ತುಮಕೂರು ನಗರದಲ್ಲಿ ಮದ್ಯಮಾರಾಟಕ್ಕೆ ಅವಕಾಶ ಬೇಕು

ಗುಬ್ಬಿ

    ಕೊರೋನಾದಿಂದಾಗಿ ಭಾರತ ಲಾಕ್ ಡೌನ್ ಆಗಿರುವುದರಿಂದ ಸ್ಥಗಿತಗೊಂಡಿದ್ದ ಮದ್ಯಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಬೆಂಗಳೂರು ನಗರದ ರೆಡ್ ಝೋನ್‍ಗಳ ವಾರ್ಡ್‍ಗಳ ಹೊರತಾಗಿ ಉಳಿದೆಲ್ಲ ಕಡೆ ಮದ್ಯ ಮಾರಾಟಕ್ಕೆ ನಿರ್ಧರಿಸಿದ್ದರೆ ತುಮಕೂರು ನಗರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿಲ್ಲ ಎಂದು ಹೇಳಿರುವ ಜಿಲ್ಲಾಡಳಿತಕ್ಕೆ ಮುಂದಾಲೋಚನೆಯೆ ಇಲ್ಲವಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮಾಲಿಗಳ ಕುಟುಂಬಕ್ಕೆ ಆಹಾರದ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು, ರಾಜ್ಯಕ್ಕೆ ಒಂದು ಕಾನೂನು ಇದ್ದರೆ ಜಿಲ್ಲೆಗೆ ಮತ್ತೊಂದು ಕಾನೂನು ಸೃಷ್ಟಿಯಾಗುತ್ತಿದೆ. ಲಾಕ್‍ಡೌನ್ ಆದೇಶ ಸಡಿಲಗೊಳಿಸುವ ಹಾಗೂ ಮದ್ಯ ಮಾರಾಟದ ವಿಚಾರದಲ್ಲಿ ಜಿಲ್ಲಾಡಳಿತ ಹುಚ್ಚು ದರ್ಬಾರ್ ಮಾಡುತ್ತಿದೆ. ಮದ್ಯ ಮಾರಾಟವನ್ನು ತುಮಕೂರು ನಗರ ಪ್ರದೇಶ ಹೊರತಾಗಿ ಅನುಮತಿ ನೀಡಿ ಈಗ ಗ್ರಾಮೀಣ ಭಾಗದಲ್ಲಿ ಜನಜಂಗುಳಿ ನಿರ್ಮಾಣವಾಗಿದೆ. 144 ಸೆಕ್ಷನ್ ಉಲ್ಲಂಘನೆಗೆ ಜಿಲ್ಲಾಡಳಿತವೇ ಕಾರಣವಾಗುತ್ತಿದೆ ಎಂದು ಆರೋಪಿಸಿದರು.

