ಹೆಣ್ಣು ಕಳಂಕವಲ್ಲ ಹೆಣ್ಣಿನ ಸಂತತಿ ಬೆಳಸಿ

ದಾವಣಗೆರೆ :

     ಹೆಣ್ಣು ಎಂದರೆ ಕಳಂಕವೆಂಬ ಮನಸ್ಥಿತಿಯನ್ನು ಬದಲಿಸಿಕೊಂಡು ಹೆಣ್ಣಿನ ಸಂತತಿ ಹೆಚ್ಚಿಸಬೇಕೆಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಕರೆ ನೀಡಿದರು.ನಗರದ ರಂಗಮಹಲ್‍ನಲ್ಲಿ ಮಂಗಳವಾರ ಜಿಲ್ಲಾ ಪಿ.ಸಿ. & ಪಿ.ಎನ್.ಡಿ.ಟಿ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಭಾಗಿತ್ವದಲ್ಲಿ ‘ಹೆಣ್ಣು ಮಗುವನ್ನು ಉಳಿಸಿ, ಬೆಳೆಸಿ, ಓದಿಸಿ, ಸಂರಕ್ಷಿಸಿ’ ಎಂಬ ಘೋಷವಾಕ್ಯದಡಿ ಜಿಲ್ಲೆಯ ಪಿ.ಸಿ & ಪಿ.ಎನ್.ಡಿ.ಟಿ ಅಡಿಯಲ್ಲಿ ನೋಂದಾಯಿತವಾಗಿರುವ ಸಂಸ್ಥೆಯ ತಜ್ಞ ವೈದ್ಯರುಗಳಿಗೆ ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆಯ ಕುರಿತಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

    ಹೆಣ್ಣೆಂದರೆ ಅಭದ್ರತೆ, ಸಮಸ್ಯೆ ಹೆಚ್ಚು ಎಂಬುದಾಗಿ ಒಂದು ವರ್ಗದ ಜನತೆ ಯೋಚಿಸಿ, ಹೆಣ್ಣು ಭ್ರೂಣ ಹತ್ಯೆಗೆ ಮುಂದಾಗು ತ್ತಿದ್ದರೆ, ಸುಶಿಕ್ಷಿತ ವರ್ಗ ತಮ್ಮ ಕುಟುಂಬ ಬೆಳೆಯಲು ಗಂಡು ಬೇಕೆಂಬ ಆಸೆಯಿಂದ ಹೆಣ್ಣಿನ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ಪಿ.ಸಿ & ಪಿಎನ್‍ಡಿಟಿ ಕಾಯ್ದೆ ಜಾರಿಗೆ ಬಂದು 25 ವರ್ಷಗಳಾಗಿದ್ದು, ಕಾಯ್ದೆ ಜಾರಿಗೆ ಬಂದ ಮೇಲೆ ಹಲವಾರು ಸುಧಾರಣೆ ಗಳಾಗಿದ್ದರೂ ಇನ್ನೂ ಈ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಟಾನಗೊಂಡಿಲ್ಲ. ಸಾಮಾನ್ಯ ಜನತೆಗೆ ಈ ಕಾಯ್ದೆ ಕುರಿತು ಅರಿವು ಮೂಡಿಸುವ ಮೂಲಕ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಿ ಹೆಣ್ಣು ಭ್ರೂಣ ಹತ್ಯೆ ತಡೆಯಬೇಕಾಗಿದೆ ಎಂದರು.

    ಸರ್ಕಾರವೇ ಭಾಗ್ಯಲಕ್ಷ್ಮೀ ಬಾಂಡ್, ಸುಕನ್ಯಾ ಸುರಕ್ಷಾ ಸೇರಿದಂತೆ ವಿವಿಧ ಯೋಜನೆ ಮೂಲಕ ಹೆಣ್ಣನ್ನು ಉಳಿಸಲು ಜವಾಬ್ದಾರಿ ಹೊತ್ತಿದೆ. ಹೆಣ್ಣಾಗಲಿ, ಗಂಡಾಗಲಿ ಮಕ್ಕಳನ್ನು ಬೆಳೆಸುವುದು ನಮ್ಮ ಜವಾಬ್ದಾರಿ ಎಂಬುದನ್ನು ಎಲ್ಲರೂ ಮನವರಿಕೆ ಮಾಡಿಕೊಂಡಲ್ಲಿ ಹೆಣ್ಣಿನ ಸಂಖ್ಯೆ ಹೆಚ್ಚಲು ಸಾಧ್ಯವಾಗಿದ್ದು, ಯಾವುದೇ ಕಾರಣಕ್ಕೂ ವೈದ್ಯರು ಲಿಂಗ ಪತ್ತೆ, ಹೆಣ್ಣು ಭ್ರೂಣ ಹತ್ಯೆಗೆ ಸಹಕರಿಸಬಾರದು ಎಂದು ಕಿವಿಮಾತು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ವೈದ್ಯರು, ವಕೀಲರು ಸೇರಿದಂತೆ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವೃತ್ತಿಯಲ್ಲಿರುವವರು ಪಿ.ಸಿ & ಪಿ.ಎನ್.ಡಿ.ಟಿ ಕಾಯ್ದೆ ಪ್ರಕಾರ ಲಿಂಗ ಪತ್ತೆ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ಮಾಡುವುದು ಗಂಭೀರ ಅಪರಾಧ ಎಂಬುದು ನಿಮಗೆ ತಿಳಿದಿದೆ. ಆದರೂ ಈ ಅಪರಾಧ ಮಾಡಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

