹ ವ್ಯಕ್ತಿಗಳಿಂದ ಪೆನಾಲ್ಟಿ ಕ್ಲಾಸ್ ಪ್ರಕಾರ ಸಂಗ್ರಹಿಸಿದ ಒಟ್ಟು ಮೊತ್ತ” ಎಂಬ ಐದು ಕಾಲಂಗಳಲ್ಲಿ ಮಾಹಿತಿ ಒದಗಿಸಬೇಕು.  
     “ನಮೂನೆ-2”ರ ಮೂಲಕ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಹೆಸರು, ಗ್ರಾಮದ ಹೆಸರು, ವಿಸ್ತೀರ್ಣದೊಂದಿಗೆ ಒತ್ತುವರಿಯಾದ ಆಸ್ತಿಯ ವಿವರ, ಒತ್ತುವರಿಯನ್ನು ಯಾವ ದಿನಾಂಕದಂದು ತೆರವುಗೊಳಿಸಲಾಗಿದೆ, ಒತ್ತುವರಿ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ಬಗ್ಗೆ ದಿನಾಂಕದೊಂದಿಗೆ ಮಾಹಿತಿ, ಒತ್ತುವರಿ ತೆರವುಗೊಳಿಸಿದ ಆಸ್ತಿಯನ್ನು ಯಾವ ಉಪಯೋಗಕ್ಕಾಗಿ ಬಳಸಿಕೊಳ್ಳಲಾಗಿದೆ, ಒತ್ತುವರಿ ಮಾಡಿದ ವ್ಯಕ್ತಿಗಳಿಂದ ಪೆನಾಲ್ಟಿ ಕ್ಲಾಸ್ ಪ್ರಕಾರ ಸಂಗ್ರಹಿಸಿದ ಒಟ್ಟು ಮೊತ್ತ, ಷರಾ – ಹೀಗೆ ಒಟ್ಟು 10 ಕಾಲಂಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಈ ಪತ್ರದ ಫಲಶ್ರುತಿ ಏನೆಂಬುದು ಸದ್ಯಕ್ಕೆ ನಿಗೂಢವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap