ತುಮಕೂರು
ವಿಶೇಷ ವರದಿ:ರಾಕೇಶ್ ವಿ.
ಕಾರಿಡಾರ್ ಮಾದರಿಯಲ್ಲಿ 84.97 ಕೋಟಿ ರೂ.ಗಳ ವೆಚ್ಚದಲ್ಲಿ 75 ಮೀಟರ್ ಅಗಲದೊಂದಿಗೆ 10.524 ಕಿಮೀ ಉದ್ದ ನಿರ್ಮಾಣವಾಗುತ್ತಿರುವ ಫ್ರೀ ಫೆರಿಫೆರಲ್ ರಿಂಗ್ ರಸ್ತೆಯು ಅಷ್ಟ ಪಥದ ಮಾರ್ಗವನ್ನು ಹೊಂದಿದ್ದು, ಮೊದಲನೆ ಹಂತದ ಕಾಮಗಾರಿ ಇದೇ ವರ್ಷದ ಡಿಸೆಂಬರ್ ವೇಳೆಗೆ ಮುಗಿಯಬೇಕಿದೆ. ಆದರೆ ಮೇಲ್ನೋಟಕ್ಕೆ ಕಾಮಗಾರಿ ವಿಳಂಬsÀವಾಗುವ ಸಾಧ್ಯತೆಗಳು ಹೆಚ್ಚಾಗಿ ಕಂಡು ಬರುತ್ತಿವೆ.
ಕಳೆದ 2018ನೆ ಡಿಸೆಂಬರ್ ತಿಂಗಳಿನಲ್ಲಿ ಪ್ರಾರಂಭ ಮಾಡಲಾದ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ 12 ತಿಂಗಳ ಗಡುವು ನೀಡಲಾಗಿದ್ದು, ಈ ಅವಧಿಯ ಪ್ರಕಾರ 2019 ರ ಡಿಸೆಂಬರ್ ತಿಂಗಳಾಂತ್ಯಕ್ಕೆ ಮುಗಿಯಬೇಕಿದೆ. ಆದರೆ ಈಗ ಮಾಡಲಾಗುತ್ತಿರುವ ಕಾಮಗಾರಿಯನ್ನು ಒಮ್ಮೆ ಗಮನಿಸಿದರೆ ಈ ಕಾಮಗಾರಿಯು ಈ ಡಿಸೆಂಬರ್ ತಿಂಗಳಿಗೆ ಮುಗಿಯುವ ಮಾತಿರಲಿ, ಇನ್ನೊಂದು ವರ್ಷದವರೆಗೆ ನಡೆಯಬಹುದು ಎಂದು ಸ್ಥಳೀಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ರಿಂಗ್ ರಸ್ತೆಯ ಅಭಿವೃದ್ಧಿಯಲ್ಲಿ ಈಗಿರುವ ರಸ್ತೆಯ ಅಗಲೀಕರಣ ಮಾಡಿ, ಅದರಲ್ಲಿ ಎರಡೂ ಕಡೆ ನಾಲ್ಕು ಪಥ ಮಾರ್ಗ ಹಾಗೂ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ. ಈ ನಿಟ್ಟಿನಲ್ಲಿ ಗುಬ್ಬಿ ಗೇಟ್‍ನಲ್ಲಿ ಪ್ರಾರಂಭವಾಗುವ ರಿಂಗ್ ರಸ್ತೆಯಿಂದ ಕ್ಯಾತ್ಸಂದ್ರವರೆಗೆ ರಸ್ತೆ ಅಗಲೀಕರಣ ಕೆಲಸ ಪೂರ್ಣಗೊಂಡಿದ್ದು, ಈಗಾಗಲೇ ಸ್ವಲ್ಪ ರಸ್ತೆ ಟಾರ್‍ನಿಂದ ಕಂಗೊಳಿಸುತ್ತಿದ್ದರೆ, ಇನ್ನೂ ಕೆಲ ಕಡೆ ರಸ್ತೆಯು ಕೊಚ್ಚೆ ನೀರು, ಮಳೆ ನೀರಿನಿಂದ ಆವೃತವಾಗಿದ್ದು ಕಾಮಗಾರಿ ಮಾಡಲು ಸಮಸ್ಯೆ ಎದುರಾದಂತೆ ಕಾಣುತ್ತಿದೆ.
