ಜಡ್ಡು ಹಿಡಿದ ನಗರಸಭೆಗೆ ಚುರುಕು ಮುಟ್ಟಿಸುವರೇ ಶಾಸಕರು ……?

ಭಾಗ-2..!!!

ಶಿರಾ

    ನಗರದ ದೊಡ್ಡಕೆರೆಯ ನೀರು ಇನ್ನೇನು ಸಂಪೂರ್ಣವಾಗಿ ಖಾಲಿಯಾಗಲು ಕೆಲವೇ ದಿನಗಳು ಬಾಕಿ ಇರುವಂತಹ ಹೊತ್ತಿನಲ್ಲಿ ನಗರಸಭೆಯ ಅಧಿಕಾರಿಗಳು ಜನತೆಯ ದಣಿವು ನೀಗಿಸಲು ಏನೆಲ್ಲಾ ಪೂರ್ವಭಾವಿ ಸಿದ್ಧತೆಗಳನ್ನು ಇಷ್ಟೊತ್ತಿಗೆ ಕೈಗೊಳ್ಳಬೇಕಿತ್ತು.

  ಆದರೆ ನೀರೊದಗಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ನಗರಸಭೆ ಕೈಗೊಂಡಂತೆ ಕಾಣುತ್ತಿಲ್ಲ. ಕೆರೆಯ ಕುಡಿಯುವ ನೀರು 10 ದಿನದೊಳಗೆ ಖಾಲಿಯಾಗುವ ಹಂತವಿರುವುದರಿಂದ ಜನತೆಗೆ ನಗರಸಭೆಯು ಇದೀಗ ನೀಡುತ್ತಿರುವ ಕುಡಿಯುವ ನೀರು ಸರಿಯಾಗಿ ಶುದ್ಧೀಕರಣಗೊಳ್ಳುತ್ತಿಲ್ಲ. ಅತ್ಯಂತ ಕಲುಷಿತ ನೀರನ್ನು ನಗರಸಭೆ ನೀಡುತ್ತಿದೆ.

    ಪ್ರತಿ ವರ್ಷವೂ ಶಿರಾ ಕೆರೆಯು ತುಂಬಿದಾಗ ಮನಸೋ ಇಚ್ಚೆ ನಗರಕ್ಕೆ ನೀರು ಪೂರೈಸುವ ನಗರಸಭೆಗೆ ನೀರನ್ನು ಅಗತ್ಯಕ್ಕೆ ತಕ್ಕಂತೆ ಕಾಪಾಡಿಕೊಳ್ಳುವ ತಾಳ್ಮೆಯೂ ಇರುವುದಿಲ್ಲ. ಕೆರೆಯಲ್ಲಿ ಭರ್ಜರಿ ನೀರಿದೆ ಎಂದು ಅವಸರವಸರವಾಗಿ ನೀರನ್ನು ಖಾಲಿ ಮಾಡುವ ಮುನ್ನ ನಗರಸಭಾ ವ್ಯಾಪ್ತಿಯ ಕೊಳವೆ ಬಾವಿಗಳ ನೀರನ್ನು ಕೂಡ ಬಳಸಿಕೊಂಡು ಅಮೃತದಂತೆ ನೀರು ಬಳಸುವ ಪ್ರಯತ್ನಕ್ಕೆ ಮುಂದಾಗುವುದೇ ಇಲ್ಲ. ನೀರಿನ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಕನಿಷ್ಠ ಅರಿವು ಮೂಡಿಸುವ ಗೋಜಿಗೂ ಹೋಗುವುದಿಲ್ಲ.

    ಕೆರೆಯ ನೀರು ಕೆಳ ಹಂತಕ್ಕೆ ಬಂದಾಗ ನೀರನ್ನು ಸಮರ್ಪಕವಾಗಿ ಶುದ್ಧೀಕರಿಸಲು ನಗರಸಭೆ ವಿಶೇಷ ಗಮನ ಹರಿಸಬೇಕಿತ್ತು. ನೀರನ್ನು ಕೆರೆಯಲ್ಲಿಯೇ ಒಂದಷ್ಟು ಶುದ್ಧಿಗೊಳಿಸಲು ತಳ ಹಂತದ ಕೆರೆಯೊಳಗಿನ ಅನೈರ್ಮಲ್ಯವನ್ನು ತೆರವುಗೊಳಿಸುವ ಹಾಗೂ ಶುದ್ಧೀಕರಣ ಘಟಕದ ಹಳೆಯ ಮರಳನ್ನು ತೆಗೆದು ಹೊಸ ಮರಳನ್ನು ಶೇಖರಿಸಿ ಆಲಂ ಸೇರಿದಂತೆ ಶುದ್ಧೀಕರಣ ಸಾಮಗ್ರಿಗಳನ್ನು ಸರಿಯಾಗಿ ಬಳಸಬೇಕಿತ್ತು.

