ದೋಸ್ತಿಗಳ ಮೇಲೆ ಪ್ರಭಾವ ಬೀರಲಿದೆಯೇ ಫಲಿತಾಂಶ?9

ತುಮಕೂರು:

    17ನೇ ಲೋಕಸಭೆಗೆ ಇಂದು ನಡೆಯುತ್ತಿರುವ ಮತ ಎಣಿಕೆಯ ಮೇಲೆ ಕರ್ನಾಟಕದ ದೋಸ್ತಿ ಪಕ್ಷಗಳ ಮೈತ್ರಿ ಸರ್ಕಾರ ಅವಲಂಬಿತವಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿರುವ ವದಂತಿಗಳಿಗೆ ಇಂದು ಉತ್ತರ ಸಿಗಲಿದೆ.

    2018 ರಲ್ಲಿ ನಡೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಕರ್ನಾಟಕದಲ್ಲಿ ಯಾವ ಪಕ್ಷಕ್ಕೂ ಹೆಚ್ಚು ಬಹುಮತ ಲಭಿಸಿರಲಿಲ್ಲ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ 80 ಸ್ಥಾನಗಳನ್ನು, ಬಿಜೆಪಿ 104 ಸ್ಥಾನಗಳನ್ನು, ಜೆಡಿಎಸ್ 37 ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ದಿಢೀರ್ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಉದಯಿಸಿತು.

     ಕಾಂಗ್ರೆಸ್ ಹೈಕಮಾಂಡ್ ಅಂದು ತೆಗೆದುಕೊಂಡ ನಿರ್ಧಾರದ ಹಿಂದೆ 2019ರ ಏಪ್ರಿಲ್ ತಿಂಗಳಿನಲ್ಲಿ ನಡೆದ ಲೋಕಸಭಾ ಚುನಾವಣೆಗಳ ಮೇಲೆಯೇ ಗಮನ ಹರಿದಿತ್ತು. ಒಂದು ವರ್ಷ ಕಾಲ ಹೇಗಾದರೂ ಮೈತ್ರಿ ಪಾಲಿಸಿಕೊಂಡು ಹೋದರೆ ಮುಂದಿನ ರಾಜಕೀಯ ಬೆಳವಣಿಗೆಗಳು ಸುಗಮವಾಗಬಹುದು. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬಹುದು ಎಂಬೆಲ್ಲಾ ಆಲೋಚನೆಗಳು ಹೈಕಮಾಂಡ್ ವಲಯದಲ್ಲಿದ್ದವು. ಇದೇ ಕಾರಣಕ್ಕಾಗಿ ಇಷ್ಟವಿಲ್ಲದಿದ್ದರೂ ಮದುವೆ ಎಂಬಂತೆ ಕರ್ನಾಟಕದಲ್ಲಿ ದೋಸ್ತಿ ಸರ್ಕಾರ ಉದಯಿಸಿತು.

     ಒಂದು ವರ್ಷ ಮುಗಿದಿದೆ. ಚುನಾವಣೆಗಳೂ ಮುಗಿದಿವೆ. ಚುನಾವಣೆಯ ನಂತರ ನಡೆದ ವಿದ್ಯಮಾನಗಳು ಮಾತ್ರ ದೋಸ್ತಿ ಸರ್ಕಾರದ ಪಾಲಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದು ಕೆಲವು ಕಡೆ ಬಹಿರಂಗವಾಗಿ ಆರೋಪಿಸುವುದರೊಂದಿಗೆ ಆರಂಭವಾದ ಕಲಹಗಳು ನೇರ ದಾಳಿಯತ್ತ ಕೇಂದ್ರೀಕರಿಸಿದವು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ನಡೆಸುತ್ತಿರುವ ವಾಗ್ದಾಳಿಯನ್ನು ಜೆಡಿಎಸ್ ವರಿಷ್ಠರು ತಡೆದಂತೆ ಕಾಣುತ್ತಿಲ್ಲ. ಪ್ರತಿಯಾಗಿ ಸಿದ್ದರಾಮಯ್ಯ ಅವರು ಪ್ರತಿ ವಾಗ್ದಾಳಿ ನಡೆಸಿದ್ದಾರೆ.