    ಭ್ರೂಣ ಲಿಂಗ ಪತ್ತೆಯಂತಹ ಕೃತ್ಯದಿಂದ ಹೆಣ್ಣು ಮಕ್ಕಳ ಸಂತತಿ ಕುಸಿಯುತ್ತಿದೆ. ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈ ಕಾಯ್ದೆ ಬಂದ ನಂತರ ಸುಧಾರಣೆಯಾಗಿದ್ದರೂ ಕಾಯ್ದೆ ಅನುಷ್ಟಾನ ಇನ್ನೂ ಪರಿಣಾಮಕಾರಿಯಾಗಬೇಕು. ಈ ಕೆಲಸ ಮಾಡುತ್ತಿರುವವರು ನಮಗೆ ಉತ್ತರ ಕೊಡಬಹುದು. ಆದರೆ, ಮೇಲೆ ಇರುವ ದೇವರಿಗೆ ಉತ್ತರ ಕೊಡಲು ಬರುವುದಿಲ್ಲ. ಆದ್ದರಿಂದ ಅತಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

    ಜಿಲ್ಲೆಯ ಲಿಂಗಾನುಪಾತ ಸಾವಿರ ಗಂಡಿಗೆ 946 ಹೆಣ್ಣು ಸಂಖ್ಯೆ ಇದೆ. ಇದನ್ನು ಸುಧಾರಣೆಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಲಿಂಗ ಪತ್ತೆ ಮಾಡದೆ ಕಾಯ್ದೆಯನ್ವಯ ಕೆಲಸ ಮಾಡುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದ್ದು ಅದನ್ನು ಮೀರಿ ನಡೆದುಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

    ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ವೃತ್ತಿನಿರತ ವೈದ್ಯರು, ಸಿಬ್ಬಂದಿಗಳಿಗೆ ಪಿಸಿ & ಪಿಎನ್‍ಡಿಟಿ ಕಾಯ್ದೆ ಬಗ್ಗೆ ಅರಿವಿದೆ. ನಾವೆಲ್ಲ ಸೇರಿ ಇಂತಹ ಕೃತ್ಯ ಎಸಗುವಂತಹ ವರ್ಗವನ್ನು ಕೇಂದ್ರೀಕರಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಕಾನೂನಾತ್ಮಕವಾಗಿ ನಡೆದುಕೊಂಡು ನೀವೂ ಉತ್ತಮ ಸೇವೆ ಸಲ್ಲಿಸಬೇಕು ಎಂದರು.

    ಪಿಸಿ & ಪಿಎನ್‍ಡಿಟಿ ಸಕ್ಷಮ ಪ್ರಾಧಿಕಾರಿ ಹಾಗೂ ಉಪವಿಭಾಗದ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಮಾತನಾಡಿ, ಯಾರಿಗೂ ಯಾರನ್ನು ಕೊಲ್ಲುವ ಅಧಿಕಾರ ಇಲ್ಲ. ಯಾವುದೇ ಒತ್ತಡ ಮತ್ತು ಆಮಿಷಗಳಿಗೆ ಬಲಿಯಾಗದೇ ಕಾನೂನಿನ್ವಯ ಕೆಲಸ ಮಾಡಬೇಕು. ಭ್ರೂಣ ಲಿಂಗ ಪತ್ತೆ ಮಾಡಬಾರದು. ಹಾಗೆ ಮಾಡುವಂತೆ ಬರುವವರಿಗೆ ನೈತಿಕ ತಿಳುವಳಿಕೆ ನೀಡಿ ಮನವೊಲಿಸಿದಾಗ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಸಾಧ್ಯವಾಗಲಿದೆ ಎಂದು ಹೇಳಿದರು.

   ಎಸ್.ಎಸ್.ಐ.ಎಂ.ಎಸ್ & ಆರ್.ಸಿಯ ರೇಡಿಯಾಲಜಿಸ್ಟ್ ಡಾ.ಚಂದನ್ ಗಿರಿಯಪ್ಪ ಹಾಗೂ ಪಿ.ಸಿ & ಪಿ.ಎನ್.ಡಿ.ಟಿ ಸಲಹಾ ಸಮಿತಿಯ ಕಾನೂನು ಸಲಹೆಗಾರರಾದ ವಿ.ರವಿಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಕಾಯ್ದೆ ಕುರಿತು ಉಪನ್ಯಾಸ ನೀಡಿದರು.ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್, ಡಿಹೆಚ್‍ಓ ಡಾ.ರಾಘವೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಪಿಸಿ & ಪಿಎನ್‍ಡಿಟಿ ಕೋಶದ ನೋಡಲ್ ಅಧಿಕಾರಿ ಡಾ.ರೇಣುಕಾರಾಧ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link