ಮೊದಲನೆ ಹಂತದ ಕಾಮಗಾರಿ
ಮೊದಲನೆ ಹಂತದ ಕಾಮಗಾರಿಗೆ 52 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದ್ದು, ಈ ಕಾಮಗಾರಿಯನ್ನು ಗಣಪತಿ ಸ್ಟೋನ್ ಕ್ರಷರ್ಸ್‍ನವರು ನಡೆಸುತ್ತಿದ್ದು, ಈ ಹಂತದಲ್ಲಿ ಗುಬ್ಬಿ ಗೇಟ್‍ನಿಂದ ಪ್ರಾರಂಭವಾಗಿ ಕುಣಿಗಲ್ ವೃತ್ತದ ವರೆಗೆ ಎರಡು ಕಡೆಯಲ್ಲಿ ನಾಲ್ಕು ಪಥದ ರಸ್ತೆ, ಸರ್ವೀಸ್ ರಸ್ತೆ, ಎರಡು ಕಡೆಗಳಲ್ಲಿ ಚರಂಡಿ ವ್ಯವಸ್ಥೆ, ಮಾಡಬೇಕಿದೆ. ಜೊತೆಗೆ ಕುಣಿಗಲ್ ವೃತ್ತದಿಂದ ಕ್ಯಾತ್ಸಂದ್ರ ಹೆದ್ದಾರಿವರೆಗೆ ಒಂದು ಕಡೆಯ ರಸ್ತೆ ಮಾಡಬೇಕು. ಈಗಾಗಲೇ ಮೊದಲ ಹಂತದಲ್ಲಿ ಕ್ಯಾತ್ಸಂದ್ರದಿಂದ ಕುಣಿಗಲ್ ವೃತ್ತದ ವರೆಗೆ ಒಂದು ಕಡೆಯ ರಸ್ತೆ ಮಾಡಲಾಗಿದೆ. ಆದರೆ ಗುಬ್ಬಿ ಕಡೆಗೆ ಇರುವ ರಸ್ತೆಯ ಕಾಮಗಾರಿ ಇನ್ನೂ ಮಾಡಬೇಕಿದ್ದು, ಈ ಕಾಮಗಾರಿಗಳು ಉಳಿದ ಎರಡು ತಿಂಗಳೊಳಗೆ ಮುಗಿಯಲಿದೆಯಾ..?
ಆರಂಭದ ಹಂತದಲ್ಲಿ ಕಾಮಗಾರಿ
ಗುಬ್ಬಿ ಗೇಟ್ ಆರಂಭದಲ್ಲಿ ರೈಲ್ವೇ ಮೇಲ್ಸೇತುವೆವರೆಗೆ ಕಾಮಗಾರಿ ಒಂದು ಭಾಗವಷ್ಟೇ ನಡೆದಿದ್ದು, ಎರಡೂ ಕಡೆ ರಸ್ತೆ ಅಗಲೀಕರಣಕ್ಕೆ ಬೇಕಾಗುವಷ್ಟು ಜಾಗವನ್ನು ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ರಸ್ತೆ ಮಾಡುವ ಕೆಲಸ ಪ್ರಾರಂಭವೇ ಆಗಿಲ್ಲದಂತೆ ಕಾಣುತ್ತಿದೆ. ಹೀಗಿದ್ದಾಗ ಕಾಮಗಾರಿ ಪೂರ್ಣವಾಗುವುದು ಯಾವಾಗ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ರಸ್ತೆಗೆಂದು ತೋಡಲಾದ ಹಳ್ಳದಲ್ಲಿ ನಿಂತ ನೀರು
ರಸ್ತೆ ಮಾಡಲೆಂದು ತೋಡಲಾದ ಹಳ್ಳದಲ್ಲಿ ಮಳೆ ನೀರು ನಿಂತುಕೊಂಡಿದ್ದು ಸಾರ್ವಜನಿಕರಿಗೆ ತೀವ್ರತರವಾದ ಸಮಸ್ಯೆಯಾಗಿದೆ. ರಸ್ತೆಯ ಪಕ್ಕದಲ್ಲೇ ಮಳೆ ನೀರು ನಿಂತುಕೊಳ್ಳುವುದರಿಂದ ರಸ್ತೆಯ ಸ್ಥಿತಿಗತಿ ಹೇಗಿದೆ ಎಂಬುದು ವಾಹನ ಸವಾರರಿಗೆ ತಿಳಿಯುವುದಿಲ್ಲ. ಜೊತೆಗೆ ಈಗಿರುವ ರಸ್ತೆಗಳಲ್ಲಿ ಹಳ್ಳಕೊಳ್ಳಗಳು ಇದ್ದು, ಇದರಿಂದ ಅನೇಕ ಬೈಕ್ ಸವಾರರು ಕೆಳಬಿದ್ದು ಗಾಯಗೊಂಡಿರುವ ಉದಾಹರಣೆಗಳು ಕೂಡ ಇವೆ. ಆದರೆ ಈ ಭಾಗದಲ್ಲಿದ್ದ ಕೆರೆಯು ಬ್ಲಾಕ್ ಆಗಿರುವುದರಿಂದ ನೀರು ಮೇಲೆ ಬರುತ್ತಿದ್ದು, ರಸ್ತೆ ಮಾಡಲು ಜೆಸಿಬಿ ಯಂತ್ರದಿಂದ ಮಣ್ಣನ್ನು ಅಗೆದರೆ ನೀರು ಉಕ್ಕುತ್ತಿದೆ. ಇದರಿಂದ ಕಾಮಗಾರಿಗೆ ಸಮಸ್ಯೆ ಎದುರಾಗುತ್ತಿದೆ ಎಂಬುದಾಗಿ ಕಾಮಗಾರಿ ಮಾಡುವವರು ಹೇಳುತ್ತಿದ್ದಾರೆ.
