ತಿಪಟೂರು
ತಾಲ್ಲೂಕಿನಲ್ಲಿ ರಾಗಿ ಬಿತ್ತನೆಯ ಕಾರ್ಯ ಚುರುಕುಗೊಂಡಿದ್ದು ಕೆಲದಿನಗಳಿಂದ ಕುಂಠಿತಗೊಂಡಿತ್ತು. ಆದರೆ ಕಳೆದ 2 ದಿನಗಳಿಂದ ಸ್ವಲ್ಪ ಚುರುಕುಗೊಂಡ ಆಶ್ಲೇಷ ಮಳೆಯು ರೈತರಲ್ಲಿನ ಕ್ಲೇಶವನ್ನು ಕಳೆಯುವಂತಿದೆ.
ಆಶ್ಲೇಷಮಳೆ ಉತ್ತಮವಾಗಿ ಆಗುತ್ತಿದ್ದು ರೈತರು ತಮ್ಮ ಕೃಷಿ ಕಾರ್ಯದಲ್ಲಿ ಮತ್ತೆ ತೊಡಗಿಕೊಂಡಿದ್ದು, ಮೊನ್ನೆಯ ಮಳೆಗೆ ರಾಗಿಯನ್ನು ಹಾಕಿದವರು ಇಂದು ಅರಗುತ್ತಿದ್ದು ಇಂದು ಮತ್ತೆ ಬಿತ್ತನೆ ಕಾರ್ಯ ಚರುಕುಗೊಂಡಿದ್ದು ರಾಗಿ 11953, ಮೆಕ್ಕೆಜೋಳ 25, ತೊಗರಿ 128, ಉದ್ದು 185, ಅವರೆ 186 ಹೆಕ್ಟೇರ್‍ಗಳಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಬಿತ್ತನೆಕಾರ್ಯ ಈಗ ಮತ್ತೆ ಚುರುಕುಗೊಂಡು ರೈತರು ಬಿತ್ತನೆ ಬೀಜಗಳನ್ನು ತೆಗೆದುಕೊಂಡು ಹೋಗುತ್ತಿದ್ದು ಅವರಿಗೆ ಸೂಕ್ತ ಮಾಹಿತಿಯನ್ನು ನೀಡುತ್ತಿದ್ದೇವೆಂದು ಕೃಷಿ ಇಲಾಖೆ ತಿಳಿಸಿದೆ.
ಮೊನ್ನೆ ಹಾಕಿದ ರಾಗಿ ಮತ್ತು ದ್ವಿದಳ ಧಾನ್ಯಗಳು ಚೆನ್ನಾಗಿ ಹುಟ್ಟಿದ್ದು ಉತ್ತಮ ಮಳೆಬಂದು ಒಳ್ಳೆಯ ಫಸಲು ಬರುಬಹುದೆಂಬುದು ರೈತರ ಮೊಗದಲ್ಲಿ ನಗು ಕಾಣುತ್ತಿದೆ. ಆದರೆ ಈ ಮಳೆ ನಮಗೆ ಸಾಲುತ್ತಿಲ್ಲ, ಉತ್ತಮ ಮಳೆಯಾಗಿ ಕೆರೆಕಟ್ಟೆಗಳು ತುಂಬಿದರೆ ಸಮೃದ್ಧಿಯಾಗಿ ಅಂತರ್ಜಲ ಅಭಿವೃದ್ಧಿಯಾಗಿ ಜನ ಜಾರುವಾರುಗಳಿಗೆ ನೀರು ಸಿಗುವಂತಾದರೆ ಸಾಕೆನ್ನುತ್ತಾರೆ.
ಕಾಂತರಾಜು ಚಿಕ್ಕರಂಗಾಪುರ :
ನಾವು ಕಳೆದ ತಿಂಗಳು ಬಂದ ಮಳೆಯಲ್ಲೆ ಬಿತ್ತನೆ ಕಾರ್ಯ ಮಾಡಿದ್ದು ಈಗ ಬರುತ್ತಿರುವ ಮಳೆಗೆ ಬೆಳೆಯನ್ನು ಅರಗಿ ಗೊಬ್ಬರ ನೀಡುತ್ತಿದ್ದೇವೆ. ಮಳೆರಾಯನ ಕೃಪೆ ಇದ್ದರೆ ಉತ್ತಮ ಬೆಳೆಬರುತ್ತದೆಂಬ ವಿಶ್ವಾಸದಿಂದ ನಾವು ಸಾಲಮಾಡಿ ರಾಗಿಯನ್ನು ಹಾಕಿದ್ದೇವೆ. ಇದರಿಂದ ನಮಗೆ ಗಂಜಿ ಮತ್ತು ಜಾನುವಾರುಗಳಿಗೆ ಮೇವಾಗುತ್ತದೆ ಎಂದರು.