     ಇಂತಹ ಜವಾಬ್ದಾರಿಯುತ ಕ್ರಮಗಳನ್ನೇ ಕೈಗೊಳ್ಳದ ನಗರಸಭೆಯು ಅತ್ಯಂತ ಕಲುಷಿತ ನೀರನ್ನು ಕಳೆದ ಒಂದು ವಾರದಿಂದಲೂ ಜನತೆಗೆ ನೀಡುತ್ತಿದೆ. ನಗರದ ಕೆಲವು ಖಾಸಗಿ ಆಸ್ಪತ್ರೆಗಳು ಹಾಗೂ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಹೆಚ್ಚಾಗುತ್ತಿದ್ದಾರೆ ಎಂಬ ದೃಶ್ಯ ಕಣ್ಣಿಗೆ ಕಂಡು ಬಂದರೆ ಅದು ನಗರಸಭೆಯ ವೈಫಲ್ಯ ಎಂಬುದು ಈಗಾಗಲೇ ಸಾಬೀತಾಗಿದೆ.

    ಇದು ಹಗಲಿನಷ್ಟೇ ಸತ್ಯವೂ ಹೌದು.ಕಾರಣ ಇಷ್ಟೇ ನಗರಸಭೆ ಪೂರೈಸುವ ಅಶುದ್ಧವಾದ ನೀರನ್ನು ಕುಡಿದ ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗಳನ್ನು ಎಡತಾಕಬೇಕಾಗುತ್ತದೆ. ಈಗಾಗಲೇ ಕಳೆದ ಒಂದು ವಾರದಿಂದಲೂ ಆಸ್ಪತ್ರೆಗಳಿಗೆ ಜ್ವರ ಪೀಡಿತರಾಗಿ ದಾಖಲುಗೊಳ್ಳುವ ರೋಗಿಗಳ ಸಂಖ್ಯೆಯೂ ಹೆಚ್ಚಾಗತೊಡಗಿದೆ. ನಗರಸಭೆಯ ಅಸಮರ್ಥತೆ ಹೀಗೆಯೇ ಮುಂದುವರಿದರೆ ಆಸ್ಪತ್ರೆಗಳ ಮುಂದೆ ರೋಗಿಗಳು ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿಯನ್ನೂ ಕಾಣಬೇಕಾಗುತ್ತದೆ.

     ಶಿರಾ ಕೆರೆಯೊಳಗಿನ ನೀರು ಸಂಪೂರ್ಣ ಖಾಲಿಯಾಗುವ ಹಂತ ತಲುಪಿದಾಗ ಕೆರೆಯ ನೀರನ್ನು ಕುಡಿಯಲು ಬಳಸದಂತೆ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಿ, ಈ ಬಗ್ಗೆ ಪ್ರಚಾರವನ್ನೂ ನೀಡಿ ನಗರದ ವಿವಿಧೆಡೆ ಸ್ಥಾಪಿಸಲಾದ ಶುದ್ಧೀಕರಣ ಘಟಕದ ನೀರನ್ನು ಕುಡಿಯಲು ಬಳಸುವಂತೆ ನಗರಸಭೆ ಮುನ್ನೆಚ್ಚರಿಕೆಯ ಕ್ರಮಗಳನ್ನು ನೀಡಬೇಕಿತ್ತು. ಆದರೆ ಅಂತಹ ಯಾವುದೇ ಕ್ರಮಗಳನ್ನು ಕೈಗೊಂಡಿಯೇ ಇಲ್ಲ.

     ನಗರದ ಅನೇಕ ಬಡಾವಣೆಗಳಲ್ಲಿ ಈಗಲೂ ಕನಿಷ್ಠ ಪಕ್ಷ 20 ದಿನವಾದರೂ ಕುಡಿಯಲು ನೀರು ಪೂರೈಸಲಾಗುತ್ತಿಲ್ಲ. ಚರಂಡಿಗಳ ನೈರ್ಮಲ್ಯ ಕಾಪಾಡುವಲ್ಲಿಯೂ ನಗರಸಭೆ ಜವಾಬ್ದಾರಿ ಮೆರೆಯುತ್ತಿಲ್ಲ. ನಗರದ ವಿವಿಧ ವಾರ್ಡುಗಳಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿ ಜನತೆ ಮಲ್ಭೆರಿಯಾ, ಡೆಂಗ್ಯೂ ಅಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