ಭೂಸ್ವಾಧೀನ ಸಮಸ್ಯೆ
ಪ್ರಸ್ತುತ ಮಾಡಲಾಗುತ್ತಿರುವ ರಿಂಗ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅವಶ್ಯಕವಿದ್ದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದ ಕಾರಣದಿಂದ ಕಾಮಗಾರಿ ಪೂರ್ಣಗೊಳಿಸುವುದು ಸಮಸ್ಯೆಯಾಗಿತ್ತು. ಇದೀಗ ಆ ಸಮಸ್ಯೆ ಪರಿಹಾರವಾಗಿದ್ದು, ಕಾಮಗಾರಿ ಸುಲಲಿತವಾಗಿ ನಡೆಯುತ್ತಿದೆ. ಹಾಗಾಗಿ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಾರೆ ಗುತ್ತಿಗೆದಾರರ ವ್ಯವಸ್ಥಾಪಕರು.
ಕಾಮಗಾರಿ ಮಳೆ ಅಡ್ಡಿ
ಕಾಮಗಾರಿಯನ್ನು ಉತ್ತಮ ಗುಣಮಟ್ಟದಲ್ಲಿ ಮಾಡಬೇಕು ಎಂಬ ಉದ್ದೇಶದಿಂದ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿ ಕಾಮಗಾರಿ ಮಾಡಿಸಲಾಗುತ್ತಿದೆ. ಆದರೆ ನಿತ್ಯ ಮಳೆ ಬರುತ್ತಿರುವುದರಿಂದ ಕಾಮಗಾರಿ ನಡೆಸಲು ಸಮಸ್ಯೆ ಎದುರಾಗುತ್ತಿದೆ. ಸೆಪ್ಟೆಂಬರ್ ವೇಳೆ ನಿಲ್ಲಬೇಕಾದ ಮಳೆ ಅಕ್ಟೋಬರ್ ತಿಂಗಳು ಮುಗಿಯುತ್ತಾ ಬಂದರೂ ಮಳೆ ಬರುತ್ತಿರುವುದರಿಂದ ಕಾಮಗಾರಿ ಮಾಡಲು ಅನನುಕಾಲವಾಗಿದೆ ಎನ್ನುತ್ತಾರೆ ಕಾರ್ಮಿಕರು.
2ನೇ ಹಂತದ ಕಾಮಗಾರಿ
2ನೇ ಹಂತದ ಕಾಮಗಾರಿ ಪೂರ್ಣ ಮಾಡಲು 2019 ರ ಮೇ ತಿಂಗಳವರೆಗೆ ಗಡುವು ಇದ್ದು, ಅವರು ಕ್ಯಾತ್ಸಂದ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್) ಯಿಂದ ಕುಣಿಗಲ್ ವೃತ್ತದವರೆಗೆ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಒಂದು ಕಡೆಯಲ್ಲಿ ರಸ್ತೆ ಮಾಡಲಾಗುತ್ತಿದೆ. ಜೊತೆಗೆ ರಸ್ತೆಯ ಪಕ್ಕದಲ್ಲಿ ಸರ್ವೀಸ್ ರಸ್ತೆ ಹಾಗೂ ಚರಂಡಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಈ ಕಾಮಗಾರಿಯು ರಾಮ್ ಅಂಡ್ ಕಂಪನಿಯವರು ನಿರ್ವಹಿಸುತ್ತಿದ್ದು, ಅದಕ್ಕೆ 34 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.
ಡಿಸೆಂಬರ್ ವೇಳೆಗೆ ಕಾಮಗಾರಿ ಮುಕ್ತಾಯ
ಕಾಮಗಾರಿ ಪ್ರಾರಂಭವಾದಾಗಿನಿಂದಲೆ ಚರಂಡಿ ಕಾಮಗಾರಿ ಮಾಡಿದ್ದು, ಈಗಾಗಲೇ ಮೊದಲ ಹಂತದ ಕಾಮಗಾರಿಯಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದೆ. ರಸ್ತೆ ಕಾಮಗಾರಿ ಮಾಡಲು ಅಲ್ಲಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯ ಸಮಸ್ಯೆ ಇತ್ತು. ಇದೀಗ ಸಮಸ್ಯೆ ಪರಿಹಾರವಾಗಿದೆ. ಅಲ್ಲದೆ ಮಳೆ ಬರುತ್ತಿರುವುದರಿಂದ ಕಾಮಗಾರಿಗೆ ಅಡ್ಡಿಯಾಗುತ್ತಿದೆ. ಆದರೂ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುತ್ತಿದ್ದು, ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ವರಪ್ರಸಾದ್, ರಿಂಗ್‍ರಸ್ತೆಯ ಉಸ್ತುವಾರಿ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