ದಾವಣಗರೆ :
ಮಹಿಳೆಯರು ಆರ್ಥಿಕ ಅಭಿವೃದ್ಧಿಗೆ ಯೋಜನೆಗಳಡಿ ಸಾಲ ಪಡೆದು ಆರ್ಥಿಕ ಚಟುವಟಿಕೆಗಳನ್ನು ಕೈಗೊಂಡು ಸ್ವಾವಲಂಬಿಗಳಾಗಬೇಕೆಂದು ಶಾಸಕ ಎಸ್.ಎ ರವಿಂದ್ರರನಾಥ ಕರೆ ನೀಡಿದರು.ತಾಲೂಕಿನ ದೊಡ್ಡಬಾತಿ ರೇವಣಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ಗುರುವಾರ ಜಿಲ್ಲಾ ಪಂಚಾಯತ್, ದಾವಣಗೆರೆ ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್ ದೊಡ್ಡಬಾತಿ ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಘ, ಸಮೃದ್ಧಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ವ-ಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ಸಾಲ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೈನುಗಾರಿಕೆ ಮತ್ತು ಕೋಳಿ ಸಾಗಾಣಿಕೆ ಸೇರಿದಂತೆ ಇತರೆ ಚಟುವಟಿಕೆಗಳ ಮೂಲಕ ಗ್ರಾಮೀಣ ಜನರು ಆರ್ಥಿಕವಾಗಿ ಸಧೃಡರಾಗಬೇಕು ಎಂದ ಅವರು ಉಳಿತಾಯ ಮತ್ತು ಲಾಭದ ಮೂಲವನ್ನು ಮಹಿಳೆಯರಿಗೆ ತಿಳಿಸಿದರು. ತಾಲ್ಲೂಕು ಪಂಚಾಯತ್‍ನ ಕಾರ್ಯ ನಿರ್ವಾಹಕ ಅಧಿಕಾರಿ ದಾರುಕೇಶ್ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಂಯೋಜನೆಯಲ್ಲಿ ಈ ಯೋಜನೆಯು ಅನುಷ್ಠಾನಗೊಂಡಿದೆ. ಈ ವರ್ಷ 4.19 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಹಿಳೆಯರು ಆರ್ಥಿಕವಾಗಿ ಸಧೃಡರಾಗಿ ಸಮಾಜಮುಖಿಯರನ್ನಾಗಿ ಮಾಡಲು “ಸಂಜೀವಿನಿ” ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯು ಸಹಕಾರಿಯಾಗಿದೆ ಎಂದರು.
ಮಹಿಳೆಯರು ಉದ್ಯೋಗಾಧಾರಿತ ತರತಬೇತಿ ಪಡೆದು ಅದಕ್ಕೆ ಪೂರಕವಾಗಿ ಸಾಲವನ್ನು ಪಡೆಯಬೇಕು. ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ 5ರಿಂದ 50 ಲಕ್ಷ ರೂ. ವರೆಗೆ ಸಾಲ ಸೌಲಭ್ಯವನ್ನು ಬ್ಯಾಂಕುಗಳು ನೀಡುತ್ತವೆ. ಆದ್ದರಿಂದ ಮಹಿಳೆಯರು ಸ್ವ ಉದ್ಯೋಗಿಗಳಾಗಿ ಸ್ವಾವಲಂಬನೆಯ ಜೀವನ ನಡೆಸಬೇಕೆಂದು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಪಂಚಾಯತ್‍ನ ಕಾರ್ಯಕ್ರಮ ವ್ಯವಸ್ಥಾಪಕ ಎನ್. ಎಂ ಭೋಜರಾಜ್, ಜಿಲ್ಲೆಯಲ್ಲಿ ಒಟ್ಟು 42 ಒಕ್ಕೂಟಗಳಿದ್ದು, 39 ಒಕ್ಕೂಟಗಳು ಈಗಾಗಲೇ ಸ್ಥಾಪನೆಯಾಗಿವೆ. 31 ಒಕ್ಕೂಟಗಳಿಗೆ ಸಾಲ ಸೌಲಭ್ಯದ ಹಣ ಬಿಡುಗಡೆಯಾಗಿದೆ ಎಂದರು.
ನಾಲ್ಕು ಅಥವಾ ಐದು ವಾರ್ಡ್‍ಗಳನ್ನು ಸೇರಿಸಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಂದು ಒಕ್ಕೂಟವನ್ನು ರಚಿಸಲಾಗುತ್ತದೆ. ಈ ಗ್ರಾಮ ಪಂಚಾಯಿತಿಯ ಒಕ್ಕೂಟದಲ್ಲಿ 25 ರಿಂದ 30 ಸಂಘಗಳು ಬರುತ್ತವೆ. ಸಂಘಗಳು ರಚನೆಯಾದ 6 ತಿಂಗಳ ನಂತರ ಸರ್ಕಾರದ ಸಾಲ ಸೌಲಭ್ಯವನ್ನು ಪಡೆಯಬಹುದು. ಬಡತನ ನಿವಾರಣೆ ಈ ಸಂಜೀವಿನಿ ಸಾಲ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಕೃಷ್ಣಪ್ಪ ಮಾತನಾಡಿ, ಮಹಿಳೆಯರು ತಮ್ಮ ಕೌಶಲ್ಯಕ್ಕೆ ತಕ್ಕಂತೆ ತರಬೇತಿ ಸಂಸ್ಥೆಗಳಿಂದ ತರಬೇತಿ ಪಡೆದು ಸ್ವ ಉದ್ಯೋಗಿಗಳಾಗಲು ಪ್ರಯತ್ನಿಸಬೇಕು. ಆರ್ಥಿಕವಾಗಿ ಸದೃಢರಾಗಲು ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಸಾಲ ಯೋಜನೆಯಡಿ ರಚನೆಯಾಗಿರುವ ಒಕ್ಕೂಟಗಳ ಸಂಘಗಳ ಫಲಾನುಭವಿಗಳಿಗೆ ಸಾಲ ವಿತರಣೆಯ ಚೆಕ್‍ನ್ನು ಶಾಸಕ ಎಸ್.ಎ ರವೀಂದ್ರನಾಥ್ ವಿತರಿಸಿದರು.ಕಾರ್ಯಕ್ರಮದಲ್ಲಿ ದೊಡ್ಡಬಾತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ವಿರೇಶ್ ದಗ್ಗಳಿ, ಮಂಜುಳಾ ಶಿವಕುಮಾರ್, ಸುಮಿತ್ರಮ್ಮ ರಂಗಸ್ವಾಮಿ, ಪ್ರೇಮಕ್ಕ ಮರುಳಸಿದ್ದಪ್ಪ, ಗ್ರಾಮ ಪಂಚಾಯಿತಿ ಪಿ.ಡಿ.ಓ ನಾಗರಾಜ್, ತಾ.ಪಂ ಮೇಲ್ವಿಚಾರಕ ರುದ್ರೇಶ್ ಸೇರಿದಂತೆ ಒಕ್ಕೂಟದ ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
