ಮಹಿಳೆಯರು ಸ್ವಾವಲಂಭಿಗಳಾಗಬೇಕು: ಕಿರಣ್ ಬೇಡಿ

ಬೆಂಗಳೂರು

    ಮಹಿಳೆಯರು ಇತರರ ಮೇಲೆ ಅವಲಂಬಿತರಾಗುವ ಮನಸ್ಥಿತಿಯಿಂದ ಹೊರಬಂದು, ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಂಡು ಅದಕ್ಕೆ ಬದ್ಧವಾಗಿರುವುದನ್ನು ಕಲಿಯಬೇಕು ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕರೆ ನೀಡಿದರು.

    ನಗರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಭಾನುವಾರ ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ವಿಶ್ವ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಹುಟ್ಟಿನಿಂದಲೇ ನಾಯಕತ್ವ ಹಾಗೂ ಜವಾಬ್ದಾರಿಯ ಗುಣಗಳನ್ನು ಹೊಂದಿರುತ್ತಾರೆ. ಜೀವನದ ಅನುಭವಕ್ಕೆ ತಕ್ಕಂತೆ ಕಲಿಯುತ್ತಾ ಸಾಗುತ್ತಾರೆ. ಈ ಹಂತದಲ್ಲಿ ಅವರು ಸ್ವಾವಲಂಬಿಯಾಗಲು ಹಾಗೂ ತನ್ನ ಬದುಕಿನ ಬದುಕಿನ ಜವಾಬ್ದಾರಿ ಹೊರಲು ಕಲಿಯಬೇಕು ಎಂದರು.

     ಹೆಣ್ಣು ಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯವಂತ ಮನಸ್ಸು, ಮನೆ ಹಾಗೂ ಸಮಾಜವನ್ನು ಆರೋಗ್ಯಪೂರ್ಣವಾಗಿಸುತ್ತದೆ. ಜೀವನವೇ ಒಂದು ಸಿದ್ಧತೆಯಾಗಿದ್ದು, ನಿರ್ದಿಷ್ಟ ಕಾರಣಗಳಿಗೆ ಸದಾ ಸಿದ್ಧರಾಗುತ್ತಾ ಸಾಗಬೇಕು. ಜನರೊಂದಿಗೆ ಬೆರೆಯಿರಿ, ಹೊಸತನವನ್ನು ಹುಡುಕಿ. ಪ್ರಯತ್ನವೇ ಯಶಸ್ಸಿನ ದಾರಿಯಾಗಿದೆ ಎಂದರು.

    ಸಾಧನೆಯ ಹಾದಿಯಲ್ಲಿ ಸಾಗುವಾಗ ಗಂಡು ಹೆಣ್ಣೆಂಬ ತಾರತಮ್ಯ ಮರೆತು ಕೆಲಸ ನಿರ್ವಹಿಸಬೇಕು. ಯಶಸ್ಸಿಗೆ ಅಗತ್ಯವಾದ ಎಲ್ಲಾ ಧೈರ್ಯ, ಛಲ, ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಿ. ಆದರೆ, ಇದೆಲ್ಲದರ ನಡುವೆ, ಹೆಣ್ಣಿನ ಜನ್ಮದತ್ತವಾಗಿರುವ ಕರುಣೆ, ಸಹನೆಯನ್ನು ಕೂಡ ಮರೆಯದಿರಿ. ಲಿಂಗಬೇಧ ಮರೆತು ಉತ್ತಮ ವ್ಯಕ್ತಿಯಾಗುವತ್ತ ಗಮನ ಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

     ಮೈಸೂರು ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಮಾತನಾಡಿ, ಆಗಿನ ಕಾಲದಲ್ಲಿ ಸಾಕಷ್ಟು ಸ್ವಾತಂತ್ರ್ಯವಿತ್ತು. ಎಲ್ಲರೂ ಒಂದೇ ಎಂಬ ಭಾವನೆ ಇತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಸಂಸ್ಕತಿಯ ಜೊತೆಗೆ ಕೆಲ ವಿಷಯಗಳನ್ನ ಉಳಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಕೆಲಭಾಗಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಬೇಕು. ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.

      ಕಾರ್ಯಕ್ರಮದಲ್ಲಿ ಐಪಿಎಸ್ ಅಧಿಕಾರಿಗಳಾದ ಡಾ. ರಶ್ಮಿ ಕೃಷ್ಣನ್, ಡಾ.ಕಲ್ಪನಾ ಗೋಪಾಲನ್, ಡಾ.ಸೌಮ್ಯ ಮಿಶ್ರಾ, ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ವಿಶ್ವ ಮಹಿಳಾ ಸಮಾವೇಶದ ಅಧ್ಯಕ್ಷೆ ಡಾ. ಕಾಮಿನಿ ಎ.ರಾವ್, ಕಾರ್ಯದರ್ಶಿ ಡಾ.ಪದ್ಮಿನಿ ಪ್ರಸಾದ್ ಭಾಗವಹಿಸಿದ್ದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link