     ಸದ್ಯಕ್ಕೆ ನಗರಸಭಾ ಸದಸ್ಯರ ಕಾಟವೆ ಇಲ್ಲವಪ್ಪಾ ಎಂದು ನೆಮ್ಮದಿಯಾಗಿ ನಿದ್ದೆ ಮಾಡುತ್ತಿರುವ ನಗರಸಭೆಯ ಅಧಿಕಾರಿಗಳಿಗೆ ಕಾಮಗಾರಿಗಳ ನಿರ್ವಹಣೆ, ಅನುದಾನ ಮಂಜೂರಾತಿ, ಖರ್ಚು-ವೆಚ್ಚಗಳ ಬಗ್ಗೆ ಕೇಳುವವರೇ ಇಲ್ಲದಂತಾಗಿರುವುದರಿಂದ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗುತ್ತಿದೆ. ಕಚೇರಿಗೆ ಬರುವ ಸಾರ್ವಜನಿಕರ ಕುಂದುಕೊರತೆಗಳಿಗೂ ಸ್ಪಂದಿಸದ ನಗರಸಭೆಯಿಂದ ಜನತೆಗೂ ಸಾಕು ಸಾಕಾಗಿ ಹೋಗಿದೆ.

     ನಗರಸಭೆಯಲ್ಲಿನ ಈ ಎಲ್ಲಾ ವೈಫಲ್ಯಗಳಿಗೆ ಅತ್ಯಂತ ಪ್ರಮುಖ ಕಾರಣವೂ ಇದೆ. ಇಲ್ಲಿನ ನಗರಸಭೆಯ ಚುನಾವಣೆಯಾಗಿ ಇಲ್ಲಿಗೆ 7 ವರ್ಷಗಳು ಮುಗಿಯುತ್ತಾ ಬಂದರೂ, ನಗರಸಭಾ ಚುನಾವಣೆಯ ವಾಸನೆಯೂ ಇಲ್ಲದಂತಾಗಿದೆ. ನಗರಸಭೆಯ ಆಡಳಿತ ಮಂಡಳಿಯ ಅವಧಿ ಮುಗಿದು ಒಂದು ವರ್ಷವೇ ಆಗಿದ್ದರೂ ನಡೆಯದ ಚುನಾವಣೆಯಿಂದ ಹೊಸ ಸದಸ್ಯರುಗಳು ಆಯ್ಕೆಯಾಗಿ ನಗರಸಭೆಯ ಹೊಸ್ತಿಲು ದಾಟದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

     ರಾಜ್ಯದ ಎಲ್ಲಾ ಮಹಾ ನಗರ ಪಾಲಿಕೆ ಹಾಗೂ ನಗರಸಭೆ, ಪಟ್ಟಣ ಪಂಚಾಯ್ತಿಗಳಿಗೆ ಚುನಾವಣೆ ನಡೆದಿದ್ದರೂ ಮೀಸಲಾತಿ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣವಿರುವ ಕಾರಣದಿಂದ ರಾಜ್ಯದ 13 ಸ್ಥಳೀಯ ಸಂಸ್ಥೆ ಚುನಾವಣೆಯು ಮಕಾಡೆ ಮಲಗುವಂತಾಗಿದೆ. ಈ ಪೈಕಿ ಶಿರಾ ನಗರಸಭೆಯ ಚುನಾವಣಾ ಪ್ರಕ್ರಿಯೆಯೂ ಸೇರಿದ್ದು ಸದ್ಯಕ್ಕಂತೂ ಚುನಾವಣೆ ನಡೆಯುವಂತೆ ಕಾಣುತ್ತಿಲ್ಲ.