      ಸಿದ್ದರಾಮಯ್ಯ ಅವರೆ ನಮ್ಮ ಮುಖ್ಯಮಂತ್ರಿ ಎಂದು ಸಿದ್ದು ವಲಯದ ಕೆಲವು ಶಾಸಕರು ಹೇಳುತ್ತಿದ್ದು, ದೋಸ್ತಿ ವರಿಷ್ಠರಿಗೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ನಡುವೆ ಸಮೀಕ್ಷಾ ವರದಿಗಳು ಎನ್‍ಡಿಎಗೆ ಹೆಚ್ಚು ಸ್ಥಾನ ಬರಲಿವೆ ಎಂಬ ಹೇಳಿಕೆಗಳು ಬಿಜೆಪಿ ವಲಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರುವಂತೆ ಮಾಡಿವೆ. ದೋಸ್ತಿ ಸರ್ಕಾರ ಮಣಿಸಲು ಇನ್ನಿಲ್ಲದ ಕಸರತ್ತುಗಳು ಆರಂಭವಾಗಿವೆ.

       ಕಾಂಗ್ರೆಸ್‍ನಿಂದ ಹೊರಗೆ ಇರುವ ರಮೇಶ್ ಜಾರಕಿ ಹೂಳಿ ಮತ್ತಿತರರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಸಮಯಕ್ಕೆ ಮೇ 21 ರಂದು ಜೆಡಿಎಸ್ ಪಕ್ಷದ ಹಾಗೂ ಬಿಜೆಪಿ ಪಕ್ಷದ ಮಹತ್ವದ ಸಭೆಗಳು ನಡೆದಿವೆ.

       ಕೇಂದ್ರದಲ್ಲಿ ಎನ್ ಡಿಎಗೆ ಸಂಪೂರ್ಣ ಬಹುಮತ ಸಿಗದೇ ಹೋದರೆ ತೃತೀಯ ಶಕ್ತಿಗಳದೆ ನಿರ್ಣಾಯಕವಾಗಲಿದೆ. ಆಗ ಸರ್ಕಾರ ರಚನೆಯ ವಿಷಯದಲ್ಲಿ ತಮ್ಮದೆ ಬಹುದೊಡ್ಡ ಪಾತ್ರ ಎಂಬುದಾಗಿ ದೇವೇಗೌಡರ ಲೆಕ್ಕಾಚಾರಗಳಿವೆ. ಒಂದು ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ದೇಶದಲ್ಲಿ ಅಧಿಕಾರದ ಗದ್ದುಗೆ ಹಿಡಿದರೆ ಕೇಂದ್ರ ಮಂತ್ರಿ ಮಂಡಲದಲ್ಲಿ ಜೆಡಿಎಸ್ ಕೂಡ ಪಾಲು ಪಡೆಯಬಹುದು. ಅಷ್ಟೇ ಮುಖ್ಯವಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಅಧಿಕಾರ ಗದ್ದುಗೆ ಹಿಡಿದರೆ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ ಮುಂದುವರೆಸಿಕೊಂಡು ಹೋಗಬಹುದು ಎಂಬ ಲೆಕ್ಕಾಚಾರಗಳು ದೇವೇಗೌಡರ ತಲೆಯಲ್ಲಿವೆ.

       ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟ ಅಧಿಕಾರ ಗದ್ದುಗೆ ಹಿಡಿದರೆ ಅಗ ಇಲ್ಲಿನ ಸರ್ಕಾರವನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಕೂಟ ಸರ್ಕಾರ ಅಲುಗಾಡಿಸಬಹುದು. ಆ ಸಂದರ್ಭದಲ್ಲಿ ಕೇಂದ್ರದ ಕಾಂಗ್ರೆಸ್ ವರಿಷ್ಠರೇ ಇಲ್ಲಿನ ಸರ್ಕಾರವನ್ನು ಉಳಿಸಲು ಪ್ರಯತ್ನಿಸುತ್ತಾರೆ. ಹೀಗಾಗಿ ಎಲ್ಲ ದಿಕ್ಕುಗಳಲ್ಲಿಯೂ ಯೋಚನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂದಿನ ಫಲಿತಾಂಶ ಅತ್ಯಂತ ಮಹತ್ವದ್ದಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap