ಪರಿಶ್ರಮವಿಲ್ಲದೆ ಸುಖೀ ರಾಜ್ಯ ನಿರ್ಮಾಣ ಅಸಾದ್ಯ

ಹೊಸದುರ್ಗ;

         ಭಾರತೀಯರಾದ ನಾವು ಮಾತನಾಡುವುದು, ನಡೆದಾಡುವುದು, ಮೋಸ ಮಾಡುವುದು ಈ ಮೂರು ವಿಚಾರಗಳಲ್ಲಿ ಮುಂದೆ ಇದ್ದು, ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ದೇಹ ದಂಡನೆ ಮಾಡದೆ ಹಣ ಗಳಿಸಬೇಕೆನ್ನುತ್ತಾರೆ. ಪರಿಶ್ರಮ ಇಲ್ಲದೆ ಸುಖೀ ರಾಜ್ಯವನ್ನು ಕಟ್ಟಲು ಸಾಧ್ಯವಿಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

          ಶ್ರೀ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠ, ವೀರಶೈವ ಸಮಾಜ ಮತ್ತು ಶ್ರೀ ಜಗದ್ಗುರು ಜಯದೇವ ವಿದ್ಯಾರ್ಥಿ ನಿಲಯ ಟ್ರಸ್ಟ್ ವತಿಯಿಂದ ಹೊಸದುರ್ಗದ ಶ್ರೀ ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು

         ಆಧುನಿಕ ಮಾನವನಲ್ಲಿ ವ್ಯವಹಾರಿಕ ಪ್ರಜ್ಞೆ ಜಾಗೃತವಾಗಿದೆ. ಇದು ಚತುರತೆ, ಚಾಣಕ್ಯತೆಯನ್ನು ಕಲಿಸುತ್ತದೆ. ಇದರೊಟ್ಟಿಗೆ ಮತ್ತೊಬ್ಬರಿಗೆ ಟೋಪಿ ಹಾಕುವಷ್ಟು ಮಾನವ ಚತುರನಾಗಿದ್ದಾನೆ. ಇಂದಿನ ಜನಕ್ಕೆ ದುಡ್ಡಿನ ದರ್ಶನದ ಆಲೋಚನೆಯಾದರೆ, ಶರಣರಿಗೆ ಕಾಯಕದ ದರ್ಶನ ಮುಖ್ಯವಾಗಿತ್ತು. ವ್ಯವಹಾರಿಕ ಪ್ರಜ್ಞೆಯಿಂದ ಕಾಯಕ ಪ್ರಜ್ಞೆಗೆ ಬರಬೇಕು ಎಂದು ನುಡಿದರು

         ಶರಣರು, ದಾರ್ಶನಿಕರು, ಸಂತರು ಹುಸಿತನದ ಮೇಲೆ ಸೌಧವನ್ನು ಕಟ್ಟಲಿಲ್ಲ. ಅವರದು ಗಟ್ಟಿತನವಾಗಿತ್ತು. ಆದರೆ 21ನೇ ಶತಮಾನದಲ್ಲಿ ಹುಸಿತನದ ಕಾಲವಾಗಿದೆ. ಹುಸಿತನವನ್ನು ಬದುಕಿನ ಮೌಲ್ಯ ಎಂದು ಭಾವಿಸಬಾರದು. ಹುಸಿತನ ನಮ್ಮ ಮೋಸಗೊಳಿಸುತ್ತದೆ .

           ಭಾರತೀಯರ ಬದುಕು ಭ್ರಮೆಯ ಮೇಲೆ ನಿಂತುಕೊಳ್ಳುತ್ತಿದೆ. ನಾವು ಭ್ರಮೆಗೆ ಒಳಗಾಗದೆ ಸ್ವಾಭಾವಿಕವಾದ ಉತ್ತಮ ಜೀವನವನ್ನು ಕಟ್ಟಿಕೊಳ್ಳಬೇಕು. ಸಂವರ್ಧನೆಯ ಜೊತೆಯಲ್ಲಿ ಮೌಲ್ಯವರ್ಧನೆಯಾಗಬೇಕು. ಇದರಿಂದ ನಮ್ಮೊಳಗೆ ಪರಮಾರ್ಥ ಪ್ರಜ್ಞೆ ಮೂಡುತ್ತದೆ. ಜನಸಾಮಾನ್ಯರಿಗೆ ಧ್ಯಾನದ ಪರಿಕಲ್ಪನೆ ಹೇಳಬೇಕು. ಅನುಭವದಲ್ಲಿ ಸ್ವಾನುಭವ ಮತ್ತು ಶಿವಾನುಭವ ಇರುತ್ತದೆ ಎಂದರು.
ಉಪನ್ಯಾಸ ನೀಡಿದ ನಿವೃತ್ತ ಶಿಕ್ಷಕ ಎಸ್. ಶಿವಲಿಂಗಮೂರ್ತಿ ಮಾತನಾಡಿ, ವೀಣೆಯನ್ನು ನುಡಿಸಿ ಸಂಗೀತಗಾರ ಸಂಗೀತವನ್ನು ಹೊರಗೆಡಹುತ್ತಾನೆ. ಆದರೆ ನಮ್ಮೊಳಗಿನ ವೀಣೆಯನ್ನು ನುಡಿಸಬೇಕು. ಅದೇ ನಿಜವಾದ ಸಂಗಮ. ನಮ್ಮೊಳಗಿನ ಇಂದ್ರಿಯಗಳನ್ನು ಶುದ್ಧಿ ಮಾಡಿಕೊಳ್ಳಬೇಕು.

        ಎಲ್ಲರಲ್ಲೂ ಅಂತಃಶಕ್ತಿ ಇದೆ. ಅದು ಜಾಗೃತವಾಗಬೇಕು. ಲಿಂಗಾನುಸಂಧಾನವಾಗಬೇಕು. ನಾಡಿಗಳನ್ನು ಶುದ್ಧಿಗೊಳಿಸಬೇಕು. ವಿಜ್ಞಾನ ಮತ್ತು ಯೋಗ ಎರಡೂ ಒಂದೆ. ಲಿಂಗಪೂಜೆಯಿಂದ ಅತಿಯಾದ ಸಂತಸ ಸಿಗುತ್ತದೆ. ನಮಗೆ ಆಧ್ಯಾತ್ಮದ ಅರಿವು ಬಹಳ ಮುಖ್ಯ. ಶರಣರ ವಿಚಾರಧಾರೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

          ಎಸ್.ಎಂ. ಷಡಾಕ್ಷರಯ್ಯ, ಸಿದ್ಧರಾಮೇಶ್ವರ, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ, ಎ.ಜೆ. ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಎ.ಎಸ್. ಸಿದ್ಧರಮೇಶ್ ವೇದಿಕೆಯಲ್ಲಿದ್ದರು.

          ಅಮೃತವರ್ಷಿಣಿ ಕಲಾತಂಡದವರು ಪ್ರಾರ್ಥನೆ ಮಾಡಿದರು. ಎಸ್.ಕಲ್ಮಠ ಸ್ವಾಗತಿಸಿದರು. ರಾಮಲಿಂಗಯ್ಯ ವಂದಿಸಿದರು. ಈ.ಮಂಜುನಾಥ ನಿರೂಪಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link