      ಸಾಮಾನ್ಯ ಜ್ಞಾನವಿಲ್ಲದ ಕಾನೂನಿನ ಪರಿಣಾಮ, ಗ್ರಾಮೀಣ ಭಾಗದಲ್ಲಿ ನಗರದ ಸಾವಿರಾರು ಮಂದಿ ಮದ್ಯ ಖರೀದಿಗೆ ಸರದಿಯಲ್ಲಿ ನಿಂತಿದ್ದಾರೆ. ಅನಾವಶ್ಯಕ ವಿಳಂಬನೀತಿ ಅನುಸರಿಸಿ ಮದ್ಯಪ್ರಿಯರು ರಸ್ತೆಯಲ್ಲಿ ಗುಂಪುಕಟ್ಟಿ ನಿಲ್ಲುವಂತಾಗಿದೆ ಎಂದು ದೂರಿದ ಅವರು, ಲಾಕ್‍ಡೌನ್ ಸಡಿಲಗೊಳಿಸುವ ಅಗತ್ಯ ಈ ಸಮಯದಲ್ಲಿ ಬೇಕಿರಲಿಲ್ಲ. ವೈಯಕ್ತಿಕ ಅಭಿಪ್ರಾಯದಲ್ಲಿ ಕೊರೋನಾ ವೈರಸ್ ಸೋಂಕು ಬರುವ ಲಕ್ಷಣ ಕಾಣುತ್ತಿಲ್ಲ. ರಕ್ತ ಪರೀಕ್ಷೆಯಲ್ಲಿ ನೆಗೆಟೀವ್ ಬಂದು ತದ ನಂತರದಲ್ಲಿ ಪಾಸಿಟೀವ್ ಬರುತ್ತಿದೆ. ಈ ಗೊಂದಲ ಸೃಷ್ಟಿಸುವ ಈ ರೋಗಕ್ಕೆ ಸೂಕ್ತ ಮದ್ದು ಇಲ್ಲವಾಗಿದೆ. ಸಾಮಾಜಿಕ ಅಂತರ ಹಾಗೂ ಲಾಕ್‍ಡೌನ್ ಆದೇಶವೇ ಸದ್ಯಕ್ಕೆ ಮದ್ದು. ಗೊಂದಲ ಸೃಷ್ಟಿಸುವ ಕೋವಿಡ್ 19 ವೈರಸ್‍ನಿಂದಾಗಿ ತುಮಕೂರು ನಗರದಲ್ಲಿ ಒಂದು ಸಾವು ಪ್ರಕರಣ ಸಾರ್ವಜನಿಕ ಚರ್ಚೆಯಾಯಿತು. ನಾಗವಲ್ಲಿ ಪ್ರಕರಣಕ್ಕೆ ಯಾರನ್ನೂ ಹೊಣೆ ಮಾಡಲಾಗದು. ಮಾನವೀಯತೆಗೆ ಬೆಲೆ ಕೊಟ್ಟು ಗೊಂದಲ ಸೃಷ್ಟಿಯಾಯಿತು ಎಂದು ವಿಷಾದಿಸಿದರು.

        ಸಾಮಾಜಿಕ ಜಾಲತಾಣದಲ್ಲಿ ದೂರುವವರಿಗೆ ಪ್ರತಿಕ್ರಿಯೆ ನೀಡಲಾಗದು. ವಾಕ್ ಸ್ವಾತಂತ್ರ್ಯವನ್ನು ಬಳಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸುವವರ ವಿರುದ್ದ ಸಂಸದರು ಕೇಸು ದಾಖಲಿಸಿ ತಪ್ಪು ಮಾಡಿದ್ದಾರೆ. ಚೇಳೂರು ಠಾಣಾ ವ್ಯಾಪ್ತಿಯ ಆ ವ್ಯಕ್ತಿಗೆ ಬೆದರಿಕೆಯೊಡ್ಡಿರುವ ಬಗ್ಗೆ ದೂರು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಬರೆದಲ್ಲಿ ರೌಡಿಪಟ್ಟಿಗೆ ಹೆಸರು ಸೇರಿಸುವ ಬೆದರಿಕೆ ಔಚಿತ್ಯವಲ್ಲ. ಪೊಲೀಸರು ಓರ್ವ ವ್ಯಕ್ತಿಯ ಗುಲಾಮರಂತೆ ವರ್ತಿಸುವುದು ಖಂಡನೀಯ. ಸಮಾಜದ ದನಿಯಾಗಿ ಆರೋಪ ಮಾಡಿದ ವ್ಯಕ್ತಿಯ ಧ್ವನಿಯನ್ನು ದಮನ ಮಾಡುವ ಪ್ರಕ್ರಿಯೆಗೆ ಸಾಥ್ ನೀಡುವ ಪೊಲೀಸರ ವರ್ತನೆ ಸರಿಯಲ್ಲ. ಮುಂದುವರೆದಲ್ಲಿ ಠಾಣೆಯಲ್ಲಿ ತಾವೆ ಖುದ್ದು ಧರಣಿಗೆ ಮುಂದಾಗುವ ಎಚ್ಚರಿಕೆ ನೀಡಿದರು.