      ನಗರಸಭೆಯಲ್ಲಿನ ಹಾಲಿ ಸದಸ್ಯರೆಲ್ಲರೂ ಮಾಜಿಯಾಗಿ ಒಂದು ವರ್ಷವೇ ಕಳೆದಿದ್ದು, ಮಧುಗಿರಿ ಉಪ ವಿಭಾಗಾಧಿಕಾರಿಗಳು ಸದ್ಯಕ್ಕೆ ಆಡಳಿತಾಧಿಕಾರಿಯಾಗಿದ್ದಾರೆ. ಸದಸ್ಯರೆ ಇಲ್ಲದ ನಗರಸಭೆಯಲ್ಲಿ ಹೇಳುವವರು, ಕೇಳುವವರೇ ಇಲ್ಲವಾಗಿದೆ. ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಜಿ ಸದಸ್ಯರ ಮಾತಿಗೆ ಎಳ್ಳಷ್ಟೂ ಬೆಲೆ ನೀಡುತ್ತಿಲ್ಲ. ಈಗಾಗಲೇ ಮಾಜಿಗಳಾದ ಸದಸ್ಯರು ನಮಗೆ ಬೆಲೆ-ಗೌರವ ಕೊಡಿ ಎಂದು ಕೇಳಲೂ ಆಗದೆ, ತಮ್ಮ ವಾರ್ಡಿನ ಜನತೆಯ ಕನಿಷ್ಠ ಕೆಲಸಗಳನ್ನೂ ಮಾಡಿಸಿಕೊಳ್ಳಲಾಗದೆ ಪೇಚಿಗೆ ಸಿಕ್ಕಂತಾಗಿದ್ದಾರೆ.

    ನಗರಸಭೆಯ ಅಸಮರ್ಥ ಆಡಳಿತ, ಏಕಚಕ್ರಾಧಿಪತ್ಯದ ಹುಂಬತನಗಳಂತಹ ಕಾರ್ಯಗಳಿಗೆ ಕಡಿವಾಣ ಹಾಕುವವರೇ ಇಲ್ಲವೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವುದು ಸಹಜ. ಹೌದು ಉಳಿದ 10 ದಿನಗಳ ನಂತರ ನಗರವನ್ನು ಕಾಡುವ ಕುಡಿಯುವ ನೀರಿನ ಭೀಕರತೆಯನ್ನು ನೀಗಿಸುವ ಶಕ್ತಿ ಇರುವುದು ಕ್ಷೇತ್ರದ ಶಾಸಕರಿಗೆ ಮಾತ್ರ.

     ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ್ ಇದೀಗ ಚುರುಕುಗೊಂಡು ನಗರಸಭೆಯ ನಿರ್ಲಕ್ಷ್ಯದ ನಾಗಾಲೋಟಕ್ಕೆ ಬ್ರೇಕ್ ಹಾಕಲೇಬೇಕಿದೆ. ಕಾರಣ ನಗರಸಭೆಯ ಕರ್ತವ್ಯಲೋಪಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳಲು ಸದಸ್ಯರೆ ಇಲ್ಲದಿರುವಾಗ ನಗರದ ಅಭಿವೃದ್ಧಿಯೂ ಕುಂಠಿತಗೊಳ್ಳಲು ಕಾರಣ ಎನ್ನಲಾಗುತ್ತಿದೆ.

     ಈ ಹಿಂದೆ ಸಚಿವರೂ ಆಗಿ ಕಾರ್ಯ ನಿರ್ವಹಿಸಿದ್ದಾಗ ಇಡೀ ತಾಲ್ಲೂಕು ಆಡಳಿತಕ್ಕೆ ಭಯ ಹುಟ್ಟಿಸಿ ಚುರುಕಿನಿಂದ ಕಾರ್ಯ ನಿರ್ವಹಿಸುವಂತೆ ಮಾಡಿ ಕ್ಷೇತ್ರದ ಅಭಿವೃದ್ಧಿಗೂ ಕಾರಣರಾಗಿದ್ದ ಶಾಸಕರು ಅಧಿಕಾರಿಗಳ ಮೈಚಳಿ ಬಿಡಿಸದ ಹೊರತು ಅಧಿಕಾರಿಗಳು ಯಾರ ಮಾತನ್ನೂ ಕೇಳುವುದು ಕಷ್ಟ ಸಾಧ್ಯವೇ ಸರಿ.

     ಹತ್ತು ದಿನಗಳ ನಂತರ ಶಿರಾ ಕೆರೆಯ ನೀರು ಮುಗಿಯಲಿದ್ದು ಇದಕ್ಕೆ ಪರ್ಯಾಯವಾಗಿ ಜನತೆಗೆ ನೀರು ಪೂರೈಸಲು ನಗರಸಭೆ ತುರ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಅಧಿಕಾರಿಗಳ ಸಭೆ ಕರೆದು ಶಾಸಕರು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ. ಅಗತ್ಯವಿರುವ ಕಡೆ ಇಲ್ಲವೇ ಅಂತರ್ಜಲದ ಲಭ್ಯತೆ ಇರುವ ಕಡೆಗಳಲ್ಲಿ ನೂತನ ಕೊಳವೆ ಬಾವಿಗಳನ್ನು ಕೊರೆಸುವ ಹಾಗೂ ನೀರಿನ ಬವಣೆ ಇರುವ ವಾರ್ಡುಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