ಮಹಿಳಾ ಸಂಘಗಳು ಇಂದಿರಾ ಗಾಂಧಿಯವರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು-ರಘುಮೂರ್ತಿ

ಚಳ್ಳಕೆರೆ

       ಮಹಿಳಾ ಸಮೂಹದ ಮೇಲೆ ಅಪಾರವಾದ ಗೌರವ ಹಾಗೂ ವಿಶ್ವಾಸವನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. ರಾಷ್ಟ್ರದ ಇತಿಹಾಸದಲ್ಲಿ ಮೊಟ್ಟಮೊದಲ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ದಿವಂಗತ ಇಂದಿರಾಗಾಂಧಿಯವರ ಆದರ್ಶಗಳನ್ನು ಮಹಿಳೆಯರು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಂದು ಕಾರ್ಯದಲ್ಲೂ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಎತ್ತಿ ಹಿಡಿದ ಕೀರ್ತಿ ದಿವಂಗತ ಇಂದಿರಾ ಗಾಂಧಿಯವರದ್ದು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

        ಅವರು, ಭಾನುವಾರ ಸಂಜೆ ಇಲ್ಲಿನ ವಾಲ್ಮೀಕಿ ನಗರದ 10ನೇ ವಾರ್ಡ್‍ನಲ್ಲಿ ಮದಕರಿ ಮಹಿಳಾ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಸಂಘಟಿತವಾಗಿ ಇನ್ನೂ ಹೆಚ್ಚು ಮುಂದೆ ಬರಬೇಕಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪ್ರವೇಶ ಹೆಚ್ಚಬೇಕಿದೆ. ಕ್ಷೇತ್ರದ ಶಾಸಕನಾಗಿ ಎಲ್ಲಾ ಮಹಿಳಾ ಸಂಘಗಳಿಗೆ ಶಕ್ತಿ ತುಂಬುವ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ತಿಳಿಸಿದರು.

       ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ, ಇಂದು ಮಹಿಳೆಯರು ಇಲ್ಲದ ಕ್ಷೇತ್ರವೇ ಇಲ್ಲ. ರಾಜಕೀಯ ಕ್ಷೇತ್ರವೂ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಸಂಖ್ಯೆ ಗಣನೀಯವಾಗಿದೆ. ಆದರೆ, ಮಹಿಳಾ ಸಂಘಟನೆಗಳಿಗೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆ. ಸಂಘಟನೆಯ ಶಕ್ತಿಯನ್ನು ರೂಡಿಸಿಕೊಂಡು ಬಂದಿರುವ ಮಹಿಳಾ ಸಮುದಾಯ ಈ ಸಮಾಜದ ಉನ್ನತ್ತಿಗಾಗಿ ಶ್ರಮಿಸಬೇಕಿದೆ. ನಮ್ಮ ಸಂಪ್ರದಾಯದಂತೆ ನಾವು ಮಹಿಳೆಯರಿಗೆ ಎಲ್ಲಾ ರಂಗದಲ್ಲೂ ಆದ್ಯತೆ ನೀಡುತ್ತಿದ್ದು, ಅವರಿಗೆ ನೀಡುವ ಗೌರವ ಹೆಚ್ಚಬೇಕಿದೆ ಎಂದರು.

        ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮದಕರಿ ಮಹಿಳಾ ಸಂಘದ ಅಧ್ಯಕ್ಷೆ, ನಗರಸಭಾ ಸದಸ್ಯೆ ಸುಮಾಭರಮಣ್ಣ ಮಾತನಾಡಿ, ಪ್ರಾರಂಭದ ಹಂತದಲ್ಲಿ ನನ್ನನ್ನು ಗೆಲ್ಲಿಸಿಕೊಟ್ಟ 10ನೇ ವಾರ್ಡ್‍ನ ಮಹಿಳೆಯ ಸಂಘಟನೆಗೆ ಮದಕರಿ ಹೆಸರಿನಲ್ಲಿ ಸಂಘ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ನಗರದಾದ್ಯಂತ ವಿಸ್ತರಿಸುವ ಯೋಜನೆ ಇದೆ ಎಂದರು.

       ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್‍ಮೂರ್ತಿ, ನಗರಸಭಾ ಸದಸ್ಯ ಟಿ.ಮಲ್ಲಿಕಾರ್ಜುನ, ವೈ.ಪ್ರಕಾಶ್, ಕವಿತಾಬೋರಯ್ಯ, ಪಿ.ತಿಪ್ಪೇಸ್ವಾಮಿ, ಭರಮಣ್ಣ, ಬಿ.ಟಿ.ರಮೇಶ್‍ಗೌಡ, ಪಾಲಮ್ಮ ಮುಂತಾದವರು ಭಾಗವಹಿಸಿದ್ದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link