      ಗೌರಿಪುರ ಅರಣ್ಯ ಪ್ರದೇಶ ಒತ್ತುವರಿ ವಿಚಾರದಲ್ಲಿ ದಾಖಲೆಗಳು ಗೊಂದಲ ಸೃಷ್ಟಿಸಿವೆ. ಅರಣ್ಯ ಪ್ರದೇಶ ಸ್ಥಳವಾಗಿದ್ದಲ್ಲಿ ಬಗರ್‍ಹುಕುಂ ಅರ್ಜಿಗೆ ಬರುವುದಿಲ್ಲ. ಅತಿಕ್ರಮಣ ಆಗುವ ಮುನ್ನ ಅರಣ್ಯ ಇಲಾಖೆಗೆ ದಾಖಲೆ ಒದಗಿಸಿಕೊಂಡು ಕ್ರಮವಹಿಸಬೇಕಿದೆ. ಅರಣ್ಯ ಪ್ರದೇಶ ವಾಸ್ತವದಲ್ಲಿದ್ದರೆ, ದಾಖಲೆಯಲ್ಲಿ ಕಂದಾಯ ಇಲಾಖೆ ಹೆಸರಿನಲ್ಲಿರುತ್ತದೆ. ಈ ಬಗ್ಗೆ ಹಲವು ಭಾಗದಲ್ಲಿ ಪ್ರಕರಣ ನಡೆದಿದೆ ಎಂದ ಅವರು, ಚೇಳೂರು ಮಾರುಕಟ್ಟೆಯಲ್ಲಿ ಹಲಸು ಮತ್ತು ಮಾವು ಮಾರಾಟಕ್ಕೆ ಕ್ರಮವಹಿಸಲಾಗಿದೆ. ಅಡಕೆ ಮತ್ತು ಕೊಬ್ಬರಿ ಖರೀದಿಗೂ ಎಪಿಎಂಸಿ ಸಜ್ಜಾಗುತ್ತಿದೆ. ಕುಡಿಯುವ ನೀರಿಗೆ ಹೇಮಾವತಿ ನೀರು ಜಿಲ್ಲೆಗೆ ಹರಿಯುತ್ತಿದೆ. ತಡೆಯೊಡ್ಡಿದ ಬಗ್ಗೆ ದೂರುಗಳಿರುವ ಕಾರಣ ಸರ್ಕಾರ ಪೊಲೀಸ್ ಬಂದೂಬಸ್ತ್‍ನಲ್ಲಿ ನೀರು ಹರಿಸಬೇಕು ಎಂದರು.

         ಈ ಸಂದರ್ಭದಲ್ಲಿ ಗುಬ್ಬಿ ಮತ್ತು ಚೇಳೂರು ಮಾರುಕಟ್ಟೆಯ 180 ಹಮಾಲಿಗಳಿಗೆ ಆಹಾರ ಕಿಟ್ ನೀಡಲಾಯಿತು.
ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ, ಸದಸ್ಯರಾದ ಕಳ್ಳಿಪಾಳ್ಯ ಲೋಕೇಶ್, ತಿಮ್ಮರಾಜು, ಪಪಂ ಸದಸ್ಯರಾದ ರೇಣುಕಾ ಪ್ರಸಾದ್, ಕುಮಾರ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ, ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ಎಪಿಎಂಸಿ ಕಾರ್ಯದರ್ಶಿ ಎಸ್.ಹಂಸಕಲಾ, ಸಹಾಯಕ ಕಾರ್ಯದರ್ಶಿ ವಿ.ನಂದೀಶ್, ಎಚ್.ಎಚ್.ರಾಜ್‍ಕುಮಾರ್, ಕೆ.ಮಧುಸೂದನ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link